ಹೃಷಿಕೇಶ್ ಮುಖರ್ಜಿ ಎಂಬ ‘ಶ್ರೀಸಾಮಾನ್ಯ’
ವಾರದ ವ್ಯಕ್ತಿ
ಹಿಂದಿ ಚಿತ್ರರಂಗದ ಸಂವೇದನಾಶೀಲ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಇಲ್ಲವಾದ ದಿನ. ಕೋಲ್ಕತ್ತಾ ಮೂಲದ ಹೃಷಿಕೇಶ್ ಮುಖರ್ಜಿ, ಬಿಮಲ್ ರಾಯ್ ಕೈ ಕೆಳಗೆ ಕೆಲಸ ಕಲಿತ ಕಸುಬುದಾರ. ಪಶ್ಚಿಮ ಬಂಗಾಳದ ಎಡರಂಗದ ರಾಜಕಾರಣ, ರವೀಂದ್ರನಾಥ್ ಟಾಗೋರ್, ಮಾರ್ಕ್ಸ್ ವಾದ, ತುರ್ತು ಪರಿಸ್ಥಿತಿ, ಸಮಾಜವಾದ- ಸಿನೆಮಾ ಜಗತ್ತಿಗೆ ಹೊರತಾದುದನ್ನೂ ಬಲ್ಲವರಾಗಿದ್ದ ಹೃಷಿಕೇಶ್, ಎಲ್ಲದರ ಬಗ್ಗೆಯೂ ಗಂಭೀರವಾಗಿ ಚರ್ಚಿಸುತ್ತಿದ್ದರು.
ಗ್ರಾಮೀಣ ಭಾರತದ ಆತ್ಮವನ್ನು ತೆರೆಗೆ ತಂದ ‘ದೋ ಬಿಗಾ ಜಮೀನ್’ ಚಿತ್ರ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲೊಂದು. ಈ ಚಿತ್ರದ ನಿರ್ದೇಶಕರಾದ ಬಿಮಲ್ ರಾಯ್ರ ಸಹಾಯಕರಾಗಿ, ಸಂಕಲನಕಾರರಾಗಿ 1951ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೃಷಿಕೇಶ್ ಮುಖರ್ಜಿ, ಸಿನೆಮಾ ಭಾಷೆಯನ್ನು, ಬಿಂಬವನ್ನು, ಬೆರಗನ್ನು ಅನುಭವದಿಂದಲೇ ಅರಗಿಸಿಕೊಂಡವರು. 1957ರಲ್ಲಿ ‘ಮುಸಾಫಿರ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಹೃಷಿಕೇಶ್, ಮೊದಲ ಪ್ರಯತ್ನದಲ್ಲಿ ಸೋತರೂ, ನಿರ್ದೇಶಕರಾಗಿ ಗೆದ್ದಿದ್ದರು. ಅವರ ಪ್ರತಿಭೆಯನ್ನು ಚಿತ್ರದ ನಾಯಕ ರಾಜ್ಕಪೂರ್ ಗುರುತಿಸಿದ್ದರು. ಮುಂದಿನ ‘ಅನಾರಿ’ ಚಿತ್ರವನ್ನು ಅವರೇ ನಿರ್ದೇಶಿಸುವಂತೆ ಕೇಳಿಕೊಂಡಿದ್ದರು. ಅದು ಹಣ ಗಳಿಕೆಯಲ್ಲಿ, ವಿಮರ್ಶಕರ ವಲಯದಲ್ಲಿ ಮೆಚ್ಚುಗೆ ಗಳಿಸಿ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು. 