varthabharthi


ನನ್ನೂರು ನನ್ನ ಜನ

ಕುಡಿತ ಎನ್ನುವುದು ಮಾನಸಿಕ ದಾಸ್ಯ

ವಾರ್ತಾ ಭಾರತಿ : 6 Sep, 2017
ಚಂದ್ರಕಲಾ ನಂದಾವರ

ಕೃಷ್ಣಾಪುರದ ಬಾರಗ ರಸ್ತೆಯಲ್ಲಿದ್ದ ಭವಾನಿಶಂಕರ್ ಮತ್ತು ಯೋಗೀಶ್ ಇವರು ವಿವಾಹಿತರಾಗಿ ಅವರಿಬ್ಬರ ಮಡದಿಯರು ನನ್ನ ಜೊತೆಗೆ ಮಂಗಳೂರಿನ ಪ್ರಯಾಣಕ್ಕೆ ದೊರೆತವರು. ಒಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರೆ, ಇನ್ನೊಬ್ಬರು ರಥಬೀದಿಯಲ್ಲಿದ್ದ ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಬ್ಯಾಂಕಲ್ಲಿ ಉದ್ಯೋಗಿ ಯಾಗಿದ್ದವರು. ಇವರ ಜೊತೆಗೆ ಅಲ್ಲೇ ಪಕ್ಕದ ಇನ್ನೊಂದು ರಸ್ತೆಯಲ್ಲಿದ್ದ ಮನೆಗೆ ಸೊಸೆಯಾಗಿ ಬಂದವರು ಕೂಡಾ ಇದೇ ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದವರು. ಹೀಗೆ ನನ್ನ ಆಸುಪಾಸಿನ ಮನೆಯವರೇ ಆಗಿದ್ದವರು ಆತ್ಮೀಯರಾಗಿ ನಮ್ಮ ಬಸ್ಸಿನ ದಣಿವನ್ನು ಮರೆಯುವಲ್ಲಿ ಸಮಾನ ಮನಸ್ಕರಾಗಿ ಮಾತುಕತೆಗೆ ದೊರೆಯುತ್ತಿದ್ದವರು.

ಮಕ್ಕಳ ತಾಯಂದಿರಾಗುವ ಮೊದಲು ಪುಸ್ತಕ ಓದುವ ಹವ್ಯಾಸವುಳ್ಳ ಅವರಲ್ಲಿನ ಮಾತುಕತೆಗಳ ವಿಷಯಗಳು ಕೂಡಾ ಕೌಟುಂಬಿಕ ವಲಯಕ್ಕಿಂತ ಬೇರೆಯಾಗಿರುತ್ತಿತ್ತು. ಅವರು ತಾಯಂದಿರಾದ ಮೇಲೆ ಮಕ್ಕಳ ಲಾಲನೆ, ಪಾಲನೆಯ ವಿಷಯಗಳ ಕುರಿತು, ಮನೆಮದ್ದಿನ ಕುರಿತು, ಕಾಲಕಾಲಕ್ಕೆ ಮಕ್ಕಳಿಗೆ ಕೊಡಬೇಕಾದ ಲಸಿಕೆ, ವ್ಯಾಕ್ಸಿನೇಷನ್‌ಗಳ ಕುರಿತು ಮಾತಾಡಿಕೊಳ್ಳುತ್ತಿದ್ದೆವು. ಈ ವಿಷಯಗಳ ಕುರಿತಾದ ವಿಚಾರಗಳ ತಪಾಸಣೆ, ಗರ್ಭಿಣಿ, ಬಾಣಂತಿ ಮಕ್ಕಳ ಆರೋಗ್ಯದ ವಿಚಾರಣೆಗೆ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿಯೊಬ್ಬರು ನಮ್ಮ ಮನೆಗಳ ಆಸುಪಾಸಿನಲ್ಲೇ ಬಿಡಾರ ಮಾಡಿಕೊಂಡಿದ್ದರು.

