ಕ್ರಿಶ್ಚಿಯನ್ನರ ವಿರುದ್ಧ ಗಾಂಧಿ
ಜಾರ್ಖಂಡ್ ಸರಕಾರದಿಂದ ಹೊಸ ಪ್ರಯೋಗ
ಭಾಗ-2
ಯಾವ ಜನರ ಪಂಥ, ಧರ್ಮವು ಪ್ರೀತಿಯ ಬದಲು ದ್ವೇಷವಾಗಿದೆಯೋ, ಅಂತಹ ಜನ ಗಾಂಧಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಜಿಗುಪ್ಸೆ ಉಂಟುಮಾಡುವ ವಿಚಾರ. ಆದ್ದರಿಂದ ಈ ಅಕ್ರಮ ಜಾಹೀರಾತನ್ನು ಪ್ರಕಟಿಸಿದ್ದಕ್ಕಾಗಿ ಜಾರ್ಖಂಡ್ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡುವುದು ನಾವೆಲ್ಲರೂ ತುರ್ತಾಗಿ ಮಾಡಬೇಕಾದ ಕೆಲಸ.
ಗಾಂಧಿ ನಿಜವಾಗಿ ಏನು ಹೇಳಿದ್ದರು?
ಜಾರ್ಖಂಡ್ ಸರಕಾರದ ಜಾಹೀರಾತಿನಲ್ಲಿರುವುದು ನಿಜವಾಗಿ ಗಾಂಧೀಜಿಯವರ ಮಾತುಗಳ ವಿಕೃತ ರೂಪ. ಅದು ಅಮೆರಿಕದ ಓರ್ವ ಮತಪ್ರಚಾರಕ ಹಾಗೂ ಇಂಟರ್‌ನ್ಯಾಶನಲ್ ಮಿಶನರಿ ಕೌನ್ಸಿಲ್‌ನ ಅಧ್ಯಕ್ಷ ಜಾನ್ ಆರ್. ಮೋಟ್ ಮತ್ತು ಗಾಂಧೀಜಿ ನಡುವೆ 1936 ನವಂಬರ್ 12ರಂದು ನಡೆದ, ಮಹಾದೇವದೇಸಾಯಿ ದಾಖಲಿಸಿದ ಒಂದು ಸಂಭಾಷಣೆ. ಆಗ ಗಾಂಧೀಜಿ ಅಸ್ಪಶ್ಯತಾ ವಿರೋಧಿ ಅಭಿಯಾನ ಮತ್ತು ಹರಿಜನರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡುವ ಚಳವಳಿಯಲ್ಲಿ ನಿರತರಾಗಿದ್ದರು. ತಿರುವಾಂಕೂರು ಈ ಯುದ್ಧದ ಒಂದು ಮುಖ್ಯರಂಗವಾಗಿತ್ತು. ಅಂಬೇಡ್ಕರ್ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದರು. ಯಾರು ಸ್ವೀಕರಿಸಲು ಸಿದ್ಧರಿದ್ದಾರೋ ಅವರಿಗೆ 50 ಮಿಲಿಯನ್ ಜನರನ್ನು ನೀಡಲು ಅಂಬೇಡ್ಕರ್ ಸಿದ್ಧರಿದ್ದಾರೆ ಎಂಬ ಸುದ್ಧಿ ಅಲ್ಲಿ ಹರಡಿತ್ತು. ಆಗ ಮುಸ್ಲಿಮರು, ಸಿಕ್ಖರು ಮತ್ತು ಕ್ರಿಶ್ಚಿಯನ್ನರು ‘ಅಸ್ಪಶ್ಯ’ರನ್ನು ತಮ್ಮ ಧರ್ಮಕ್ಕೆ ಆಕರ್ಷಿಸಲು ತಮ್ಮ ತಮ್ಮೆಲ್ಲರ ಪರಸ್ಪರ ಪೈಪೋಟಿ ನಡೆಸುತ್ತಿದ್ದರು. ಅಸ್ಪಶ್ಯತೆ ಹಿಂದೂ ಧರ್ಮದ ಅಂಗವಲ್ಲ, ಅದು ಹಿಂದೂಧರ್ಮದ ದೇಹವನ್ನು ಪ್ರವೇಶಿಸಿರುವ ಒಂದು ಅನಿಷ್ಟ ಮತ್ತು ದೇಹವನ್ನು ಉಳಿಸಬೇಕಾದರೆ ಈ ಅನಿಷ್ಟವನ್ನು, ರೋಗವನ್ನು ಗುಣಪಡಿಸಬೇಕೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು.
