ಮುಂದಿನ ಮುಖ್ಯಮಂತ್ರಿ ಬಿ. ಎಲ್. ಸಂತೋಷ್?
ವಾರದ ವ್ಯಕ್ತಿ
ಕರಾವಳಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆಗಳನ್ನು ಖಂಡಿಸುವ ಸಲುವಾಗಿ ಸೆಪ್ಟೆಂಬರ್ ಏಳರಂದು ರಾಜ್ಯ ಬಿಜೆಪಿಯಿಂದ ‘ಮಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾರೀ ಜನ ಸೇರಿಸಿ ಯಶಸ್ವಿಗೊಳಿಸಬೇಕು, ಆ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಫರ್ಮಾನು ಹೊರಡಿಸಲಾಗಿದೆ. ಅಂದಹಾಗೆ ‘ಮಂಗಳೂರು ಚಲೋ’ನ ಸಂಪೂರ್ಣ ಉಸ್ತುವಾರಿ ಹೊತ್ತವರು- ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಸಂತೋಷ್-ಉಡುಪಿಯ ಹಿರಿಯಡ್ಕದವರು. ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ಆ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಸೇರಿ, ಪೂರ್ಣಾವಧಿ ಕಾರ್ಯಕರ್ತರಾಗಿ, ಪ್ರಚಾರಕರಾಗಿ ಕೆಲಸ ನಿರ್ವಹಿಸಿದವರು. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳ ವಿಭಾಗ ಮಟ್ಟದಲ್ಲಿ ಆರೆಸ್ಸೆಸ್ ಸಂಘಟನೆಗೆ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿ, ಸಂಘಟನಾ ಚತುರ ಎಂಬ ಬಿರುದು ಪಡೆದವರು. ರಾಷ್ಟ್ರ ಮಟ್ಟದ ಸಂಘ ಪರಿವಾರದ ಮತ್ತು ಬಿಜೆಪಿಯ ಹಿರಿಯ ನಾಯಕರ ಕಣ್ಣಿಗೆ ಬಿದ್ದು, ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡವರು.
ಭಾರತೀಯ ಜನತಾ ಪಕ್ಷ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ಕಟ್ಟಲ್ಪಟ್ಟ ಶಿಸ್ತಿನ ಪಕ್ಷ ಎಂಬ ಪ್ರತೀತಿ ಇದೆ. ಇಂತಹ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಬಲಪಂಥೀಯ ಸಂಘಟನೆ. ಈ ಸಂಘಟನೆಯ ಮುಖ್ಯ ಗುರಿ ಹಿಂದೂ ಸಂಘಟನೆ ಮತ್ತು ಐಕ್ಯತೆ. ಇದರ ಉದ್ದೇಶ ತನ್ನ ಸದಸ್ಯರಿಗೆ ದೇಶಭಕ್ತಿಯನ್ನು ಕಲಿಸುವುದು. ಈ ಸಂಘ ಪರಿವಾರದ ರಾಜಕೀಯ ಮುಖವೇ ಭಾರತೀಯ ಜನತಾ ಪಕ್ಷ. ಅಂದರೆ, ಬಿಜೆಪಿಯ ಬೆನ್ನಿಗೆ ಆರೆಸ್ಸೆಸ್ ಇದೆ. ಪಕ್ಷದ ಪ್ರತಿಯೊಂದು ನಡೆಯಲ್ಲೂ ಆರೆಸ್ಸೆಸ್ನ ಪಾತ್ರವಿದೆ. ಸಂಘಪರಿವಾರದ ಪ್ರಚಾರಕ್ ಆದವರು ದೇಶಕ್ಕಾಗಿ, ಸ್ವಾರ್ಥರಹಿತ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುತ್ತಾರೆ ಮತ್ತು ಸಹಜವಾಗಿಯೇ ಇವರು ಬ್ರಹ್ಮಚಾರಿಗಳಾಗಿರುತ್ತಾರೆ- ಮೋದಿ ಮತ್ತು ವಾಜಪೇಯಿಯವರಂತೆ.
