ಚ್ಯೂಯಿಂಗ್ ಗಮ್ ನುಂಗಿದರೆ ಏನಾಗುತ್ತದೆ......?
ನೀವೆಂದಾದರೂ ಆಕಸ್ಮಿಕವಾಗಿ ಚ್ಯೂಯಿಂಗ್ ಗಮ್ ಅನ್ನು ನುಂಗಿದ್ದೀರಾ? ಹೆತ್ತವರು ಚ್ಯೂಯಿಂಗ್ ಗಮ್ ನುಂಗಬೇಡಿ ಎಂದು ಮಕ್ಕಳಿಗೆ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ ಹೆಚ್ಚಿನವರಿಗೆ ಅದನ್ನು ನುಂಗಿದರೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.
ಚ್ಯೂಯಿಂಗ್ ಗಮ್ ಅನ್ನು ನುಂಗಿದರೆ ಅದು ಹೊಟ್ಟೆಯೊಳಗೆ ಅಂಟಿಕೊಳ್ಳುತ್ತದೆ ಮತ್ತು ಎಂದಿಗೂ ಹೊರಗೆ ಬರುವುದಿಲ್ಲ ಎಂದು ನಾವು ಸಾಮಾನ್ಯವಾಗಿ ಆತಂಕ ಪಟ್ಟುಕೊಳ್ಳುತ್ತಿರುತ್ತೇವೆ. ನಾವು ಅದನ್ನು ನುಂಗಬಾರದು ಎನ್ನುವುದಕ್ಕೆ ಇದೊಂದೇ ಕಾರಣವೇ?
ಹೊಟ್ಟೆಯೊಳಗೆ ಅಂಟಿಕೊಳ್ಳುತ್ತದೆ ಎನ್ನುವುದು ನಿಜವಲ್ಲವಾದರೂ ಚ್ಯೂಯಿಂಗ್ ಗಮ್ ಅನ್ನು ನುಂಗುವುದು ಆರೋಗ್ಯಕ್ಕೆ ಅಪಾಯಕಾರಿಯಂತೂ ಹೌದು. ನಾವು ಚ್ಯೂಯಿಂಗ್ ಗಮ್ ನುಂಗಿದರೆ ನಮ್ಮ ಶರೀರದಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡೋಣ.....
ಚ್ಯೂಯಿಂಗ್ ಗಮ್ ಬೇಸ್, ಬಣ್ಣಗಳು, ಸಕ್ಕರೆ ಅಥವಾ ಸಿಹಿಕಾರಕಗಳು, ಪರಿಮಳ ನೀಡುವ ಸಂಯುಕ್ತಗಳು, ಕೊಬ್ಬ್ಬು, ರಾಳ, ಮೇಣ, ರಬ್ಬರ್ನಂತಹ ಸಂಯುಕ್ತಗಳು, ಸಂರಕ್ಷಕಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಚ್ಯೂಯಿಂಗ್ ಗಮ್ ಅನ್ನು ನುಂಗಿದಾಗ ಯಕೃತ್ತು ಅದರಲ್ಲಿನ ಹಾನಿಕಾರಕ ವಸ್ತುಗಳು ಅಲರ್ಜಿಯನ್ನುಂಟು ಮಾಡುವ ಮುನ್ನ ಅವುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
ಚ್ಯೂಯಿಂಗ್ ಗಮ್ ನಮ್ಮ ಜಠರವನ್ನು ತಲುಪಿದಾಗ ಅಲ್ಲಿರುವ ಆಮ್ಲವು ಅದರಲ್ಲಿನ ಕೆಲವು ಘಟಕಗಳನ್ನು ಪ್ರತ್ಯೇಕಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಸಕ್ಕರೆ, ಗ್ಲಿಸರಿನ್ನಂತಹ ಸಾಫ್ಟನರ್ಗಳು ಮತ್ತು ಪೆಪ್ಪರ್ಮಿಂಟ್ ಆಯಿಲ್ನಂತಹ ರುಚಿಕಾರಕಗಳು ವಿಂಗಡಿಸಲ್ಪಡುತ್ತವೆ. ಚ್ಯೂಯಿಂಗ್ ಗಮ್ ಕರುಳನ್ನು ತಲುಪಿತೆಂದರೆ ಅದು ಜೀರ್ಣ ವ್ಯವಸ್ಥೆಯಿಂದ ಹೊರತಳ್ಳಲ್ಪಡುತ್ತದೆ. ಇದು ಶರೀರದಿಂದ ಹೊರಹೋಗಲು ಸುಮಾರು 25-26 ಗಂಟೆಗಳು ಬೇಕಾಗುತ್ತವೆ.
ಈ ಅವಧಿಯೊಳಗೆ ಚ್ಯೂಯಿಂಗ್ ಗಮ್ ಶರೀರದಿಂದ ವಿಸರ್ಜನೆಯಾಗದಿದ್ದರೆ, ವಿಶೇಷವಾಗಿ ಶರೀರದ ಉಷ್ಣತೆ ಸಾಮಾನ್ಯಕ್ಕಿಂತ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಈ ಗಮ್ ಅನ್ನು ನಿರ್ವಹಿಸುವುದು ನಮ್ಮ ಶರೀರಕ್ಕೆ ಕಷ್ಟವಾದರೆ ರಕ್ತದೊತ್ತಡ ಕೂಡ ಹೆಚ್ಚಬಹುದು.
ಅತಿಸಾರ,ವಾಂತಿ ಮತ್ತು ಪಿತ್ತೋದ್ರೇಕ ಇವು ಚ್ಯೂಯಿಂಗ್ ಗಮ್ ಅನ್ನು ಹೊರಗೆ ಹಾಕಲು ನಮ್ಮ ಶರೀರವು ಹೆಣಗಾಡುತ್ತಿದೆ ಎನ್ನುವುದರ ಲಕ್ಷಣಗಳಾಗಿವೆ. ಕೆಲವರ ಮೈಮೇಲೆ ದದ್ದುಗಳು ಏಳುವ ಜೊತೆಗೆ ತುರಿಕೆಯೂ ಉಂಟಾಗಬಹುದು. ಚ್ಯೂಯಿಂಗ್ ಗಮ್ನಲ್ಲಿಯ ಕೆಲವು ಘಟಕಗಳು ಅಲರ್ಜಿಯನ್ನೂ ಉಂಟು ಮಾಡಬಹುದು. ಹೀಗಾದಲ್ಲಿ ಖಂಡಿತವಾಗಿಯೂ ವೈದ್ಯರ ಸಲಹೆ ಪಡೆಯಬೇಕು.