ತಾಳಿ, ಮಂತ್ರೋಚ್ಚಾರಣೆ ಇಲ್ಲದ ವಿವಾಹ!
ನರೇಂದ್ರ ನಾಯಕ್ ಜೀವನ ಕಥನ
ಭಾಗ-10
ನನ್ನ ನೇತೃತ್ವದಲ್ಲಿ ನಡೆದ ಮೊದಲ ಅಂತರ್ಜಾತಿ ವಿವಾಹ ಶ್ರೀನಿವಾಸ ನಾಟೇಕರ್ ಎಂಬವರದ್ದು. ಅವರು ಲಿಂಗಾಯತ ಹೆಣ್ಣನ್ನು ಪ್ರೀತಿಸಿದ್ದರು. ಅದಕ್ಕೆ ಅವರ ಮನೆಯವರ ವಿರೋಧವಿತ್ತು. ಆ ಮದುವೆಗೆ ಸಹಕರಿಸುವಂತೆ ನನ್ನನ್ನು ಕೋರಲಾಯಿತು. ಹಾಗಾಗಿ ನಾನು ಎಲ್ಲಾ ರೀತಿಯ ಸಹಕಾರ ನೀಡಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಸರಳವಾಗಿ ಮುಗಿಸಿದೆವು. ಈ ಬಳಿಕ ನಮ್ಮ ತಂಡದ ಮೂಲಕ ವಿವಾಹಗಳನ್ನು ನೆರವೇರಿಸಲಾಯಿತು. ಹಾಗಿದ್ದರೂ ಕೆಲವೊಂದು ಪ್ರಕರಣಗಳಲ್ಲಿ ನಮಗೆ ಈ ಕಾಯ್ದೆಯಡಿ ವಿವಾಹ ಮಾಡಿಸಲು ಸಾಧ್ಯವಾಗಲಿಲ್ಲ.
ಮದುವೆ ಎಂದಾಕ್ಷಣ, ಮೊದಲು ನೆನಪಾಗುವುದು ಗಟ್ಟಿಮೇಳ, ಮಂತ್ರೋಚ್ಚಾರಣೆ, ತಾಳಿ ಕಟ್ಟುವುದು. ಇವೆಲ್ಲಾ ಸಂಪ್ರದಾಯಗಳ ಕಟ್ಟಳೆಗಳಿಲ್ಲದೆ ಮದುವೆ ಎಂಬುದು ಮದುವೆಯೇ ಅಲ್ಲ, ಅದಕ್ಕೆ ಯಾವುದೇ ವೌಲ್ಯ ಇಲ್ಲ ಎಂಬ ವಿಚಾರವೇ ಗಾಢವಾಗಿದ್ದ ಸಮಯವದು. ಹಾಗಾಗಿ ವಿವಾಹದ ಬಗೆಗಿನ ನನ್ನ ಅಲೋಚನೆಗಳು ನನ್ನ ಸ್ನೇಹಿತರ ಹಾಗೂ ಕುಟುಂಬಿಕರಲ್ಲೂ ಕುತೂಹಲವನ್ನು ಮೂಡಿಸಿತ್ತು. ಹೌದು, ವಿವಾಹವೆಂಬುದು ಸಂಬಂಧಗಳನ್ನು ಬೆಸೆಯುವ ಮಾಧ್ಯಮವಾಗಬೇಕೇ ಹೊರತು, ಆಡಂಬರ, ಅಗ್ನಿಸಾಕ್ಷಿ- ತಾಳಿ- ಜಾತಕವೆಂಬ ಧಾರ್ಮಿಕ ಕಟ್ಟಳೆಗಳ ಸಂಕೋಲೆಯಾಗಬಾರದು