ಅಂದು ಮೋಟ್ ಮತ್ತು ಗಾಂಧಿ ನಡುವೆ ನಡೆದ ಸಂಭಾಷಣೆಯಲ್ಲಿ ಮೋಟ್ ಹೇಳಿದರು: ‘‘.....ನಾನು ಅಧ್ಯಕ್ಷನಾಗಿರುವ ಮಿಶನರಿ ಕೌನ್ಸಿಲ್‌ಗೆ ಜಗತ್ತಿನಲ್ಲಿ 300 ಮಿಶನರಿ ಸೊಸೈಟಿಗಳಿವೆ. ಅಸ್ಪಶ್ಯರ ಬಗ್ಗೆ ಈ ಸೊಸೈಟಿಗಳ ಆಸಕ್ತಿ ಹೆಚ್ಚುತ್ತಿದೆ. ಅಸ್ಪಶ್ಯರಿಗೆ ಸಹಾಯ ಮಾಡುವುದು ಇವುಗಳ ಬಯಕೆಯಾಗಿದೆ, ತೊಂದರೆ ಮಾಡುವುದಲ್ಲ. ಈ ಮಿಶನರಿಗಳು ಎಲ್ಲಿಯಾದರೂ ತಪ್ಪು ಮಾಡಿದಲ್ಲಿ ಹೇಳಿ’’ ಆಗ ಗಾಂಧಿ ಹೇಳಿದರು. ‘‘ಈ ನಿಟ್ಟಿನಲ್ಲಿ ಮಿಶನರಿಗಳ ಚಟುವಟಿಕೆಗಳಿಂದ ನನಗೆ ನೋವಾಗಿದೆ. ಅಂಬೇಡ್ಕರ್ ಬಾಂಬ್ ಶೆಲ್ ಎಸೆದ ಕೂಡಲೇ ಮಿಶನರಿಗಳು, ಮುಸ್ಲಿಮರು ಮತ್ತು ಸಿಕ್ಖರ ಜತೆ ಸ್ಪರ್ಧೆಗೆ ಇಳಿದಿರುವುದು ನನಗೆ ನೋವುಂಟು ಮಾಡಿತು. ನೀವು ಹೇಳುವುದನ್ನು ಅರ್ಥಮಾಡಿಕೊಳ್ಳಲಾಗದ ಹರಿಜನರಿಗೆ, ನಿಮ್ಮ ಧರ್ಮಕ್ಕೆ ಬರುವಂತೆ ನೀವು ಕರೆ ನೀಡಿದಿರಿ. ಆದರೆ ಅವರಿಗೆ ಖಂಡಿತವಾಗಿಯೂ ಜೀಸಸ್ ಮತ್ತು ಮುಹಮ್ಮದ್ ಮತ್ತು ನಾನಕ್ ಮತ್ತು ಇತರರ ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿಶಕ್ತಿ ಇಲ್ಲ.’’ ಸಂಭಾಷಣೆ ಹೀಗೆಯೇ ಮುಂದುವರಿಯುತ್ತದೆ. ‘‘ತಾವು ದೇವಸ್ಥಾನಕ್ಕೆ ಪ್ರವೇಶ ಬಯಸುತ್ತಿರುವ ಈಳವ ಸಮುದಾಯದವರ ಸೇವೆ ಮಾಡಬಾರದೇ?’’ ಎಂದು ಮೋಟ್ ಕೇಳಿದಾಗ ಗಾಂಧಿ, ‘‘ಮಾಡಬಹುದು, ಆದರೆ ನೀವು ನೀಡುವ ಸೇವೆಗೆ ಅವರು ಮತಾಂತರದ ಬೆಲೆ ನೀಡುವಂತಾಗಬಾರದು’’ ಎನ್ನುತ್ತಾರೆ. ಮಿಶನರಿಗಳು ‘‘ಗೋಸ್ಪೆಲ್ (ಬೈಬಲ್) ಅನ್ನು ಬೋಧಿಸಬಾರದೆ?’’ ಎಂಬ ಮೋಟ್‌ರ ಪ್ರಶ್ನೆಗೆ ಗಾಂಧಿ ನೀಡುವ ಉತ್ತರ ಇದು: ‘‘ಡಾ.ಮೋಟ್, ನೀವು ಒಂದು ಹಸುವಿಗೆ ಗೋಸ್ಪೆಲನ್ನು ಬೋಧಿಸುತ್ತೀರಾ? ಅಸ್ಪಶ್ಯರಲ್ಲಿ ಕೆಲವರು ತಿಳುವಳಿಕೆಯಲ್ಲಿ, ಅರ್ಥಮಾಡಿಕೊಳ್ಳುವುದರಲ್ಲಿ ಹಸುವಿಗಿಂತಲು ಕಡಿಮೆ ಬುದ್ಧಿಶಕ್ತಿ ಇರುವವರು. ಅಂದರೆ ಇಸ್ಲಾಂ, ಮತ್ತು ಹಿಂದೂಧರ್ಮ ಮತ್ತು ಕ್ರಿಶ್ಚಿಯನ್ ಧರ್ಮಗಳ ನಡುವಣ ಸಂಬಂಧಾವಲಂಬಿ ಗುಣಗಳ ನಡುವೆ ಇರುವ ವ್ಯತ್ಯಾಸಗಳನ್ನು ಒಂದು ಹಸು ಎಷ್ಟು ಗುರುತಿಸಬಲ್ಲದೋ, ಅಷ್ಟೇ ಅವರೂ ಗುರುತಿಸಬಲ್ಲರು.’’ ಆಗ ಮೋಟ್ ಹೇಳುತ್ತಾರೆ: ‘‘ಇಡೀ ಕ್ರಿಶ್ಚಿಯನ್ ಧರ್ಮ ನಮ್ಮ ಜೀವನವನ್ನು ಹಂಚಿಕೊಳ್ಳುವ ಧರ್ಮ, ಶಬ್ದಗಳ (ಬೋಧನೆಯ) ನೆರವಿಲ್ಲದೆ ನಾವು ನಮ್ಮ ಜೀವನನ್ನು ಹೇಗೆ ಹಂಚಿಕೊಳ್ಳಲು ಸಾಧ್ಯ?’’ ಈ ಪ್ರಶ್ನೆಗೆ ಗಾಂಧಿಯ ಉತ್ತರ: ‘‘ಹಾಗಾದರೆ ಅವರು (ಮಿಶನರಿಗಳು) ತಿರುವಾಂಕೂರಿನಲ್ಲಿ ಮಾಡುತ್ತಿರುವುದು ಸರಿ ಎನ್ನುತ್ತೀರಾ? ನೀವು ಅದನ್ನು ಹರಿಜನರೊಂದಿಗೆ ಹಂಚಿಕೊಳ್ಳಲೇಬೇಕೆಂದಾದಲ್ಲಿ, ನೀವ್ಯಾಕೆ ಅದನ್ನು ಥಕ್ಕರ್ ಬಪಾ ಮತ್ತು ಮಹಾದೇವ್ ಜೊತೆ ಹಂಚಿಕೊಳ್ಳಬಾರದು? ನೀವ್ಯಾಕೆ ಅಸ್ಪಶ್ಯರ ಬಳಿಗೆ ಹೋಗಿ ಈ ಉತ್ಪಾತದ ಲಾಭ ಪಡೆಯಬೇಕು? ಇದಕ್ಕೆ ಬದಲಾಗಿ ನೀವ್ಯಾಕೆ ನಮ್ಮ ಬಳಿಗೆ ಬರಬಾರದು?’’
