varthabharthi


ನನ್ನೂರು ನನ್ನ ಜನ

ನನ್ನ ಮನೆದೇವರಿಗೆ ನಾನೇ ಮಾಡಿದ ಕಜ್ಜಾಯ

ವಾರ್ತಾ ಭಾರತಿ : 30 Aug, 2017
ಚಂದ್ರಕಲಾ ನಂದಾವರ

ನಮ್ಮ ಹಿತ್ತಲಿನ ಮಣ್ಣು ಕೃಷ್ಣಾಪುರ ಯುವಕ ಮಂಡಲದ ಸ್ಟೇಜ್‌ಗೆ ಉಪಯೋಗವಾಯ್ತು ಎಂದು ಈ ಮೊದಲೇ ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಕೃಷ್ಣಾಪುರ ಯುವಕ ಮಂಡಲದ ಕಾರ್ಯದರ್ಶಿಯಾಗಿದ್ದ ಸುಧಾಕರ ಕಾಮತ್ ಶ್ರೀಧರ ಹೊಳ್ಳ ಇವರು ನಮಗೆ ಹೆಚ್ಚು ಪರಿಚಿತರಾದರು. ಯುವಕ ಮಂಡಲ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ನಮಗೆ ಆಹ್ವಾನವಿರುತ್ತಿತ್ತು ಮಾತ್ರವಲ್ಲದೆ ನಂದಾವರರನ್ನು ಕಾರ್ಯಕ್ರಮಗಳಿಗೆ ಅತಿಥಿ ಗಣ್ಯರಾಗಿ ಅನೇಕ ಬಾರಿ ಕರೆಸಿಕೊಂಡಿದ್ದರು. ಅಲ್ಲದೆ ಕಾರ್ಯಕ್ರಮಗಳ ಸಂಯೋಜನೆಯ ಹಿನ್ನೆಲೆಯಲ್ಲಿಯೂ ಸಲಹೆಗಳನ್ನು ಕೇಳಲು ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಇದೇ ಕಾರಣದಿಂದ ಇವರೊಂದಿಗೆ ಪರಿಚಿತರಾದವರು ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಗಳಾಗಿದ್ದ ಸುಂದರ ದೇವಾಡಿಗರು.

ಯುವಕ ಮಂಡಲದ ಕಾರ್ಯಕ್ರಮಗಳಿಗೆ ನಾನೂ ಮಕ್ಕಳ ಜತೆ ಹೋಗುತ್ತಿದ್ದೆ. ಇವರ ಆಶ್ರಯದಲ್ಲೇ ಇದ್ದ ಮಹಿಳಾ ಮಂಡಲದವರು ಕೂಡಾ ನಿಧಾನವಾಗಿ ನನ್ನನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸುವ, ಅತಿಥಿಯಾಗಿ ಕರೆಯುವ ಸೌಜನ್ಯವನ್ನು ತೋರಿಸಿದರು. ಹೀಗೆ ಊರಿನ ವಿದ್ಯಾವಂತ ವರ್ಗ ನಮ್ಮನ್ನು ಪರಿಚಯಿಸಿಕೊಂಡು, ಅರ್ಥೈಸಿಕೊಂಡು ಗೌರವ ತೋರ್ಪಡಿಸಿದ ಹಿನ್ನೆಲೆಯಲ್ಲಿ ಇನ್ನೂ ಹಲವರ ಪರಿಚಯವಾಯಿತು. ಅವರಲ್ಲಿ ಕೆಲವರ ಮನೆಗೆ ನಾವಿಬ್ಬರೂ ಮಕ್ಕಳ ಸಮೇತ ಸೌಜನ್ಯದ ಭೇಟಿ ನೀಡಿದ್ದರೂ ಅವರ ಮನೆಗಳಿಂದ ಪುರುಷರು ಮಾತ್ರ ಸಾಂದರ್ಭಿಕವಾಗಿ ನಮ್ಮ ಮನೆಗೆ ಬರುತ್ತಿದ್ದರು. ಆದ್ದರಿಂದ ಮನೆಯೊಳಗೇ ಇದ್ದ ಗೃಹಲಕ್ಷ್ಮೀಯರ ಸ್ನೇಹಕ್ಕೆ ಅವಕಾಶವಿರಲಿಲ್ಲ. ಉದ್ಯೋಗಿ ಮಹಿಳೆಯರಲ್ಲಿ ಹಲವರು ನಿತ್ಯ ಬಸ್ಸಿನ ಪ್ರಯಾಣದ ಜತೆಗಾರ್ತಿಯರಾಗಿ ಆತ್ಮೀಯರಾಗಿದ್ದರು. ಆದರೆ ಮನೆಗಳಿಗೆ ಭೇಟಿ ನೀಡಲು ಪರಸ್ಪರರಿಗೆ ಸಮಯಾವಕಾಶವಿಲ್ಲದಿರುವುದು ಕೂಡಾ ನಿಜವೇ. ನಾವಂತೂ ಸುರತ್ಕಲ್, ಮಂಗಳೂರಲ್ಲಿ ನಡೆದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದುದರಿಂದಲೂ ನಮಗೆ ಬಿಡುವು ಎನ್ನುವುದು ಇರುತ್ತಿರಲಿಲ್ಲ.

