ದಿಲ್ಲಿ ದರ್ಬಾರ್
ಅಮಿತ್ ಶಾ ಬಾಸ್...
ಅಮಿತ್ ಶಾ ಮೇಲೆ ಪ್ರಭಾವ ಬೀರಲು ರಾಜ್ಯಗಳ ಮಂದಿ ಗಂಭೀರ ಚಿಂತನೆ ನಡೆಸಿದಂತಿದೆ. ಕರ್ನಾಟಕ ಬಿಜೆಪಿ ಮೊದಲು ಅವರಿಗೆ ರತ್ನಗಂಬಳಿ ಹಾಸಿದೆ. ಮಧ್ಯಪ್ರದೇಶ ಸಿಎಂ ಶಿವರಾಜಸಿಂಗ್ ಚೌಹಾಣ್ ಅವರ ಜವಾಬ್ದಾರಿಯೂ ಇದೇ ಇದ್ದಂತಿದೆ. ಅಮಿತ್ ಶಾ ಪಕ್ಷದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸುವ ಸಲುವಾಗಿ ಇತ್ತೀಚೆಗೆ ಭೋಪಾಲ್‌ಗೆ ಹೋಗಿದ್ದಾಗ, ಅವರ ಆರಾಮದಾಯಕ ವಾಸ್ತವ್ಯದ ವಿಚಾರದಲ್ಲಿ ಯಾವ ದೂರುಗಳೂ ಬರದಂತೆ ಸಿಎಂ ಎಚ್ಚರ ವಹಿಸಿದ್ದರು. ಶಾ ಬಿಡಾರ ಹೂಡಿದ ಪಕ್ಷದ ರಾಜ್ಯ ಕಚೇರಿಯ ಮೂರು ಕೊಠಡಿಗಳಲ್ಲಿ ಚೌಹಾಣ್ ಹತ್ತು ಹವಾನಿಯಂತ್ರಕ ಯಂತ್ರಗಳನ್ನು ಅಳವಡಿಸಿದ್ದರು. ಎರಡು ಕೊಠಡಿಗಳ ಪೈಕಿ ಆಯ್ಕೆ ಮಾಡಿಕೊಳ್ಳಲು ಶಾ ಅವರಿಗೆ ಕೋರಿದಾಗ ಅವರು ಎರಡನ್ನೂ ಆಯ್ಕೆ ಮಾಡಿಕೊಂಡರು. ಶಾ ಅವರ ವಸತಿ ವಿಚಾರ ಬಗೆಹರಿದಾಗ, ಚೌಹಾಣ್ ತಮ್ಮ ಗಮನವನ್ನು ಶಾ ಅವರ ಆಹಾರದತ್ತ ಹರಿಸಿದರು. ನಾಲ್ಕು ಮಂದಿ ಗುಜರಾತಿ ಶೆಫ್‌ಗಳನ್ನು ಹಾಗೂ ಬಾಯಲ್ಲಿ ನೀರೂರಿಸುವ ಗೋವಾದ ಗುಲ್ಕಂದ್ ಅನ್ನು ವಿಶೇಷ ಅತಿಥಿಗಾಗಿ ವ್ಯವಸ್ಥೆ ಮಾಡಲಾಯಿತು. ಈ ಕಠಿಣ ಪರಿಶ್ರಮ, ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯ ಇನ್ನಷ್ಟು ಪ್ರಖರವಾಗಲು ಕಾರಣವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದಾರೆ.
ರಮಣ್ ದ ಗ್ರೇಟ್!
ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್‌ಸಿಂಗ್ ಇದೀಗ ಅಗ್ರಗಣ್ಯರ ಸಾಲು ಸೇರಿದ್ದಾರೆ. ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಿಂಗ್ ಇದೀಗ ಮುಖ್ಯಮಂತ್ರಿಯಾಗಿ ಐದು ಸಾವಿರ ದಿನ ಪೂರೈಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಕೇವಲ ಏಳು ಮಂದಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಈ ಸಾಲಿನಲ್ಲಿ ಅಗ್ರಗಣ್ಯರು. ಅರುಣಾಚಲಪ್ರದೇಶದ ಗೆಗಾಂಗ್ ಅಪಾಂಗ್ ನಂತರದ ಸ್ಥಾನದಲ್ಲಿದ್ದಾರೆ. ಇತರ ತಾರಾಮಣಿಗಳಲ್ಲಿ ಒಡಿಶಾದ ನವೀನ್ ಪಟ್ನಾಯಕ್, ರಾಜಸ್ಥಾನದ ಮೋಹಲ್‌ಲಾಲ್ ಸುಖಾದಿಯಾ, ದಿಲ್ಲಿಯ ಶೀಲಾದೀಕ್ಷಿತ್, ತ್ರಿಪುರಾದ ಮಾಣಿಕ್ ಸರ್ಕಾರ್ ಹಾಗೂ ಮಣಿಪುರದ ಓಕರಾಂ ಇಬೋಬಿ ಸಿಂಗ್ ಸೇರಿದ್ದಾರೆ. ಇವರೆಲ್ಲರಿಗಿಂತ ಭಿನ್ನವಾಗಿ ರಮಣ್ ಸಿಂಗ್ ಅವರ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಇದೆ. 5,000 ದಿನ ಸಿಎಂ ಕುರ್ಚಿ ಅಲಂಕರಿಸಿದ ಮೊತ್ತಮೊದಲ ಬಿಜೆಪಿ ಸಿಎಂ ಎಂದು ಬಣ್ಣಿಸುವ ಪೋಸ್ಟರ್‌ಗಳು ರಾಯಪುರದಲ್ಲಿ ರಾರಾಜಿಸುತ್ತಿವೆ. ರಮಣ್‌ಸಿಂಗ್ ಅವರ ಒಳ್ಳೆಯ ಗುಣವೆಂದರೆ ಅವರು ಎಂದೂ ದೊಡ್ಡ ಗುರಿಯನ್ನು ಇಟ್ಟುಕೊಂಡ ಅತಿ ಆಕಾಂಕ್ಷಿಯಲ್ಲ. ಈ ಮನೋಸ್ಥಿತಿ ಇರುವವರೆಗೂ ಅವರ ಮುಖ್ಯಮಂತ್ರಿ ಪಟ್ಟಕ್ಕೆ ಯಾವ ಅಪಾಯವೂ ಇಲ್ಲ.
ಯೆಚೂರಿ ಬ್ಯಾಂಕ್ ಬ್ಯಾಲೆನ್ಸ್!?
ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ 20 ಸಾವಿರ ರೂಪಾಯಿಗೆ ನೀಡಿದ್ದ ಚೆಕ್ ಮಾನ್ಯ ಮಾಡಲು ಸಾಕಷ್ಟು ಹಣ ಅವರ ಖಾತೆಯಲ್ಲಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಪ್ರಬಂಧಕರು ಅವರಿಗೆ ಕರೆ ಮಾಡಿದರು. ಅವರು ರಾಜ್ಯಸಭೆಯಿಂದ ಇತ್ತೀಚೆಗೆ ನಿವೃತ್ತರಾದ ಬಳಿಕ ಅವರ ಖಾತೆಗೆ ಬರಬೇಕಿದ್ದ ಪಿಂಚಣಿ ಹಣ ಬರಲಿಲ್ಲ ಎನ್ನುವುದು ಆಗ ಯೆಚೂರಿಗೆ ಮನವರಿಕೆಯಾಯಿತು. ಬಹುಶಃ ಪಿಂಚಣಿ ಪಡೆಯಲು ಅಗತ್ಯವಾಗಿದ್ದ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಿಲ್ಲ ಅಥವಾ ಅಗತ್ಯ ಕ್ಲಿಯರೆನ್ಸ್ ಪಡೆದಿಲ್ಲ ಎಂದು ಯೆಚೂರಿ ಹೊಸದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಗೊಣಗುತ್ತಿದ್ದರು ಎಂದು ಹೇಳಲಾಗಿದೆ. ಆದ್ದರಿಂದ ಪಿಂಚಣಿ ಪಡೆಯಲು ಅವರು ಇನ್ನೊಂದು ತಿಂಗಳು ಕಾಯಬೇಕು. ಯೆಚೂರಿ ಖಾತೆಯಲ್ಲಿ ಕೇವಲ 3000 ರೂಪಾಯಿ ಮಾತ್ರ ಇದೆ ಎಂದು ತಿಳಿದವರು ಹೌಹಾರಿದರು. ಅದು ಕಮ್ಯುನಿಸ್ಟ್ ಪಥ ಎಂದು ಇತರರು ತಿಳಿಯಪಡಿಸಿದರು.
ನಿರ್ದಿಷ್ಟ ಕಾರಣಕ್ಕೆ ಒಗ್ಗೂಡಿದರು!
