ತ್ರಿವಳಿ ತಲಾಖ್ ತೀರ್ಪು, ಸಂಘ ಪರಿವಾರ ಮತ್ತು ಹುಲಿಯ ಪಟ್ಟೆಗಳು
ಭಾಗ-2
ಮುಸ್ಲಿಮರು ಐದು ಹೆಂಡಿರನ್ನು ಇಟ್ಟುಕೊಳ್ಳುತ್ತಾರೆಂದು ಆರೋಪಿಸುವ ಇವರು ಹಿಂದೂಗಳಲ್ಲಿ ಶೇ.1.8ರಷ್ಟು ಬಹುಪತ್ನಿವಲ್ಲಭರಿದ್ದರೆ ಮುಸ್ಲಿಮರಲ್ಲಿರುವುದು ಶೇ.1.2 ಎಂಬ ಸತ್ಯವನ್ನು ಮುಚ್ಚಿಡುತ್ತಿರುವುದರ ಅರಿವು ಬಹುತೇಕ ಜನರಿಗೆ ಇಲ್ಲ. ಮುಸ್ಲಿಂ ಮಹಿಳೆಯರ ಉದ್ಧಾರದ ಬಗ್ಗೆ ಎಲ್ಲಿಲ್ಲದ ಕಾಳಜಿ ಇರುವವರಂತೆ ನಟಿಸುವ ಸಂಘಿಗಳು ಇನ್ನಿತರ ಧರ್ಮಗಳ ಮಹಿಳೆಯರ ಹಕ್ಕುಗಳಿಗಾಗಿ ಏನು ಮಾಡಿದ್ದಾರೆ? ಹೋಗಲಿ, ತಮ್ಮದೇ ಹಿಂದೂ ಮಹಿಳೆಯರ ಸಬಲೀಕರಣಕ್ಕೆ ಇವರ ಕೊಡುಗೆ ಏನು? ವಾಸ್ತವ ಏನೆಂದರೆ ಇವರು ಹಿಂದೂ ಮಹಿಳೆಯರ ಸಬಲೀಕರಣವನ್ನು ತೀವ್ರವಾಗಿ ವಿರೋಧಿಸಿದವರು! ಇತಿಹಾಸದ ಪುಟಗಳನ್ನು ಸ್ವಲ್ಪ ತಿರುವಿ 40 ಮತ್ತು 50ರ ದಶಕಗಳಿಗೆ ಹೋದರೆ ಇವರು ಹಿಂದೂ ಮಹಿಳೆಯರ ದುರ್ಬಲೀಕರಣಕ್ಕಾಗಿ ಅಥವಾ ಹಿಂದೂ ಪುರುಷರ ಪ್ರಾಧಾನ್ಯವನ್ನು ಉಳಿಸುವುದಕ್ಕಾಗಿ ಯಾವ ನಮೂನೆಯ ಹೋರಾಟ ಮಾಡಿದ್ದರೆಂದು ತಿಳಿಯುತ್ತದೆ. ಜವಾಹರಲಾಲ್ ನೆಹರೂ ದೇಶದ ಪ್ರಧಾನಿಯಾಗಿದ್ದ ಕಾಲವದು. ಅಂದು ಹಿಂದೂ ಸಮಾಜದಲ್ಲಿದ್ದ ಅನೇಕ ಅನಿಷ್ಟ ಸಂಪ್ರದಾಯಗಳನ್ನು ತೊಲಗಿಸಿ ಸುಧಾರಣೆ ತರುವ ಉದ್ದೇಶದಿಂದ ನೆಹರೂ ಸರಕಾರ ಹಿಂದೂ ಸಂಹಿತೆಯೊಂದನ್ನು ರಚಿಸಲು ಮುಂದಾಗಿತ್ತು. ಹೆಣ್ಣುಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ, ವಿಧವೆಯರಿಗೆ ಗಂಡನ ಆಸ್ತಿಯಲ್ಲಿ ಪಾಲಿನ ವಿಷಯಗಳಲ್ಲಿ ಮತ್ತು ಬಹುಪತ್ನಿತ್ವದ ವಿಷಯದಲ್ಲಿ ಅದುವರೆಗಿನ ಕಾನೂನುಗಳು ಮಹಿಳೆಯರಿಗೆ ಅನ್ಯಾಯವಾಗುವ ರೀತಿಯಲ್ಲಿದ್ದವು. ಬಾಲ್ಯವಿವಾಹ, ಉಪಪತ್ನಿಯರನ್ನು ಇಟ್ಟುಕೊಳ್ಳುವುದು, ವಿಧವೆಯರನ್ನು ಮನೆಯಿಂದ ಹೊರಹಾಕುವುದು ಇವೇ ಮುಂತಾದ ಹಲವಾರು ಅನಿಷ್ಟ ಪದ್ಧತಿಗಳು ಜಾರಿಯಲ್ಲಿದ್ದವು. ಅಂದು ಕಾನೂನು ಸಚಿವರಾಗಿದ್ದ ಡಾ.