ಹೀಗೆ ನಮ್ಮ ಪರಿಚಿತ, ಸ್ನೇಹ ವಲಯ ವಿಸ್ತಾರವಾದಂತೆ ಕೆಲವು ಯುವಕರ ಮದುವೆಗಳ ಆಹ್ವಾನ ಪತ್ರಿಕೆಗಳು ಬರತೊಡಗಿ ಒಂದರ್ಥದಲ್ಲಿ ನಾವೀಗ ಕೃಷ್ಣಾಪುರದ ಊರಿನವರೇ ಆದೆವು ಎಂದರೆ ತಪ್ಪಲ್ಲ. ಹೀಗೆ ಆಹ್ವಾನ ಬಂದಾಗ ನಂದಾವರರೇ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈ ಮದುವೆ ಎನ್ನುವ ವಿಷಯ ಬಂದಾಗ ನೆನಪಾಗುವ ಒಂದು ವಿಚಾರವನ್ನು ಹಂಚಿಕೊಳ್ಳಬೇಕು ಅನ್ನಿಸುತ್ತದೆ. ಅಬ್ರಾಹ್ಮಣರ ಮನೆಯ ಮದುವೆಗಳು ಆಸುಪಾಸಿನ ಮನೆಗಳಲ್ಲಿ ನಡೆದಾಗ, ಮದುವೆ ಕಾರ್ಯಕ್ರಮ ದೂರದ ಊರಿನಲ್ಲಿ ಇದ್ದರೆ ಸಾಮಾನ್ಯವಾಗಿ ಮದುಮಕ್ಕಳ ಮನೆಯಲ್ಲಿ ಸಂಜೆಯ ಹೊತ್ತು ‘ಟೀ ಪಾರ್ಟಿ’ ಎಂಬ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು.

ಇಂತಹ ಒಂದೆರಡು ಕಾರ್ಯಕ್ರಮಗಳಿಗೆ ಮದುಮಕ್ಕಳ ಮನೆಗೆ ನಾನೂ ಹೋದುದು ಇದೆ. ಆದರೆ ಅಲ್ಲಿ ಮದುಮಕ್ಕಳು ಇರುತ್ತಿರಲಿಲ್ಲ. ಒಂದೋ ಮದುಮಗಳು ಅಥವಾ ಮದುಮಗ ಮಾತ್ರ ಇರುತ್ತಿದ್ದರು. ಅಬ್ರಾಹ್ಮಣರ ಮದುವೆಯಲ್ಲಿ ಮದುಮಗಳು ಗಂಡಿನ ಮನೆಗೆ ಹೋಗುವ ಕಾರ್ಯಕ್ರಮ ಸುಮಾರಾಗಿ ಒಂದು ವಾರದ ಬಳಿಕ ನಡೆಯುತ್ತಿತ್ತು ಆ ದಿನಗಳಲ್ಲಿ. ಇಂದು ಹಾಗಿಲ್ಲ. ಹೀಗೆ ‘ಟೀ ಪಾರ್ಟಿ’ ಎನ್ನುವುದು ಶುಭಾಶಯ ಹೇಳುವುದಕ್ಕೆ ಇರುವ ಅವಕಾಶದೊಂದಿಗೆ ಉಡುಗೊರೆ ನೀಡುವುದಕ್ಕೆ ಆಸ್ಪದ ಇರುವಂತಹುದು ಕೂಡಾ. ಈ ಉಡುಗೊರೆ ನೀಡಿಕೆ ಎನ್ನುವುದು ಆ ದಿನಗಳಲ್ಲಿ ಪ್ರತಿಷ್ಠೆಯ ವಿಷಯವಾಗಿರದೆ ಪರಸ್ಪರರ ಸಹಕಾರವಾಗಿತ್ತು.

