ದಿಲ್ಲಿ ದರ್ಬಾರ್
ಬರ್ತ್‌ಡೇ ಗಿಫ್ಟ್...
ಕಳೆದ ವಾರ ಕೇಂದ್ರ ಸಂಪುಟ ಪುನಾರಚನೆಯ ಬಗೆಗಿನ ವದಂತಿಗಳು ಮುಗಿಲು ಮುಟ್ಟಿದ್ದವು. ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನುವುದು ಪ್ರತೀ ಸುದ್ದಿವಾಹಿನಿಗಳ ಅಗ್ರ ಸುದ್ದಿಯಾಗಿತ್ತು. ಸಿಂಗ್ ಅವರನ್ನು ಕೈಬಿಡಲಾಗುತ್ತದೆ ಎಂಬ ಸುದ್ದಿಯನ್ನು ಬಿತ್ತರಿಸುವಲ್ಲಿ ಸುದ್ದಿವಾಹಿನಿಗಳು ನಿರತವಾಗಿದ್ದರೂ ಪುನಾರಚನೆಯ ಎರಡು ದಿನ ಮೊದಲು ಕೂಡಾ ಸಿಂಗ್ ವಿಚಲಿತರಾಗಲಿಲ್ಲ. ಅಥವಾ ತಮ್ಮ ಒಳಬೇಗುದಿಯನ್ನು ತೋರ್ಪಡಿಸಿಕೊಂಡಿರಲಿಲ್ಲ. ಆದರೆ ಅವರ ಕಚೇರಿಗೆ ಮಾತ್ರ ಸಿಂಗ್ ಅವರನ್ನು ಕೈಬಿಡುವುದಿಲ್ಲ ಎಂಬ ಖಾತ್ರಿ ಇತ್ತು. ಈ ವಿಶ್ವಾಸಕ್ಕೆ ಏನು ಕಾರಣ? ಸೆಪ್ಟ್ಟಂಬರ್ 1ರಂದು ಪ್ರಧಾನಿ ನರೇಂದ್ರ ಮೋದಿಯವರು ಸಿಂಗ್ ಅವರಿಗೆ ಟ್ವೀಟ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಸಿಂಗ್ ಅವರ ಪ್ರಕಾರ, ಇದು ಸಂಪುಟದಿಂದ ಕೈಬಿಡುವುದಿಲ್ಲ ಎನ್ನುವುದರ ಸಂಕೇತ. ಆದರೆ ಮೋದಿ ಎಲ್ಲ ಸಹೋದ್ಯೋಗಿಗಳಿಗೂ ಹುಟ್ಟುಹಬ್ಬದ ಶುಭ ಹಾರೈಸುತ್ತಾರೆ. ಹಾಗಿದ್ದ ಮೇಲೆ ಸಂಪುಟದಿಂದ ಕೈಬಿಡುವುದಿಲ್ಲ ಎಂಬ ಖಾತ್ರಿ ಏನು? ಆದರೆ ಸಿಂಗ್ ಅವರಿಗೆ ಅಷ್ಟೇ ಸಾಕಿತ್ತು. ಬಹುಶಃ ಅದು ಸರಿ ಕೂಡಾ. ಹಲವು ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳ ಭವಿಷ್ಯ ತಪ್ಪಾಯಿತು. ಸಿಂಗ್ ಉಳಿದುಕೊಂಡರು. ಕೊನೆಗೂ ನಗುವ ಸರದಿ ಅವರದ್ದಾಯಿತು.