ಕಾಂಗ್ರೆಸ್‌ನ ರಾಜ್ಯ ಘಟಕವೊಂದರಲ್ಲಿ ಎಲ್ಲ ಬಣಗಳೂ ಏಕೈಕ ಪರಿಹಾರವನ್ನು ಸೂಚಿಸುವುದು ಬಹುಶಃ ಅಪರೂಪ. ಆದರೆ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಅದು ಅಕ್ಷರಶಃ ನಿಜವಾಗಿದೆ. ದಿಗ್ವಿಜಯ ಸಿಂಗ್, ಕಮಲನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಒಗ್ಗೂಡಿ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ, ಕಾಂಗ್ರೆಸ್‌ನ ಭವಿಷ್ಯ ಬದಲಾಗಲು ಪೂರ್ವಷರತ್ತು ಮುಂದಿಟ್ಟಿದ್ದಾರೆ. ಅದು ಪಕ್ಷದ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅವರನ್ನು ಪದಚ್ಯುತಗೊಳಿಸಬೇಕು ಎನ್ನುವುದು. ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ರಾಹುಲ್‌ಗಾಂಧಿ ಇವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಹಿರಿಯ ಮುಖಂಡರ ಜತೆ ಸರಿಯಾಗಿ ಕಾರ್ಯ ನಿರ್ವಹಿಸದೇ, ಪಕ್ಷದಲ್ಲಿ ಗುಂಪುಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ಅವರ ಮೇಲಿನ ಆರೋಪ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ, ಮೂರು ಬಣಗಳಾಗಿ ಒಡೆದಿರುವ ಮಧ್ಯಪ್ರದೇಶ ಕಾಂಗ್ರೆಸ್‌ನ ಮೂವರು ಮುಖಂಡರ ಕ್ಷಮೆ ಯಾಚಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಪವನ್ ವರ್ಮಾಗೆ ಸಚಿವ ಪಟ್ಟ?
ದಿಲ್ಲಿಯ ಶಕ್ತಿಕೇಂದ್ರಗಳಲ್ಲಿ, ಕೇಂದ್ರ ಸಚಿವ ಸಂಪುಟ ಪುನರಾಚನೆ ಕುರಿತ ವದಂತಿ ದಟ್ಟವಾಗಿ ಹಬ್ಬಿದೆ. ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಸ್ವಲ್ಪ ಕಾಲ ಕಾದುನೋಡುವಂತೆ ಸೂಚಿಸಿದ್ದಾರೆ. ಸೆಪ್ಟಂಬರ್ 5ರಂದು ಪಿತೃಪಕ್ಷ ಆರಂಭಕ್ಕೆ ಮುನ್ನವೇ ಪ್ರಧಾನಿ ಸಂಪುಟ ಬದಲಾವಣೆಗೆ ಮುಹೂರ್ತ ನಿಗದಿಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಪುಟ ಸೇರುವ ಸಂಭವನೀಯತೆ ಇರುವ ಕಪ್ಪುಕುದುರೆಗಳ ಪೈಕಿ ಸಂಯುಕ್ತ ಜನತಾದಳದ ಪವನ್ ಕುಮಾರ್ ವರ್ಮಾ ಕೂಡಾ ಒಬ್ಬರು. ಭಾರತದ ವಿದೇಶಾಂಗ ಸೇವೆಯ ಈ ನಿವೃತ್ತ ಅಧಿಕಾರಿ ಮೋದಿಯವರ ಕಟ್ಟಾ ವಿರೋಧಿ. ಆದರೆ ನಿತೀಶ್ ಕುಮಾರ್ ಎನ್‌ಡಿಎ ಸೇರಿದ ಬಳಿಕ, ಅವರು ಮೌನವಾಗಿದ್ದಾರೆ. ಅಷ್ಟುಮಾತ್ರವಲ್ಲದೇ, ನಿತೀಶ್ ಅವರ ದಿಢೀರ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯಸಭೆಯ ಹಾಲಿ ಸದಸ್ಯರಾಗಿರುವ ವರ್ಮಾ, ಸರಕಾರ ಸೇರುವ ಸಂಭಾವ್ಯ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಜೀವನದುದ್ದಕ್ಕೂ ಜಾತ್ಯತೀತತೆ ಹಾಗೂ ಬಹುತ್ವವನ್ನು ಸಮರ್ಥಿಸಿಕೊಂಡು ಬಂದ ವರ್ಮಾ, ಇದೀಗ ಬಿಜೆಪಿಯನ್ನು ಸಮರ್ಥಿಸುತ್ತಾರೆ ಎಂದರೆ ಬಹಳಷ್ಟು ಮಂದಿ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಆದರೆ ಅದೂ ಸಂಭಾವ್ಯ.