ಎಂಬುದು ನನ್ನ ಅನಿಸಿಕೆ. ಹಾಗಾಗಿ ನಾನು ನನ್ನ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇರಲಿಲ್ಲ. ಆದರೆ ಸ್ನೇಹಿತರು, ಮನೆಯಲ್ಲಿ ಮಾತ್ರ ಆಗಾಗ್ಗೆ ನನ್ನ ವಿವಾಹದ ಬಗ್ಗೆ ಪ್ರಸ್ತಾಪ ಮಾಡುವಾಗ ನಾನು ಅದನ್ನು ಅಷ್ಟೇ ಸಲೀಸಾಗಿ ತಳ್ಳಿ ಹಾಕುತ್ತಿದ್ದೆ. ನನ್ನ ಆಲೋಚನೆಗಳ ಬಗ್ಗೆ ಅವರಲ್ಲಿ ಹೇಳಿಕೊಂಡಾಗ ಅವರು ನಕ್ಕಿದ್ದು ಮಾತ್ರವಲ್ಲ, ನಿನಗೆಲ್ಲೋ ಹುಚ್ಚು ಎಂದು ಚುಡಾಯಿಸಿದ್ದರು. ಆರ್ಥಿಕವಾಗಿ ನಾನು ಸುಸ್ಥಿತಿಗೆ ಬಂದ ಮೇಲೆ ಈ ಬಗ್ಗೆ ಆಲೋಚನೆ ಮಾಡಬಹುದು ಎಂದು ನಾನು ಕೊನೆಗೂ ನನ್ನ ಪ್ರೀತಿಪಾತ್ರರ ಒತ್ತಡಕ್ಕೆ ಮಣಿದು ನಾನು ವಿವಾಹಕ್ಕೆ ಒಪ್ಪಿಕೊಂಡಿದ್ದೆ. ಅದಕ್ಕಾಗಿ ನಾನು ಪತ್ರಿಕೆಯೊಂದರಲ್ಲಿ ಜಾಹೀರಾತನ್ನು ಕೂಡಾ ನೀಡಿದೆ. ನನ್ನ ಜಾಹೀರಾತು ನೋಡಿ ಯಾವ ಹೆಣ್ಣಾಗಲಿ ಅಥವಾ ಪೋಷಕರಾಗಲಿ ಮದುವೆಗೆ ಮುಂದೆ ಬರಲಾರರು ಎಂಬ ಲೆಕ್ಕಾಚಾರ ನನ್ನದಾಗಿತ್ತು.
‘‘ವಿಚಾರವಾದಿಯಾಗಿರುವ 28ರ ಹರೆಯದ .....
ಸಮುದಾಯದ ಸ್ನಾತಕೋತ್ತರ ಪದವೀಧರ ನಾಲ್ಕು ಅಂಕಿಗಳ ವೇತನ ಪಡೆಯುತ್ತಿರುವ ಯುವಕನಿಗೆ ಸಮಾನ ಮನಸ್ಕನಾಗಿ ವಿವಾಹ ಸಂಬಂಧವನ್ನು ಬಯಸುವ, ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಸರಳ ವಿವಾಹಕ್ಕೆ ಒಪ್ಪಿಕೊಳ್ಳುವ ಯುವತಿ ಬೇಕಾಗಿದೆ’’ ಎಂಬ ಜಾಹೀರಾತನ್ನು ನಾನು ನೀಡಿದ್ದೆ.