ಕಾಟಿಪಳ್ಳ, ಕೃಷ್ಣಾಪುರಗಳಲ್ಲಿ ಮಂಗಳೂರಿನ ಅನೇಕರು ಸೈಟ್ ಕೊಂಡು ಮನೆ ಕಟ್ಟಿಸಿಕೊಂಡವರು ಇದ್ದರು ಎಂದು ಹೇಳಿದ್ದೆ. ಈ ಪಟ್ಟಿಯಲ್ಲಿ ನಮ್ಮ ಬ್ಲಾಕ್‌ನ ಎದುರುಗಡೆ ಇದ್ದ 7ನೆಯ ಬ್ಲಾಕ್‌ನಲ್ಲಿ ಬಂದು ನೆಲೆಸಿದವರು ನಿವೃತ್ತ ಪೊಲೀಸ್ ಪುಟ್ಟಪ್ಪಯ್ಯನವರು. ಇವರು ನನ್ನ ಸಹೋದ್ಯೋಗಿ ಮಿತ್ರ ಐತಾಳರಿಗೆ ಸಂಬಂಧಿ. ನೇರ ನಡೆ ನುಡಿಯ ಶಿಸ್ತಿನವರಾದ ಪುಟ್ಟಪ್ಪಯ್ಯನವರ ಮಗಳು ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ವಿವಾಹ ಕಾರ್ಯ ಮುಗಿಸಿ ಕಿರಿಯ ಮಗನೊಂದಿಗೆ ಈ ಊರಿಗೆ ಬಂದ ಪುಟ್ಟಪ್ಪಯ್ಯನವರು ನಮ್ಮ ಮನೆಯ ದಾರಿಯಾಗಿದ್ದ ಬಾರಗ ರಸ್ತೆಯಲ್ಲಿದ್ದ ಗುಮಾಸ್ತರ ಅಂಗಡಿಯನ್ನು ಜಿನಸಿನ ಅಂಗಡಿಯಾಗಿ ಬದಲಾಯಿಸಿಕೊಂಡು ತನ್ನ ನಿವೃತ್ತಿಯಲ್ಲಿ ಸಂಪಾದನೆಯ ದಾರಿ ಮಾಡಿಕೊಂಡರು. ಅವರ ಮಗ ಗೋವಿಂದ ದಾಸ ಕಾಲೇಜಿಗೆ ಸೇರಿಕೊಂಡ.

ಈಗ ಪುಟ್ಟಪ್ಪಯ್ಯನವರ ಮನೆಯೂ ಹೋಗಿ ಬರುವ ಮನೆಗಳಲ್ಲಿ ಒಂದಾಯ್ತು. ಇವರ ಜಿನಸಿನ, ಹಣ್ಣು ತರಕಾರಿಗಳ ಅಂಗಡಿಯಿಂದಾಗಿ ನಾನು ಮಂಗಳೂರಿನಿಂದ ಒಯ್ಯುತ್ತಿದ್ದ ವಸ್ತುಗಳ ಭಾರ ಕಡಿಮೆಯಾಯಿತು. ಇವರ ಅಂಗಡಿಗಿಂತ ಮೊದಲು ನಾವು ನಾಲ್ಕನೆ ಬ್ಲಾಕ್‌ನಲ್ಲಿದ್ದ ‘ನೈತ ಬ್ಯಾರಿಗಳ’ ಅಂಗಡಿ ಎಂದು ಕರೆಸಿಕೊಳ್ಳುತ್ತಿದ್ದ ಅಂಗಡಿಯಿಂದ ತಿಂಗಳಿಗೆ ಬೇಕಾಗುವ ಸಾಮಾನನ್ನು ಒಮ್ಮೆಗೇ ತರುತ್ತಿದ್ದೆವು. ಈ ಅಂಗಡಿಯವರು ಊರಿನ ಜನರಿಂದ ಒಳ್ಳೆಯವರು, ಸಜ್ಜನರು, ಪರೋಪಕಾರಿಗಳು ಎಂದೆಲ್ಲಾ ಹೊಗಳಿಸಿಕೊಂಡವರು. ಎಲ್ಲರಿಗೂ ದಿನ ನಿತ್ಯದ ಎಲ್ಲಾ ವಸ್ತುಗಳ ಜೊತೆಗೆ, ಕಾಮಗಾರಿಗೆ ಬೇಕಾದ ವಸ್ತುಗಳೂ ಸಿಗುತ್ತಿತ್ತು ಎಂದು ನನ್ನ ನೆನಪು. ನಾನು ಕೂಡಾ ಅಪರೂಪಕ್ಕೊಮ್ಮೆ ನಮ್ಮವರ ಜೊತೆಗೆ ಅಂಗಡಿಗೆ ಹೋಗುತ್ತಿದ್ದುದು ಇತ್ತು. ಅವರಿಗೆ ‘ನೈತ ಬ್ಯಾರಿ’ ಎಂಬ ಹೆಸರು ಬರಲು ಕಾರಣವೇನು ಎಂದು ನನಗೆ ತಿಳಿಯಲಾಗಲಿಲ್ಲ. ಅವರು ಪಣಂಬೂರಿನಿಂದ ವಲಸೆ ಬಂದವರೇ ಆಗಿದ್ದರು.

