ನೋಟು ರದ್ದತಿ: ಯಾರಿಗೆ ಲಾಭ, ಯಾರಿಗೆ ನಷ್ಟ?
ಭಾಗ-2
ಅಧಿಕೃತ ಅಂಕಿಅಂಶಗಳ ಪ್ರಕಾರ ಜನವರಿ 13ರ ತನಕ ಮರಳಿ ಬರದ ಹಳೆ ನೋಟುಗಳ ಮೌಲ್ಯ ರೂ. 18,000 ಕೋಟಿಯಷ್ಟಿತ್ತು. ಇದು ಸಹಕಾರಿ ಬ್ಯಾಂಕುಗಳು ಮತ್ತು ಸಾರ್ವಜನಿಕರ (ಕೆಲವು ನಿರ್ದಿಷ್ಟ ವರ್ಗಗಳ ಜನರಿಗೆ ಜನವರಿ 1ರಿಂದ ಮಾರ್ಚ್ 31ರ ತನಕ ಹಳೆ ನೋಟುಗಳನ್ನು ಮರಳಿಸುವ ಅವಕಾಶ ಒದಗಿಸಲಾಗಿತ್ತು) ಬಳಿ ಉಳಿದಿರುವ ಹಳೆ ನೋಟುಗಳ ಮೊತ್ತ. ಸಹಕಾರಿ ಬ್ಯಾಂಕುಗಳಿಗೆ ಈಗ ಹಳೆ ನೋಟುಗಳನ್ನು ಮರಳಿಸಲು ಅನುಮತಿ ನೀಡಲಾಗಿದೆ. ಆದರೆ ಅದರ ಮೌಲ್ಯ ರೂ. 8000 ಕೋಟಿ ಮೀರುವುದಿಲ್ಲ. ಹೀಗಾಗಿ ಸಾರ್ವಜನಿಕರ ಬಳಿ ಇರುವ ಹಳೆ ನೋಟುಗಳ ಬೆಲೆ ರೂ. 10,000 ಕೋಟಿ ಮೀರಲಾರದು. ಇದರರ್ಥ ಒಂದೇ. ಬಹುತೇಕ ಕಪ್ಪುಹಣ ಬ್ಯಾಂಕುಗಳಿಗೆ ಮರಳಿದ್ದು ಅದನ್ನು ಹೊಸ ನೋಟುಗಳಿಗೆ (ಬಿಳಿ ಹಣ) ಬದಲಾಯಿಸಿ ಆಗಿರಬೇಕು!
ಖೋಟಾ ನೋಟುಗಳು ಡಿಸೆಂಬರ್ 12ರ ತನಕ ನಿಯಮಿತವಾಗಿ ಹಳೆ ಮತ್ತು ಹೊಸ ನೋಟುಗಳ ಮಾಹಿತಿ ನೀಡುತ್ತಿದ್ದ ಆರ್ಬಿಐ ಆ ಬಳಿಕ ಅದನ್ನು ನಿಲ್ಲಿಸಿದೆ. ಕೊನೆ ದಿನಾಂಕವಾದ ಮಾರ್ಚ್ 31ರ ತನಕ ಮುಂದುವರಿಸದಿರುವುದಕ್ಕೆ ಸಮಂಜಸ ಕಾರಣಗಳನ್ನು ನೀಡಲಾಗಿಲ್ಲ. ಇದನ್ನು ನೋಡುವಾಗ ಸಹಜವಾಗಿಯೆ ಚಲಾವಣೆಯಲ್ಲಿ ಇದ್ದುದಕ್ಕಿಂತಲೂ ಹೆಚ್ಚು ನೋಟುಗಳು ಮರಳಿ ಬಂದಿವೆಯೇ ಎಂಬ ಸಣ್ಣದೊಂದು ಅನುಮಾನ ಮೂಡುತ್ತದೆ. ಒಂದು ವೇಳೆ ಇದು ನಿಜವಿದ್ದಲ್ಲಿ ಬ್ಯಾಂಕುಗಳು ಖೋಟಾ ನೋಟುಗಳನ್ನು ಸ್ವೀಕರಿಸಿರಬೇಕು ಎಂದಾಗುತ್ತದೆ. ಇದಕ್ಕೆ ಕೆಲಸದ ಒತ್ತಡ ಕಾರಣವಿರಬಹುದು. ಒಳಸಂಚಿನ ಸಾಧ್ಯತೆಗಳನ್ನೂ ತಳ್ಳಿಹಾಕಲಾಗುವುದಿಲ್ಲ. ಯಾವ ಬ್ಯಾಂಕುಗಳಲ್ಲಿ ಹೀಗಾಗಿದೆ ಎಂದು ಪತ್ತೆಹಚ್ಚಲು ತುಂಬಾ ಕಷ್ಟವಿದೆ.
ಸರಕಾರದ ಅಂಕಿಅಂಶಗಳ ಪ್ರಕಾರ ರೂ.400 ಕೋಟಿ ಬೆಲೆಯ ಖೋಟಾನೋಟುಗಳು ಚಲಾವಣೆಯಲ್ಲಿ ಇದ್ದವು. ಸಿಕ್ಕಿಬೀಳದ ಖೋಟಾನೋಟುಗಳ ಪ್ರಮಾಣವನ್ನು ಇದಕ್ಕೆ ಸೇರಿಸಿದಾಗ ಮೊತ್ತ ರೂ. 10,000 ಕೋಟಿ ಮೀರಬಹುದು. ಇದೆಲ್ಲವೂ ಬ್ಯಾಂಕುಗಳಿಗೆ ಮರಳಿಬಂದಿದೆ ಎಂದಾದರೆ ಅಚ್ಚು ಹಾಕಿರುವುದಕ್ಕಿಂತ ಹೆಚ್ಚು ನೋಟುಗಳು ಮರಳಿಬಂದಂತಾಯಿತು. ಇದೊಂದು ಭಾರೀ ಗಂಭೀರ ವಿಷಯ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ ಸಂಗತಿ ಎಂದರೆ ಸರಕಾರ ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡಲು ನಿರಾಕರಿಸಿರುವುದು. ಹಾಗೆ ಮಾಡುವುದರಿಂದ ಕಪ್ಪುಹಣ ಬಯಲಿಗೆಳೆಯುವ ಇಡೀ ಯೋಜನೆ ವಿಫಲವಾಗಲಿದೆ ಎಂಬುದು ಮೋದಿ ಸರಕಾರದ ವಾದ. ವಯಸ್ಸಾದವರು, ಅಶಕ್ತರು ಮುಂತಾದವರು ಕಷ್ಟಪಟ್ಟು ದುಡಿದು ಕೂಡಿಟ್ಟ ಬರೀ ಸುಮಾರು ರೂ. 1,000 ಕೋಟಿಯಷ್ಟಿರಬಹುದಾದ ಈ ಹಳೆ ನೋಟುಗಳು ಮರಳಿಬಂದರೆ ಯೋಜನೆ ಅದು ಹೇಗೆ ವಿಫಲವಾಗಲಿದೆ? ಚಲಾವಣೆಯಲ್ಲಿದ್ದ ಹೆಚ್ಚಿನ ಹಳೆ ನೋಟುಗಳು ಅಥವಾ ಚಲಾವಣೆಯಲ್ಲಿ ಇದ್ದುದಕ್ಕಿಂತಲೂ ಹೆಚ್ಚು ನೋಟುಗಳು ಮರಳಿಬಂದಿವೆಯಾದರೆ ಮೋದಿ ಸರಕಾರದ ನೋಟು ರದ್ದತಿ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದರ್ಥ. ರೂ. 5-7 ಲಕ್ಷ ಕೋಟಿ ಕಪ್ಪುಹಣ ಸಿಗಲಿದೆ ಎಂದು ಕೊಚ್ಚಿಕೊಂಡವರಿಗೆ ಇದಕ್ಕಿಂತ ದೊಡ್ಡ ಮುಖಭಂಗ ಬೇರೆ ಇದೆಯೇ? ಹೀಗಿರುವಾಗ ನೋಟು ಗಣತಿ ಮುಗಿಯುವುದಾದರೂ ಹೇಗೆ!