ಅಂಬೇಡ್ಕರ್ ಸಂವಿಧಾನ ರಚನಾ ಸಭೆಯಲ್ಲಿ ಹಿಂದೂ ಸಂಹಿತೆ ವಿಧೇಯಕವನ್ನು ಮಂಡಿಸಿದರು. ಅದರ ಪ್ರಧಾನ ಉದ್ದೇಶ ಅಂದಿನ ಹಿಂದೂ ಕಾನೂನುಗಳಲ್ಲಿದ್ದ ಬ್ರಾಹ್ಮಣಶಾಹಿಯ ಅನವಶ್ಯಕ ಅಂಶಗಳು ಮತ್ತು ಜಾತಿ ವ್ಯವಸ್ಥೆಯನ್ನು ತೆಗೆದುಹಾಕಿ, ಅಂತರ್ಜಾತೀಯ ವಿವಾಹಗಳನ್ನು ಸಾಧ್ಯವಾಗಿಸಿ, ಹಿಂದೂ ಸ್ತ್ರೀಯರ ದಮನ ಮತ್ತು ಬಹುಪತ್ನಿತ್ವಗಳನ್ನು ಕೊನೆಗಾಣಿಸಿ ವಿಚ್ಛೇದನೆ ಮತ್ತು ಆಸ್ತಿಯ ಹಕ್ಕುಗಳು ದೊರೆಯುವಂತೆ ಮಾಡುವುದಾಗಿತ್ತು. ಆದರೆ ಇಂದು ಮಹಿಳಾ ಸಬಲೀಕರಣದ ಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಇದೇ ಸಂಘ ಪರಿವಾರ ವಿಧೇಯಕವನ್ನು ತೀವ್ರವಾಗಿ ಖಂಡಿಸಿದುದಲ್ಲದೆ ಕೆಲವು ಸಮಾನಮನಸ್ಕ ಸಂಘಟನೆಗಳ ಜೊತೆಗೂಡಿ ಅದರ ವಿರುದ್ಧ ದೇಶವ್ಯಾಪಿ ಚಳವಳಿಯೊಂದನ್ನು ಆರಂಭಿಸಿತು. ಹೆಸರಾಂತ ಇತಿಹಾಸಕಾರ ರಾಮಚಂದ್ರ ಗುಹಾ ಬರೆದಿರುವ ‘India After Gandhi‘ ಎಂಬ ಪುಸ್ತಕದಲ್ಲಿ ಆ ಚಳವಳಿಯ ವಿವರಗಳಿವೆ. ಸಂಘಿಗಳ ಆಷಾಢಭೂತಿತನ, ಕಪಟನಾಟಕಗಳನ್ನೆಲ್ಲ ಬಯಲಿಗೆಳೆಯುವ ಆ ವೃತ್ತಾಂತ ಇಲ್ಲಿದೆ:
ವಿಧೇಯಕದ ವಿರುದ್ಧ ಕೂಗುಗಳೇಳಲಾರಂಭಿಸಿದವು. 1949ರ ಮಾರ್ಚ್‌ನಲ್ಲಿ ಅಖಿಲ ಭಾರತ ಹಿಂದೂ ಸಂಹಿತೆ ವಿರೋಧಿ ಸಮಿತಿಗೆ ಚಾಲನೆ ನೀಡಲಾಯಿತು. ನಂತರ ಅದು ಧರ್ಮಶಾಸ್ತ್ರಗಳ ಆಧಾರದಲ್ಲಿ ರಚಿಸಲಾಗಿರುವ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸಂವಿಧಾನ ರಚನಾ ಸಭೆಗೆ ಇಲ್ಲವೆಂದು ಹೇಳಿತು. ಆಗ ಸಂಪ್ರದಾಯವಾದಿ ಲಾಯರುಗಳು, ಸ್ವಾಮಿಗಳು ಸಮಿತಿಯ ನಿಲುವನ್ನು ಬೆಂಬಲಿಸಿದರು. ದ್ವಾರಕಾ ಪೀಠದ ಪ್ರಭಾವಶಾಲಿ ಸ್ವಾಮಿ ಶಂಕರಾಚಾರ್ಯರು