ಪುಟ್ಟಪ್ಪಯ್ಯನವರು ಇಲ್ಲಿ ನೆಲೆಸಿದಂತೆಯೇ ಅವರ ಕಿರಿಯ ಸಹೋದರಿ 7ನೆಯ ಬ್ಲಾಕ್‌ನ ಶಾಲೆಗೆ ವರ್ಗಾ ವಣೆಗೊಂಡು ಬಂದರು. ಅವರು ಕೂಡಾ ಪುಟ್ಟಪ್ಪಯ್ಯನವರ ಅಂಗಡಿಯ ಬಳಿಯಲ್ಲಿದ್ದ ಖಾಲಿ ಸೈಟನ್ನು ಖರೀದಿಸಿ ಮನೆ ಕಟ್ಟಿಸಿಕೊಂಡರು. ಅವರೂ ನಮ್ಮ ಪರಿಚಿತ ವಲಯಕ್ಕೆ ಸೇರಿಕೊಂಡರು. ಅವರ ಗಂಡ ನಮ್ಮವರೊಂದಿಗೆ ಮಾತ ನಾಡಲು ನಮ್ಮ ಮನೆಗೆ ಬರುತ್ತಿದ್ದುದೂ ಇತ್ತು. ಹಾಗೆಯೇ ಅದರ ಬಳಿಯೇ ಇದ್ದ ಇನ್ನೊಂದು ಖಾಲಿ ಸೈಟನ್ನು ಕೂಡಾ ಮಲಯಾಳ ಭಾಷೆಯ, ಸಣ್ಣ ಮಕ್ಕಳಿರುವ ಕುಟುಂಬವೊಂದು ಖರೀದಿಸಿ ಮನೆ ಕಟ್ಟಿಸಿಕೊಂಡರು.

7ನೆಯ ಬ್ಲಾಕ್‌ಗೆ ವರ್ಗಾವಣೆಗೊಂಡು ಬಂದ ಶಿಕ್ಷಕಿಯ ಕುಟುಂಬ ನಮ್ಮ ಮನೆಯ ಪಕ್ಕದ ಸುಶೀಲಕ್ಕನ ಮನೆಗೆ ಬಿಡಾರಕ್ಕೆ ಬಂತು. ಒಮ್ಮೆ ಅವರ ಮನೆ ಹುಡುಕಿಕೊಂಡು ಬಂದ ಹಳೆಯಂಗಡಿಯಲ್ಲಿ ಅಂದು ಉಪನ್ಯಾಸಕರಾಗಿದ್ದ ಸದಾಶಿವರು ನಮ್ಮ ಮನೆಯ ದಾರಿಯಾಗಿ ಬಂದಾಗ ಅವರು ಹುಡುಕಿಕೊಂಡು ಬಂದವರು ಕೂಡಾ ಪರಿಚಿತರೇ ಆದರು. ಅವರು ಬೇರೆಯಾರೂ ಅಲ್ಲ. ನಮಗೆ ಈ ಮೊದಲೇ ಪರಿಚಿತರಾಗಿದ್ದ ಕುಂಬ್ಳೆ ಸುಂದರರಾಯರ, ನಾದಾ ಶೆಟ್ಟಿಯವರ ಸಹೋದರ ಹರಿಶ್ಚಂದ್ರ ಎನ್ನುವವರು. ಈಗ ಈ ಕುಟುಂಬವೂ ನಮಗೆ ಪರಿಚಿತವಾಯಿತು.

ಹರಿಶ್ಚಂದ್ರರು ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಹೀಗೆ ಕೃಷ್ಣಾಪುರ ಕಾಟಿಪಳ್ಳದ ಊರಲ್ಲಿ ಇದ್ದ ವಿದ್ಯಾವಂತರು, ಪೇಟೆಯಿಂದ ಬಂದು ನಮ್ಮಂತೆ ಸೇರಿದವರು ಹೀಗೆ ನಮ್ಮ ಪರಿಚಿತ ವಲಯ ಬೇರೆ ಬೇರೆ ಕಾರಣಗಳಿಂದ ವಿಸ್ತಾರವಾಗುತ್ತಲೇ ಹೋಯಿತು. ಒಂದು ಹೇಳಿಕೆ ಇದೆ. ವಿದ್ಯೆಯಿದ್ದವನು ಗುಡ್ಡದಲ್ಲಿ ನೆಲೆಯೂರಿದರೂ ಅವನ ಸುತ್ತ ಜನ ಸೇರುತ್ತಾರೆ ಎಂದು. ಹಾಗೆಯೇ ಪ್ರಾರಂಭದಲ್ಲಿ ಉಂಟಾದ ಮಾನಸಿಕ ಅಶಾಂತಿ ನಿಧಾನವಾಗಿ ಕಡಿಮೆಯಾಗುತ್ತಾ ಎಲ್ಲಾ ಬ್ಲಾಕುಗಳಲ್ಲಿಯೂ, ಹಿಂದೂ ಮುಸ್ಲಿಮ್ ಭೇದವಿಲ್ಲದೆ ನಾವು ಸ್ನೇಹದಿಂದಿದ್ದು ನಮ್ಮ ಬದುಕು ಸಂತೃಪ್ತಿಯದ್ದಾಯಿತು.