1960ರಲ್ಲಿ ನಿರ್ಮಾಣಗೊಂಡ ‘ಅನುರಾಧ’ ಹೃಷಿಕೇಶರ ಚಿತ್ರಬದುಕಿಗೆ ಬಹಳ ಮುಖ್ಯವಾದ ತಿರುವು ನೀಡಿ, ಯಶಸ್ಸಿನ ದಾರಿ ತೋರಿದ ಚಿತ್ರ. ‘ಅನುರಾಧ’ ಚಿತ್ರ ಆ ಕಾಲ್ಕಕೇ ವಿಭಿನ್ನವಾದ ಕಥಾಹಂದರ ಹೊಂದಿದ್ದ, ಹೆಣ್ಣಿನ ಒಳದನಿಗೆ ಒತ್ತು ಕೊಟ್ಟ ಚಿತ್ರವಾಗಿತ್ತು. ಅವಳ ಭಾವಲೋಕವನ್ನು ಬೆಳ್ಳಿತೆರೆಗಿಳಿಸಿದ ರೀತಿ ಅನನ್ಯವಾಗಿತ್ತು. ವೃತ್ತಿಪ್ರೀತಿಯ ವೈದ್ಯನಾಗಿ ಬಾಲರಾಜ್ ಸಹಾನಿ, ನಿರ್ಲಕ್ಷಿತ ಮಡದಿಯಾಗಿ ಲೀಲಾ ನಾಯ್ಡುರ ನಟನೆ ಚಿತ್ರದ ಜೀವಾಳವಾಗಿತ್ತು. ಚಿತ್ರಕ್ಕೆ ಸಿತಾರ್ ವಾದಕ ಪಂಡಿತ್ ರವಿಶಂಕರ್ ಸಂಗೀತವಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು. ಸಿತಾರ್ ವಾದಕ ಪಂಡಿತ್ ರವಿಶಂಕರ್ ಹಿಂದಿ ಚಿತ್ರಕ್ಕೆ ಸಂಗೀತ ನೀಡಲು ಕಾರಣ ಕೂಡ ಹೃಷಿಕೇಶ್. ಅವರ ಎಲ್ಲಾ ಚಿತ್ರಗಳಲ್ಲೂ ಸರಳ ಸಂಭಾಷಣೆ, ಸುಮಧುರ ಸಂಗೀತ, ಮೆಲೊಡಿ ಹಾಡುಗಳನ್ನು ಕಾಣಬಹುದು.
ಮುಂಬೈಗೆ ಬರುವ ಮೊದಲು ಅವರು ಕೋಲ್ಕತ್ತಾ ಆಕಾಶವಾಣಿ ಕೇಂದ್ರದಲ್ಲಿ ಸಿತಾರ್ ವಾದಕರಾಗಿದ್ದರು. ಸಿತಾರ್, ಸಂಗೀತ, ಆಕಾಶವಾಣಿ ಸಹವಾಸವೇ ಅವರ ಚಿತ್ರಗಳಲ್ಲಿನ ಸುಶ್ರಾವ್ಯ ಹಾಡುಗಳಿಗೆ ಕಾರಣ. ಅನುರಾಧ ಚಿತ್ರದ ನಂತರ, ಸುನಿಲ್ ದತ್, ಸಂಜೀವ್ಕುಮಾರ್, ರಾಜೇಶ್ ಖನ್ನ, ಅಮಿತಾಭ್ ಬಚ್ಚನ್, ಧರ್ಮೇಂದ್ರ, ಜಯಾ ಭಾದುರಿ, ರೇಖಾ, ಶರ್ಮಿಳಾ ಠಾಗೋರ್, ಅಮೂಲ್ ಪಾಲೇಕರ್, ಫರೂಕ್ ಶೇಖ್, ದೀಪ್ತಿ ನವಲ್, ಉತ್ಪಲ್ ದತ್, ದೇವನ್ ವರ್ಮಾ, ಅಸ್ರಾಣಿಯಂತಹ ಪ್ರತಿಭಾನ್ವಿತ ನಟ-ನಟಿಯರನ್ನು; ಅಭಿಮಾನ್, ಆನಂದ್, ಅನುಪಮ, ಚುಪ್ಕೆ ಚುಪ್ಕೆ, ಛಾಯಾ, ಖೂಬ್ ಸೂರತ್, ಗುಡ್ಡಿ, ಬಾವರ್ಚಿ, ನಮಕ್ ಹರಾಮ್, ಗೋಲ್ಮಾಲ್, ರಂಗ್ ಬಿರಂಗಿಯಂತಹ ಉತ್ತಮ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟು ಹಿಂದಿ ಚಿತ್ರರಂಗವನ್ನು ಸಮೃದ್ಧಗೊಳಿಸಿದರು.
