ತ್ರಿವಳಿ ತಲಾಖ್ ತೀರ್ಪು, ಸಂಘ ಪರಿವಾರ ಮತ್ತು ಹುಲಿಯ ಪಟ್ಟೆಗಳು
ಭಾಗ -1
ತ್ರಿವಳಿ ತಲಾಖ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ತಕ್ಷಣ ಪ್ರಧಾನಿ ಮೋದಿ ಸೇರಿದಂತೆ ಪರಿವಾರಕ್ಕೆ ಪರಿವಾರವೇ ಹರ್ಷ ವ್ಯಕ್ತಪಡಿಸುತ್ತಿದೆ. ಸಂಘಿ ನಾಯಕರೆಲ್ಲ ಇದು ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ತಾವು ಮಾಡಿದ ಹೋರಾಟದ ಫಲವೆಂದು ಪ್ರಚಾರ ಮಾಡತೊಡಗಿ ದ್ದಾರೆ. ಇದೊಂದು ಒಳ್ಳೆಯ ಸಾಮಾಜಿಕ ಸುಧಾರಣೆಯ ಕ್ರಮ ಎಂಬಿತ್ಯಾದಿ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗೆ ಸದ್ಯಕ್ಕಂತೂ ಈ ತೀರ್ಪಿನ ರಾಜಕೀಯ ಲಾಭವನ್ನು ಪಡೆದು ಕೊಳ್ಳಲೆತ್ನಿಸುತ್ತಿದ್ದಾರೆ.
ಆದರೆ....... ಮುಸ್ಲಿಮರನ್ನು ಗುರಿಯಾಗಿಸಿದ ಗುಂಪು ಹತ್ಯಾ ದಾಳಿ ಮೊದಲಾದ ಕೋಮುದ್ವೇಷದ ಘಟನೆಗಳು ಹೆಚ್ಚುತ್ತಲೇ ಇರುವ ಇಂದಿನ ಸನ್ನಿವೇಶದಲ್ಲಿ ಇವರ ಅಮಿತೋತ್ಸಾಹವನ್ನು ಕಂಡಾಗ ಇದರ ಹಿಂದೆ ಏನೋ ಹೂಟ ಇರಬಹುದು ಎಂಬ ಸಣ್ಣದೊಂದು ಆತಂಕ ಕಾಡುವುದು ಸಹಜವೇ ಆಗಿದೆ. ಏಕೆಂದರೆ ಇವರು ತಮ್ಮ ಅಜೆಂಡಾದ ಒಂದು ಪ್ರಮುಖ ಅಂಶವಾದ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ ಸಮಾನ ನಾಗರಿಕ ಸಂಹಿತೆಯ ಜಾರಿಗಾಗಿ ಹಿಂದಿನಿಂದಲೂ ಪಟ್ಟುಬಿಡದೆ ಆಗ್ರಹಿಸುತ್ತಾ ಬಂದಿರುವವರು. ಮತ್ತೊಂದು ಮುಖ್ಯ ವಿಷಯವೆಂದರೆೆ ಸುಪ್ರೀಂ ಕೋರ್ಟು ಈಗಾಗಲೇ 2002ರ ಶಮೀಮ್ ಆರಾ ಪ್ರಕರಣದಲ್ಲಿ ತ್ರಿವಳಿ ತಲಾಖ್ಅನ್ನು ಅನೂರ್ಜಿತಗೊಳಿಸಿದ್ದರೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪುನಃ ಸುಪ್ರೀಂ ಕೋರ್ಟಿನ ಮೊರೆಹೋದಾಗ ಮೋದಿ ಸರಕಾರವೂ ಅಸಾಧಾರಣ ಆಸಕ್ತಿ ವಹಿಸಿರುವುದನ್ನು ಗಮನಿಸಬೇಕು.
