ಆಲೋಚನಾ ವಿಧಾನ
ಬೆಳೆಯುವ ಪೈರು
ಭಾಗ - 3
ಆಲೋಚನೆಗಳು ವಿಸ್ತರಿಸುವಲ್ಲಿ ಗಮನಾರ್ಹವಾದ ಅಂಶಗಳೆಂದರೆ ಗಮನ ಮತ್ತು ಅನುಭವ. ಈ ಎರಡೂ ಒದಗುವಂತಹ ಅವಕಾಶ ಮಕ್ಕಳಿಗೆ ಇರಬೇಕು. ಮಕ್ಕಳೇ ಇರಲಿ ದೊಡ್ಡವರೂ ಕೂಡಾ ಏಕತಾನತೆಗೆ ಗಮನ ಕೊಡುವುದಿಲ್ಲ. ವಿಷಯ ವಿಶೇಷವಾಗಿರಬೇಕು ಅಥವಾ ಹೊಸತಾಗಿರಬೇಕು.
ಅನುಭವಕ್ಕೆ ಅವಕಾಶ
ಮಕ್ಕಳ ಆಲೋಚನಾ ವಿಧಾನವನ್ನು ವಿಸ್ತರಿಸಲು, ಹಲವು ಆಯಾಮಗಳನ್ನು ಒದಗಿಸಲು ಹಿರಿಯರ ಕಡೆ ಮಾಡಬೇಕಾದ ಕೆಲಸವೆಂದರೆ ಅವರ ಅನುಭವಕ್ಕೆ ಅವಕಾಶಗಳನ್ನು ಒದಗಿಸುವುದು. ಆಲೋಚನೆಗಳು ವಿಸ್ತರಿಸುವಲ್ಲಿ ಗಮನಾರ್ಹವಾದ ಅಂಶಗಳೆಂದರೆ ಗಮನ ಮತ್ತು ಅನುಭವ. ಈ ಎರಡೂ ಒದಗುವಂತಹ ಅವಕಾಶ ಮಕ್ಕಳಿಗೆ ಇರಬೇಕು. ಮಕ್ಕಳೇ ಇರಲಿ ದೊಡ್ಡವರೂ ಕೂಡಾ ಏಕತಾನತೆಗೆ ಗಮನ ಕೊಡುವುದಿಲ್ಲ. ವಿಷಯ ವಿಶೇಷವಾಗಿರಬೇಕು ಅಥವಾ ಹೊಸತಾಗಿರಬೇಕು. ಒಂದು ರೀತಿಯಲ್ಲಿ ವಿಶೇಷ ಎನ್ನುವುದು ಹೊಸತು ಎನ್ನುವುದರ ಸಮಾನಾರ್ಥಕ ಪದವಾಗಿಯೇ ಇರುತ್ತದೆ. ಅದೇ ರೀತಿಯಲ್ಲಿ ಅನಿರೀಕ್ಷಿತವಾಗಿ ಒದಗುವಂತಹ ಆದರೆ ಖುಷಿ ಕೊಡುವಂತಹ ವಿಷಯವೂ ಕೂಡ ವಿಶೇಷವಾಗಿರುತ್ತದೆ.
ವಿಶೇಷವೆಂದರೇನೇ ಸ್ಮತಿಪಟಲದಲ್ಲಿ ಉಳಿಯುವಂತಹದ್ದು. ಇರಲಿ, ಮಕ್ಕಳು ಹೊಸತಾಗಿರುವ, ಅನಿರೀಕ್ಷಿತವಾಗಿರುವ ಮತ್ತು ವಿಶೇಷವಾಗಿರುವ ಆದರೆ ನಕಾರಾತ್ಮಕ ಒತ್ತಡಗಳನ್ನು ಹೊಂದಿರದಂತಹ ಪರಿಸರದಲ್ಲಿ ತಮ್ಮ ಗಮನಗಳನ್ನು ಮತ್ತು ಅನುಭವಗಳನ್ನು ರಚನಾತ್ಮಕವಾಗಿ ವಿಸ್ತರಿಸಿಕೊಳ್ಳುತ್ತಾರೆ. ಒಂದು ವೇಳೆ ಅದೇ ಅನಿರೀಕ್ಷಿತ ಗಮನ ಮತ್ತು ಅನುಭವವು ಆಘಾತವನ್ನು ಕೊಡುವುದಾದರೆ, ನೋವು, ಹಿಂಸೆ ಅಥವಾ ಇತರೇ ನಕಾರಾತ್ಮಕ ಪರಿಣಾಮಗಳನ್ನು ನೀಡುವುದಾದರೆ ಕೂಡಾ ಅದು ಮನಸ್ಸಿನಲ್ಲಿ ಉಳಿಯುತ್ತದೆ, ಆದರೆ ಗಾಯದ ರೂಪದಲ್ಲಿ. ಅಂತಹ ಅನುಭವಗಳನ್ನು ಮತ್ತು ಗಮನಗಳನ್ನು ಒದಗುವಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಮಕ್ಕಳು ಸದಾ ಯತ್ನಿಸುವರು.