ಸಿನೆಮಾ ಎನ್ನುವುದು ಲಾರ್ಜರ್ ದ್ಯಾನ್ ಲೈಫ್ ಎಂಬ ಪ್ರತೀತಿ ಇದೆ. ಚಿತ್ರೋದ್ಯಮ ಕೂಡ ಅದನ್ನು ಅಸ್ತ್ರದಂತೆ ಪ್ರಯೋಗಿಸುತ್ತ, ಪಾಲಿಸುತ್ತಾ ಬಂದಿದೆ. ಅದರಲ್ಲೂ ಹಿಂದಿ ಚಿತ್ರೋದ್ಯಮವಂತೂ ಬಿಗ್ ಬಜೆಟ್, ಮಲ್ಟಿ ಸ್ಟಾರ್ ಅಟ್ರಾಕ್ಷನ್, ಅದ್ದೂರಿ ಸೆಟ್ಗಳು, ಫಾರಿನ್ ಲೊಕೇಷನ್, ದಾಂ ದೂಂ ಸದ್ದು ಸುದ್ದಿಯಲ್ಲಿ ಮುಳುಗೇಳುತ್ತಿದೆ. ಆದರೆ ಹೃಷಿಕೇಶ್ ಭಾರೀ ಚಿತ್ರಗಳನ್ನೂ ಮಾಡದ, ಕಲಾತ್ಮಕ ಚಿತ್ರಗಳತ್ತಲೂ ಹೋಗದ ಒಂದು ರೀತಿಯ ಮಧ್ಯಮಮಾರ್ಗಿ. ಅವರದೇನಿದ್ದರೂ ಸರಳತೆ ಮತ್ತು ಆಪ್ತತೆಗೆ ಆದ್ಯತೆ. ಸರಳವಾದ ಕತೆಯನ್ನು ಸರಳ ಮಾದರಿಯಲ್ಲೇ ನಿರೂಪಿಸಿ ಸಿನೆಮಾ ಮಾಡುವ ಸಂಪ್ರದಾಯವನ್ನು ಹೃಷಿಕೇಶ್ ಮುಖರ್ಜಿ ಹುಟ್ಟುಹಾಕಿದರು. ಸುಮಾರು 46ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹೃಷಿಕೇಶರ ಚಿತ್ರಗಳಲ್ಲೆಲ್ಲ ನಮ್ಮ ನಡುವಿನ ಸಾಮಾನ್ಯನೇ ಹೀರೋ. ಆಧುನಿಕ ಭಾರತದ ಮಧ್ಯಮವರ್ಗವೇ ಮುಖ್ಯ ವಸ್ತು. ಜಂಜಾಟದ ಬದುಕೇ ಸರಕು. ನಮ್ಮ ಸುತ್ತಲಿನ ಪರಿಸರ, ಕೇಳಿದ ಕತೆಗಳು, ಕಂಡ ಮುಖಗಳು, ನಾವೇ ಅದು ಎನಿಸುವಷ್ಟು ಹತ್ತಿರ ಮತ್ತು ಆಪ್ತ. ನಮ್ಮ ಪಾತ್ರಗಳಿಗೇ ನವಿರು ಹಾಸ್ಯ ಲೇಪಿಸಿ, ಕಲಾತ್ಮಕ ಸ್ಪರ್ಶ ನೀಡಿ, ಮಾನವೀಯ ಮುಖ ತೊಡಿಸಿ ಬೆರಗು ಹುಟ್ಟಿಸುತ್ತಿದ್ದರು. ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳು ಚಿತ್ರವನ್ನು ಚಿತ್ತಕ್ಕಿಳಿಸುತ್ತಿದ್ದವು. ಪ್ರತಿ ಚಿತ್ರವೂ ಒಂದಿಲ್ಲೊಂದು ಪ್ರಶಸ್ತಿ ಪುರಸ್ಕಾರಕ್ಕೆ ಒಳಗಾಗಿದ್ದವು.