ಮೋದಿ- ಶಾ ರಹಸ್ಯ
ಭಾರತೀಯ ಜನತಾ ಪಕ್ಷದ ಹಲವು ಮಂದಿ ನರೇಂದ್ರ ಮೋದಿ- ಅಮಿತ್ ಶಾ ಜೋಡಿಯ ನಾಯಕತ್ವ ಗುಣದ ಬಗ್ಗೆ ಅಸಂಬದ್ಧ ಮಾತುಗಳನ್ನು ತಡೆಯುವ ಸ್ಥಿತಿಯಲ್ಲಿಲ್ಲ. ಅವರ ಪ್ರಕಾರ, ಉಭಯ ನಾಯಕರ ಸಾಮರ್ಥ್ಯದ ಹೊರತಾಗಿ, ಅವರ ವಿಶೇಷ ನಾಯಕತ್ವ ಗುಣಕ್ಕೆ ಪ್ರಮುಖ ಕಾರಣವೆಂದರೆ, ರಹಸ್ಯವನ್ನು ಕಾಪಾಡಿಕೊಳ್ಳುವುದು. ಕೇವಲ ಮಾಧ್ಯಮ ಮಾತ್ರವಲ್ಲ, ಪ್ರಮುಖ ಸಚಿವರು ಹಾಗೂ ಪದಾಧಿಕಾರಿಗಳಿಗೆ ಕೂಡಾ ಮೋದಿ- ಶಾ ತಂತ್ರಗಾರಿಕೆಯ ಸುಳಿವು ಕೂಡಾ ಸ್ವತಃ ಬಹಿರಂಗಪಡಿಸುವವರೆಗೂ ಸಿಕ್ಕಿರುವುದಿಲ್ಲ ಎನ್ನುವುದು ಈ ನಾಯಕರ ಹೆಮ್ಮೆ. ಇತ್ತೀಚಿನ ಸಂಪುಟ ಪುನಾರಚನೆಯಲ್ಲೂ ಅದೇ ಆಯಿತು. ವರದಿಗಾರರು, ಶಾ ಅವರಿಗೆ ಆಪ್ತರೆನಿಸಿದ್ದ ಪಕ್ಷದ ಕೆಲ ಹಿರಿಯ ಮುಖಂಡರನ್ನು ಸಂಪರ್ಕಿಸಿ, ಸಂಪುಟಕ್ಕೆ ಸೇರ್ಪಡೆಯಾಗುವ ಕೆಲ ಹೆಸರುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಆಗ ಅವರು ಮನಸಾರೆ ನಕ್ಕು, ‘‘ನನಗೂ ನಿಮ್ಮಂತೆ ಯಾವ ಸುಳಿವೂ ಇಲ್ಲ’’ ಎಂದು ಒಪ್ಪಿಕೊಂಡರು. ಇದರ ಜತೆಗೆ ರಹಸ್ಯವನ್ನು ಕಾಪಾಡುವುದು ಮೋದಿ- ಶಾ ನಾಯಕತ್ವದ ಹಾಲ್‌ಮಾರ್ಕ್ ಎಂದು ಬಣ್ಣಿಸಿದರು. ‘‘ಮಾಧ್ಯಮ ಹಾಗೂ ಪಕ್ಷದ ಕೆಲವರು ಉಭಯ ಗಣ್ಯರ ಯೋಜನೆಯನ್ನು ಮೊದಲೇ ತಿಳಿದುಕೊಂಡರೆ ಮೋದಿಜಿ ಹಾಗೂ ನನ್ನ ನಾಯಕತ್ವ ಅರ್ಥಹೀನವಾಗುತ್ತದೆ. ಆಘಾತ ಹಾಗೂ ವಿಸ್ಮಯ ನಮ್ಮ ನಾಯಕತ್ವದ ಅಗತ್ಯ ಮಾನದಂಡಗಳು’’ ಎಂದು ಅವರು ಹೇಳಿದರು.
ನಿರ್ಮಲಾ ಏಳಿಗೆ
ಸಂಪುಟ ಪುನಾರಚನೆ ಬಗೆಗಿನ ರಹಸ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತು ಎಂದರೆ, ಕೊನೇಕ್ಷಣದಲ್ಲಿ ನಿಬ್ಬೆರಗಾದವರು ನಿರ್ಮಲಾ ಸೀತಾರಾಮನ್. ವಾಣಿಜ್ಯ ಸಚಿವರಾಗಿ ಹೆಚ್ಚಿನ ಸಾಧನೆಯೇನೂ ಮಾಡದ ನಿರ್ಮಲಾ ಸೀತಾರಾಮನ್ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿಗಳಿಗೇನೂ ಕೊರತೆ ಇರಲಿಲ್ಲ. ಆದರೆ ಆಕೆಗೆ ರಕ್ಷಣಾ ಸಚಿವೆಯಾಗಿ ಭಡ್ತಿ ನೀಡುವ ವಿಚಾರ ಬೆಳಕಿಗೆ ಬಂದಾಗ, ಬಿಜೆಪಿ ಬೆಂಬಲಿಗರಿಗೆ ಅಚ್ಚರಿಯಿಂದ ಮಾತೇ ಹೊರಡಲಿಲ್ಲ. ಇತರ ಮುಖಂಡರಿಗೆ ಹೋಲಿಸಿದರೆ, ನಿರ್ಮಲಾ ಪಕ್ಷಕ್ಕೆ ಹೊಸ ಸೇರ್ಪಡೆ; ಆದರೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ, ಪ್ರಧಾನಿ, ಗೃಹಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು ಹಾಗೂ ವಿದೇಶಾಂಗ ಸಚಿವರನ್ನೊಳಗೊಂಡ ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ ಸೇರುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಆಕೆಯ ಕ್ಷಿಪ್ರ ಬೆಳವಣಿಗೆಯಿಂದ ಸಂತಸಪಡುವವರೆಂದರೆ ಚಂದ್ರಬಾಬು ನಾಯ್ಡು ಅವರಿಗೆ ಸಂವಹನ ಸಲಹೆಗಾರರಾಗಿರುವ ಡಾ.ಪರಕಳ ಪ್ರಭಾಕರ್. ಇಬ್ಬರೂ ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಅವಧಿಯಿಂದ ಪರಿಚಿತರು.