ಪ್ರಚಾರಕ್ ಆದವರು ಪಕ್ಷದ ಸಂಘಟನಾ ಕಾರ್ಯದರ್ಶಿ ಯಾಗಿ ನೇಮಕಗೊಂಡ ನಂತರ, ಪಕ್ಷದ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಮೀಟಿಂಗ್ ಕರೆಯುವುದು, ಪಕ್ಷವನ್ನು ಸಂಘಟಿಸುವುದು, ಕಾರ್ಯಕರ್ತರನ್ನು ಹುರಿದುಂಬಿಸುವುದು ಇವರ ಮುಖ್ಯ ಕೆಲಸವಾಗಿರುತ್ತದೆ. ಇವರು ಚುನಾವಣಾ ರಾಜಕಾರಣದಿಂದ ದೂರವಿರುತ್ತಾರೆ. ಇವರನ್ನು ಎಂಎಲ್ಎ, ಎಂಎಲ್ಸಿ, ಮಂತ್ರಿ ಮಾಡುವಂತಿಲ್ಲ. ಆದರೆ ಪಕ್ಷದ ಕೆಲವೊಂದು ಮಹತ್ವದ ಸಭೆಗಳಲ್ಲಿ, ಚರ್ಚೆಗಳಲ್ಲಿ, ನಿರ್ಧಾರಗಳಲ್ಲಿ ಇವರು ಭಾಗಿಯಾಗಿ ಪ್ರಮುಖ ಪಾತ್ರ ವಹಿಸುವುದುಂಟು. ಉದಾಹರಣೆಗೆ, ಪಕ್ಷದ ರಾಜ್ಯಾಧ್ಯಕ್ಷರನ್ನು, ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಿಸುವ ಮಹತ್ವದ ಸಂದರ್ಭಗಳಲ್ಲಿ ರಾಷ್ಟ್ರೀಯ ನಾಯಕರು ಇವರೊಂದಿಗೆ ಚರ್ಚಿಸುವುದಿದೆ. ಹಾಗೆಯೇ ಎರಡು ತಿಂಗಳಿಗೊಂದು ಸಲ ದೇಶದ ಯಾವುದಾದರೂ ಒಂದು ಕಡೆ ಸಭೆ ಸೇರುವ ಈ ಸಂಘಟನಾ ಕಾರ್ಯದರ್ಶಿಗಳು, ಪಕ್ಷದ ಆಗುಹೋಗುಗಳನ್ನು ಕುರಿತು ಚರ್ಚಿಸುತ್ತಾರೆ. ಭವಿಷ್ಯದ ನಡೆ ಕುರಿತು ಚಿಂತಿಸುತ್ತಾರೆ. ಆ ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಹೊರತುಪಡಿಸಿದರೆ ಮತ್ಯಾವ ಪಕ್ಷದ ಪದಾಧಿಕಾರಿಗಳೂ ಇರುವುದಿಲ್ಲ.
ಇಂತಹ ಮಹತ್ವದ ಹುದ್ದೆಯಲ್ಲಿರುವ ಬಿ.ಎಲ್.ಸಂತೋಷ್ ಈಗ, ಸಂಘಪರಿವಾರದ ಮೂಲಸಿದ್ಧಾಂತವನ್ನು ಮೂಲೆಗೆಸೆದು-ಮೋದಿಯಂತೆಯೇ-ನೇರವಾಗಿ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಅವರಿಗೆ ‘ಮಂಗಳೂರು ಚಲೋ’ ಉಸ್ತುವಾರಿ ವಹಿಸಲಾಗಿದೆ. ಆನಂತರ ‘ಪರಿವರ್ತನಾ ರ್ಯಾಲಿ’ ಜವಾಬ್ದಾರಿಯನ್ನೂ ಅವರಿಗೇ ಕೊಡಲಾಗುವುದಂತೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಇಲ್ಲಿಯವರೆಗೆ ತೆರೆಯ ಮರೆಯಲ್ಲಿದ್ದವರು, ಹಿಡನ್ ಅಜೆಂಡಾಗಳನ್ನು ಕಾರ್ಯರೂಪಕ್ಕಿಳಿಸುತ್ತಿದ್ದವರು, ಯಾರ್ಯಾರು ಎಲ್ಲೆಲ್ಲಿರಬೇಕೆಂದು ನೀಲನಕ್ಷೆ ತಯಾರಿಸುತ್ತಿದ್ದವರು ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಂಚೂಣಿಗೆ ಬಂದು ನಿಂತಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಜೂನ್ನಲ್ಲಿ ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಂತೋಷ್ರದೇ ಬ್ಯಾನರ್, ಭೋಪರಾಕ್ ನಡೆದಿದೆ.
ಇದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ. ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದಾಗ ಪಕ್ಷದೊಳಗಿನ ಒಳಜಗಳ, ಗುಂಪುಗಾರಿಕೆ, ವೈಮನಸ್ಯ, ಕಾಲೆಳೆದಾಟವೆಲ್ಲ ಬಟಾಬಯಲಾಗಿದೆ. ಅಷ್ಟೇ ಅಲ್ಲ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದಗೌಡ, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆಯಂತಹ ನಾಯಕರ ಎದುರೇ ಬಿ.ಎಲ್.ಸಂತೋಷ್, ಮೂರು ಗಂಟೆಗಳ ಕಾಲ ರಾಜ್ಯದ ಅಷ್ಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ, ಜಾತಿ ಲೆಕ್ಕಾಚಾರ, ಅಭ್ಯರ್ಥಿಗಳ ಅವಲೋಕನವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಪವರ್ ಪ್ರಸಂಟೇಷನ್ ಮೂಲಕ ಬಿಡಿಸಿಟ್ಟಿದ್ದಾರೆ. ಇದು ಯಡಿಯೂರಪ್ಪರ ಹಿನ್ನಡೆಯಂತೆ ಕಂಡಿದೆ. ಇಲ್ಲಿಂದ ಮುಂದಕ್ಕೆ ಅಮಿತ್ಶಾ-ಮೋದಿಗೆ ಸಂತೋಷೇ ಸರಿ ಎನಿಸಿದೆ, ರಾಜ್ಯದ ಮಾಹಿತಿಗಾಗಿ ಅವರನ್ನೇ ಸಂಪರ್ಕಿಸಲಾಗುತ್ತಿದೆ. ಕುತೂಹಲಕರ ಸಂಗತಿ ಎಂದರೆ, ಸಂತೋಷ್ರನ್ನು 2006ರಲ್ಲಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಳ್ಳುವಂತೆ ನೋಡಿಕೊಂಡಿದ್ದು ಇದೇ ಯಡಿಯೂರಪ್ಪ. ಅದರ ಹಿಂದೆ ಯಡಿಯೂರಪ್ಪನವರ ರಾಜಕೀಯ ತಂತ್ರಗಾರಿಕೆಗಿಂತ ಹಿತಾಸಕ್ತಿ ಅಡಗಿತ್ತು. ಒಂದು, ಬಿಜೆಪಿಯೊಳಗೇ ಇದ್ದ ವೈರಿಗಳನ್ನು ಸಂತೋಷ್ ಮೂಲಕ ಬಗ್ಗುಬಡಿಯುವುದು. ಎರಡು, ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡು ಚಕ್ರಾಧಿಪತಿಯಂತೆ ಮೆರೆಯುವುದು. ಪಕ್ಷದೊಳಗೇ ಇದ್ದ ವೈರಿ ಎಂದರೆ ಅದು ಅನಂತಕುಮಾರ್. ಇವರು ಮೂಲತಃ ಸಂಘಪರಿವಾರದಿಂದ ಬಂದವರು, ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿರುವವರು ಮತ್ತು ಬ್ರಾಹ್ಮಣ ಕೋಮಿಗೆ ಸೇರಿದವರು. ಈ ಮೂರೂ ಗುಣಗಳು ಸಂತೋಷ್ರಲ್ಲಿದ್ದವು. ಸಂತೋಷ್ಗೂ ಅನಂತ್ರನ್ನು ಹಣಿಯುವ ಅನಿವಾರ್ಯತೆ ಇತ್ತು. ಹಾಗಾಗಿ ಯಡಿಯೂರಪ್ಪನವರು ಅಂದುಕೊಂಡಂತೆಯೇ ಆಯಿತು.