ನಮ್ಮ ಸಂಸಾರ ಪ್ರಾರಂಭವಾದ 5 ವರ್ಷಗಳ ಒಳಗೆ ನಾವು ಕೃಷ್ಣಾಪುರವನ್ನು ಸೇರಿದವರು. ಆದ್ದರಿಂದಲೇ ಅದು ನಮ್ಮ ಬದುಕಿನ ಪ್ರಾರಂಭದ ವರ್ಷಗಳು. ನಮ್ಮ ಬದುಕಿನ ಕನಸುಗಳನ್ನು ನನಸಾಗಿಸಿಕೊಳ್ಳುವ ವರ್ಷಗಳೂ ಆಗಿತ್ತು. ಸಂಸಾರ ಬೆಳೆದಿತ್ತು. ಇಬ್ಬರು ಮಕ್ಕಳು. ಆರತಿಗೊಬ್ಬಳು ಕೀರ್ತಿ ಗೊಬ್ಬ ಎಂಬ ಗಾದೆಯಂತೆ ಹೆಣ್ಣು ಗಂಡು ಮಕ್ಕಳಿದ್ದರೂ ಆ ಗಾದೆಯನ್ನು ಅದೇ ಅರ್ಥದಲ್ಲಿ ಅನ್ವಯಿಸಿಕೊಳ್ಳದ ನಮಗೆ ಹೆಣ್ಣು ಗಂಡು ಮಕ್ಕಳಿಬ್ಬರೂ ಸಮಾನರೆಂದೇ ತಿಳಿದು ಬದುಕಿದ್ದೇವೆ. ನಮ್ಮ ಸಂಸಾರದೊಂದಿಗೆ ಅತ್ತೆ ಮಾವ ಜೊತೆಯಲ್ಲಿದ್ದುದರಿಂದ ಮಕ್ಕಳಿಗೆ ಅಜ್ಜ, ಅಜ್ಜಿಯರ ಪ್ರೀತಿ ವಾತ್ಯಲ್ಯವೂ ದೊರಕಿದೆ. ಸ್ವಂತಕ್ಕೆ ಮನೆ ಮಾಡುವ ಕನಸೂ ನನಸಾಗಿದೆ.

ಇಬ್ಬರಿಗೂ ಖಾಯಂ ಉದ್ಯೋಗ, ವರ್ಗಾವಣೆ ಇಲ್ಲದಿರುವ ಖಾಸಗಿ ಸಂಸ್ಥೆಗಳಲ್ಲಿ. ಇಷ್ಟೆಲ್ಲಾ ಸಕಾರಾತ್ಮಕವಾದ ಕೌಟುಂಬಿಕ ವ್ಯವಸ್ಥೆಯೊಂದಿಗೆ ನಮ್ಮಿಬ್ಬರ ಸಾಹಿತ್ಯಾಸಕ್ತಿಯ, ಸಂಘಟನೆಯ ಕೆಲಸಗಳನ್ನೂ ನನಸು ಮಾಡಿಕೊಂಡ ವರ್ಷಗಳನ್ನು ಇದೇ ಊರಲ್ಲಿ ಕಳೆದಿದ್ದೇವೆ ಎನ್ನುವುದು ಕೂಡಾ ಸಂತೋಷದ ವಿಚಾರವೇ ಹೌದು. ಈ ಹಿನ್ನೆಲೆಯಲ್ಲಿಯೂ ನಮ್ಮ ಮನೆಗೆ ಬರುತ್ತಿದ್ದ ಗಣ್ಯಾತಿ ಗಣ್ಯ ವ್ಯಕ್ತಿಗಳು, ನಮ್ಮ ಸಾಹಿತ್ಯ ವಲಯದ ಹಿರಿಯರು, ಕಿರಿಯರು ಇವೆಲ್ಲವನ್ನು ಈಗ ನೆನಪಿಸಿಕೊಂಡಾಗ ಕೃಷ್ಣಾಪುರದ ‘‘ದೃಶ್ಯ’’ ಮನೆಯ ವಾಸ್ತವ್ಯವನ್ನು ಮರೆಯಬಾರದೆನ್ನುವ ಕಾರಣದಿಂದಲೇ ಇಂದು ಮಂಗಳೂರಲ್ಲಿರುವ ಮನೆಯೂ ‘‘ದೃಶ್ಯ’’ವೇ ಆಗಿದೆ. ಮಂಗಳೂರಿನಲ್ಲಿ ನಮ್ಮ ಉದ್ಯೋಗ, ಸಾಹಿತ್ಯ ಸಂಘಟನೆಗಳ ಕಾರಣದಿಂದ ನಾವು ದಂಪತಿ ಸಾಮಾಜಿಕ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಿದ್ದೆವು. ಸಾಮಾಜಿಕ ವ್ಯಕ್ತಿತ್ವ ರೂಪುಗೊಂಡಾಗ ನಮ್ಮ ಬಗ್ಗೆ ಹಿಂದಿನಿಂದ ಆಡಿಕೊಳ್ಳುವ ಮಾತುಗಳೂ ಗೌಣವಾಗುತ್ತದೆ ಎನ್ನುವುದರೊಂದಿಗೆ ನಮ್ಮ ವ್ಯಕ್ತಿತ್ವದ ತಾತ್ವಿಕತೆಗಳೂ ಗಟ್ಟಿಗೊಳ್ಳುತ್ತಿರುತ್ತವೆ ಎನ್ನುವುದು ಕೂಡಾ ನಿಜವಾದುದು. ಆ ಅನುಭವಗಳು ನಮ್ಮನ್ನು ನಾವು ಅರಿತುಕೊಳ್ಳುವುದರೊಂದಿಗೆ, ನಮ್ಮ ಸಾಮಾಜಿಕ ಬದ್ಧತೆಯೇನು ಎಂಬುದನ್ನು ತಿಳಿಯುವ ಹಾಗೂ ತಿಳಿಸುವ ಸಂದರ್ಭಗಳೂ ಹೌದು.