ಆದರೆ ಎಲ್ಲೂ ತಾನೊಬ್ಬ ಸ್ಟಾರ್ಗಳನ್ನು ಸೃಷ್ಟಿಸುವ ಮಾಂತ್ರಿಕ, ಸ್ಟಾರ್ ನಿರ್ದೇಶಕ ಎಂಬ ಭುಜಕೀರ್ತಿಗೆ ಬಲಿಯಾಗಲಿಲ್ಲ. ಅಹಂನಿಂದ ಬೀಗಲಿಲ್ಲ. ಪ್ರಚಾರದ ಹುಚ್ಚಿಗೆ ಬೀಳಲಿಲ್ಲ. ಹಣಕ್ಕೆ ಹಾತೊರೆಯಲಿಲ್ಲ. ನಟ ನಟಿಯರನ್ನು, ತಂತ್ರಜ್ಞರನ್ನು ಕೀಳಾಗಿ ಕಾಣಲಿಲ್ಲ. ಅವರ ಸೃಜನಶೀಲತೆ ಮತ್ತು ಪ್ರತಿಭೆಯಷ್ಟೇ ಅವರ ಸರಳತೆ ಅವರನ್ನು ಮತ್ತೊಂದು ಎತ್ತರಕ್ಕೆ ಏರಿಸಿತ್ತು. ಚಿತ್ರೀಕರಣ ತಾಣದಲ್ಲೂ ಅಷ್ಟೆ, ಅವರದೇ ಆದ ಭಿನ್ನ ಶೈಲಿ. ಶಾಟ್ ತೆಗೆಯಬೇಕೆನ್ನುವ ಕೊನೆಯ ಕ್ಷಣದವರೆಗೂ ಸೀನ್ ಏನು, ಸಂಭಾಷಣೆ ಹೇಗಿದೆ ಎಂಬುದರ ಸಣ್ಣ ಸುಳಿವೂ ಸಿಗುತ್ತಿರಲಿಲ್ಲ. ಅಷ್ಟೇ ಅಲ್ಲ, ಅವರ ಸಹಾಯಕ ನಿರ್ದೇಶಕರೂ ಬಾಯಿ ಬಿಡುವಂತಿರಲಿಲ್ಲ. ಅಂದರೆ ವೃತ್ತಿಯಲ್ಲಿ ಶಿಸ್ತು, ಶ್ರದ್ಧೆಗಿಂತಲೂ ಮುಖ್ಯವಾಗಿ ಕುತೂಹಲ ಕಾಯ್ದಿಟ್ಟುಕೊಳ್ಳುವುದು ಬಹಳ ಮುಖ್ಯ ಎನ್ನುವುದು ಹೃಷಿಕೇಶರ ನಂಬಿಕೆಯಾಗಿತ್ತು. ಆ ಕುತೂಹಲವೇ ಈ ಮಾಯಾಜಗತ್ತಿನ ಮರ್ಮ ಎಂದು ಹೇಳುತ್ತಿದ್ದರು. ಆದರೆ ಇದೇ ಹೃಷಿಕೇಶ್, ಕಾಲಕ್ಕೆ ತಕ್ಕಂತೆ ಬದಲಾದರು. 