ಯಡಿಯೂರಪ್ಪ2008ರಲ್ಲಿ ಮುಖ್ಯಮಂತ್ರಿಯಾದಾಗ, ಸಹಜವಾಗಿಯೇ ಸಂತೋಷ್ರಿಗೆ ರಾಜ್ಯ ಬಿಜೆಪಿ ವಲಯದಲ್ಲಿ ಹುದ್ದೆಗೂ ಮೀರಿದ ಮನ್ನಣೆ ದೊರೆಯತೊಡಗಿತು. ಅವರ ಮಾತು ವೇದವಾಕ್ಯವಾಯಿತು. ಬಿಜೆಪಿ ಕಚೇರಿಯನ್ನೇ ತಮ್ಮ ಕಾರಸ್ಥಾನವನ್ನಾಗಿಸಿಕೊಂಡ ಸಂತೋಷ್, ನಾಲ್ಕನೆ ಮಹಡಿಯನ್ನೆ ಪರ್ಯಾಯ ವಿಧಾನಸೌಧವನ್ನಾಗಿ ಪರಿವರ್ತಿಸಿ ಕೊಂಡರು. ಅಲ್ಲಿಗೇ ಮಂತ್ರಿಗಳು ಬಂದುಹೋಗುವಂತೆ, ಸಾಮಾನ್ಯರು ಕಾಲಿಡದಂತೆ ಅಘೋಷಿತ ಕರ್ಫ್ಯೂ ಜಾರಿಗೊಳಿಸಿದರು.
ಅತ್ತ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಸರ್ವಾ ಧಿಕಾರಿಯಂತೆ ವರ್ತಿಸತೊಡಗಿದರೆ, ಇತ್ತ ಸಂತೋಷ್ ಬಿಜೆಪಿ ಪಕ್ಷವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಬಿಜೆಪಿಯನ್ನು ಸಂಪೂರ್ಣವಾಗಿ ಸಂಘಪರಿವಾರದ ಅಧೀನದಲ್ಲಿರುವಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಸಂಘಪರಿವಾರದ ರೀತಿ-ನೀತಿಗಳಿಗೇ ವಿರುದ್ಧವಾಗಿ ಸಂತೋಷ್ ಕೂಡ ತಮ್ಮದೇ ಆದ ಗುಂಪು ಕಟ್ಟಿಕೊಳ್ಳತೊಡಗಿದರು. ಕೇಂದ್ರದ ನಾಯಕರಿಗೆ ಗುಪ್ತ ವರದಿಗಳನ್ನು ರವಾನಿಸಿ ಮಂತ್ರಿ-ಶಾಸಕರ ಮೇಲೆ ಹಿಡಿತ ಸಾಧಿಸಿದರು. ಸಂತೋಷ್ ಶುದ್ಧಹಸ್ತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವತ್ತಿಗೂ ಸಂಘಪರಿವಾರದ ಸಾಮಾನ್ಯ ಕಾರ್ಯಕರ್ತನಂತೆಯೇ ಚಾಪೆ ಮೇಲೆ ಮಲಗುತ್ತಾರೆ. ಬಿಜೆಪಿ ಕಚೇರಿಯಲ್ಲಿ ಸಿಗುವ ಊಟ-ತಿಂಡಿಯನ್ನೇ ತಿನ್ನುತ್ತಾರೆ. ಕೈಯಲ್ಲೊಂದು