ಸಂಹಿತೆಯ ವಿರುದ್ಧ ಸುತ್ತೋಲೆಯೊಂದನ್ನು ಹೊರಡಿಸಿ ಧರ್ಮ ಎನ್ನುವುದು ಅತ್ಯಂತ ಉದಾತ್ತವಾದ ಬೆಳಕು, ಸ್ಪೂರ್ತಿ ಮತ್ತು ಮಾನವನ ಆಸರೆ. ಅದನ್ನು ಸಂರಕ್ಷಿಸುವುದು ಸರಕಾರದ ಅತ್ಯುನ್ನತ ಕರ್ತವ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಚಳವಳಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ ಆರೆಸ್ಸೆಸ್ ಅದಕ್ಕಾಗಿ ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸಿತು. ಚಳವಳಿಯನ್ನು ಸ್ವಾಮಿ ಕರ್ಪತ್ರೀಜಿ ಮಹಾರಾಜ್ ಎಂಬಾತನ ನೇತೃತ್ವದಲ್ಲಿ ನಡೆಸಲಾಯಿತು. ಆರೆಸ್ಸೆಸ್ ವತಿಯಿಂದ ಭಾರತದ ಉದ್ದಗಲಕ್ಕೂ ನೂರಾರು ಸಭೆಗಳನ್ನು ಏರ್ಪಡಿಸಲಾಯಿತು. ಎಲ್ಲಾ ಸಭೆಗಳಲ್ಲಿ ಹೆಚ್ಚಾಗಿ ಸ್ವಾಮಿ ಕಲ್ಪತ್ರಿಯೆ ಪ್ರಮುಖ ಭಾಷಣಕಾರ. ಇದರಲ್ಲಿ ಭಾಗವಹಿಸಿದ ಸ್ವಾಮಿಗಳು ಮತ್ತಿತರ ವ್ಯಕ್ತಿಗಳು ತಮ್ಮನ್ನು ಧರ್ಮಯುದ್ಧದಲ್ಲಿ ತೊಡಗಿರುವ ಧರ್ಮವೀರರೆಂದು ಕರೆದುಕೊಂಡರು. ಸ್ವಾಮಿ ಕರ್ಪತ್ರೀಜಿ ಅಂಬೇಡ್ಕರರ ಜಾತಿಯನ್ನು ಉಲ್ಲೇಖಿಸುತ್ತಾ ಒಂದು ಕಾಲದಲ್ಲಿ ಅಸ್ಪಶ್ಯನಾಗಿದ್ದ ಈತನೀಗ ಬ್ರಾಹ್ಮಣರ ವ್ಯವಹಾರಗಳಲ್ಲಿ ಮೂಗು ತೂರಿಸುವುದೇಕೆ ಎಂದು ಪ್ರಶ್ನಿಸಿದರು. ಶಾಸ್ತ್ರಗಳ ವ್ಯಾಖ್ಯಾನದ ವಿಷಯದಲ್ಲಿ ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲು ಹಾಕಿದರು. ಶಾಸ್ತ್ರಗಳಲ್ಲಿ ಬಹುಪತ್ನಿತ್ವಕ್ಕೆ ಸಮ್ಮತಿ ನೀಡಲಾಗಿಲ್ಲವೆಂಬ ಅಂಬೇಡ್ಕರರ ವಾದವನ್ನು ತಳ್ಳಿಹಾಕುತ್ತಾ ಯಾಜ್ಞವಲ್ಕ್ಯ ಸ್ಮತಿಯ ಮೂರನೆ ವಿಭಾಗದ ಮೂರನೆ ಅಧ್ಯಾಯದ ಮೂರನೆ ಶ್ಲೋಕವನ್ನು ಉದ್ಧರಿಸಿದರು. ಆದರೆ ಸದರಿ ಸ್ಮತಿಯಲ್ಲಿ ಗಂಡ ಕುಡುಕನಾಗಿದ್ದರೆ, ಕಟುನಾಲಿಗೆಯವನಾಗಿದ್ದರೆ, ದುಂದುಗಾರನಾಗಿದ್ದರೆ ಹೆಂಡತಿ ಬೇರೊಬ್ಬನನ್ನು ವಿವಾಹವಾಗಲು ಅವಕಾಶ ನೀಡಲಾಗಿದೆಯೇ ಎಂಬ ಪ್ರಶ್ನೆಯನ್ನೆಸೆದಾಗ ಮೌನಕ್ಕೆ ಶರಣಾದರು. ಹಿಂದೂ ಸಂಪ್ರದಾಯದಲ್ಲಿ ವಿಚ್ಛೇದನೆಯನ್ನು ನಿಷೇಧಿಸಲಾಗಿದೆ ಎಂದ ಸ್ವಾಮಿ ಕರ್ಪತ್ರಿ ಯಾವುದೇ ಜಾತಿಯ ಮಗುವನ್ನು ದತ್ತಕ್ಕೆ ತೆಗೆದುಕೊಳ್ಳುವುದೂ ಶಾಸ್ತ್ರ ವಿರೋಧಿ ಹಾಗೂ ಜಾತಿಲಕ್ಷಣ ವಿರೋಧಿ ಎಂದು ಸಾರಿದರು. ಶಾಸ್ತ್ರಗಳ ಪ್ರಕಾರ ಮಹಿಳೆಗೆ ಆಸ್ತಿಯಲ್ಲಿ ಕೇವಲ ಎಂಟನೆ ಒಂದಂಶವನ್ನು ಮಾತ್ರ ಪಡೆಯುವ ಹಕ್ಕು ಇದೆ ಹೊರತು ಅಂಬೇಡ್ಕರ್ ಪ್ರಸ್ತಾಪಿಸಿದಂತೆ ಅರ್ಧ ಪಾಲು ಅಲ್ಲ. ಅವರ ಮಸೂದೆ ಹಿಂದೂ ಶಾಸ್ತ್ರಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಸರಕಾರ ಜನರ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಅಂಗೀಕರಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು, ದೇವರ ಮತ್ತು ಧರ್ಮದ ನಿಯಮಗಳನ್ನು ಉಲ್ಲಂಘಿಸಿದರೆ ಸರಕಾರಕ್ಕೆ ಭಾರೀ ಹಾನಿಯಾಗಬಹುದೆಂದು ಎಚ್ಚರಿಕೆ ನೀಡಿದರು.ಸೆಪ್ಟಂಬರ್ 11, 1949ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ತಾದ ಖಂಡನಾ ಸಭೆ ನಡೆಯಿತು. ಒಬ್ಬ ಭಾಷಣಕಾರನಂತೂ ವಿಧೇಯಕವನ್ನು ಹಿಂದೂ ಧರ್ಮದ ಮೇಲೆ ಎಸೆದ ಆಟಂ ಬಾಂಬ್ ಎಂದು ಬಣ್ಣಿಸಿದ. ಮರುದಿನ ಆರೆಸ್ಸೆಸ್ ಮಂದಿ ಘೋಷಣೆ ಕೂಗುತ್ತಾ ಸಂವಿಧಾನ ರಚನಾ ಸಭೆಯ ಕಟ್ಟಡಗಳತ್ತ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿ ನೆಹರೂ, ಅಂಬೇಡ್ಕರ್ ಪ್ರತಿಕೃತಿಗಳನ್ನು ಸುಟ್ಟುಹಾಕಿದರು. ಶೇಖ್ ಅಬ್ದುಲ್ಲಾ ಕಾರನ್ನು ಧ್ವಂಸಗೊಳಿಸಿದರು. ಪಾಕಿಸ್ತಾನವನ್ನು ನಾಶಮಾಡಿ, ನೆಹರೂ ಅಧಿಕಾರ ತ್ಯಜಿಸಲಿ ಎಂದು ಮುಂತಾಗಿ ಘೋಷಣೆ ಕೂಗಿದರು. 