ಅಲ್ಲಿ ಜಾತಿ, ಮತ, ಧರ್ಮಗಳ ಭೇದವೂ ಇರಲಿಲ್ಲ. ಪರಸ್ಪರರ ಸ್ನೇಹ ವಿಶ್ವಾಸಗಳೇ ಮುಖ್ಯವಾಗಿತ್ತು. ಹಾಗೆಯೇ ಪಡೆದುಕೊಂಡುದನ್ನು ಬರೆದುಕೊಂಡು ಮುಂದೆ ಆ ಇಷ್ಟಮಿತ್ರ ಬಂಧುಬಳಗದ ಮನೆಗಳಲ್ಲಿ ಶುಭಕಾರ್ಯಗಳು ನಡೆದಾಗ ಹಿಂದಿರುಗಿಸುವುದು ಧರ್ಮವೂ ಆಗಿತ್ತು. ಇದೊಂದು ಅಲಿಖಿತ ಪದ್ಧತಿ, ರೂಢಿಯಾದರೂ ಬಡವರು ಒಬ್ಬ ಶ್ರೀಮಂತನಲ್ಲೇ ಸಾಲ ಮಾಡಿ ಸೋತುಹೋಗುವ ಸಂದರ್ಭಗಳು ಬರುತ್ತಿರಲಿಲ್ಲ. ಹಾಗೆಯೇ ಎರಡೂ ಕಡೆಯ ಮನೆಯವರಿಗೆ ಹನಿಗೂಡಿ ಹಳ್ಳ ಎಂಬಂತೆ ದೊರೆಯುವ ಉಡುಗೊರೆ ವಸ್ತುಗಳು, ಹಣದ ರೂಪದ ಶುಭಾಶಯಗಳು ಮನೆಯ ಹಿರಿಯರಿಗೆ ಮದುವೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ, ದಂಪತಿಯ ಹೊಸ ಜೀವನದ ಪ್ರಾರಂಭಕ್ಕೆ ಉಪಯೋಗವಾಗುತ್ತಿದ್ದುದು ಒಂದು ಸರಳ ಸುಲಭವಾದ ಸೂತ್ರವಾಗಿತ್ತು. ಇದು ಬಾಂಧವ್ಯದ ಆತ್ಮೀಯತೆಯ ಬೆಸುಗೆಯ ಕ್ಷಣಗಳೂ, ಕೃತಜ್ಞತೆಯ ಸಂದರ್ಭಗಳೂ ಆಗಿದ್ದುದೂ ನಿಜವೇ.

ಕೃಷ್ಣಾಪುರದ 5ನೆ ಬ್ಲಾಕ್‌ನಲ್ಲಿ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ಮೊಸರುಕುಡಿಕೆಯ, ಗಣೇಶ ಚೌತಿಯ ಹಿನ್ನೆಲೆಯಲ್ಲಿ ಮಣ್ಣಿನ ಗಣಪತಿಯ ಪ್ರತಿಷ್ಠೆ, ಪೂಜೆ, ಮೆರವಣಿಗೆ ಹಾಗೂ ವಿಸರ್ಜನೆಗಳ ಸಂಭ್ರಮಗಳು ನಡೆಯುತ್ತಿತ್ತು. ಈ ಎರಡೂ ಕಾರ್ಯಕ್ರಮಗಳ ನಿರ್ವಹಣೆಗೆ ಬೇರೆ ಬೇರೆ ಸಮಿತಿಗಳಿದ್ದುವು. ಹಾಗೆಯೇ ಊರ ಜನರಿಂದ ಪೂಜೆ, ಪುನಸ್ಕಾರಗಳಿಗೆ ಚಂದಾ ಎತ್ತುವ, ದೇಣಿಗೆ ವಸೂಲಿಯ ಕ್ರಮವೂ ಇದ್ದು ಊರಿನ ಹತ್ತು ಸಮಸ್ತರ ಅಂದರೆ ಊರಿನ ಹೆಚ್ಚು ಕಡಿಮೆ ಎಲ್ಲರ ಸೇರುವಿಕೆಯಿಂದ ನಡೆಯುತ್ತಿತ್ತು. ಈ ಹತ್ತು ಜನರೆನ್ನುವ ಸಮಸ್ತರಲ್ಲಿ ನಾವೂ ಸೇರಿಕೊಳ್ಳಲೇ ಬೇಕಲ್ಲಾ? ಅಷ್ಟೇ ಅಲ್ಲ ಇದಕ್ಕೆ ದೇಣಿಗೆ ಕೊಡುವವರಲ್ಲಿ ಕ್ರಿಶ್ಚಿಯನ್, ಮುಸ್ಲಿಮರೂ ಇರುತ್ತಿದ್ದರು.