ಈ ದೀರ್ಘವಾದ ಸಂಭಾಷಣೆಯಿಂದ ಆಯ್ದ ಜಾರ್ಖಂಡ್ ಸರಕಾರ ತಿರುಚಿ ಪ್ರಕಟಿಸಿರುವ ಭಾಗ ಇದು. ಬಿಜೆಪಿ ಹೇಳುವಂತೆ ‘ಆದಿವಾಸಿ’ ಅಥವಾ ‘ವನವಾಸಿ’ಗಳ ಉಲ್ಲೇಖ ಈ ಸಂಭಾಷಣೆಯಲ್ಲಿ ಎಲ್ಲಿಯೂ ಇಲ್ಲವೇ ಇಲ್ಲ. ಆದ್ದರಿಂದ ಈ ಶಬ್ದವನ್ನು ಜಾರ್ಖಂಡ್ ಸರಕಾರ ಗಾಂಧೀಜಿಯ ಬಾಯಿಗೆ ತುರುಕಿದ್ದು ಒಂದು ಅಪ್ರಾಮಾಣಿಕ ಕೆಲಸ ಮತ್ತು ಕ್ರಿಮಿನಲ್ ಕೃತ್ಯ.
ಸಂವಿಧಾನ ಸಭೆಯ ಚರ್ಚೆಗಳು
ಎಲ್ಲ ಧರ್ಮಗಳಿಗೂ ಅವುಗಳದ್ದೇ ಆದ ಒಂದು ಸತ್ಯ ಇದೆ ಮತ್ತು ಅವುಗಳಲ್ಲಿ ಪ್ರತಿಯೊಂದು ಧರ್ಮವೂ ಅಪರಿಪೂರ್ಣ, ತನ್ನ ವೈಯಕ್ತಿಕ ನಂಬಿಕೆ ಅಥವಾ ಸಿದ್ಧಾಂತ ದೇಶದ ಕಾನೂನು ಆಗಲು ಸಾಧ್ಯವಿಲ್ಲವೆಂಬ ಬಗ್ಗೆ ಗಾಂಧಿಗೆ ಸ್ಪಷ್ಟವಾಗಿ ಗೊತ್ತಿದೆ. ಶಬ್ದಗಳ ಮೂಲಕ ತಮ್ಮ ಬದುಕನ್ನು ಹಂಚಿಕೊಳ್ಳುವುದರಲ್ಲಿ ನಂಬಿಕೆಯಿರುವ (ಮೋಟ್‌ರಂತಹ) ಜನರಿದ್ದಾರೆ ಮತ್ತು ಅವರಿಗೆ ಸರಿ ಅನ್ನಿಸುವುದನ್ನು, ಅದು ಇತರರಿಗೆ ನೋವು ಉಂಟುಮಾಡದಿದ್ದಲ್ಲಿ, ಅದನ್ನು ಪ್ರಚಾರ ಮಾಡುವ ಹಕ್ಕು ಅವರಿಗಿದೆ. ಅವರಿಗೆ ಈ ಹಕ್ಕನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ನಮ್ಮ ಸಂವಿಧಾನದ ನಿಲುವು ಕೂಡ ಇದೇ ಆಗಿದೆ. ನಮ್ಮ ಸಂವಿಧಾನದ ನಿರ್ಮಾಪಕರು ಈ ಸಂಕೀರ್ಣ ಪ್ರಶ್ನೆಯನ್ನು ಹೇಗೆ ನಿಭಾಯಿಸಿದರು ಎಂದು ಹಿಂದಿರುಗಿ ನೋಡುವುದು ತುಂಬ ಕುತೂಹಲದ ವಿಷಯ. 1948ರ ಡಿಸೆಂಬರ್ 6ರಂದು ಸಂವಿಧಾನ ಸಭಾಭವನದಲ್ಲಿ ‘ಪ್ರಚಾರ ಮಾಡುವ ಹಕ್ಕು’ ಅನ್ನು ಒಂದು ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರಿಸುವ ಕುರಿತು ಸಂವಿಧಾನ ಸಭೆ ಚರ್ಚೆ ನಡೆಸಿತು. ಚರ್ಚೆಯಲ್ಲಿ ಭಾಗವಹಿಸಿದ ಎಚ್.ವಿ.ಕಾಮತ್ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸರಕಾರದ ರಾಜಾಶ್ರಯ ಸಿಗಕೂಡದು ಎಂದು ವಾದಿಸಿದರು. ಅದೇ ವೇಳೆ, ‘‘ನಮ್ಮ ಈ ದೇಶದಲ್ಲಿ ಯಾರಿಗೂ ಕೂಡ ತನ್ನ ಧರ್ಮವನ್ನು ಆಚರಿಸುವ ಹಕ್ಕನ್ನಷ್ಟೇ ಅಲ್ಲ ಯಾವುದೇ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಕೂಡ ಅಲ್ಲಗಳೆಯದಂತೆ ನಾವು ಜಾಗರೂಕತೆಯಿಂದ ನೋಡಿಕೊಳ್ಳಬೇಕು’’ ಎಂದರು.