ನಮ್ಮ ಮನೆಯ ಮುಂದಿನ ಅಡ್ಡ ರಸ್ತೆಯಲ್ಲಿದ್ದು, ಮುಖ್ಯರಸ್ತೆಯ ತಿರುವಿನಲ್ಲಿದ್ದ ಮನೆ ರುಕ್ಕಯ್ಯಣ್ಣನವರದ್ದು. ಅವರಿಗೆ ಕೃಷ್ಣಾಪುರ ಯುವಕ ಮಂಡಲದ ಎದುರಿಗೆ ಮುಖ್ಯರಸ್ತೆಯಲ್ಲಿ ಕ್ಷೌರದಂಗಡಿ ಇತ್ತು. ರುಕ್ಕಯ್ಯಣ್ಣ ನೋಡಲು ಒಳ್ಳೆಯ ಆಜಾನುಬಾಹು, ಕುಸ್ತಿ ಪೈಲ್ವಾನರಂತೆ ಗಟ್ಟಿಮುಟ್ಟಾದ ಆಳು. ಸ್ವಭಾವದಲ್ಲೂ ಯಾರಿಗೂ ಬಗ್ಗುವ ಆಸಾಮಿಯಲ್ಲ. ಅವರ ಇಬ್ಬರು ಮಗಂದಿರು, ಅವರ ಜೊತೆಗೆ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮಡದಿ ಕಮಲಕ್ಕ, ಅವರು ಕೂಡಾ ಉದ್ದನೆಯ ಶರೀರದ ಗಟ್ಟಿಮುಟ್ಟಾದ ಹೆಂಗಸು. ಗಂಡನಂತೆ ಅವರು ಕೂಡಾ ಯಾರಿಗೂ ಸೋಲುವವರಲ್ಲ. ಕೆಲಸದಲ್ಲೂ, ಮಾತಿನಲ್ಲೂ ಮುಂದು ಎನ್ನುವುದರೊಂದಿಗೆ ಪರೋಪಕಾರಕ್ಕೂ ಸಿಗುವವರು.

ಅವರು ಮನೆಯಲ್ಲಿ ದನ ಕೋಳಿ ಸಾಕುತ್ತಿದ್ದರು. ಕೋಳಿ ಅಂದರೆ ಕೋಳಿ ಅಂಕಕ್ಕೆ ಬೇಕಾದ ಹುಂಜಗಳು. ಕೋಳಿ ಅಂಕದ ಹವ್ಯಾಸ ರುಕ್ಕಯ್ಯಣ್ಣನಿಗೆ. ಸಾಂದರ್ಭಿಕವಾಗಿ ಅವರು ತಾವಾಗಿಯೇ ದನ ಕರು ಹಾಕಿದಾಗ ಮಕ್ಕಳಿಗೆ ಎಂದು ಹಾಲು ತಂದು ಕೊಡುತ್ತಿದ್ದರು. ನನ್ನ ಎಳೆಯ ಮಗನನ್ನು ಎತ್ತಿಕೊಂಡು ಮನೆಗೆ ಕರೆದೊಯ್ದು ಹಾಲು ಕುಡಿಸಿ ಆಡಿಸುತ್ತಿದ್ದರು. ಮನೆಯಲ್ಲಿ ಅವರ ಮಗಳು ಅಲ್ಲದೆ ಗಂಡನ ಸೋದರ ಸೊಸೆ, ಶಾಲೆಗೆ ಹೋಗುವ ಸೋದರ ಅಳಿಯ ಸಣ್ಣ ಹುಡುಗ ಇದ್ದ. ಅವನು ಕಲಿಯುವುದರಲ್ಲಿ ಜಾಣವಾಗಿದ್ದ ಎಂದು ನೆನಪು. ಮುಂದೆ ಹೈಸ್ಕೂಲಿಗೂ ಸೇರಿದ್ದ. ರುಕ್ಕಯ್ಯಣ್ಣ, ನನ್ನ ಅತ್ತೆ ಮಾವನವರಲ್ಲಿ ಮಾತನಾಡಲು ಬರುತ್ತಿದ್ದರು. ಒಮ್ಮಿಮ್ಮೆ ರಜಾದಿನಗಳಲ್ಲಿ ನಮ್ಮೆಡನೆಯೂ ಮಾತುಕತೆ ಆಡಲು ಬರುತ್ತಿದ್ದರು. ಹಳ್ಳಿಯ ರೀತಿಯ ಮಾತುಕತೆಗಳಲ್ಲಿ ಹಳ್ಳಿ ಜೀವನದ ಸೊಗಡು ಧಾರಾಳವಾಗಿರುತ್ತಿತ್ತು.