ಇದು ಅಂದಿನ ಸಹಬಾಳ್ವೆಯ ಸಂಕೇತ ಎನ್ನುವುದು ನಮ್ಮೆಲ್ಲರ ನಂಬಿಕೆ. ಸಮಾಜದ ನಂಬಿಕೆ. ಆದರೆ ಅದೇ ರೀತಿ ಕ್ರಿಶ್ಚಿಯನ್ನರ ಹಬ್ಬಗಳಿಗೆ, ಮುಸ್ಲಿಮರ ಹಬ್ಬಗಳಿಗೆ ಇಂತಹ ಚಂದಾ ಎತ್ತುವ ವ್ಯವಸ್ಥೆಗಳು ಇದ್ದ ಹಾಗೆ ನನ್ನ ಅನುಭವದಲ್ಲಿಲ್ಲ. ನಾನು ಕಾಪಿಕಾಡು, ದೇರೆಬೈಲುಗಳಲ್ಲಿ ಕ್ರಿಶ್ಚಿಯನ್ನರ ನಡುವೆ ಇದ್ದಾಗಲೂ ಇಂತಹ ವ್ಯವಸ್ಥೆಯನ್ನು ಕಂಡಿಲ್ಲ. ಅವರ ಹಬ್ಬಗಳ ಸಂದರ್ಭಗಳಲ್ಲಿ ಅವರ ಸಮುದಾಯದ ಬಡಮಂದಿಗೆ ಅವರ ಶ್ರೀಮಂತರು ದಾನ ನೀಡುತ್ತಿದ್ದುದನ್ನು ನೋಡಿದ್ದೇನೆ. ಇದರ ಅರ್ಥ ಅವರು ಸಹಬಾಳ್ವೆಯನ್ನು ಬಯಸುತ್ತಿರಲಿಲ್ಲ ಎಂದು ಭಾವಿಸಲು ಅವಕಾಶ ಖಂಡಿತ ಇರಲಾರದೆಂದೇ ತಿಳಿಯುತ್ತೇನೆ.

ಅಲ್ಲದೆ ಅದು ಅವರ ಸಾಮಾಜಿಕ, ಧಾರ್ಮಿಕ ಘನತೆಯನ್ನು ಪರಿಚಯಿಸುತ್ತದೆ ಎಂದೂ ಭಾವಿಸುತ್ತೇನೆ. ಜತೆಗೆ ಹಬ್ಬಗಳ ಸಾರ್ವಜನಿಕ ಆಚರಣೆ ಮತ್ತು ಅವುಗಳ ಪೈಪೋಟಿಯ ವಿಜೃಂಭಣೆ ಧರ್ಮದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಭಾವಿಸುವವರು ಇದ್ದರೆ ಅದು ಆಯಾಯ ಧರ್ಮಗಳ ಜನರ ಪ್ರತಿಷ್ಠೆಯ ವಿಷಯ ಮಾತ್ರ ಆಗಿರುತ್ತದೆಯೇ ಹೊರತು ಅದು ಯಾವುದೇ ಧರ್ಮದ ಅಂತರಂಗದ ಶ್ರದ್ಧೆಯ ಪ್ರತೀಕ ಖಂಡಿತ ಆಗಲಾರದು. ಇಂದು ವೈಯಕ್ತಿಕವಾಗಿ ಜನರ ಪ್ರತಿಷ್ಠೆಯ ಕಾರಣಗಳಿಂದಲೇ ಯಾವುದೇ ಧರ್ಮದ ಸಾರ್ವಜನಿಕ ಮೆರವಣಿಗೆ ಇದೆ ಎಂದಾಗ ಮಾನವ ಪ್ರೀತಿಯ ಮನಸ್ಸುಗಳ ಒಳಗೆ ಭಯದ ತಲ್ಲಣ ಆಗುವುದು ಅಷ್ಟೇ ಸತ್ಯ.

 ಕೃಷ್ಣಾಪುರದಲ್ಲಿ ಕಂಡ ಇನ್ನೊಂದು ಅನುಭವ, ಮನೆ ಮನೆಗೆ ಬರುವ ಭಜನಾ ತಂಡದ ಭಜನೆಯ ಕಾರ್ಯಕ್ರಮ. ಮೊದಲ ವರ್ಷದಲ್ಲಿ ಭಜನೆಯ ತಂಡ ಬರುವ ಒಂದೆರಡು ದಿನಗಳ ಮೊದಲು ಕೆಲವು ಹುಡುಗರು ನಿಮ್ಮಲ್ಲಿಗೆ ಇಂತಹ ದಿನ ಭಜನೆಯ ತಂಡ ಬರುತ್ತದೆ ಎಂಬ ಸುದ್ದಿ ತಿಳಿಸಿ ಹೋಗುತ್ತಾರೆ. ನನಗೋ ಇದು ಹೊಸ ವಿಚಾರ. ನಾನು ಇದ್ದ ಯಾವ ಊರಿನಲ್ಲೂ ಇಂತಹ ಕಾರ್ಯಕ್ರಮವಿರಲಿಲ್ಲ. ಮನೆಮನೆಯಲ್ಲಿ ನಿತ್ಯ ಪ್ರಾರ್ಥನೆ ಎಂಬಂತೆ ದಿನಾ ಸಂಜೆ ಭಜನೆಗಳು, ಮನೆಯ ಮಕ್ಕಳು ಮತ್ತು ಮಹಿಳೆಯರು ಮಾಡುವುದು ರೂಢಿ. ನಮ್ಮ ಮನೆಯಲ್ಲೂ ಅದು ಸಂಪ್ರದಾಯವೇ. ಇನ್ನು ಕಾಪಿಕಾಡಿನಲ್ಲಿ ಐತಪ್ಪ ಮೇಸ್ತ್ರಿಗಳ ಮನೆಯಲ್ಲಿ ವಾರ್ಷಿಕ ಏಕಾಹ ಭಜನೆ, ವಾಸಪ್ಪ ಮೇಸ್ತ್ರಿಗಳ ಮನೆಯಿಂದ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಹೊರೆ ಕಾಣಿಕೆ ಹೊರಟಾಗ ಭಜನಾ ತಂಡಗಳು ಜಾತಿಭೇದವಿಲ್ಲದೆ ನಡೆಯುತ್ತಿದ್ದುದನ್ನು ನೋಡಿದ್ದೇನೆ.