ಜಾಹೀರಾತಿನಲ್ಲಿ ಕೇವಲ ಪೋಸ್ಟ್ ಬಾಕ್ಸ್ ನಂಬರ್ ಹೊರತುಪಡಿಸಿ ಬೇರೆ ಯಾವುದೇ ವಿವರ ಇರಲಿಲ್ಲ. ನಾನು ಎಲ್ಲಿ ಉದ್ಯೋಗದಲ್ಲಿದ್ದೆ ಎಂಬುದನ್ನೂ ನಮೂದಿಸಿರಲಿಲ್ಲ. ಕೆಲ ದಿನಗಳ ಬಳಿಕ ನನ್ನ ಸ್ನೇಹಿತರು ಕರೆ ಮಾಡಿ ಜಾಹೀರಾತು ನೋಡಿರುವುದಾಗಿ ಹೇಳಿದರು. ಮಾತ್ರವಲ್ಲ, ಒಬ್ಬ ಗೆಳೆಯನಂತೂ ನೀನು ಈ ಜಾಹೀರಾತನ್ನು ತೆಗೆದಿರಿಸು. ಯಾಕೆಂದರೆ ನಿನಗೆ ಅಂತಹ ಹೆಣ್ಣು ಸಿಗಲಿಕ್ಕಿಲ್ಲ. ಹಾಗಾಗಿ ಪ್ರತೀ ವರ್ಷ ಅದನ್ನು ಹಾಕುತ್ತಿರಬಹುದು. ಪ್ರತೀ ವರ್ಷ ಜಾಹೀರಾತಿನಲ್ಲಿ ವಯಸ್ಸು ಮಾತ್ರ ಬದಲಾಯಿಸಿದರೆ ಸಾಕು ಎಂದು ಗೇಲಿ ಮಾಡಿದ್ದ. ಜಾಹೀರಾತಿಗೆ ಸಂಬಂಧಿಸಿ ಹಲವಾರು ಪ್ರತಿಕ್ರಿಯೆಗಳು ಬಂದಿತ್ತಾದರೂ ನನಗೆ ಸೂಕ್ತವಾದುದು ಯಾವುದೂ ಇರಲಿಲ್ಲ. ಕೆಲವರು ಇದು ವರದಕ್ಷಿಣೆ ರಹಿತ ಮದುವೆ ಎಂದು ಆಲೋಚಿಸಿದ್ದರೆ, ಮತ್ತೆ ಕೆಲವರು ಈತ ಇಷ್ಟು ಸರಳವಾಗಿ ವಿವಾಹವಾಗಲು ಮುಂದಾಗಿದ್ದರೆ, ಇವನಲ್ಲೇನೋ ಕೊರತೆ ಇರಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತಪಡಿಸಿದ್ದರು. ಆ ಸಂದರ್ಭ ಕೆಲ ಸ್ನೇಹಿತರು ನನ್ನ ಹಠವನ್ನು ಬಿಡುವಂತೆಯೂ ಒತ್ತಾಯಿಸಿದರು. ಆದರೆ ನಾನು ಮಾತ್ರ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧನಿರಲಿಲ್ಲ. ನನ್ನ ಜೀವನದ ನಿರ್ಧಾರ ನನ್ನದು ಎಂಬ ಬಲವಾದ ವಾದವನ್ನು ನಾನು ಅವರೆಲ್ಲರೆದುರು ಮಂಡಿಸಿದ್ದೆ.
ಹೀಗೆ ಕೆಲ ದಿನಗಳು ಕಳೆದಾಗ ಸ್ನೇಹಿತನೊಬ್ಬ ಪ್ರಸ್ತಾಪವೊಂದನ್ನು ತಂದಿದ್ದ. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರೆ ಯುವತಿಯೊಬ್ಬಳು ನಿನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆಂದು. ನೋಡಲು ಸುಂದರವಾಗಿರುವ ಆ ಯುವತಿ ನಿನಗೆ ಸೂಕ್ತವಾದ ಜೋಡಿ ಎಂದೂ ಆತ ಉಲ್ಲೇಖಿಸಿದ್ದ. ಆದರೆ ನಾನು ಮಾತ್ರ ಆ ಯುವತಿಯನ್ನು ಭೇಟಿಯಾದ ಬಳಿಕವಷ್ಟೇ ನಿರ್ಧಾರ ತಿಳಿಸುತ್ತೇನೆಂದೆ. ಆಕೆ ಹಾಗೂ ಆಕೆಯ ಕುಟುಂಬ ನನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ನಾನು ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ತೀರ್ಮಾನಿಸಿದ್ದೆ.
ಕೊನೆಗೂ ಆ ಯುವತಿ ಜತೆ ನಾನು ಮಾತನಾಡಿದೆ. ಆಕೆ ಹಾಗೂ ಆಕೆಯ ಕುಟುಂಬವೂ ನನ್ನ ಷರತ್ತುಗಳನ್ನು ಮನಪೂರ್ವಕವಾಗಿ ಒಪ್ಪಿಕೊಂಡಿರುವುದು ದಿಟವಾಯಿತು. ಆಕೆಯ ಜತೆ ವಿವಾಹವಾಗಲು ನಿರ್ಧರಿಸಿ, ವಿವಾಹ ನೋಂದಣಿ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹಕ್ಕೆ ಅರ್ಜಿ ಸಲ್ಲಿಸಿದೆ. 30 ದಿನಗಳ ಬಳಿಕ ವಿವಾಹ ಪ್ರಕ್ರಿಯೆ ನಡೆದ ದಿನವದು.