ಅವರ ಸಮುದಾಯಕ್ಕೆ ನಮ್ಮ ಸಮುದಾಯಕ್ಕೆ ದೈವಾರಾಧನೆ ಅಂದರೆ ಭೂತಾರಾಧನೆಯಲ್ಲಿ ವಿಶಿಷ್ಟವಾದ ಸಮಾನ ಕಾರ್ಯಗಳು ಇದ್ದುದರಿಂದ ನಮ್ಮ ಸಮುದಾಯಗಳು ಒಂದೇ ಎಂಬ ಭಾವ ಅವರಲ್ಲಿದ್ದು ಅವರು ನಮ್ಮನ್ನು ಬಂಧುಗಳಂತೆ ಭಾವಿಸುತ್ತಿದ್ದುದೂ ನಿಜ. ಭೂತಾರಾಧಣೆಯಲ್ಲಿ ರುಕ್ಕಯ್ಯಣ್ಣ ಈ ಕುಲಕಸುಬನ್ನು ನಿರ್ವಹಿಸುತ್ತಿದ್ದರು. ಆದ್ದರಿಂದಲೇ ಅವರಿಗೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಅಂತರಂಗ ಬಹಿರಂಗಗಳ ಪರಿಚಯ ಚೆನ್ನಾಗಿಯೇ ಇತ್ತು. ಈ ಕಾರಣದಿಂದಲೇ ಅವರಲ್ಲಿದ್ದ ಸ್ವಾಭಿಮಾನದಿಂದ ಅವರು ಯಾರಿಗೂ ಜಾತಿಯ ಕಾರಣಕ್ಕಾಗಿ ತಲೆ ತಗ್ಗಿಸುವುದನ್ನು ಇಷ್ಟಪಡುತ್ತಿರಲಿಲ್ಲ. ಒಂದರ್ಥದಲ್ಲಿ ಯಾರಿಗೂ ತಲೆಬಾಗದ ಅಹಂಕಾರಿಯೂ. ಕ್ಷೌರದವರ ಮುಂದೆ ತಲೆಬಾಗಲೇ ಬೇಕಲ್ಲಾ? ಎಲ್ಲರ ತಲೆಯನ್ನೂ ಬಾಗಿಸುವಂತೆ ಮಾಡುತ್ತಿದ್ದ ರುಕ್ಕಯ್ಯಣ್ಣನ ಮಾತುಗಳಲ್ಲಿ ಅವರ ಜೀವನಾನುಭವದ ಮಾತುಗಳಲ್ಲಿನ ಸತ್ಯದ ಪರಿಚಯ ನಮಗೂ ಸಿಗುತ್ತಿತ್ತು. ಆದರೆ ಅವರು ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದುದು ಮಾತ್ರ ನಮಗೆ ಇಷ್ಟವಾಗದ ವಿಷಯ.

