ನ್ಯಾಯಾಂಗದಲ್ಲಿ ಅಹಿತಕರ ಬೆಳವಣಿಗೆಗಳು
ಭಾಗ-2
ಭಾರತದ ನೂತನ ಪ್ರಧಾನ ನ್ಯಾಯಮೂರ್ತಿ
ಭಾರತದ ಪ್ರಧಾನ ನ್ಯಾಯಮೂರ್ತಿಯವರು ಓರ್ವ ಸಾಂವಿಧಾನಿಕ ಅಧಿಕಾರಿಯಾಗಿ ಸಂಕೀರ್ಣ ಸಾಂವಿಧಾನಿಕ, ಕಾನೂನಿನ ಆಡಳಿತ ಹಾಗೂ ದೇಶದ ಆಡಳಿತದ ಮೇಲೆ ಪರಿಣಾಮ ಬೀರುವ, ರಾಜಕೀಯವಾಗಿ ಸೂಕ್ಷ್ಮವಾದ ಮತ್ತು ಸುಮಾರು 135 ಕೋಟಿ ಭಾರತೀಯರ ಬದುಕು ಮತ್ತು ಸ್ವಾತಂತ್ರ್ಯಗಳನ್ನು ತಟ್ಟುವ ವಿಷಯಗಳನ್ನೊಳಗೊಂಡ ಪ್ರಕರಣಗಳಲ್ಲಿ ನ್ಯಾಯದಾನ ಮಾಡುತ್ತಾರೆ. ಪ್ರಧಾನ (ಮಾಜಿ) ನ್ಯಾಯಮೂರ್ತಿ ಖೇಹರ್ರವರು ತನ್ನ ಉತ್ತರಾಧಿಕಾರಿಯ ಸ್ಥಾನಕ್ಕೆ ನ್ಯಾ ದೀಪಕ್ ಮಿಶ್ರಾರ ಹೆಸರನ್ನು ಸೂಚಿಸಿದ ಬಳಿಕ ಕೇಂದ್ರ ಸರಕಾರ ಆ ನೇಮಕಾತಿಯನ್ನು ದೃಢಪಡಿಸಿದೆ. ನ್ಯಾ ಮಿಶ್ರಾ ಇದೇ ಆಗಸ್ಟ್ 28ರಂದು ಭಾರತದ 45ನೆ ಪ್ರಧಾನ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
90ರ ದಶಕದಲ್ಲಿ ಪ್ರಧಾನ ನ್ಯಾಯಮೂರ್ತಿ ಆಗಿದ್ದ ರಂಗನಾಥ ಮಿಶ್ರಾರ ಸೋದರಳಿಯನಾಗಿರುವ ನ್ಯಾ ಮಿಶ್ರಾ ನ್ಯಾಯಾಧೀಶರ ಸ್ಥಾನಕ್ಕೇರಿ 20ಕ್ಕೂ ಅಧಿಕ ವರ್ಷಗಳು ಸಂದಿವೆ. ಸುಮಾರು 6 ವರ್ಷಗಳಿಂದೀಚೆಗೆ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ. ಹಲವು ಪ್ರಮುಖ ಪ್ರಕರಣಗಳಲ್ಲಿ ಅವರು ನೀಡಿರುವ ತೀರ್ಪುಗಳ ತಾತ್ಪರ್ಯವನ್ನು ನೋಡಿದಾಗ ಪ್ರಧಾನ ನ್ಯಾಯಮೂರ್ತಿಯಾದ ಬಳಿಕ ಅವರಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಸೂಚಿಸುವ ಹಲವಾರು ಸುಳಿವುಗಳು ಲಭ್ಯವಾಗುತ್ತವೆ. ಇವು ಪ್ರಜೆಗಳ ಪಾಲಿಗೆ ಅಷ್ಟೇನೂ ಒಳ್ಳೆಯ ದಿನಗಳು ಕಾದಿಲ್ಲ ಎಂಬ ಮುನ್ನೆಚ್ಚರಿಕೆಯನ್ನು ನೀಡುವಂತಿವೆ. ಈ ಸಂದರ್ಭದಲ್ಲಿ ಪ್ರಧಾನ (ಮಾಜಿ) ನ್ಯಾಯಮೂರ್ತಿ ಖೇಹರ್ರವರೇ ‘‘ಆಯ್ಕೆಯಲ್ಲಿ ತಪ್ಪುಗಳಾದರೆ ದೇಶದಲ್ಲಿ ಒಂದು ರೀತಿಯ ಅವ್ಯವಸ್ಥೆ ಉಂಟಾಗಬಹುದು’’ ಎಂದು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಪ್ರಕರಣದ ಸಂದರ್ಭದಲ್ಲಿ ಎಚ್ಚರಿಕೆ ನೀಡಿರುವುದನ್ನು ಜ್ಞಾಪಿಸಿಕೊಳ್ಳಬೇಕಿದೆ.