ಕೆಲವು ಪೋಷಕರು ಮತ್ತು ಶಿಕ್ಷಕರು ಅವನು/ಅವಳು ಏನಾದರೂ ಓದಬೇ ಕೆಂದರೆ ಅಥವಾ ಬರೆಯಬೇಕೆಂದರೆ, ಪಾಠ ಕಲಿಯಬೇಕೆಂದರೆ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ/ಳೆ ಎಂದು ದೂರುತ್ತಿರುತ್ತಾರೆ. ಹೌದು ಕೆಲವು ಮಕ್ಕಳು ಓದಬೇಕೆಂದರೆ, ಬರೆಯಬೇಕೆಂದರೆ, ಕಲಿಯಬೇಕೆಂದರೆ ಹೋಗಿ ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ಕೂರುತ್ತಾರೆ. ಕೆಲವೊಮ್ಮೆ ಹೊಟ್ಟೆ ನೋವು ಮತ್ತೊಂದೇನೋ ತೊಂದರೆ ಎಂದು ನಟಿಸುತ್ತಾ ನಟಿಸುತ್ತಾ ರೋಗಿಗಳಂತೆಯೇ ಆಗಿಹೋಗುತ್ತಾರೆ. ಬೆಳಗ್ಗೆ ಎಚ್ಚರವಾದರೂ ಹಾಸಿಗೆ ಬಿಟ್ಟು ಮೇಲೇಳುವುದಿಲ್ಲ. ರಾತ್ರಿ ನಿದ್ರೆ ಬರದೇ ಇದ್ದರೂ ಬೇಗನೆ ಹಾಸಿಗೆ ಸೇರುತ್ತಾರೆ. ನಿದ್ರಿಸುವಂತೆ ನಟಿಸುತ್ತಾರೆ. ಹೀಗೆ ಏನೇ ಮಾಡಿದರೂ ಅವರಿಗೆ ಕಲಿಕೆ ಸಂತೋಷ ಕೊಡುತ್ತಿಲ್ಲ ಎಂದು ಗ್ರಹಿಸಬೇಕು. ಸೋಮಾರಿ ಎಂದು ದಂಡಿಸಬಾರದು. ಸೋಮಾರಿತನ ಎಂದರಾದರೂ ಏನು? ಕೆಲಸವನ್ನು ಮಾಡಲು ಆಸಕ್ತಿ ತೋರದಿರುವುದು, ಜಡವಾಗಿರುವುದು. ಕ್ರಿಯಾಶೀಲವಾಗಿರುವ ಅಗತ್ಯ ಮತ್ತು ಸನ್ನಿವೇಶವಿದ್ದರೂ ನಿಷ್ಕ್ರಿಯರಾಗಿರುವುದು. ನಿಜ ಹೇಳಬೇಕೆಂದರೆ ಮಕ್ಕಳಲ್ಲಿ ಸೋಮಾರಿತನವೇ ಇರುವುದಿಲ್ಲ. ಏಕತಾನತೆಯ ಬೇಸರಿಕೆಯಲ್ಲಿ ಆ ಕೆಲಸ ಮಾಡಲು ಆಸಕ್ತಿ ತೋರುವುದಿಲ್ಲ. ಮಕ್ಕಳು ಆಸಕ್ತಿ ತೋರುತ್ತಿಲ್ಲವೆಂದರೇನೇ ಆಕರ್ಷಣೆ ಇಲ್ಲವೆಂದೇ ಅರ್ಥ. ಮಕ್ಕಳು ಸದಾ ತುಂಬಿ ತುಳುಕುವ ಚೈತನ್ಯದ ಆಗರ. ಅವರು ಆಸಕ್ತಿ ತೋರುತ್ತಿಲ್ಲವೆಂದರೆ ಆಕರ್ಷಣೆ ಇಲ್ಲವೆಂದು ಅರ್ಥ. ಸೋಮಾರಿತನ ತೋರುತ್ತಿದ್ದಾರೆಂದರೆ ಒಂದೋ ನಕಾರಾತ್ಮಕ ಅನುಭವವಾಗಿರಬೇಕು ಅಥವಾ ಏಕತಾನತೆಯ ಬೇಸರ ಕಾಡುತ್ತಿರಬೇಕು. ಅದರ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಎಚ್ಚರಗೊಳ್ಳಬೇಕು.
