ಪ್ರತಿ ತಾಲೂಕುಗಳಲ್ಲಿ ತುಳು ಸಾಹಿತ್ಯ ಸಮ್ಮೇಳನ: ಎ.ಸಿ.ಭಂಡಾರಿ
ಉಡುಪಿಯಲ್ಲಿ ಸೋನದ ಸೇಸೆ ಕಾರ್ಯಕ್ರಮ ಉದ್ಘಾಟನೆ
ಉಡುಪಿ, ಸೆ.8: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ತಾಲೂಕು ಮಟ್ಟಗಳಲ್ಲಿ ತುಳು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ನಂತರ ಜಿಲ್ಲಾಮಟ್ಟದ ಸಮ್ಮೇಳನ ನಡೆಸುವ ಅಭಿಪ್ರಾಯ ವನ್ನು ಅಕಾಡೆಮಿ ಹೊಂದಿದೆ. ಈ ನಿಟ್ಟಿನಲ್ಲಿ ಉಪಸಮಿತಿಯನ್ನು ರಚಿಸಿ, ಸಮ್ಮೇಳನಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.
ಉಡುಪಿ ತುಳುಕೂಟ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ತುಳು ಸಂಘದ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಸೋನದ ಸೇಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ದ.ಕ. ಜಿಲ್ಲೆಯ 36 ಶಾಲೆಗಳ ಐದನೆ ತರಗತಿಯಿಂದ 10ನೆ ತರಗತಿ ವರೆಗೆ ತುಳು ಭಾಷೆಯನ್ನು ಒಂದು ಪಠ್ಯವಾಗಿ ಕಲಿಸಲಾಗುತ್ತಿದೆ. ಮುಂದೆ ಇದನ್ನು ಮತ್ತಷ್ಟು ಶಾಲೆಗಳಿಗೆ ವಿಸ್ತರಿಸುವ ಗುರಿಯನ್ನು ಅಕಾಡೆಮಿ ಹೊಂದಿದೆ ಎಂದ ಅವರು, ಈ ಹಿಂದೆ ಶಾಲೆಗಳಲ್ಲಿ ತುಳು ಭಾಷೆ ಮಾತನಾಡು ವುದೇ ತಪ್ಪು ಎಂಬ ಭಾವನೆ ಇತ್ತು. ಆದರೆ ಈಗ ಶಾಲೆಗಳಲ್ಲಿಯೇ ಸರಕಾರ ತುಳು ಕಲಿಸುವ ಕೆಲಸ ಮಾಡುತ್ತಿದೆ ಎಂದರು.
ಎಲ್ಲ ಭಾಷೆಗಳ ಮೇಲೆ ಪ್ರೀತಿ ಇರಬೇಕು. ಮುಖ್ಯವಾಗಿ ಮಾತೃಭಾಷೆಯ ಬಗ್ಗೆ ಅಭಿಮಾನ ಇರಬೇಕು. ತುಳು ಭಾಷೆಯಲ್ಲಿ ಸತ್ವ, ಶಕ್ತಿ ಹಾಗೂ ಕೋಮು ಸೌಹಾದರ್ತೆ ಇದೆ. ತುಳುನಾಡಿನ ಯಾವುದೇ ಧರ್ಮದವರು ಮನೆಯಲ್ಲಿ ಮಾತೃಭಾಷೆ ಮಾತನಾಡಿದರೂ ಹೊರಗಡೆ ತುಳುವಿನಲ್ಲೇ ವ್ಯವಹಾರ ಮಾಡು ತ್ತಾರೆ. ಇದು ಭಾಷೆಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ, ತುಳು ನಾಡಿನ ದೈವಸ್ಥಾನ, ಗರಡಿಗಳಲ್ಲಿ ವಿದ್ವಾತ್ ಪೂರ್ಣವಾದ ತುಳು ಭಾಷೆ ಇವೆ. ಅದರ ಬಗ್ಗೆ ಗಮನ ಕೊಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ದೈವಸ್ಥಾನ ಹಾಗೂ ಜಾನಪದ ಸಮ್ಮೇಳನಗಳನ್ನು ನಡೆಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿ ದ್ದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ವೈ.ಎನ್.ಶೆಟ್ಟಿ ಸೋನ ಸೇಸೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಾಲೇಜಿನ ಪಿಯುಸಿ ವಿಭಾಗದ ಉಪನ್ಯಾಸಕ ಸುರೇಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಉದಯ ಶೆಟ್ಟಿ ಮುನಿಯಾಲು, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು. ಸೋನೆ ತಿಂಗಳ ಹೊಸ್ತಿಲ ಪೂಜೆಯನ್ನು ವಿದ್ಯಾರ್ಥಿಗಳು ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸೋನದ ಸೇಸೆಯ ಸಂಚಾಲಕ ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಪ್ತಿ ವಂದಿಸಿದರು. ಎನ್ನೆಸ್ಸೆಸ್ ಅಧಿಕಾರಿ ನಾಗರಾಜ್ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.