ಶಿಡ್ಲಘಟ್ಟ: ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮ
ಶಿಡ್ಲಘಟ್ಟ, ಸೆ.1: ನಾವು ಹುಟ್ಟಿದ, ಬೆಳೆದ ಊರಿನ ಕುರಿತಂತೆ ಮೊದಲು ತಿಳಿದುಕೊಳ್ಳಬೇಕು. ನಮ್ಮ ನೆಲದ ಸಾಧಕರು, ಗುಡಿಗೋಪುರಗಳು, ಜಲಮೂಲಗಳು, ಜಾನಪದ, ಆಚರಣೆ ಮುಂತಾದ ಸಂಗತಿಗಳ ಬಗ್ಗೆ ತಿಳಿದಾಗ ನಮ್ಮ ನೆಲ ನಮಗೆ ಆಪ್ತವಾಗುತ್ತದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ತಾಲೂಕಿನ ತುಮ್ಮನಹಳ್ಳಿಯ ಸರಕಾರ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಡ್ಲಘಟ್ಟ ತಾಲ್ಲೂಕಿಗೆ ಇತಿಹಾಸವಿದೆ. ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಶಿಡ್ಲಘಟ್ಟ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಇಲ್ಲಿ ಕಲೆಯಿದೆ, ಸಾಧಕರಿದ್ದಾರೆ, ಜಾನಪದವಿದೆ, ಸಂಸ್ಕೃತಿಯಿದೆ, ವಿಶಿಷ್ಟ ತಿಂಡಿ ತಿನಿಸುಗಳಿವೆ, ವಿಶೇಷ ದೇವಾಲಯಗಳಿವೆ, ಜೀವ ವೈವಿದ್ಯವೂ ಇವೆ. ಎಲ್ಲವನ್ನೂ ಅರಿಯುವ ಕೆಲಸವಾದಾಗ ಮಾತ್ರ ನಮ್ಮ ತಾಲೂಕಿನ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಮೂಡುತ್ತದೆ ಎಂದರು.
ಶಿಡ್ಲಘಟ್ಟ ಹಾಗೂ ತಾಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುವುದಲ್ಲದೆ ಪ್ರಾಥಮಿಕ ಮಾಹಿತಿಯನ್ನೂ ಒದಗಿಸುತ್ತದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗು ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಸುಂದರನ್ ಮಾತನಾಡಿ, ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಅಣುಅಣುವಿನಂತೆ ಕ್ರೂಡೀಕರಣಗೊಳ್ಳುತ್ತಾ ಹಲವು ವರ್ಷಗಳ ನಂತರ ಜ್ಞಾನ ಭಂಡಾರ ನಿಮ್ಮದಾಗುತ್ತದೆ. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.
‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯಲ್ಲಿ ಭಾಗವಹಿಸಿ ತಾವು ಓದಿದ ಪುಸ್ತಕದ ಬಗ್ಗೆ ಮಾತನಾಡಿದವರಲ್ಲಿ ವಿ.ಕೆ.ರಾಕೇಶ್, ಕಿರಣ್ ಕುಮಾರ್, ತೇಜಸ್ ಅವರಿಗೆ ಹಾಗೂ ‘ನಮ್ಮ ಶಿಡ್ಲಘಟ್ಟ’ ಪುಸ್ತಕದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಾದ ಸಿ.ಎನ್.ನವೀನ್ ಕುಮಾರ್, ಸಂಪತ್ ಕುಮಾರ್, ಎಂ.ಎಸ್.ನಿತೀಶ್ ಕುಮಾರ್ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಮುಖಂಡ ಹುಜಗೂರು ಬಚ್ಚೇಗೌಡ, ಮುಖ್ಯ ಶಿಕ್ಷಕಿ ಹೇಮಾವತಿ, ಶಿಕ್ಷಕರಾದ ಎಸ್.ವಿ.ಮಾಲತಿ, ಎನ್.ಎಸ್.ಶ್ರೀಧರ್, ರವಿ ಉಪಸ್ಥಿತರಿದ್ದರು.