ಸರಕಾರದ ಅಫಿದಾವಿತ್ನಲ್ಲಿ ತ್ರಿವಳಿ ತಲಾಖ್ ಅಷ್ಟೆ ಅಲ್ಲ, ತಲಾಖ್ನ ಇನ್ನೆರಡು ವಿಧಗಳು ಮತ್ತು ಬಹುಪತ್ನಿತ್ವವೂ ನ್ಯಾಯಸಮ್ಮತವೇ ಎಂಬುದನ್ನು ಪರಿಗಣಿಸುವಂತೆ ಕೋರಲಾಯಿತು. ಭಾರತದ ಪ್ರಧಾನ ಸರಕಾರಿ ವಕೀಲರು (ಆಡ್ವೊಕೇಟ್ ಜನರಲ್) ತಲಾಖ್ನ ಮೂರೂ ವಿಧಗಳೂ ಅಸಾಂವಿಧಾನಿಕ ಎನ್ನುತ್ತಾ ಅವೆಲ್ಲವನ್ನು ಮತ್ತು ಬಹುಪತ್ನಿತ್ವವನ್ನು ರದ್ದುಪಡಿಸಬೇಕೆಂದು ವಾದಿಸಿದರು. ‘‘ಶರೀಅತ್ನಿಂದ ತಲಾಖ್ಅನ್ನು ತೆಗೆದುಹಾಕಿದರೆ ಸರಕಾರ ಹೊಸ ಕಾನೂನನ್ನು ರಚಿಸಲು ಸೂಕ್ತ ಕ್ರಮ ಕೈಗೊಳ್ಳಲಿದೆ’’ ಎಂದವರು ನ್ಯಾಯಾಲಯದಲ್ಲಿ ಹೇಳಿರುವುದು ಗಮನಾರ್ಹವಿದೆ. ಮೋದಿ ಸರಕಾರ ಸಂಸತ್ತಿನಲ್ಲಿ ಭಾರೀ ಬಹುಮತ ಹೊಂದಿರುವ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಆ ಹೊಸ ಕಾನೂನು ಸಮಾನ ನಾಗರಿಕ ಸಂಹಿತೆಯ ದಿಕ್ಕಿನಲ್ಲಿ ಮೊದಲ ಹೆಜ್ಜೆ ಆಗಿರಬಹುದೆಂಬ ಅನುಮಾನಗಳನ್ನು ಆಧಾರರಹಿತ ಎನ್ನಲಾಗುವುದಿಲ್ಲ. ಆದರೆ ಸರಕಾರಿ ವಕೀಲರ ಕೋರಿಕೆಯನ್ನು ತಳ್ಳಿಹಾಕಿ ತೀರ್ಪನ್ನು ಕೇವಲ ತ್ರಿವಳಿ ತಲಾಖ್ ಒಂದಕ್ಕೇ ಸೀಮಿತಗೊಳಿಸಿದ ನ್ಯಾಯಪೀಠ ಮಹಿಳೆಯ ಘನತೆಗೆ ಕುಂದುಂಟುಮಾಡುವ ತ್ರಿವಳಿ ತಲಾಖ್ ವೈಯಕ್ತಿಕ ಕಾನೂನಿಗೆ ಸಂಬಂಧಪಟ್ಟದಲ್ಲ, ಅದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದೆ. ಅದೇ ವೇಳೆ ಇಬ್ಬರು ನ್ಯಾಯಮೂರ್ತಿಗಳ ತೀರ್ಪು ಸರಕಾರ ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳನ್ನು ಸಂವಿಧಾನಬಾಹಿರವೆಂದು ಕರೆಯುವ ಮೂಲಕ ಅವುಗಳಲ್ಲಿ ಇನ್ನಷ್ಟು ಹಸ್ತಕ್ಷೇಪ ಮಾಡುವ ಸಾಧ್ಯತೆಗಳನ್ನು ತಡೆಯಲು ಪ್ರಯತ್ನಿಸಿದೆ.
ನ್ಯಾಯಾಲಯ ವೈಯಕ್ತಿಕ ಕಾನೂನುಗಳ ಪ್ರಪಂಚದೊಳಗೆ ಪ್ರವೇಶಿಸಬಾರದು ಎಂದಿರುವ ಅವರ ಪ್ರಕಾರ ಧಾರ್ಮಿಕ ಆಚರಣೆಗಳು ವಿವೇಕಯುತವೇ ಅಥವಾ ಪುರೋಗಾಮಿಯೆ ಅಥವಾ ತಿವ್ರಗಾಮಿಯೇ ಎಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ಧರ್ಮ ಮತ್ತು ವೈಯಕ್ತಿಕ ಕಾನೂನುಗಳನ್ನು ಗ್ರಹಿಸಬೇಕಿರುವುದು ಆ ಧರ್ಮದ ಅನುಯಾಯಿಗಳು ಅವನ್ನು ಸ್ವೀಕರಿಸುವ ರೀತಿಯಲ್ಲಿ ಹೊರತು ಇನ್ನೊಬ್ಬ (ಸ್ವಘೋಷಿತ ವಿಚಾರವಾದಿಗಳನ್ನು ಒಳಗೊಂಡಂತೆ) ಅದು