ಆಲೋಚನೆ ಮತ್ತು ಚಿಂತನೆ
ಆಲೋಚನಾ ಕ್ರಮ ಮತ್ತು ಚಿಂತನ ಕ್ರಮ ಈ ಎರಡರಬಗ್ಗೆ ಮಕ್ಕಳ ವಿಷಯದಲ್ಲಿ ನೋಡುವುದಾದರೆ, ಮಕ್ಕಳಿಗೆ ಚಿಂತನಾ ಕ್ರಮವಿರುವುದಿಲ್ಲ. ಕ್ರಿಯಾತ್ಮಕವಾಗಿರುವಂತಹ ಆಲೋಚನೆಗಳಿರುತ್ತವೆ. ಭೌತಿಕವಾಗಿ, ಬೌದ್ಧಿಕವಾಗಿ ಅವರು ಹೇಗೆ ಉತ್ಸಾಹಿಗಳೋ, ಕ್ರಿಯಾಶೀಲರೋ, ಚೈತನ್ಯದಿಂದ ತುಂಬಿ ತುಳುಕುತ್ತಿರುತ್ತಾರೋ ಹಾಗೆಯೇ ಅವರ ಆಲೋಚನೆಗಳಲ್ಲೂ ಚೈತನ್ಯಭರಿತರಾಗಿರುತ್ತಾರೆ. ಹೇಗೆ ಕೂತಲ್ಲಿ ಕೂರಲಾರರೋ, ನಿಂತಲ್ಲಿ ನಿಲ್ಲರಾರರೋ ಅಲ್ಲಿ ಇಲ್ಲಿ ಸಿದುಗುತ್ತಾ, ಬೆದಕುತ್ತಾ ಚಟುವಟಿಕೆಗಳಿಂದ ಚುರುಕಾಗಿರುತ್ತಾರೋ, ಅವರು ಆಲೋಚನೆ ಗಳಲ್ಲಿಯೂ ಕೂಡ ಕ್ರಿಯಾತ್ಮಕವಾಗಿರುತ್ತಾರೆ. ಪುಟಿಯುತ್ತಿರುತ್ತಾರೆ. ಒಂದು ವಿಷಯ, ವಸ್ತುವಿನ ಬಗ್ಗೆ ವಿವಿಧ ಆಯಾಮಗಳಿಂದ ಆಲೋಚಿಸಲು ಸಮರ್ಥ ವಾಗಿರುತ್ತಾರೆ. ಆದರೆ ಅವನ್ನು ತುಲನೆ ಮಾಡಲು, ಅದರ ವ್ಯಾಪ್ತಿಯನ್ನು ವಿಸ್ತರಿಸಲು ಪೋಷಕರು ಮತ್ತು ಶಿಕ್ಷಕರು ಸಹಾಯ ಮಾಡಬೇಕೇ ಹೊರತು ಮಕ್ಕಳ ಆಲೋಚನೆಗೆ ಪರ್ಯಾಯವಾಗಿ ತನ್ನ ಆಲೋಚನೆಯನ್ನು ಸ್ಥಾಪಿಸಿ ಬಿಡಬಾರದು. ಅವರ ಆಲೋಚನೆ ಸರಿ ಇಲ್ಲ ಎಂದು ನೇರಾನೇರ ತಿರಸ್ಕರಿಸಿ, ಈ ಆಲೋಚನೆ ಮಾಡು ಎಂದು ಕೊಟ್ಟು ಬಿಟ್ಟರೆ ಅವರ ಆಲೋಚನಾ ಸಾಮರ್ಥ್ಯಕ್ಕೆ ಪೆಟ್ಟು ಬೀಳುತ್ತದೆ. ಅದರ ಬದಲು ಅವರದೇ ಆಲೋಚನೆಗಳ ಸಾಧಕ ಬಾಧಕಗಳನ್ನು ಯೋಚಿಸಲು ಸಹಕರಿಸಬೇಕು. ಆಗಲೂ ನಮ್ಮ ಉದ್ದೇಶಿತ ದಾರಿಗೆ ಅವರನ್ನು ಎಳೆದುಕೊಳ್ಳುವಂತಹ ಸಂಚನ್ನು ಹೂಡಬಾರದು. ತಂತ್ರಗಾರಿಕೆಯನ್ನು ಖಂಡಿತ ಮಾಡಬಾರದು. ನಾವು ದೊಡ್ಡವರು ಅವರಿಗಿಂತ ಜಾಣರು, ನಮ್ಮ ಅನುಭವದಿಂದ ನಾವು ಜ್ಞಾನಿಗಳಾಗಿದ್ದೇವೆ ಎಂಬ ಅಹಂಕಾರವೇ, ಅವರಿನ್ನೂ ಚಿಕ್ಕವರು ಅವರಿಗೇನೂ ಗೊತ್ತಾಗುವುದಿಲ್ಲ ಎಂಬ ಧೋರಣೆಯೇ ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರುವುದಕ್ಕೆ ಮುಖ್ಯ ಕಾರಣ. ಬಹಳಷ್ಟು ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಸ್ವಲ್ಪ ಸಮಯವಾದರೂ ಸ್ವತಂತ್ರವಾಗಿ ಯೋಚಿಸಲು ಮತ್ತು ವರ್ತಿಸಲು ಬಿಡದಿರುವಷ್ಟು ಆತಂಕಿತರಾಗಿರುತ್ತಾರೆ. ಇಂತಹ ಆತಂಕ ಮತ್ತು ಅತಿಯಾದ ಕಾಳಜಿ ಒಂದು ಮನೋರೋಗ. ಪೋಷಕರಿಗಿರುವ ಮತ್ತು ಶಿಕ್ಷಕರಿಗಿರುವ ಒಂದು ಗೀಳು. ಒಮ್ಮೆಯಾದರೂ ನೋಡಿಯೇ ಬಿಡೋಣ ಎಂದು ಅವರು ಯೋಚಿಸುವುದೇ ಇಲ್ಲ.
ಆಲೋಚನೆಗಳ ಸಾಮ್ಯತೆ, ತಾರ್ಕಿಕತೆ, ಅವುಗಳ ಕಾರಣ ಮತ್ತು ಪರಿಣಾಮ ವಾಗಿರುವ ಮತ್ತಷ್ಟು ಆಲೋಚನೆಗಳ ಹಿಂದು ಮುಂದುಗಳ ಕೊಂಡಿ ಗಳು ಚಿಂತನಾ ಕ್ರಮವನ್ನು ರೂಪಿಸುತ್ತದೆ. ಹಾಗಾಗಿ ಮಕ್ಕಳು ಸ್ವತಂತ್ರವಾಗಿ, ಸೃಜನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳ ಬೇಕೆಂದರೆ ಒಂದು ಸಿದ್ಧ ಚಿಂತನಾ ಕ್ರಮವನ್ನು ಒದಗಿಸುವ ಅಗತ್ಯವಿಲ್ಲ. ಆ ಚಿಂತನ ಕ್ರಮವೂ ಅವರಿಂದಲೇ ರೂಪುಗೊಳ್ಳಲಿ. ಮುಂದೆ ಅದು ಯಾವುದಕ್ಕಾದರೂ ಸಾಮ್ಯತೆಯನ್ನು ಹೊಂದಿದರೆ ಹೊಂದಬಹುದು ಅಥವಾ ಆಂಶಿಕವಾಗಿ ಹೋಲಬಹುದು. ಹಲವು ಚಿಂತನಾ ಕ್ರಮಗಳ ಅನುಭವ ಆಧಾರಿತವಾಗಿ ಒಂದು ಹದದಲ್ಲಿ ಮಿಳಿತವಾಗಿರಬಹುದು ಅಥವಾ ಅವರದೇ ಆದಂತಹ ಒಂದು ಹೊಸ ಚಿಂತನಾ ಕ್ರಮವಾಗಿದ್ದು ಜಗತ್ತಿನ ತಾತ್ವಿಕ ಚಿಂತನೆಗಳ ಭಂಡಾರಕ್ಕೆ ಒಂದು ಕಾಣಿಕೆಯಾಗಬಹುದು.