ಚೀಲ, ಸಾಧಾರಣ ಶರ್ಟು-ಪಂಚೆ ಧರಿಸಿ, ಸಂಬಳ ಪಡೆಯದೆ ಕೆಲಸ ಮಾಡುತ್ತಾರೆ ಮತ್ತು ಓಡಾಡಲಿಕ್ಕೆ ಪಕ್ಷ ಕೊಟ್ಟ ಕಾರನ್ನು ಮಾತ್ರ ಬಳಸುತ್ತಾರೆ. ಇವರ ಈ ಸರಳ ಬದುಕು, ಪ್ರಾಮಾಣಿಕತೆ, ಪಕ್ಷಕ್ಕಾಗಿ ತೊಡಗಿಸಿಕೊಂಡ ರೀತಿಗೆ ಅವರ ವಿರುದ್ಧ ಮಾತನಾಡುವವರ ಬಾಯಿಗೆ ಬೀಗ ಬಿದ್ದಿದೆ. ಆದರೆ ಅದೇ ಮಾತುಗಳನ್ನು ಅವರ ಆಪ್ತರ ಬಗ್ಗೆ ಹೇಳಲಾಗುವುದಿಲ್ಲ. ಕಾರ್ಪೊರೇಟರ್ ಮಂಗಳಾ ಪ್ರಕಾಶ್ರಿಗೆ ಟಿಕೆಟ್ ಕೊಡಿಸುವಲ್ಲಿ, ಗೆಲ್ಲಿಸಿಕೊಂಡು ಬರುವಲ್ಲಿ ಸಂತೋಷ್ ತೋರಿದ ಅತಿ ಉತ್ಸಾಹವನ್ನು ಮರೆಮಾಚಲಾಗುವುದಿಲ್ಲ. ಹಾಗೆಯೇ ಯಡಿಯೂರಪ್ಪವಿರುದ್ಧ ಡಿ ನೋಟಿಫಿಕೇಷನ್, ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ವರದಿಗಳು ಹೊರಬಂದು ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ರಾಷ್ಟ್ರದಾದ್ಯಂತ ಪ್ರಚಾರ ಪಡೆಯತೊಡಗಿದಾಗ ಸಂಘಪರಿವಾರದ ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪನವರ ವಿರುದ್ಧವೇ ವರದಿ ರವಾನಿಸಿ ಕುರ್ಚಿಯಿಂದ ಕೆಳಗಿಳಿಸಿದರು, ಜೈಲಿಗೂ ಕಳಿಸಿದರು. ಯಡಿಯೂರಪ್ಪನವರ ಬಲಗೈನಂತಿದ್ದ ಧನಂಜಯ್ಕುಮಾರ್ರನ್ನು ಪಕ್ಷದಿಂದ ಹೊರಹಾಕಿದರು. ಸಂತೋಷ್ರ ಕಾಟ ತಡೆಯಲಾರದ ಯಡಿಯೂರಪ್ಪಪಕ್ಷ ತೊರೆದು, ಕೆಜೆಪಿ ಕಟ್ಟಿ ಬಿಜೆಪಿಯನ್ನು ಬೀದಿಗೆ ತಂದರು. ಮತ್ತೆ ಬಿಜೆಪಿಗೆ ಬಂದು ರಾಜ್ಯಾಧ್ಯಕ್ಷರಾದಾಗ ಅವರ ವಿರುದ್ಧ ಈಶ್ವರಪ್ಪರನ್ನು ಎತ್ತಿಕಟ್ಟಿ ಪಕ್ಷದ ವರ್ಚಸ್ಸಿಗೆ ಮಸಿ ಬಳಿದರು.