ಇಲ್ಲಿ ಹಿಂದೂಗಳು ಎನ್ನುವ ಶೂದ್ರ ಮಂದಿ ಇರುತ್ತಿದ್ದರೇ ಹೊರತು ಬ್ರಾಹ್ಮಣರು ಸೇರಿಕೊಂಡದ್ದು ಇಲ್ಲ ಎಂದರೆ ತಪ್ಪಾಗಲಾರದು. ಉರ್ವಾಸ್ಟೋರ್ಸ್‌ನಲ್ಲಿರುವಾಗ ಕೊಟ್ಟಾರದಲ್ಲಿದ್ದ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಬ್ರಾಹ್ಮಣರೂ ಸೇರಿದಂತೆ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಯೆಯ್ಯಿಡಿಯ ಶ್ರೀರಾಮ ಭಜನಾ ಮಂದಿರದಲ್ಲೂ, ಕೊಪ್ಪಲಕಾಡಿನ ಭಜನಾ ಮಂದಿರದಲ್ಲೂ ಭಜನಾ ತಂಡದಲ್ಲಿದ್ದುದು ಅಬ್ರಾಹ್ಮಣರೇ. ದೇರೆಬೈಲಿನಲ್ಲಿದ್ದಾಗ ಕೆಳಗಿನ ಕೊಂಚಾಡಿಯ ಭಜನಾ ಮಂದಿರದಲ್ಲೂ ಭಜಕರು ಶೂದ್ರರೇ. ಇವರೆಲ್ಲಾ ಸಂಗೀತ ಪಾಠ ಕಲಿತವರಲ್ಲ. ಹಿರಿಯರಿಂದ ಕೇಳಿ ಕಲಿತು ಆಸಕ್ತಿಯಿಂದ ಹಾಡುತ್ತಿದ್ದವರು. ಅದನ್ನೇ ದೇವರನ್ನು ಒಲಿಸಿಕೊಳ್ಳುವ ದಾರಿ ಎಂದು ತಿಳಿದವರು ಆಗಿದ್ದುದು. ಅಂತಹವರಲ್ಲಿ ಹಲವರಿಗೆ ದುಶ್ಚಟಗಳು ಇರುತ್ತಿರಲಿಲ್ಲ ಎನ್ನುವುದು ಕೂಡಾ ನಿಜ. ಕೆಲವರು ಮದ್ಯ ಸೇವಿಸಿದರೆ ಚೆನ್ನಾಗಿ ಹಾಡುತ್ತಾರೆ ಎಂದು ಕೇಳಿದ್ದೇನೆ ಕೂಡಾ. ಕಂಡಿದ್ದೇನೆ ಕೂಡಾ.