ಅಂದು, ನೋಂದಣಿ ಅಧಿಕಾರಿಯು ತನ್ನ ನೋಂದಣಿಯಲ್ಲಿ ಈ ವಿವಾಹ ಹಿಂದೂ ವಿವಾಹ ಕಾಯ್ದೆಯಡಿ ನೋಂದಣಿ ಮಾಡಲಾಗುವುದು ಎಂದಾಗ ನಾನು ಆಕ್ಷೇಪಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಬೇಕೆಂದು ಅಧಿಕಾರಿಗೆ ತಿಳಿಸಿದೆ. ಅಧಿಕಾರಿ ಅಸಮಾಧಾನಗೊಂಡು ನೀವಿಬ್ಬರೂ ಹಿಂದೂಗಳು, ಹಾಗಿರುವಾಗ ನಿನ್ನ ಸಮಸ್ಯೆಯೇನು ಎಂದು ಪ್ರಶ್ನಿಸಿದ. ನನಗೆ ವಿಶೇಷ ವಿವಾಹ ಕಾಯ್ದೆಯಡಿಯೇ ವಿವಾಹವಾಗಬೇಕೆಂದು ನನ್ನ ವಾದವನ್ನು ಬಲವಾಗಿ ಸಮರ್ಥಿಸಿಕೊಂಡೆ. ಕೊನೆಗೂ ಆತ ಒಪ್ಪಿ ಅದರಂತೆ ಪ್ರಕ್ರಿಯೆಗಳನ್ನು ನೆರವೇರಿಸಿದ.
ಪ್ರಸ್ತುತ ವೃತ್ತಿಯಲ್ಲಿ ಹಿರಿಯ ವಕೀಲೆಯಾಗಿ ಗುರುತಿಸಿಕೊಂಡಿರುವ ಆಶಾ ನನ್ನ ಜೀವನ ಸಂಗಾತಿಯಾಗಿ ಯಾವುದೇ ಜಾತಕದ ಪ್ರಶ್ನೆಯಾಗಲಿ, ತಾಳಿ ಇಲ್ಲದೆ ಧಾರ್ಮಿಕ ಸಂಪ್ರದಾಯಗಳಿಲ್ಲದೆ ವಿಶೇಷ ವಿವಾಹ ಕಾಯ್ದೆ (ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್) ಯಡಿ ಮದುವೆಗೆ ಒಪ್ಪಿಕೊಂಡಿದ್ದಳು. ಈ ಮೂಲಕ 1980ರಲ್ಲಿ ನಾವಿಬ್ಬರು ಕಾನೂನು ರೀತಿಯಲ್ಲಿ ವಿವಾಹಕ್ಕೊಳಗಾದೆವು. ನನ್ನ ಈ ತೆರನಾದ ವಿವಾಹ ನನಗೆ ಸಮಾಜದಲ್ಲೂ ಇಂತಹ ಬದಲಾವಣೆಗೆ ಯಾಕೆ ಪ್ರಯತ್ನಿಸಬಾರದು ಎಂಬ ಆಲೋಚನೆಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ನಾನು ನಮ್ಮ ತಂಡದ ಜತೆ ಸೇರಿ ಹಲವು ಇಂತಹ ವಿಶೇಷ ಅಂತರ್ಜಾತಿ ವಿವಾಹಗಳನ್ನು ನಡೆಸಲು ಸಾಧ್ಯವಾಯಿತು.ಸಮಾಜದಲ್ಲಿ ಭೇದಭಾವ ತೊರೆದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಇಂತಹ ವಿವಾಹಗಳು ಪರಿಣಾಮಕಾರಿ ಎಂಬುದು ನನ್ನ ಅಭಿಪ್ರಾಯ. ನನ್ನ ನೇತೃತ್ವದಲ್ಲಿ ನಡೆದ ಮೊದಲ ಅಂತರ್ಜಾತಿ ವಿವಾಹ ಶ್ರೀನಿವಾಸ ನಾಟೇಕರ್ ಎಂಬವರದ್ದು. ಅವರು