60ರ ದಶಕದಲ್ಲಿ ಸಾಮಾಜಿಕ ಸಾಂಸಾರಿಕ ಸಮಸ್ಯೆಗಳನ್ನು ಚಿತ್ರಿಸುತ್ತಿದ್ದವರು, 70 ದಶಕದಲ್ಲಿ ಹಾಸ್ಯದ ಹಾದಿಗೆ ಬಂದರು. ಕೊನೆಗೆ, 1998ರ ಹೊತ್ತಿಗೆ ‘ಝೂಟ್ ಬೋಲೆ ಕವ್ವಾ ಕಾಟೆ’ ಎಂಬ ಕಳಪೆ ಚಿತ್ರ ಮಾಡಿ ಮೂಲೆಗುಂಪಾದರು. ಥಳುಕು ಬಳುಕಿನ ಹಿಂದಿ ಚಿತ್ರೋದ್ಯಮ ಕೂಡ ಸರಳ ಸಂಪನ್ನ ಹೃಷಿಕೇಶರನ್ನು ಮರೆಯಿತು. ಅವರ ಬೌದ್ಧಿಕ ಪ್ರತಿಭೆಗೆ, ಸೃಜನಶೀಲತೆಗೆ ಸಿಗಬೇಕಾದ ಮಣೆ, ಮನ್ನಣೆ ಸಿಗಲಿಲ್ಲ. ಮಡದಿ ಮುಂಚೆಯೇ ತೀರಿಹೋಗಿ, ಮಕ್ಕಳು ದೂರ ಹೋಗಿ, ಕೊನೆಗಾಲದಲ್ಲಿ ದೊಡ್ಡ ಬಂಗಲೆಯಲ್ಲಿ ಒಂಟಿಯಾದರು. ಒಬ್ಬರೆ ಕೂತು ಚಾರ್ಲಿ ಚಾಪ್ಲಿನ್ ಸಿನೆಮಾಗಳನ್ನು ನೋಡುತ್ತ, ಪದಬಂಧ ಮಾಡುತ್ತ ಕಾಲ ಕಳೆಯುತ್ತಿದ್ದರು. ಬೇಸರವಾದರೆ ದೂರ ದಿಗಂತದ ಕಡಲನ್ನು ಕಣ್ತುಂಬಿಕೊಳ್ಳುತ್ತಿದ್ದರು. ಮನೆ ತುಂಬ ಬೀದಿನಾಯಿ-ಬೆಕ್ಕುಗಳನ್ನು ಸಾಕಿ, ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ ಎನ್ನುವ ಹಂತ ತಲುಪಿದರು.
ಕೊನೆಗೆ ಆಗಸ್ಟ್ 27, 2006ರಂದು ಕೊನೆಯುಸಿರೆಳೆದರು. ಇಂತಹ ಅಪರೂಪದ ವ್ಯಕ್ತಿತ್ವದ ಹೃಷಿಕೇಶ್ಗೆ ಕನ್ನಡದೊಂದಿಗೆ ಒಂದು ವಿಶೇಷವಾದ ನಂಟಿತ್ತು. ಕನ್ನಡದೊಂದಿಗೆ ಎನ್ನುವುದಕ್ಕಿಂತಲೂ, ಪ್ರಾದೇಶಿಕ ಭಾಷೆಯ ಪ್ರತಿಭಾನ್ವಿತರೊಂದಿಗಿನ ಸಾಂಗತ್ಯಕ್ಕೆ ಸದಾ ಹಾತೊರೆಯುತ್ತಿದ್ದರು ಎನ್ನುವುದೇ ಸರಿ. ವಿಶ್ವದ ಅತ್ಯುತ್ತಮ ಸಾಹಿತ್ಯ, ಸಂಗೀತ, ಸಿನೆಮಾಗಳ ಬಗ್ಗೆ ಓದಿ ತಿಳಿದಿದ್ದರು. 70ರ ದಶಕದ ಕರ್ನಾಟಕದ ಹೊಸ ಅಲೆಯ ಚಿತ್ರಗಳ ಬಗ್ಗೆ, ಮಲಯಾಳಂನ ಚೆಮ್ಮೀನ್ ಬಗ್ಗೆ, ತಮಿಳಿನ ಕಥೆಗಾರ ಜಯಕಾಂತನ್ ಬಗ್ಗೆ ತಿಳಿವಳಿಕೆಯಿದ್ದು, ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಆ ಕಾರಣಕ್ಕಾಗಿಯೇ ವಯಸ್ಸಿನಲ್ಲಿ ಚಿಕ್ಕವರಾದ ಪಿ.ಲಂಕೇಶರು ‘ಪಲ್ಲವಿ’ ಚಿತ್ರ ನಿರ್ದೇಶಿಸಿದಾಗ, ಆ ಚಿತ್ರ ರಾಷ್ಟ್ರೀಯ ಪುರಸ್ಕಾರಕ್ಕೆ ಒಳಗಾದಾಗ, ಲಂಕೇಶರನ್ನು ಹೊಗಳಿ, ‘ನಿಮ್ಮ ಮುಂದಿನ ಚಿತ್ರಕ್ಕೆ ನನ್ನದೇ ಸಂಕಲನ’ ಎಂದಿದ್ದರು. 1976 ರಲ್ಲಿ ಲಂಕೇಶರು ತಮ್ಮ ಎರಡನೆ ಚಿತ್ರ ‘ಅನುರೂಪ’ವನ್ನು ಮುಗಿಸಿ, ರೀಲುಗಳು ತುಂಬಿದ್ದ ಡಬ್ಬ ತೆಗೆದುಕೊಂಡು ಸಂಕಲನಕ್ಕಾಗಿ ತಮ್ಮ ಸಹಾಯಕರಾದ ನಾಗೇಶ್ ಮತ್ತು ಕೃಷ್ಣ ಮಾಸಡಿಯವರೊಂದಿಗೆ ಮುಂಬೈಗೆ ಹೋದಾಗ, ಗೌರವಾದರಗಳಿಂದ ಬರಮಾಡಿಕೊಂಡಿದ್ದರು. ಲಂಕೇಶರ ಚಿತ್ರದ 10 ಸಾವಿರ ಅಡಿಯ ರೀಲುಗಳನ್ನು ನೋಡುತ್ತಾ, ‘ಎಲ್ಲಿ ಮುಂದಿನ ರೀಲುಗಳನ್ನು ಕೊಡಿ’ ಎಂದು ಕೇಳಿದ್ದರು. ಲಂಕೇಶರ ಬಳಿ ಇದ್ದದ್ದು ಒಂದೇ ಡಬ್ಬ. ಸ್ಟನ್ನಾದ ಲಂಕೇಶರು, ‘ಏನಯ್ಯಾ ಈ ಮಾರ್ಕ್ಸಿಸ್ಟ್, ಡೆಡ್ ಹ್ಯೂಮರ್’ ಎಂದು ಮಾಸಡಿಯವರಿಗೆ ಹೇಳಿ ಡಬ್ಬ ವಾಪಸ್ ತಂದಿದ್ದರು.