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಭಜನಾ ತಂಡವನ್ನು ಹೇಗೆ ಸ್ವಾಗತಿಸಬೇಕು. ಅದಕ್ಕಾಗಿ ಏನೇನು ಸಿದ್ಧತೆ ಮಾಡಬೇಕು ಎಂದು ಗೊತ್ತಿಲ್ಲದ ನಾನು ಶೀನಣ್ಣನ ಮಡದಿಯಲ್ಲಿ ಕೇಳಿದೆ. ಅವರು ‘‘ಬೇರೆ ಏನಿಲ್ಲ, ಹರಿವಾಣದಲ್ಲಿ ಹಣ್ಣುಕಾಯಿ, ಒಂದು ಕಾಲುದೀಪ ಉರಿಸಿ ತುಳಸಿಕಟ್ಟೆಯ ಬಳಿ ಇಡಬೇಕು. ಹಾಗೆಯೇ ಪ್ರಸಾದಕ್ಕಾಗಿ ಅವಲಕ್ಕಿ ಹಾಗೂ ಬೆಲ್ಲ ಇಡಿ’’ ಎಂದರು. ನಾನೋ ಅವಲಕ್ಕಿ ಮತ್ತು ಬೆಲ್ಲ ಹಾಗೇ ಇಟ್ಟರೆ ಪ್ರಸಾದ ಹೇಗಾಗುತ್ತದೆ ಎಂದು ಕೇಳಿದೆ. ಆಗ ಅವರು ಭಜನಾ ತಂಡದಲ್ಲಿ ಪೂಜೆ ಮಾಡಲು ಭಟ್ಟರೊಬ್ಬರು ಇರುತ್ತಾರೆ. ಅವರು ಹಣ್ಣುಕಾಯಿ ಒಡೆದ ಮೇಲೆ ಕಾಯಿ ತುರಿದು ಅವಲಕ್ಕಿ, ಬೆಲ್ಲ ಸೇರಿಸಿ ಕಲಸುತ್ತಾರೆ. ಅದನ್ನೇ ಎಲ್ಲರಿಗೂ ಹಂಚಿ ನಮಗೂ ಪ್ರಸಾದ ರೂಪದಲ್ಲಿ ಕೊಡುತ್ತಾರೆ ಎಂದರು.

ನಾವೇ ಯಾಕೆ ಹೀಗೆ ಅವಲಕ್ಕಿಯ ಕಜ್ಜಾಯ ಮಾಡಿ ಇಡಬಾರದು ಎಂದು ಕೇಳಿದೆ. ಅವರೋ ಅದು ನನಗೆ ಗೊತ್ತಿಲ್ಲ. ನಾವೆಲ್ಲಾ ಹಾಗೆಯೇ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇವೆ ಎಂದರು. ಜತೆಗೆ ನನ್ನ ಪ್ರಶ್ನೆ ‘‘ಅಲ್ಲಾ, ಈ ಭಜನೆ ಮನೆ ಮನೆಗೆ ಯಾಕೆ ಬರಬೇಕು. ಎಲ್ಲರ ಮನೆಯಲ್ಲೂ ಅವರವರೇ ಭಜನೆ ಮಾಡುತ್ತಾರಲ್ಲಾ’’ ಎಂದು ಕೇಳಿದರೆ, ಅವರು ಪಾಪ ‘‘ಇದರಿಂದ ಊರಿಗೆ ಒಳ್ಳೆಯದಾಗುತ್ತದೆ ಅಂತೆ’’ ಎಂದು ಹೇಳಿದಾಗ ಅವರ ಮುಗ್ಧತೆಯ ಜತೆಗೆ ನಂಬಿಕೆ ಹೇಗೆ ಮೂಢವಾಗಿ ಬಿಡುತ್ತದೆ ಎಂದು ಯೋಚಿಸಿ ನನಗೆ ನಗುಬಂತು.

ಜತೆಗೆ ನನಗೆ ಯಾಕೋ ಇದು ಸರಿ ಅನ್ನಿಸಲಿಲ್ಲ. ಈ ವ್ಯವಸ್ಥೆಯೊಳಗೆ ಒಂದಿಷ್ಟು ಮಡಿ ಮೈಲಿಗೆಯ ವಾಸನೆ ಹೊಡೆಯಿತು. ನಮ್ಮ ಮನೆಯ ತುಳಸಿಕಟ್ಟೆಯೊಳಗೆ ಇದ್ದಿರಬಹುದಾದ ದೇವರಿಗೆ ನಾವು ಮನೆಯವರು ಮಾಡಿದ ಪ್ರಸಾದ ಮೈಲಿಗೆಯಾಗುತ್ತದೆಯೇ? ಎಂದು ಬುದ್ಧಿ ತರ್ಕಿಸಿತು. ನಾನು ಯಾರಲ್ಲೂ ಆ ಬಗ್ಗೆ ಚರ್ಚಿಸದೆ ನನ್ನ ನಿರ್ಧಾರ ನಾನೇ ಕೈಗೊಂಡೆ. ನನ್ನ ತಾಯಿಮನೆಯಲ್ಲಿ ಒಂದೊಂದು ಹಬ್ಬಕ್ಕೆ ಒಂದೊಂದು ರೀತಿಯ ಪ್ರಸಾದ, ಪಂಚಕಜ್ಜಾಯಗಳನ್ನು ಮಾಡುವುದು ರೂಢಿ. ಅಮ್ಮನೇ ಮಾಡುತ್ತಿದ್ದರು. ನಮ್ಮಿಂದಲೂ ಮಾಡಿಸುತ್ತಿದ್ದರು.