ಆಲೋಚನೆಗಳ ವಿಕಾಸಪಥ
ಆಲೋಚನಗಳು ಹೇಗೆ ವಿಸ್ತರಿಸಿಕೊಳ್ಳುತ್ತವೆ ಎಂದರೆ,
1.ಪ್ರವಾಸಗಳಿಗೆ ಹೋದಾಗ,
2.ಹೊಸಬಗೆಯ ವಸ್ತುಗಳನ್ನು, ವಿಷಯಗಳನ್ನು ಗುರುತಿಸಿದಾಗ,
3.ತಮಗೆ ಅದುವರೆಗೂ ನೋಡದೇ ಇರುವ ಅಥವಾ ತಿಳಿಯದೇ ಇರುವಂತಹ ಮನುಷ್ಯರನ್ನು, ಅವರ ವರ್ತನೆಗಳನ್ನು, ಚಟುವಟಿಕೆಗಳನ್ನು ನೋಡಿದಾಗ.
4.ವಿಸ್ಮಯ ಮತ್ತು ವಿಶಿಷ್ಟವಾದ ವಿದ್ಯಮಾನಗಳನ್ನು ಪ್ರಕೃತಿಯಲ್ಲಿ ಮತ್ತು ಪರಿಸರದಲ್ಲಿ ಕಂಡಾಗ,
5.ಕಂಡದ್ದನ್ನು, ಗ್ರಹಿಸಿದ್ದನ್ನು, ತಿಳಿದಿದ್ದನ್ನು ತನ್ನದೇ ಭಾಷೆಯಲ್ಲಿ ಮತ್ತು ರೀತಿಯಲ್ಲಿ ಅಭಿವ್ಯಕ್ತಿಸಲು ಅವಕಾಶ ಕೊಟ್ಟಾಗ. 6.ಭಾಷೆಯ ಪದ ಸಂಪತ್ತನ್ನು ಹೆಚ್ಚಿಸುವಾಗ,
7.ಕಲಿತ ಹೊಸ ಪದಗಳನ್ನು ಅನ್ವಯಿಸಲು ಮತ್ತು ಪ್ರಯೋಗಿಸಲು ಪ್ರೇರೇಪಿಸಿದಾಗ,
8.ಕೈಗಳನ್ನು ಬಳಸಿ, ವಸ್ತುಗಳನ್ನು ಉಪಯೋಗಿಸಿಕೊಂಡು ಕೆಲಸಗಳನ್ನು ಮಾಡಲು ಹೇಳಿದಾಗ,
9.ವಿವಿಧ ರೀತಿಯ ಸಭೆ ಮತ್ತು ಸಮಾರಂಭಗಳಿಗೆ ಹೋದಾಗ ಮತ್ತು ಅಲ್ಲಿನ ವಾತಾವರಣವನ್ನು ಗಮನಿಸಿದಾಗ.
10.ಒಂದೇ ಸಂಬಂಧದ ವ್ಯಕ್ತಿಗಳೊಡನೇ ಸತತವಾಗಿ ಜೊತೆಯಾಗುವ ಬದಲು ಇತರ ವ್ಯಕ್ತಿಗಳ ಜೊತೆಗಳಲ್ಲಿ ಸಮಯಗಳನ್ನು ಕಳೆದಾಗ, (ಆದರೆ ಆ ವ್ಯಕ್ತಿಗಳ ಬಗ್ಗೆ ತಿಳಿದಿರುವುದು ಎಷ್ಟು ಮುಖ್ಯವೋ, ಮಗುವು ಮರಳಿದಾಗ ಅದು ಏನನ್ನು ಅನುಭವಿಸಿತು ಮತ್ತು ಗ್ರಹಿಸಿತು ಎಂಬುದರ ಬಗ್ಗೆ ತಿಳಿದುಕೊಳ್ಳುವಂತಹ ಸೂಕ್ಷ್ಮತೆಯ ಅಗತ್ಯವಿರುವಂತಹ ಸಾಮಾಜಿಕ ವಾತಾವರಣದಲ್ಲಿ ನಾವಿದ್ದೇವೆ. ಬೇರೆ ದಾರಿಯಿಲ್ಲ.)