1951ರ ಸೆಪ್ಟಂಬರ್ 16ರಂದು ನಡೆದ ಸಭೆಯೊಂದರಲ್ಲಿ ಸ್ವಾಮಿ ಕರ್ಪತ್ರೀಜಿ ಪಂಡಿತ್ ನೆಹರೂ ಮತ್ತಾತನ ಸಹಚರರು ಪ್ರಸ್ತಾಪಿತ ಹಿಂದೂ ಸಂಹಿತೆಯ ಒಂದೇ ಒಂದು ವಿಭಾಗವೂ ಶಾಸ್ತ್ರಗಳಿಗೆ ಅನುಗುಣವಾಗಿ ಇದೆ ಎಂದು ತೋರಿಸಿದರೆ ನಾನು ಇಡೀ ಸಂಹಿತೆಯನ್ನು ಒಪ್ಪಿಕೊಳ್ಳುವೆ ಎಂದು ಘೋಷಿಸಿದರು. ಮರುದಿನ ಸ್ವಾಮಿ ನೇತೃತ್ವದಲ್ಲಿ ಸಂಘಿಗಳ ಗುಂಪೊಂದು ಮೆರವಣಿಗೆ ನಡೆಸಿ ಸಂಸತ್ತಿಗೆ ನುಗ್ಗಲೆತ್ನಿಸಿತು. ಆ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಸನ್ಯಾಸಿಯ ಜನಿವಾರದಂತಿರುವ ಎಂದು ಹಿಂದಿ ನಿಯತಕಾಲಿಕದಿಂದ ಬಣ್ಣಿಸಲ್ಪಟ್ಟ ಸ್ವಾಮಿಯ ದಂಡ ತುಂಡಾಯಿತು.
ಅಂತಿಮವಾಗಿ ಇವರ ಒತ್ತಡಕ್ಕೆ ಮಣಿದ ಸರಕಾರ ಇವರೊಂದಿಗೆ ಒಮ್ಮತಕ್ಕೆ ಬರುವ ಸಲುವಾಗಿ ಮಹಿಳೆಯರ ಹಕ್ಕುಗಳನ್ನು ದುರ್ಬಲ ಗೊಳಿಸಿತು. 1955-56ರಲ್ಲಿ ಹಿಂದೂ ಸಂಹಿತೆಯನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರತ್ವ ಕಾಯ್ದೆ, ಹಿಂದೂ ಅಪ್ರಾಪ್ತ ವಯಸ್ಕತೆ ಮತ್ತು ಪಾಲಕತನ ಕಾಯ್ದೆ, ಹಿಂದೂ ದತ್ತುಸ್ವೀಕಾರ ಮತ್ತು ಸಂರಕ್ಷಣೆ ಕಾಯ್ದೆ ಹೆಸರಿನ ನಾಲ್ಕು ಪ್ರತ್ಯೇಕ ಮಸೂದೆಗಳಾಗಿ ಮಂಡಿಸಿದ ಬಳಿಕ ಅವುಗಳನ್ನು ಅಂಗೀಕರಿಸಲಾಯಿತು. ಮೂಲ ಮಸೂದೆಯನ್ನು ಕೈಬಿಟ್ಟಿರುವುದರಿಂದ ನಿರಾಶರಾದ ಅಂಬೇಡ್ಕರ್ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರನಡೆದರು. ಪ್ರಸಕ್ತವಾಗಿ ಜಾರಿಯಲ್ಲಿರುವ ಈ ಹಿಂದೂ ಕೌಟುಂಬಿಕ ಕಾಯ್ದೆಗಳ ಬಗ್ಗೆ ಮಹಿಳಾ ಹಕ್ಕು ಹೋರಾಟಗಾರರಿಗೆ ತುಂಬಾ ಅಸಮಾಧಾನ ಇದೆ. ಉದಾಹರಣೆಗೆ ಹಿಂದೂ ವಿವಾಹ ಕಾಯ್ದೆಯ ಹೊರತಾಗಿಯೂ ಹಿಂದೂಗಳಲ್ಲಿ ದ್ವಿಪತ್ನಿವಲ್ಲಭರು ಸಾಕಷ್ಟು ಸಂಖ್ಯೆಯಲ್ಲಿರುವುದು ಕಾಯ್ದೆಯ ದೌರ್ಬಲ್ಯವನ್ನು ತೋರಿಸುತ್ತದೆ.