ಆದ್ದರಿಂದ ನಾನು ಹಣ್ಣುಕಾಯಿ ಹರಿವಾಣದಲ್ಲಿಟ್ಟು, ತುಳಸಿಯ ಮುಂದೆ ನಿತ್ಯ ಇಡುವ ಹಣತೆಯ ದೀಪವನ್ನೇ ಇಡಲು ವ್ಯವಸ್ಥೆ ಮಾಡಿದೆ. ಹಾಗೆಯೇ ತೆಂಗಿನಕಾಯಿ ತುರಿ, ಅವಲಕ್ಕಿ, ಬೆಲ್ಲ ಕಲಸಿ, ಏಲಕ್ಕಿ ಪುಡಿ, ತುಪ್ಪ ಬೆರೆಸಿ ಘಮಘಮ ಎನ್ನುವ ಪಂಚಕಜ್ಜಾಯವನ್ನು ಸಾಕಷ್ಟು ಜನರಿಗೆ ಹಂಚುವುದಕ್ಕೆ ಬೇಕಾಗಿ ದೊಡ್ಡ ಪಾತ್ರೆಯಲ್ಲೇ ತಂದಿಟ್ಟೆ. ಮನೆಗೆ ಬಂದ ಭಜನಾ ತಂಡದ ಮುಖಂಡರು ಸುಶ್ರಾವ್ಯವಾಗಿ ಹೊಸ ಕೀರ್ತನೆಯೊಂದನ್ನು ಪ್ರಾರಂಭಿಸಿದರು. ನನಗೋ ಅದು ಇಷ್ಟವಾದ ಕೀರ್ತನೆಯೂ ಆಗಿತ್ತು. ಅವರೇ ಪೂಜೆ ಮಾಡಬೇಕಾದ ಅರ್ಚಕರೂ ಆದುದರಿಂದ ಭಜನೆ ಮುಗಿದ ಮೇಲೆ ಕಾಯಿ ಒಡೆದು ದೇವರಿಗೆ ಅರ್ಪಿಸಿದರು. ಪೂಜೆ ಎಂದರೆ ಆರತಿ ಬೆಳಗಿದರು.

ಇಟ್ಟ ಪಂಚಕಜ್ಜಾಯದ ಪಾತ್ರೆ ನೋಡಿ ಅವಲಕ್ಕಿ ಕಜ್ಜಾಯ ಮಾಡುವ ಆವಶ್ಯಕತೆ ಇಲ್ಲವೆಂದು ತಿಳಿದಾಗ ಬುದ್ಧಿವಂತರಾದ ಅವರು ತನ್ನ ಮನಸ್ಸಿನ ಭಾವನೆಯನ್ನು ಮುಖದಲ್ಲಿ ತೋರ್ಪಡಿಸುವುದಕ್ಕೆ ಅವಕಾಶ ಕೊಡಲಿಲ್ಲ. ಎಲ್ಲರಿಗೂ ಹಂಚಿದರು. ನಾನು ಅವರು ಪ್ರಸಾದವನ್ನು ಬಾಯಿಗೆ ಹಾಕಿಕೊಳ್ಳುವುದನ್ನೇ ಕಾಯುತ್ತಿದ್ದರೆ ಅವರೆಲ್ಲಿ ತಿನ್ನುತ್ತಾರೆ? ಹಾಗಾದರೆ ನನ್ನ ಬುದ್ಧಿ ತರ್ಕಿಸಿದ್ದು ಸರಿಯಾಗಿಯೇ ಇತ್ತು ಎಂದು ಸಮರ್ಥಿಸಿಕೊಂಡೆ. ಆ ಭಜನಾ ತಂಡದಲ್ಲಿ ಮುಖಂಡರ ಜತೆಗೆ ಇನ್ನೊಬ್ಬ ಸಣ್ಣ ಪ್ರಾಯದ ಬ್ರಾಹ್ಮಣ ಯುವಕನನ್ನು ಬಿಟ್ಟರೆ ಉಳಿದ ಎಲ್ಲಾ ಹುಡುಗರು ಶೂದ್ರರೇ.