11.ಸಮಸ್ಯೆಗಳ ನಿರ್ವಹಣೆಗೆ ಆಲೋಚಿಸಲು ಬಿಡಬೇಕು. ಕೃತಕವಾಗಿ ಒದಗಿಸಿದ ಅಥವಾ ಸಹಜವಾಗಿ ಒದಗಿರುವ ಯಾವುದೇ ಸಮಸ್ಯೆ ಮಕ್ಕಳಿಗೆ ಎದುರಾದಾಗ ಅವರು ಅದನ್ನು ನಿರ್ವಹಿಸಲು ನೈತಿಕವಾಗಿ ಜೊತೆಗೂಡಬೇಕೇ ಹೊರತು ನಾವೇ ಬಗೆ ಹರಿಸಿಬಿಡಬಾರದು. ಅದನ್ನು ಬಗೆ ಹರಿಸಲು ಆಲೋಚಿಸಲು ಬಿಡಬೇಕು.
12.ಒಗಟುಗಳನ್ನು ಬಿಡಿಸಲು ಪ್ರೋತ್ಸಾಹಿಸುವುದು, ಪದಬಂಧಗಳನ್ನು ಮಾಡಲು ಮತ್ತು ಜಾಣ್ಮೆಗೆ ಸವಾಲಾಗುವಂತಹ, ಆಲೋಚನೆಗೆ ಅವಕಾಶ ಕೊಡುವಂತಹ ಆಟಗಳನ್ನು ಅಥವಾ ಪಜಲ್‌ಗಳನ್ನು ಒದಗಿಸುವುದು.
13.ಕ್ರೀಡಾರೂಪದಲ್ಲಿರುವ ಅಥವಾ ಕುತೂಹಲ ಹುಟ್ಟಿಸುವಂತಹ ಲೆಕ್ಕಗಳನ್ನು ಸವಾಲಾಗಿ ಕೊಡುವುದು.
14.ಬೇರೆ ವಸ್ತುಗಳನ್ನು ಆಟಿಕೆಗಳನ್ನಾಗಿ ಬಳಸಿಕೊಂಡು ಆಡುವುದನ್ನು ಪ್ರೋತ್ಸಾಹಿಸುವುದು.
15.ಭಾಷೆಯ ಕಲಿಕೆಯಲ್ಲಿ ಅಭಿವೃದ್ಧಿ ಮತ್ತು ಪರಿಸರ ಹಾಗೂ ಪ್ರಕೃತಿಯಲ್ಲಿ ವಿಸ್ಮಯಗಳನ್ನು ಮತ್ತು ಸೂಕ್ಷ್ಮತೆಗಳನ್ನು ಗುರುತಿಸುವುದು ಆಲೋಚನಾ ವಿಧಾನಕ್ಕೆ ಮಹತ್ತರ ಕಾಣಿಕೆಗಳನ್ನು ಕೊಡುವುವು.
16.ಒಟ್ಟಾರೆ ಸಿದ್ಧ ಮತ್ತು ನಿಯೋಜಿತ ಕೆಲಸಗಳ ಹೊರತಾಗಿ ಇತರ ಕೆಲಸಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಷ್ಟೇ ಅಲ್ಲದೇ, ಸ್ವತಂತ್ರವಾಗಿ ವ್ಯಕ್ತಿಗಳ ಮತ್ತು ಕೆಲಸಗಳ ಒತ್ತಡವಿರದೇ ಇರುವಷ್ಟು ಒಂದಷ್ಟು ಪುರುಸೊತ್ತಿರಬೇಕು.