ಡಿಸೆಂಬರ್ 6ರ ಬೆಳಗ್ಗೆ ನಡೆದ ಈ ಚರ್ಚೆಯಲ್ಲಿ ಸಂವಿಧಾನದ 25(1) ಪರಿಚ್ಛೇದದ ರಚನೆಗೆ ಕಾರಣವಾಯಿತು. ಈ ಪರಿಚ್ಛೇದವು ‘ಎಲ್ಲ ವ್ಯಕ್ತಿಗಳಿಗೆ’ ಕೇವಲ ಭಾರತೀಯರಿಗಷ್ಟೇ ಅಲ್ಲ, ಆತ್ಮಸಾಕ್ಷಿಯ ಸ್ವಾತಂತ್ರ ಮತ್ತು ಧರ್ಮವನ್ನು ಮುಕ್ತವಾಗಿ ನಂಬುವ ಆಚರಿಸುವ ಮತ್ತು ಪ್ರಚಾರಮಾಡುವ ಹಕ್ಕನ್ನು ಸಮಾನವಾಗಿ ನೀಡುತ್ತದೆ.
ಸಂವಿಧಾನ ನಿರ್ಮಾತೃಗಳು ತಮ್ಮ ದರ್ಶನವನ್ನು ಗಾಂಧೀಜಿಯವರ ಶ್ರೇಷ್ಟತೆ ಅಸ್ಪಷ್ಟಗೊಳಿಸಲು ಅವಕಾಶ ನೀಡಲಿಲ್ಲ ಎಂಬುದು ಸ್ಪಷ್ಟ. ಗಾಂಧೀಜಿಯವರು ಬದುಕಿದ್ದರೆ ಸಂವಿಧಾನ ನಿರ್ಮಾಪಕರ ನಿಲುವನ್ನೇ ಒಪ್ಪುತ್ತಿದ್ದರು. ಅವರು ಗೋವಿನ ಒಬ್ಬ ಭಕ್ತರಾಗಿದ್ದರು. ಆದರೆ, ಗೋಹತ್ಯೆಯ ವಿರುದ್ಧ ಸರಕಾರ ಕಾನೂನು ಮಾಡಕೂಡದು ಎನ್ನುವುದು ಅವರ ದೃಢ ನಿಲುವು ಆಗಿತ್ತು. ತನ್ನ ನಂಬಿಕೆಗಳು ಸರಕಾರವನ್ನು ನಿಯಂತ್ರಿಸಬೇಕೆಂದು ಅವರೆಂದೂ ಬಯಸಿರಲಿಲ್ಲ. ತಾನೇ ಸ್ವತಃ ಅಪರಿಪೂರ್ಣ ಮತ್ತು ತನಗೆ ಎಲ್ಲವೂ ತಿಳಿದಿಲ್ಲ ಎಂಬ ಅವರ ಪ್ರಾಮಾಣಿಕ ನಂಬಿಕೆ ಅವರ ಈ ನಿಲುವಿನ ಹಿಂದೆ ಇತ್ತು.
ಆದ್ದರಿಂದ ಯಾವ ಜನರ ಪಂಥ, ಧರ್ಮವು ಪ್ರೀತಿಯ ಬದಲು ದ್ವೇಷವಾಗಿದೆಯೋ, ಅಂತಹ ಜನ ಗಾಂಧಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಜಿಗುಪ್ಸೆ ಉಂಟುಮಾಡುವ ವಿಚಾರ. ಆದ್ದರಿಂದ ಈ ಅಕ್ರಮ ಜಾಹೀರಾತನ್ನು ಪ್ರಕಟಿಸಿದ್ದಕ್ಕಾಗಿ ಜಾರ್ಖಂಡ್ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡುವುದು ನಾವೆಲ್ಲರೂ ತುರ್ತಾಗಿ ಮಾಡಬೇಕಾದ ಕೆಲಸ.
ಕೃಪೆ:thewire.in