‘ಅನುರೂಪ’ ಚಿತ್ರದ ಕಥೆ, ಸಂಭಾಷಣೆ ಹೊಸತನದಿಂದ ಕೂಡಿತ್ತು. ಚಿತ್ರ ನಿರ್ಮಾಣದಲ್ಲಿ ಪ್ರಾಮಾಣಿಕ ಪ್ರಯತ್ನವಿತ್ತು. ಆದರೆ, ಅದಕ್ಕೂ ಮೀರಿ ಇನ್ನೂ ಬೇಕಾಗಿತ್ತು, ಸಿನೆಮಾ ವ್ಯಾಕರಣ ಕೈ ಕೊಟ್ಟಿತ್ತು ಎನ್ನುವುದು ಹೃಷಿಕೇಶರ ನೇರ ಅಭಿಪ್ರಾಯವಾಗಿತ್ತು. ಅದನ್ನು ಕೇಳಿಸಿಕೊಳ್ಳುವ ಸಹನೆ ಲಂಕೇಶರಲ್ಲಿ ಇರಲಿಲ್ಲ ಎಂದು ಮಾಸಡಿಯವರು ನೆನಪು ಮಾಡಿಕೊಳ್ಳುತ್ತಾರೆ. ಇಲ್ಲಿ ಇದು ಏಕೆ ಮುಖ್ಯವಾಗುತ್ತದೆಂದರೆ, ಆ ಕಾಲಕ್ಕೆ ಹೃಷಿಕೇಶ್ ಮುಖರ್ಜಿ ಬಹಳ ದೊಡ್ಡ ಹೆಸರು ಮಾಡಿದ ನಿರ್ದೇಶಕ. ಸಾಮಾಜಿಕ ಕಳಕಳಿಯುಳ್ಳ ಬಿಮಲ್ ರಾಯ್ರ ಪರಂಪರೆಯನ್ನು ಮುಂದುವರಿಸುತ್ತಲೇ ತನ್ನತನವನ್ನು ಹಿಂದಿ ಚಿತ್ರೋದ್ಯಮದಲ್ಲಿ ದಾಖಲಿಸಿದ ಮಹಾನ್ ಪ್ರತಿಭಾವಂತ. ಅವರಿದ್ದ ಮಟ್ಟಕ್ಕೆ ಯೋಚಿಸುವುದಾದರೆ, ಪ್ರಾದೇಶಿಕ ಭಾಷೆಯ ಚಿತ್ರವೊಂದಕ್ಕೆ ಸಂಕಲನ ಮಾಡುವುದು ಅವರಿಗೆ ಬೇಕಿಲ್ಲದ ಕೆಲಸ. ಆದರೂ ಪ್ರಾದೇಶಿಕ ಭಾಷೆಗಳ ಚಿತ್ರಗಳು, ಕೃತಿಗಳು, ವ್ಯಕ್ತಿಗಳ ಬಗ್ಗೆ ಅವರಿಗಿದ್ದ ಒಲವು, ಒಕ್ಕೂಟ ವ್ಯವಸ್ಥೆಯ ವೈವಿಧ್ಯದ ಬಗೆಗಿದ್ದ ಬೆರಗು, ಎಲ್ಲರಿಂದ ಎಲ್ಲದರಿಂದ ಕಲಿಯಬೇಕೆಂಬ ತುಡಿತ, ತನ್ನಲ್ಲಿರುವುದನ್ನು ಹಂಚಬೇಕೆಂಬ ಹಂಬಲ, ಆ ವಿಶಾಲ ಮನೋಭಾವ ಅವರನ್ನು ಅಜರಾಮರರನ್ನಾಗಿಸಿದೆ. ಅವರನ್ನು, ಅವರ ಚಿತ್ರಗಳನ್ನು ಬೇರೆಯದೇ ನೆಲೆಯಲ್ಲಿ ನಿಂತು ನೋಡಬೇಕಾದ, ಗ್ರಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಸೃಷ್ಟಿಸಿದೆ. ಇದು ಹೊಸ ಉತ್ಸಾಹಿಗಳ ಕಾಲ, ನಾವು ಕೂಡ ಡಾಕ್ಯುಮೆಂಟರಿ ಮಾಡಬಹುದು, ಕಡಿಮೆ ಬಜೆಟ್ನಲ್ಲಿ ಚಿತ್ರ ನಿರ್ಮಿಸಬಹುದು ಎನ್ನುವವರ ಕಾಲ. ಇಂತಹವರಿಗಾಗಿ ಹೃಷಿಕೇಶ್ ಮುಖರ್ಜಿ ಮತ್ತವರ ಚಿತ್ರಗಳು ಅಧ್ಯಯನಯೋಗ್ಯ.