17.ಕೆಲವು ಬಾರಿ ಒತ್ತಡದ ಕೆಲಸಗಳಿಂದಲೂ ಕೂಡ, ಆ ಕೆಲಸವನ್ನು ಮಾಡಲೇ ಬೇಕಾದ ಅನಿವಾರ್ಯತೆಗಳಲ್ಲಿ ಮಕ್ಕಳು ಸೃಜನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಆಲೋಚಿಸಿ ಕೆಲಸ ನಿರ್ವಹಿಸಬಹುದು. ಹಾಗಾಗಿ ಧನಾತ್ಮಕವಾದ ಒತ್ತಡವೂ ಅವರಿಗೆ ಆಗಾಗ ಒದಗುತ್ತಿರಬೇಕು ಹಾಗೂ ಅದು ಅನಿವಾರ್ಯ ಕೂಡ. ಅವರಿಗೆ ಯಾವಾಗಲೂ ಸರಾಗವಾಗಿರುವ ಮತ್ತು ಕೇಕ್ ವಾಕ್ ಆಗಿರುವಂತಹ ಸನ್ನಿವೇಶಗಳೇ ಇರುವುದಿಲ್ಲ. ಎಂತಹ ಒತ್ತಡದ ಪರಿಸ್ಥಿತಿಯಲ್ಲಿಯೂ ತಮ್ಮ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆಯ ಸ್ವಂತಿಕೆಯನ್ನು ಕಳೆದುಕೊಳ್ಳದಿರುವಷ್ಟು ಸದೃಢರಾಗಿರಲು ಅವರನ್ನು ಶಕ್ತರನ್ನಾಗಿ ಮಾಡಬೇಕು.
18.ವಿವಿಧ ವಸ್ತುಗಳನ್ನು ಅವುಗಳ ಬಳಕೆಯ ಬದಲಾಗಿ ಬೇರೇನೋ ವಸ್ತುಗಳಂತೆ ಉಪಯೋಗಿಸುತ್ತಾ ಆಟವಾಡುವುದು. ಉದಾಹರಣೆಗೆ: ಬಾಳೆಹಣ್ಣನ್ನು ಫೋನಿನಂತೆ ಉಪಯೋಗಿಸುವುದು. ಅಕ್ಕಿ ಅಥವಾ ಇತರ ಧಾನ್ಯಗಳನ್ನು ಹರವುತ್ತಾ ರೂಪಗಳನ್ನು ಕೊಡುವುದು. ಗಾಜಿನ ಲೋಟವನ್ನು ಕ್ಯಾಮರಾ ಅಥವಾ ದುರ್ಬೀನಿನಂತೆ ಬಳಸುವುದು. ಸಹಜವಾಗಿ ಮತ್ತು ನೈಸರ್ಗಿಕವಾಗಿ ವಕ್ರವಾಗಿರುವಂತಹ ಮರದ ಕೊಂಬೆ ಅಥವಾ ಕಡ್ಡಿಗಳನ್ನು ಬೇರೆ ಯಾವುದಕ್ಕೋ ಹೋಲಿಸಿ ಉಪಯೋಗಿಸುವುದು ಅಥವಾ ಆಡುವುದು.
19.ಕಂಡದ್ದನ್ನು, ಗಮನಿಸಿದ್ದನ್ನು ತನ್ನದೇ ರೀತಿಯಲ್ಲಿ ಚಿತ್ರಗಳಲ್ಲಿ ಬಿಡಿಸುವುದು. ಆ ಚಿತ್ರಗಳಲ್ಲಿ ಮತ್ತಷ್ಟು ವಿಷಯಗಳನ್ನು ವಿಸ್ತರಿಸಿ ಚಿತ್ರಿಸುವುದು.
20.ಮಕ್ಕಳ ಕ್ರಿಯಾಶೀಲ ಆಲೋಚನೆಗಳು, ಕೌಶಲ್ಯ ಮತ್ತು ಸೃಜನಾತ್ಮಕ ಒಲವುಗಳು ನಿಧಾನವಾಗಿ ತೋರುವುದೇನಲ್ಲ. ಅವು ಒಮ್ಮಿಂದೊಮ್ಮೆಲೇ ಕಾಣುವವು. ಇದ್ದಕ್ಕಿದ್ದಂತೆ ತೊಡಗಲು ಶುರು ಮಾಡುವವು. ಹಾಗಾಗಿ ಅವುಗಳನ್ನು ಗುರುತಿಸಬೇಕು. ಪ್ರೋತ್ಸಾಹಿಸಬೇಕು. ಒಟ್ಟಾರೆ ಮಕ್ಕಳನ್ನು ನಾವು ತರಬೇತುಗೊಳಿಸುವುದು ನಮ್ಮ ಕೈಯಲ್ಲೇ ಇದೆ. ಆದರೆ ಮಕ್ಕಳೆಂದರೆ ಪಾತ್ರೆಗಳಲ್ಲ ತುಂಬಲು, ಹಣತೆಗಳವು ಬೆಳಗಲು ಎಂಬ ಪ್ರಜ್ಞೆ ನಮಗಿರಬೇಕು.