ಅವ್ಯವಹಾರದ ಆರೋಪಗಳು
ನ್ಯಾ ದೀಪಕ್ ಮಿಶ್ರಾ ಹಿಂದೆ ಲಾಯರ್ ಆಗಿದ್ದ ಕಾಲದಲ್ಲಿ 1979ರಲ್ಲಿ ಸರಕಾರದಿಂದ 2 ಎಕರೆ ಕೃಷಿಭೂಮಿಯನ್ನು ಗೇಣಿಗೆ ಪಡೆದುಕೊಂಡಿದ್ದ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿದಾವಿತ್ನಲ್ಲಿ ತಾನು ಬ್ರಾಹ್ಮಣ ಜಾತಿಗೆ ಸೇರಿದವನಾಗಿದ್ದು ತಾನು ಮತ್ತು ತನ್ನ ಕುಟುಂಬ ಯಾವುದೇ ಇತರ ಜಮೀನನ್ನು ಹೊಂದಿಲ್ಲ ಎಂದು ತಿಳಿಸಿದ್ದರು. ನಂತರ 1985ರಲ್ಲಿ ಕಟಕ್ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ‘‘ಮಿಶ್ರಾ ಭೂರಹಿತ ವ್ಯಕ್ತಿ ಅಲ್ಲ..... ಅವರು ತಪ್ಪು ವಿವರಣೆ ನೀಡಿ ಮೋಸ ಮಾಡಿದ್ದಾರೆ.....’’ ಎಂದು ವರದಿ ನೀಡಿದ ಬಳಿಕ ಒಡಿಶಾ ಸರಕಾರ ಗುತ್ತಿಗೆಯನ್ನು ರದ್ದುಪಡಿಸಿತ್ತು. ಮುಂದೆ ಜನವರಿ 2012ರಲ್ಲಿ ಹೈಕೋರ್ಟಿನ ಆದೇಶದ ಮೇರೆಗೆ ಇಂತಹ ಅವ್ಯವಹಾರಗಳ ತನಿಖೆ ನಡೆಸಿದ ಸಿಬಿಐ ಮೇ 30, 2013ರಂದು ನೀಡಿದ ವರದಿ ಮಿಶ್ರಾ ತಪ್ಪೆಸಗಿರುವುದನ್ನು ಸಾಬೀತುಪಡಿಸುತ್ತದೆ. ಈ ರೀತಿಯಾಗಿ ಅಫಿದಾವಿತ್ನಲ್ಲಿ ತಪ್ಪುಹೇಳಿಕೆ ನೀಡುವುದು ಐಪಿಸಿ ಸೆಕ್ಷನ್ 199 ಮತ್ತು 200ರ ಅಡಿಯಲ್ಲಿ ಗರಿಷ್ಠ 7 ವರ್ಷ ಸಜೆ ಹಾಗೂ ದಂಡ ವಿಧಿಸಬಹುದಾದ ಗಂಭೀರ ಅಪರಾಧವಾಗಿದೆ.
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಫುಲ್ ಆತ್ಮಹತ್ಯೆ ಪ್ರಕರಣದಲ್ಲಿ ಆತ ಸಾಯುವುದಕ್ಕೆ ಮೊದಲು ಬರೆದಿಟ್ಟ ಪತ್ರದಲ್ಲಿ ನ್ಯಾ ಮಿಶ್ರಾ ಹೆಸರಿನ ಉಲ್ಲೇಖ ಇದೆ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಇತ್ತ್ತೀಚಿನ ಪತ್ರಿಕಾ ವರದಿಗಳು ತಿಳಿಸುವಂತೆ ಮೂವರು ಹೈಕೋರ್ಟ್ ನ್ಯಾಯಾಧೀಶರ ಸಮಿತಿಯೊಂದು ಒಡಿಶಾ ಹೈಕೋರ್ಟಿನ ಇಬ್ಬರು ಕಾರ್ಯನಿರತ ನ್ಯಾಯಾಧೀಶರ ಮೇಲಿನ ಆರೋಪಗಳ ತನಿಖೆಯನ್ನು ನಡೆಸಿದ ವೇಳೆ ನ್ಯಾ ಮಿಶ್ರಾ ಹೆಸರು ಕೇಳಿಬಂದಿದೆ.