ಅತ್ತ ದರಿ ಇತ್ತ ಪುಲಿ
ಚಲಾವಣೆಯಲ್ಲಿದ್ದ ಎಲ್ಲಾ ಹಳೆ ನೋಟುಗಳು ಮರಳಿ ಬರುವುದಿಲ್ಲ; ಮರಳಿ ಬರದ (ಕಪ್ಪು) ಹಣವೆಲ್ಲ ಹೆಚ್ಚುವರಿ ಲಾಭ ಎಂಬುದು ಮೋದಿ ಸರಕಾರದ ಲೆಕ್ಕಾಚಾರವಾಗಿತ್ತೆಂದು ಕಾಣುತ್ತದೆ. ಈ ‘ಭಾರಿ ಲಾಭ’ದ ಲೆಕ್ಕಾಚಾರದಲ್ಲಿ ಎಲ್ಲಾ ಹಳೆ ನೋಟುಗಳು ಅಥವಾ ಇರುವುದಕ್ಕಿಂತಲೂ ಹೆಚ್ಚು ನೋಟುಗಳು ಮರಳುವ ಸಾಧ್ಯತೆಯನ್ನು ಪರಿಗಣಿಸದಿರುವುದು ಸ್ಪಷ್ಟವಿದೆ. ಇಂದು ಆರ್ಬಿಐ ಬಳಿ ಜಮೆಯಾಗಿರುವ ಇಷ್ಟೊಂದು ದುಡ್ಡಿಗೆ ಅದೀಗ ಬಡ್ಡಿ ಪಾವತಿಸಬೇಕಾಗಿರುವುದರಿಂದ ವಾಸ್ತವದಲ್ಲಿ ಅದರ ಸಾಲಸೋಲಗಳು ಹೆಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರಕಾರದ ಮುಂದಿರುವ ಎರಡೇ ಎರಡು ಆಯ್ಕೆಗಳೆಂದರೆ ಬಂಡವಾಳ ವೆಚ್ಚದಲ್ಲಿ ಕಡಿತ ಅಥವಾ ಆರ್ಥಿಕ ಕೊರತೆಯಲ್ಲಿ ಹೆಚ್ಚಳ. ಬಂಡವಾಳ ವೆಚ್ಚದಲ್ಲಿ ಕಡಿತ ಮಾಡಿದರೆ ಈಗಾಗಲೇ ಕುಂಟುತ್ತಿರುವ ಆರ್ಥಿಕತೆ ಮುಗ್ಗರಿಸಲಿದೆ. ಆರ್ಥಿಕ ಕೊರತೆ ಹೆಚ್ಚಿಸಿದರೆ ಬಜೆಟಿನ ಮುನ್ನಂದಾಜು ತಲೆಕೆಳಗಾಗಲಿದೆ. ರಿಸರ್ವ್ ಬ್ಯಾಂಕಿನ
ಡಿವಿಡೆಂಡ್ ಅರ್ಧಕ್ಕರ್ಧ ಕಟ್
ನೋಟು ರದ್ದತಿಯನ್ನು ಅನೇಕ ಖ್ಯಾತ ಆರ್ಥಿಕತಜ್ಞರು ಟೀಕಿಸಿದ್ದರೆೆ ಕೆಲವು ಭಟ್ಟಂಗಿಗಳು ಮಾತ್ರ ಅದರಿಂದ ರಿಸರ್ವ್ ಬ್ಯಾಂಕಿಗೆ ಭಾರಿ ಲಾಭವಾಗಲಿದೆ ಎಂದು ಕೊಚ್ಚಿಕೊಂಡಿದ್ದರು. ಆದರೆ ಈ ಬಾರಿ ರಿಸರ್ವ್ ಬ್ಯಾಂಕಿನ ಡಿವಿಡೆಂಡ್ ಕಳೆದ ಸಾಲಿನ ಅರೆವಾಸಿಯಷ್ಟೂ ಇಲ್ಲದಿರುವುದು ನೋಟು ರದ್ದತಿಯ ವೈಫಲ್ಯವನ್ನು ಸೂಚಿಸುತ್ತದೆ. 2015-16ರ ಸಾಲಿನಲ್ಲಿ (ಜೂನ್ 30, 2016ರ ತನಕ) ರಿಸರ್ವ್ ಬ್ಯಾಂಕು ಸರಕಾರಕ್ಕೆ ರೂ. 65,786 ಕೋಟಿ ಡಿವಿಡೆಂಡ್ ಪಾವತಿಸಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ (ಜೂನ್ 30, 2017ರ ತನಕ) ಅದು ರೂ. 30,659 ಕೋಟಿಗಳಿಗೆ ಇಳಿದಿದೆ. ಈ ಇಳಿಕೆಗೆ ಕಾರಣ ಏನೆಂದು ಅದು ಹೇಳಿಲ್ಲ. ಗಮನಾರ್ಹವಾಗಿ 2014-15ರಲ್ಲಿ ರೂ. 65,896 ಕೋಟಿ ಪಾವತಿಯಾಗಿದ್ದರೆ 2013-14ರಲ್ಲಿ ರೂ. 52,679 ಕೋಟಿ ಪಾವತಿಯಾಗಿತ್ತು.