ಈ ಬಗ್ಗೆ ಅವರಲ್ಲೊಮ್ಮೆ ನಾನು ಹೇಳಿದಾಗ ಅವರು ತನ್ನ ಕುಡಿತಕ್ಕೊಂದು ಕಾರಣ ಕೊಡುತ್ತಿದ್ದರು. ಅದು ಪೂರ್ಣ ರೂಪದಲ್ಲಿ ಸತ್ಯ ಎಂದು ಒಪ್ಪಿಕೊಳ್ಳದಿದ್ದರೂ ಅದರಲ್ಲಿ ಸತ್ಯದ ಒಂದಂಶವಂತೂ ಇರುವುದು ನಿಜ. ಅದೇನೆಂದರೆ ತನಗೆ ಕುಡಿದಾಗ ಸತ್ಯ ಹೇಳಲು ಸಾಧ್ಯವಾಗದ ಧೈರ್ಯ ಕುಡಿಯದೆ ಇದ್ದಾಗ ಇರುವುದಿಲ್ಲ ಎನ್ನುವುದು. ಈ ಮಾತನ್ನು ಕೇಳಿದ ನನಗೆ ಕನ್ನಡದ ರತ್ನ ಜಿ.ಪಿ.ರಾಜರತ್ನಂ ಹೆಂಡ್ಕುಡುಕನಾಗಿ ಕನ್ನಡ ಕವಿತೆಗಳನ್ನು ಬರೆದುದು ನೆನಪಾಯಿತು. ಬ್ರಿಟಿಷರ ಎದುರಿಗೆ ಸಾಮಾಜಿಕ ನ್ಯಾಯದ ಮಾತುಗಳನ್ನು ಆಡಲು ಅವರು ಆರಿಸಿಕೊಂಡುದು ಕುಡುಕನ ಪಾತ್ರವನ್ನು. ಹೌದು ಸಾಮಾಜಿಕವಾಗಿ, ಕೌಟುಂಬಿಕವಾಗಿ ಅಪಮಾನಿತಗೊಂಡ ವ್ಯಕ್ತಿ ಆ ಅಪಮಾನಗಳಿಂದ ಮುಕ್ತನಾಗುವುದಕ್ಕೆ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾನೆ ಎನ್ನುವುದನ್ನು ಅನೇಕರ ಬದುಕಿನಲ್ಲಿ ಕಂಡಿದ್ದೇನೆ.

ಹಾಗೆಯೇ ಮದ್ಯಪಾನ ಎನ್ನುವುದು ಒಂದು ಕಾಯಿಲೆ. ಇತರ ಕಾಯಿಲೆಗಳ ರೋಗಿಯನ್ನು ಆರೈಕೆ ಮಾಡಿದಂತೆ ಇವರಿಗೂ ಆರೈಕೆ ಅಂದರೆ ಪ್ರೀತಿಯ ಆರೈಕೆ ನೀಡಿದರೆ ಅವರು ಸುಧಾರಿಸುತ್ತಾರೆ ಎನ್ನುವುದು ಮನೋವೈದ್ಯರು ಕೂಡಾ ಹೇಳುತ್ತಾರೆ. ಆದರೆ ಕುಡುಕ ತಂದೆ, ಗಂಡ, ಅಣ್ಣ, ತಮ್ಮಂದಿರನ್ನು ಸಹಿಸಿಕೊಳ್ಳುವ ತಾಳ್ಮೆ ಹೆಣ್ಣಿಗಿರಲೇಬೇಕು ಎನ್ನುವುದು ಈ ಕಾಲದಲ್ಲಿ ಸೂಕ್ತವಾದುದೆಂದು ನಾನು ತಿಳಿಯುವುದಿಲ್ಲ. ಹೆಣ್ಣು ಮಕ್ಕಳೆಲ್ಲರೂ ‘‘ಬೇಡುವೆನು ವರವ, ಕುಡುಕನಲ್ಲದ ಗಂಡನ ನೀಡೆನಗೆ ತಾಯೆ’’ ಎಂದೇ ಹೇಳುವವರಾಗಬೇಕು ಎನ್ನುವುದು ನನ್ನ ವಾದ. ರುಕ್ಕಯ್ಯಣ್ಣ ನಮ್ಮ ಮನೆಗೆ ಬರುವಾಗ ಕುಡಿಯುತ್ತಿರಲಿಲ್ಲ. ಈ ಆತ್ಮೀಯತೆಯಿಂದ ನನ್ನ ಮಾವ, ನನ್ನ ಮಕ್ಕಳಿಗೆ ಅವರು ತನ್ನ ಮನೆಯಲ್ಲೇ ಕ್ಷೌರ ಮಾಡುತ್ತಿದ್ದರು. ನಮ್ಮವರು ಕೂಡಾ ಅವರ ಸಮಯಕ್ಕನುಸಾರವಾಗಿ ಅಂಗಡಿಗೋ, ಮನೆಗೋ ಹೋಗುತ್ತಿದ್ದರು.