ಗಲ್ಲು ಶಿಕ್ಷೆ ಪ್ರಕರಣಗಳು
ನ್ಯಾ ಮಿಶ್ರಾರವರು ಯಾಕೂಬ್ ಮೆಮೊನ್ ಮತ್ತು ನಿರ್ಭಯಾ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳನ್ನು ಇತ್ಯರ್ಥಗೊಳಿಸಿರುವ ರೀತಿ ಬಹಳ ಅತೃಪ್ತಿಕರವಾಗಿದೆ. ಎರಡೂ ಪ್ರಕರಣಗಳಲ್ಲಿ ತೀರ್ಪು ಪೂರ್ವನಿರ್ಧರಿತ ಎಂಬಂತೆ ತೋರುತ್ತದೆ. ಅದರಲ್ಲಿ ತರ್ಕಕ್ಕಿಂತ ಶಾಬ್ದಿಕ ಆಡಂಬರವೆ ಜಾಸ್ತಿ ಇದೆ. ನಿರ್ಭಯಾ ಅತ್ಯಾಚಾರದ ಮುಕೇಶ್ ವರ್ಸಸ್ ದಿಲ್ಲಿ ಸರಕಾರ ಪ್ರಕರಣದಲ್ಲಿ ಅವರು ನೀಡಿರುವ ತೀರ್ಪು ಅಸಂಬದ್ಧವಾಗಿದ್ದು ಅದರಲ್ಲಿ ಆಳವಾದ ತರ್ಕ, ಎಚ್ಚರದ ಪರಾಮರ್ಶೆ ಇರಲಿಲ್ಲ. ತೀರ್ಪಿನ ಮೇಲೆ ನ್ಯಾಯಿಕ ತರ್ಕಕ್ಕಿಂತ ಜನಾಭಿಪ್ರಾಯದ ಪ್ರಭಾವವೇ ಹೆಚ್ಚಿರುವಂತೆ ಭಾಸವಾಗುತ್ತದೆ.
ಯಾಕೂಬ್ ಮೆಮೊನ್ ತನ್ನ ದಯಾಭಿಕ್ಷೆ ಅರ್ಜಿಗಳನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿದ ಪ್ರಕರಣದಲ್ಲೂ ಅವರ ತೀರ್ಪು ಕೇವಲ ತಾಂತ್ರಿಕತೆಯ ಆಧಾರದಲ್ಲಿ ಮಾಡಿರುವುದಾಗಿದೆ. ಇಲ್ಲಿ ಮಧ್ಯರಾತ್ರಿ ನಂತರ ವಿಚಾರಣೆ ನಡೆಸಲು ಅನುಮತಿ ನೀಡಿದ ನಾಟಕ ನಡೆಯಿತು. ಆದರೆ ತೀರ್ಪನ್ನಂತೂ ನ್ಯಾಯಿಕ ತರ್ಕ ಅಥವಾ ವಿಶ್ಲೇಷಣೆಯ ಒಂದು ಉಜ್ವಲ ನಿದರ್ಶನವೆಂದು ಕರೆಯಲಾಗದು.
ವಾಕ್ಸ್ವಾತಂತ್ರ್ಯ
ನ್ಯಾ ಮಿಶ್ರಾರಿಗೆ ವಾಕ್ಸ್ವಾತಂತ್ರ್ಯದ ಕಲ್ಪನೆಯ ಕುರಿತು ಅಸ್ಪಷ್ಟ ತಿಳುವಳಿಕೆ ಇರುವಂತಿದೆ. ವಾಕ್ಸ್ವಾತಂತ್ರ್ಯದ ಹಕ್ಕಿಗೆ ಅವರು ಮನ್ನಣೆ ನೀಡುವಂತೆ ತೋರುವುದಿಲ್ಲ. ದೇವಿದಾಸ್ ತುಲ್ಜಾಪುರಕರ್ ವರ್ಸಸ್ ಮಹಾರಾಷ್ಟ್ರ ಸರಕಾರ, ಸುಬ್ರಮಣ್ಯನ್ ಸ್ವಾಮಿ ವರ್ಸಸ್ ಕೇಂದ್ರ ಸರಕಾರ, ಮತ್ತು ಪ್ರಸವಪೂರ್ವ ರೋಗನಿದಾನ ಪರೀಕ್ಷೆ ಪ್ರಕರಣಗಳಲ್ಲಿ ವಾಕ್ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಯನ್ನು ಕಡಿಮೆ ಮಾಡಲು ಇದುವರೆಗೆ ತಿಳಿದಿರದ ಮೂರು ಹೊಸ ಆಧಾರಗಳನ್ನು ಅವರು ಹುಟ್ಟುಹಾಕಿದ್ದಾರೆ.