ಕೇವಲ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ವೈಯಕ್ತಿಕ ಕಾನೂನುಗಳನ್ನು ತನ್ನ ಪರಿಧಿಯಿಂದ ಹೊರಗಿಟ್ಟ ಈ ತೀರ್ಪಿನಿಂದ ಮೇಲುನೋಟಕ್ಕಂತೂ ಸಂಘ ಪರಿವಾರಕ್ಕೆ ನಿರೀಕ್ಷಿಸಿದಷ್ಟು ಪ್ರಯೋಜನವಾಗಿರುವಂತೆ ತೋರುವುದಿಲ್ಲ. ಆದರೆ ಹುಲಿ ತನ್ನ ಪಟ್ಟೆಗಳನ್ನು ಎಂದೂ ಬದಲಾಯಿಸುವುದಿಲ್ಲ ಎಂಬ ಗಾದೆ ಮಾತಿದೆ. ಹೀಗಾಗಿ ಹುಟ್ಟಾ ಅಲ್ಪಸಂಖ್ಯಾತ ವಿರೋಧಿಯಾದ ಸಂಘ ಪರಿವಾರ ತನ್ನ ಬತ್ತಳಿಕೆಯಲ್ಲಿ ಬೇರೆ ಅಸ್ತ್ರಗಳನ್ನು ಬಚ್ಚಿಟ್ಟಿರುವ ಸಾಧ್ಯತೆಗಳನ್ನು ಖಂಡಿತಾ ತಳ್ಳಿಹಾಕಲು ಸಾಧ್ಯವಿಲ್ಲ.
--------------------
(ಆಧಾರ: ‘ನ್ಯೂಸ್‌ಕ್ಲಿಕ್’ನಲ್ಲಿ ಸೀಮಾ ಮುಸ್ತಫಾ; 28.10.2016ರ ‘ದ ಹಿಂದೂ’ನಲ್ಲಿ ಫೈಝುರ್ರಹ್ಮಾನ್; ‘ಸಬ್‌ರಂಗ್ ಇಂಡಿಯ’ದಲ್ಲಿ ಎಲ್.ಎಸ್. ಹರ್ದೇನಿಯ ಲೇಖನಗಳು)
ಕೇವಲ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ವೈಯಕ್ತಿಕ ಕಾನೂನುಗಳನ್ನು ತನ್ನ ಪರಿಧಿಯಿಂದ ಹೊರಗಿಟ್ಟ ಈ ತೀರ್ಪಿನಿಂದ ಮೇಲುನೋಟಕ್ಕಂತೂ ಸಂಘ ಪರಿವಾರಕ್ಕೆ ನಿರೀಕ್ಷಿಸಿದಷ್ಟು ಪ್ರಯೋಜನವಾಗಿರುವಂತೆ ತೋರುವುದಿಲ್ಲ. ಆದರೆ ಹುಲಿ ತನ್ನ ಪಟ್ಟೆಗಳನ್ನು ಎಂದೂ ಬದಲಾಯಿಸುವುದಿಲ್ಲ ಎಂಬ ಗಾದೆ ಮಾತಿದೆ. ಹೀಗಾಗಿ ಹುಟ್ಟಾ ಅಲ್ಪಸಂಖ್ಯಾತ ವಿರೋಧಿಯಾದ ಸಂಘ ಪರಿವಾರ ತನ್ನ ಬತ್ತಳಿಕೆಯಲ್ಲಿ ಬೇರೆ ಅಸ್ತ್ರಗಳನ್ನು ಬಚ್ಚಿಟ್ಟಿರುವ ಸಾಧ್ಯತೆಗಳನ್ನು ಖಂಡಿತಾ ತಳ್ಳಿಹಾಕಲು ಸಾಧ್ಯವಿಲ್ಲ.