ಹೇಗಿರಬೇಕೆಂದು ಹೇಳುವಂತೆ ಅಲ್ಲ. ಬಹಳ ಮುಖ್ಯವಾಗಿ ಸರಕಾರಿ ವಕೀಲರ ವಾದಕ್ಕೆ ವಿರುದ್ಧವಾಗಿ ಎಲ್ಲಾ ಸಾಂವಿಧಾನಿಕ ನ್ಯಾಯಾಲಯಗಳು ವೈಯಕ್ತಿಕ ಕಾನೂನುಗಳನ್ನು ಕಾಪಿಡಬೇಕೇ ಹೊರತು ಅದರಲ್ಲಿ ತಪ್ಪುಕಂಡುಹುಡುಕಬಾರದಾಗಿ ಸಂವಿಧಾನದ ವಿಧಿ 25 ನಿರ್ಬಂಧಿಸು ತ್ತದೆ. ವೈಯಕ್ತಿಕ ಕಾನೂನುಗಳ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು ಪುರುಷರ ದಬ್ಬಾಳಿಕೆ ಯಿಂದ ಬಿಡುಗಡೆ ಪಡೆಯುವಂತಾಗಿರುವುದು ತಮ್ಮಿಂದಾಗಿ ಎಂದು ಸನ್ನಿವೇಶದ ಪೂರ್ಣ ಲಾಭವನ್ನು ಪಡೆಯಲೆತ್ನಿ ಸುತ್ತಾ ಮುಸ್ಲಿಂ ಮಹಿಳೆ ಯರ ಹಕ್ಕುಗಳ ಬಗ್ಗೆ ಭಾರೀ ಚಿಂತಿತರಾದಂತೆ ತೋರಿಸಿಕೊಳ್ಳುತ್ತಿರುವ ಸಂಘಿಗಳ ಅಸಲಿ ಮುಖವೇನೆಂಬುದು ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ಗುಜರಾತ್ 2002ನ್ನೂ ಒಳಗೊಂಡಂತೆ ಕಳೆದ ಹಲವು ದಶಕಗಳಿಂದ ನಡೆದಿರುವ ನೂರಾರು, ಸಾವಿರಾರು ಕೋಮು ಗಲಭೆಗಳ ದಾಖಲೆಗಳನ್ನು ಪರಿಶೀಲಿಸಿದರೆ ಸಾಕು ಇವರು ಮುಸ್ಲಿಂ ಸ್ತ್ರೀಯರ ಮೇಲೆ ನಡೆಸಿದ ಅನೇಕಾನೇಕ ದೌರ್ಜನ್ಯ, ಅತ್ಯಾಚಾರಗಳ ಭಯಾನಕ ಚಿತ್ರ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇನ್ನು ಚುನಾವಣೆಗಳ ಕಾಲದಲ್ಲಿ ಮೋದಿಯಾದಿಯಾಗಿ ಅನೇಕ ಸಂಘಪರಿವಾರಿಗರು ‘ಹಮ್ ಪಾಂಚ್ ಹಮಾರೆ ಪಚ್ಚೀಸ್’ ಮುಂತಾದ ಘೋಷಣೆಗಳ ಮೂಲಕ ಮುಸ್ಲಿಮರೆಲ್ಲರೂ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿ, ಹಿಂಡು ಹಿಂಡು ಮಕ್ಕಳನ್ನು ಹುಟ್ಟಿಸಿ, ತಮ್ಮ ಜನಸಂಖ್ಯೆಯನ್ನು ಬೆಳೆಸಿ, ಹಿಂದೂ ಸಮುದಾಯಕ್ಕೆ ಅಪಾಯ ಒಡ್ಡುತ್ತಾರೆಂದು ಹೇಳಿ ಚುನಾವಣಾ ಲಾಭ ಪಡೆಯುವ ವಿಷಯ ಯಾರಿಗೆ ತಾನೆ ಗೊತ್ತಿಲ್ಲ? ಅಂಕಿಅಂಶಗಳ ಆಧಾರವಿಲ್ಲದ ಈ ಹೇಳಿಕೆಗಳ ಉದ್ದೇಶ ಹಿಂದೂಗಳಲ್ಲಿ ಬೆದರಿಕೆ ಹುಟ್ಟಿಸಿ ಅವರನ್ನು ಭಾವೋದ್ರೇಕವಾಗಿ ಕೆರಳಿಸಿ ಅವರಲ್ಲಿ ಮುಸ್ಲಿಂ ವಿರೋಧಿ ಭಾವನೆಗಳನ್ನು ಬೆಳೆಸುವುದಾಗಿದೆ. ಆದರೆ ಮುಸ್ಲಿಂ ದೊರೆಗಳು ದೇಶವನ್ನು ಸುಮಾರು ಏಳು ಶತಮಾನಗಳ ಕಾಲ ಆಳಿದ್ದಾರಾದರೂ ಇಂದು ಕೇವಲ ಶೇ. 14.23ರಷ್ಟಿರುವ ಮುಸ್ಲಿಮರ ಜನಸಂಖ್ಯೆ ಅದ್ಯಾವ ಅಪಾಯದ ಸೂಚಕವೆಂಬ ಪ್ರಶ್ನೆಗೆ ಸಂಘಿಗಳಲ್ಲಿ ಉತ್ತರ ಇಲ್ಲ.