ರಾಷ್ಟ್ರಗೀತೆ
ನ್ಯಾ ಮಿಶ್ರಾ ತನ್ನ ಇತ್ತೀಚಿನ ತೀರ್ಪೊಂದರಲ್ಲಿ, ‘‘ಸಿನೆಮಾ ಮಂದಿರಗಳಲ್ಲಿ ಪ್ರತಿಯೊಂದು ಶೋ ಪ್ರಾರಂಭವಾಗುವ ಮುನ್ನ ಕಡ್ಡಾಯ ವಾಗಿ ರಾಷ್ಟ್ರಗೀತೆಯನ್ನು ನುಡಿಸಬೇಕು; ಎಲ್ಲರೂ ಕಡ್ಡಾಯವಾಗಿ ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ತೋರಬೇಕು’’ ಎಂದು ಆದೇಶಿಸಿದ್ದಾರೆ. ಈ ಆದೇಶ ಅನುಚಿತವಾಗಿದ್ದು ಅದಕ್ಕೆ ಕಾನೂನಿನ, ವಾಸ್ತವದ, ಉತ್ತಮ ಪರಿಜ್ಞಾನದ ಅಥವಾ ನೈತಿಕತೆಯ ಆಧಾರವಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳಲ್ಲಿ ಮಾತಾಡದಿರುವ ಅಥವಾ ಅಭಿವ್ಯಕ್ತಿಸದಿರುವ ಹಕ್ಕುಗಳೂ ಸೇರಿವೆ. ಆದುದರಿಂದ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಬೇಕೆಂದು ಆದೇಶಿಸಿರುವುದು ನಮ್ಮ ಮೂಲಭೂತ ಹಕ್ಕುಗಳನ್ನು ಪರಿಮಿತಗೊಳಿಸಿದಂತಾಗಿದೆ ಎಂದು ಅನೇಕ ನ್ಯಾಯಶಾಸ್ತ್ರಜ್ಞರು ಹೇಳಿದ್ದಾರೆ.
ಆದರೆ ಈ ತೀರ್ಪಿನಿಂದ ‘ಕದನಶೀಲ ದೇಶಭಕ್ತಿ ಮತ್ತು ರಾಷ್ಟ್ರೀಯತೆ’ಗಳ ಮೂಲಕ ಜನತೆಯ ಗಮನವನ್ನು ಸರಕಾರದ ವೈಫಲ್ಯಗಳಿಂದ ಆಚೆ ಸೆಳೆಯಲೆತ್ನಿಸುತ್ತಿರುವ ಮೋದಿ ಸರಕಾರಕ್ಕೂ ಸಂಘ ಪರಿವಾರಕ್ಕೂ ತುಂಬಾ ಖುಷಿ ಆಗಿರುವುದರಲ್ಲಿ ಸಂದೇಹವಿಲ್ಲ. ಎಲ್ಲಾ ಬೆಳವಣಿಗೆ ಗಳನ್ನು ಗಮನಿಸಿದರೆ ಮೋದಿ ಸರಕಾರ ತೆರೆಮರೆಯಲ್ಲಿ ನ್ಯಾಯಾಂಗವನ್ನೂ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿರುವುದು ಸ್ಪಷ್ಟವಿಲ್ಲವೇ? ಆದುದರಿಂದ ಮುಂದಿನ ದಿನಗಳಲ್ಲಿ ವಾಕ್ಸ್ವಾತಂತ್ರ್ಯ ಮತ್ತಿತರ ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವ ರೀತಿಯ ತೀರ್ಪುಗಳು ಹೊರಬೀಳಬಹುದೆಂದು ಊಹಿಸಲೂ ಭಯವಾಗದಿರದೇ? ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವೇ ಅಲುಗಾಡತೊಡಗಿದರೆ ಸಾಮಾನ್ಯ ಜನತೆಯ, ಅದರಲ್ಲೂ ವಿಶೇಷವಾಗಿ ಬಡವರ, ಮಹಿಳೆಯರ, ಅಲ್ಪಸಂಖ್ಯಾತರ,ದಲಿತರ ಗತಿ ಏನು?
*********
(ಆಧಾರ: 2.3.2017ರ ದ ವಯರ್.ಕಾಮ್ನಲ್ಲಿ ಶಾಂತಿ ಭೂಷಣ್; 17.8.2017ರ ಹಿಂದುಸ್ಥಾನ್ ಟೈಮ್ಸ್ನಲ್ಲಿ ಅಶೋಕ್ ಬಗ್ರಿಯ; 16.8.2017ರ ದ ಕ್ವಿಂಟ್ನಲ್ಲಿ ಅಲೋಕ್ ಪ್ರಸನ್ನ ಕುಮಾರ್; 19.8.2017ರ ದ ಕ್ವಿಂಟ್ನಲ್ಲಿ ವಕಾಶ ಸಚ್ದೇವ್ ಬರಹಗಳು)