ರುಕ್ಕಯ್ಯಣ್ಣರನ್ನು ಅಲ್ಲದೆ ನಾನು ಕಂಡ ಇನ್ನೊಬ್ಬ ಕುಡಿತದ ಚಟ ಅಂಟಿಸಿಕೊಂಡವರು ಎಂದರೆ ಕ್ರಿಶ್ಚಿಯನ್ ಸಮುದಾಯದ ಟೈಲರ್. ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುವ ಇವರು ಒಂದೊಂದು ದಿನ ವಿಪರೀತ ಕುಡಿದು ನಡೆಯಲಾಗದ ಸ್ಥಿತಿಯಲ್ಲಿ ಸಂಜೆ ಮನೆಗೆ ಬರುತ್ತಿದ್ದರು. ಮನೆಯಲ್ಲಿ ಮಡದಿ ಮತ್ತು ಒಬ್ಬ ಮಗಳು ಬೀಡಿ ಕಟ್ಟುತ್ತಿದ್ದರು. ಇವರದ್ದೂ ಎಲ್ಲರಂತೇ ಸ್ವಂತ ಸೈಟಿನ ಮನೆ. ಹೆಂಡತಿ ಮಗಳಲ್ಲಿ ಮಾತನಾಡಲು ಅವಕಾಶವಿದ್ದರೂ ಟೈಲರ್‌ರೊಂದಿಗೆ ನಾನೆಂದೂ ಮಾತನಾಡುವ ಸಂದರ್ಭ ಒದಗಿರಲಿಲ್ಲ. ಆದರೆ ಅವರಿಗೆ ನಮ್ಮ ಬಗ್ಗೆ ತಿಳುವಳಿಕೆ ಗೌರವ ಇತ್ತು ಎನ್ನುವುದು ಒಂದು ದಿನದ ಘಟನೆಯಿಂದ ತಿಳಿಯಿತು.

ಅಂದು ಸಂಜೆ ಸುಮಾರು 7:30ರ ಹೊತ್ತು ಕತ್ತಲೆಯಾಗುತ್ತಿತ್ತು. ಕುಡಿದು ನಡೆಯಲಾಗದೆ ಅಡ್ಡಾದಿಡ್ಡಿಯಾಗಿ ಹೆಜ್ಜೆ ಹಾಕಿಕೊಂಡು ಬಂದ ಟೈಲರ್ ನಮ್ಮ ಮನೆಯ ಬದಿಯಲ್ಲಿ ಬಿದ್ದಿದ್ದರು. ಇದನ್ನು ತಿಳಿದ ಅವರ ಹೆಂಡತಿ ಮಗಳು ಬಂದು ಎತ್ತಿ ನಿಲ್ಲಿಸಿ ಎರಡೂ ಭುಜಗಳನ್ನು ಹಿಡಿದು ‘‘ನಡೆಯಿರಿ ಬೇಗ. ನೀವು ಎಲ್ಲಿ ಬಿದ್ದಿದ್ದೀರಿ? ಗೊತ್ತುಂಟಾ? ನಂದಾವರ ಟೀಚರ್‌ರ ಮನೆಯೆದುರು ಬಿದ್ದಿದ್ದೀರಿ’’ ಎಂದಾಗ ‘‘ಹೌದಾ. ಹಾಗಾದರೆ ಬೇಗ ನಡೆಯುವಾ. ನನ್ನನ್ನು ಸರಿಯಾಗಿ ಹಿಡಿದುಕೊಳ್ಳಿ’’ ಎನ್ನುವುದು ನಾನು ಕಿವಿಯಾರೆ ಕೇಳಿದ ಮಾತು. ಕಣ್ಣಾರೆ ಕಂಡ ದೃಶ್ಯ. ಅಂದರೆ ಒಬ್ಬ ಕುಡುಕನಿಗೂ ತನ್ನ ಸುಪ್ತ ಪ್ರಜ್ಞೆಯಲ್ಲಿ ಸರಿಯಾದ ಜ್ಞಾನ ತಿಳುವಳಿಕೆ ಇರುತ್ತದೆ. ಆ ತಿಳುವಳಿಕೆ, ಜ್ಞಾನಗಳು ಬದುಕಿಗೆ ನೆಮ್ಮದಿ ನೀಡಲಾಗದೆ ಹೋದಾಗ ಪ್ರಜ್ಞೆ ಕಳೆದುಕೊಳ್ಳುವುದಕ್ಕಾಗಿಯೇ ಕುಡಿಯುವುದು ತಿಳಿದೇ ಮಾಡುವ ಕಾರ್ಯ. ಆದ್ದರಿಂದಲೇ ಅದು ಒಂದು ರೀತಿಯಲ್ಲಿ ಆತ್ಮಹತ್ಯೆಯ ನಿಧಾನ ರೂಪವಾದ ಆತ್ಮಹನನ. ಆದುದರಿಂದಲೇ ಅದು ಮಾನಸಿಕ ಕಾಯಿಲೆ. ಇದಕ್ಕೆ ಸಮಾಜವೂ ಹೊಣೆಯೆನ್ನುವುದು ನನ್ನ ಗ್ರಹಿಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)