ಇಷ್ಟೆಲ್ಲ ‘ಘನಕಾರ್ಯ’ ಮಾಡಿದ ಸಂತೋಷ್ಜಿಯನ್ನು ಈಗ ಮತ್ತೆ ಯಡಿಯೂರಪ್ಪರಿಗೆ ಪರ್ಯಾಯವಾಗಿ ಮುನ್ನೆಲೆಗೆ ತರಲಾಗುತ್ತಿದೆ. ಅದಕ್ಕೆ ಬಿಎಸ್ವೈ ನಿಷ್ಕ್ರಿಯತೆ, ಒರಟು ಸ್ವಭಾವ, ಶೋಭಾ ಕರಂದ್ಲಾಜೆ, ಪಕ್ಷದೊಳಗಿನ ಒಳಜಗಳವನ್ನು ಮುಂದೆ ಮಾಡಲಾಗುತ್ತಿದೆ. ಜೊತೆಗೆ ಭ್ರಷ್ಟಾಚಾರದ ಹಗರಣಗಳಿಗೆ ಜೀವ ತುಂಬಿ ನೈತಿಕವಾಗಿ ಕುಗ್ಗಿಸುವ, ಬಾಯಿ ಮುಚ್ಚಿಸುವ ಕೆಲಸಕ್ಕೂ ಕೈಹಾಕಲಾಗಿದೆ. ಹಾಗೆಯೇ ಮುಂದಿನ ಚುನಾವಣೆವರೆಗೂ ಯಡಿಯೂರಪ್ಪನವರನ್ನು ಮುಂದೆಮಾಡಿ ನಂತರ ಮೂಲೆಗೆ ಕೂರಿಸುವ ವ್ಯವಸ್ಥಿತ ಷಡ್ಯಂತ್ರವೂ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಹರ್ಯಾಣದ ಮನೋಹರ್ ಲಾಲ್ ಖಟ್ಟರ್, ಮಹಾರಾಷ್ಟ್ರದ ಫಡ್ನವೀಸ್ರನ್ನು ಮುಖ್ಯಮಂತ್ರಿಗಳನ್ನಾಗಿಸಿದ, ಹೊಸ ಮುಖ, ಬದಲಾವಣೆಯ ನೆಪ ಮುಂದೆ ಮಾಡಿದ ಉದಾಹರಣೆಗಳನ್ನು ನೋಡಬಹುದು. ಮುಂದುವರಿದು ‘ಪ್ರಾಮಾಣಿಕ’ ಹಣೆಪಟ್ಟಿಯ ಸಂತೋಷ್ರನ್ನು ಮುಖ್ಯ ಮಂತ್ರಿ ಕುರ್ಚಿಯ ಮೇಲೆ ಕೂರಿಸಲೂಬಹುದು. ಈಗಾಗಲೇ ಸುದ್ದಿಮಾಧ್ಯಮಗಳಲ್ಲಿ ‘ಮುಂದಿನ ಮುಖ್ಯಮಂತ್ರಿ ಸಂತೋಷ್’ ಎಂಬ ಸುದ್ದಿ ಬಿತ್ತನೆ ಕಾರ್ಯ ಕೂಡ ಬಿರುಸಿನಿಂದ ಸಾಗಿದೆ. ಬಿಜೆಪಿಯ ಬಾವುಟ ಕಟ್ಟುವುದಕ್ಕೆ, ಬಟ್ಟೆ ಹರಿದುಕೊಳ್ಳು ವುದಕ್ಕೆ, ಒದೆ ತಿಂದು ಕೇಸು ಹಾಕಿಸಿಕೊಳ್ಳಲಿಕ್ಕೆ ಬಹುಸಂಖ್ಯಾತ ಶೂದ್ರರು ಬೇಕು. ಅಧಿಕಾರದ ಕುರ್ಚಿಯಲ್ಲಿ ಕೂರಲಿಕ್ಕೆ ವೈದಿಕರೇ ಆಗಬೇಕು. ಸಂಘಪರಿವಾರದ ಈ ಷಡ್ಯಂತ್ರವನ್ನು ಬಿಜೆಪಿಯ ಶೂದ್ರನಾಯಕರು ಮತ್ತು ಕರ್ನಾಟಕದ ಮತದಾರರು ಅರಿಯದೆ ಹೋದರೆ, ಕರ್ನಾಟಕ ಮತ್ತೊಂದು ಉತ್ತರ ಪ್ರದೇಶವಾಗಲಿದೆ.