ಲಿಂಗಾಯತ ಹೆಣ್ಣನ್ನು ಪ್ರೀತಿಸಿದ್ದರು. ಅದಕ್ಕೆ ಅವರ ಮನೆಯವರ ವಿರೋಧವಿತ್ತು. ಆ ಮದುವೆಗೆ ಸಹಕರಿಸುವಂತೆ ನನ್ನನ್ನು ಕೋರಲಾಯಿತು. ಹಾಗಾಗಿ ನಾನು ಎಲ್ಲಾ ರೀತಿಯ ಸಹಕಾರ ನೀಡಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಸರಳವಾಗಿ ಮುಗಿಸಿದೆವು. ಈ ಬಳಿಕ ನಮ್ಮ ತಂಡದ ಮೂಲಕ ವಿವಾಹಗಳನ್ನು ನೆರವೇರಿಸಲಾಯಿತು. ಹಾಗಿದ್ದರೂ ಕೆಲವೊಂದು ಪ್ರಕರಣಗಳಲ್ಲಿ ನಮಗೆ ಈ ಕಾಯ್ದೆಯಡಿ ವಿವಾಹ ಮಾಡಿಸಲು ಸಾಧ್ಯವಾಗಲಿಲ್ಲ.
ಕುಂದಾಪುರದ ದಲಿತ ಯುವತಿಯೊಬ್ಬಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಬ್ರಾಹ್ಮಣ ಸಮುದಾಯದ ಯುವಕನನ್ನು ಪ್ರೀತಿಸಿದ್ದಳು.ಆದರೆ ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆಗೆ ಮುಂದಾಗಿದ್ದನ್ನು ಕಂಡು ನಮ್ಮ ಕಾರ್ಯಕರ್ತರು ಆಕೆಯನ್ನು ಕರೆತಂದಿದ್ದರು. ನಾವು ಅವರಿಗೆ ವಿವಾಹಕ್ಕೆ ಮುಂದಾದೆವು. ಅದು ತಿಳಿದು ಯುವಕನ ಮನೆಯವರು ಆತನನ್ನು ತ್ರಿವೇಂಡ್ರಮ್‌ನ ದೇವಸ್ಥಾನದಲ್ಲಿ ಪೂಜೆಗೆ ಕಳುಹಿಸಿದ್ದರು. ಆ ಸಂದರ್ಭ ಅವಳಿಂದ ಪತ್ರ ಬರೆಯಿಸಿ ಆತನನ್ನು ಇಲ್ಲಿಗೆ ಕರೆಸಿಕೊಳ್ಳಲಾಯಿತು. ನೀನುಈ ಯುವತಿಯನ್ನು ವಿವಾಹವಾಗಲು ಸಿದ್ಧನಿದ್ದೀಯಾ ಎಂದಾಗ ಆ ಯುವಕ ಈಗಲೇ ಆಗುತ್ತೇನೆಂದ. ಆದರೆ ವಿಶೇಷ ವಿವಾಹ ಕಾಯ್ದೆಯಡಿ 30 ದಿನ ಮುಂಚಿತವಾಗಿ ನೋಂದಣಿ ಮಾಡಬೇಕಿತ್ತು. ಆದರೆ ಅದು ಸಾಧ್ಯವಿಲ್ಲದ ಕಾರಣ, ಇಲ್ಲಿನ ಕಾಶೀಮಠದ ಭಟ್ಟರೊಬ್ಬರಿಂದ ವಿವಾಹ ಮಾಡಿಸಲಾಯಿತು. ಇಂದಿಗೂ ಅವರಿಬ್ಬರ ಜೋಡಿ ಉತ್ತಮವಾಗಿದೆ. ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಅವರಿಬ್ಬರೂ ಒಳ್ಳೆಯ ಶಿಕ್ಷಣವನ್ನೂ ಪಡೆದಿದ್ದಾರೆ.
ಮುಂದುವರಿಯುವುದು