ಎಲ್ಲಾ ಬೇರೆ ಬೇರೆ ಜಾತಿಯವರೇ. ಅವರು ಭಟ್ಟರು ಚೆನ್ನಾಗಿ ಆಡುತ್ತಿದ್ದ ಕೀರ್ತನೆಯ ಸಾಲುಗಳನ್ನು ಅರಚಿದಂತೆ, ಕಿರುಚಿದಂತೆ ದೊಡ್ಡ ಸ್ವರದಲ್ಲಿ ಅನುಕರಿಸುತ್ತಿದ್ದರು. ಅವರಲ್ಲಿ ಭಕ್ತಿಯಾಗಲೀ, ಶ್ರದ್ಧೆಯಾಗಲೀ ನನಗಂತೂ ಕಾಣಲಿಲ್ಲ. ನಾವೇ ಇಟ್ಟ ಹಣ್ಣುಕಾಯಿಯ ಹರಿವಾಣ ಹಾಗೂ ಉಳಿದ ಪಂಚಕಜ್ಜಾಯದ ಪಾತ್ರೆ ನಮ್ಮಿಬ್ಬರ ಕೈಗೆ ನೀಡಿ ‘‘ದೇವರು ನಿಮಗೆ ಸುಖ ಸಂಪತ್ತು, ಆಯುಷ್ಯ, ಆರೋಗ್ಯಗಳನ್ನು ನೀಡಲಿ’’ ಎಂದು ಹಾರೈಸಿದರು. ದೇವರು ಅವರ ಮಾತು ಕೇಳಿ ನಮಗೆ ಇವೆಲ್ಲವನ್ನೂ ದಯಪಾಲಿಸುತ್ತಾನೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವರು ಅವರ ಬಾಯಿಂದ ಹಾರೈಸಿದರು ಎಂದಷ್ಟೇ ನಾನು ತಿಳಿದೆ.

ಹರಿವಾಣ, ಪಾತ್ರೆಗಳನ್ನು ನಾನು ತೆಗೆದುಕೊಂಡರೆ ಇನ್ನೊಬ್ಬನಿದ್ದ ಬ್ರಾಹ್ಮಣ ಯುವಕ ರಸೀದಿ ಪುಸ್ತಕ ಹಿಡಿದು ನಿಂತುಕೊಂಡಿದ್ದ. ಮನೆಯ ಯಜಮಾನರು ಈಗ ದೇಣಿಗೆ ನೀಡಬೇಕಾಗಿತ್ತು. ಅದಕ್ಕೆ ರಸೀದಿಯೂ ಸಿಕ್ಕಿತು. ನಮ್ಮ ಈ ಸೇವೆ ದೇವರ ಲೆಕ್ಕಾಚಾರಕ್ಕೆ ಸೇರಿ ಪುಣ್ಯವಾಗಿ ಪರಿವರ್ತನೆಯಾಯಿತು ಎಂದು ನಾವು ತಿಳಿಯಬೇಕಾಗಿತ್ತು ಎಲ್ಲರಂತೆ. ಆದರೆ ನಾನೋ ‘‘ನಾನು ಅಡುಗೆ ಮಾಡಬೇಕು. ನಾನು ಉಣ್ಣಬೇಕು’’ ಎನ್ನುವ ಸರಳ ಸೂತ್ರದಂತೆ ನಾನು ದೇವರನ್ನು ಪ್ರಾರ್ಥಿಸಬೇಕು. ಅವನೋ, ಅವಳೋ, ನನಗೆ ನೀಡಬೇಕು ಎಂದು ತಿಳಿದವಳು.

ಯಾಕೆಂದರೆ ನನ್ನ ದೇವರಿಗೆ ಅಂದರೆ ನನ್ನನ್ನು ಹುಟ್ಟಿಸಿದ ದೇವರಿಗೆ ನನ್ನ ಮಾತು, ಭಾಷೆ ಎಲ್ಲಾ ಅರ್ಥವಾಗುತ್ತದೆ ಎಂದು ಭಾವಿಸಿದವಳು ಆ ದಿನಗಳಲ್ಲಿ. ಈಗಲಾದರೋ ಇನ್ನೂ ಮುಂದೆ ಹೋಗಿ ನನಗೆ ಏನು ಕೊಡಬೇಕು ಎನ್ನುವುದು ದೇವರಿಗೇ ಗೊತ್ತಿದೆ ಎಂದು ತಿಳಿದಿದ್ದೇನೆ. ಆದ್ದರಿಂದ ನಾನು ಏನೂ ಬೇಡುವುದಿಲ್ಲ. ಅವನಾಗಿಯೇ ನೀಡಿದನ್ನು ಸಂತೃಪ್ತಿಯಿಂದ ಸ್ವೀಕರಿಸುವ ತಿಳುವಳಿಕೆ ಬೆಳೆಸಿಕೊಂಡಿದ್ದೇನೆ. ಕೃಷ್ಣಾಪುರದಲ್ಲಿದ್ದಷ್ಟು ವರ್ಷವೂ ಭಜನಾ ತಂಡವನ್ನು ಹೀಗೆಯೇ ಸ್ವಾಗತಿಸಿ ಪೂಜೆ ಸಲ್ಲಿಸಿ ರುವುದು ಊರಿನ ಸೌಹಾರ್ದಕ್ಕೆ ನಮ್ಮಿಂದ ಭಂಗಬೇಡ ಎನ್ನುವ ಕಾರಣದಿಂದ ಎಂದರೆ ಹೆಚ್ಚು ಸರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)