ವೀರಭದ್ರ ಬಂಡಾಯ
ಈ ವರ್ಷದ ಅಂತ್ಯಕ್ಕೆ ನಡೆಯುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಸಾಧ್ಯ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವೀರಭದ್ರ ಸಿಂಗ್, ಪಕ್ಷದ ಹೈಕಮಾಂಡ್‌ಗೆ ಆಘಾತ ನೀಡಿದ್ದಾರೆ. ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಪಡೆಯುವ ಸಲುವಾಗಿ ನಾಯಕತ್ವದ ಮೇಲೆ ಹೇರುತ್ತಿರುವ ಒತ್ತಡ ತಂತ್ರ ಇದು ಎನ್ನುವುದು ಪಕ್ಷದ ಕೆಲ ಮುಖಂಡರ ಅಂಬೋಣ. ಎಂಬತ್ತರ ಈ ಮುಖ್ಯಮಂತ್ರಿ, ಆನಂದ್ ಶರ್ಮಾ ಹಾಗೂ ಸುಖವೀಂದರ್ ಸಿಂಗ್ ಶುಖು ಅವರ ಹಸ್ತಕ್ಷೇಪದ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಶುಖು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ. ಶುಖು ಹಾಗೂ ಶರ್ಮಾ, ರಾಹುಲ್ ಹಾಗೂ ಸೋನಿಯಾಗೆ ಆಪ್ತರೆನಿಸಿಕೊಂಡವರು. ಈ ಬೆಟ್ಟರಾಜ್ಯದ ವ್ಯವಹಾರಗಳ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುಶೀಲ್‌ಕುಮಾರ್ ಶಿಂಧೆ ಅವರಿಗೆ ಇದರಿಂದ ಕಠಿಣ ಪರಿಸ್ಥಿತಿ ಎದುರಾದಂತಾಗಿದೆ. ಆದರೆ ಕಾಂಗ್ರೆಸ್ ಇಕ್ಕಟ್ಟಿನ ಸ್ಥಿತಿಯಲ್ಲಿದ್ದು, ವೀರಭದ್ರ ಸಿಂಗ್ ಪಕ್ಷಕ್ಕೆ ಹೊರೆಯಾಗುವ ಎಲ್ಲ ಸಾಧ್ಯತೆಯೂ ಇದೆ. ಆದರೆ ರಾಜ್ಯದಲ್ಲಿ ಅವರಿಗಿಂತ ಎತ್ತರದ ನಾಯಕರಿಲ್ಲ ಎಂಬ ವಾಸ್ತವದ ಅರಿವೂ ಪಕ್ಷಕ್ಕಿದೆ. ಆದ್ದರಿಂದ ಪಕ್ಷ ಅವರ ಮುಂದೆ ಮಂಡಿಯೂರಬಹುದು. ರಾಜಕೀಯ ಪಂಡಿತರ ಅಭಿಪ್ರಾಯದ ಪ್ರಕಾರ, ರಾಜ್ಯದಲ್ಲಿ ಪಕ್ಷಕ್ಕೆ ನಷ್ಟ ಖಚಿತ. ಅದರೆ ಪಕ್ಷಕ್ಕೆ ಅನ್ಯಮಾರ್ಗವಿಲ್ಲ.
ಹಿಮಾಚಲದಲ್ಲಿ ಧುಮಾಲ್ ಧಮಾಕಾ
ಬಿಸಿಸಿಐನ ಮಾಜಿ ಮುಖ್ಯಸ್ಥ ಹಾಗೂ ಬಿಜೆಪಿ ಮುಖಂಡ ಅನುರಾಗ್ ಠಾಕೂರ್ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಿಂಚಿನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ್ ಧುಮಾಲ್ ಅವರ ಪುತ್ರ. ಆದರೆ ಮೋದಿ ಇದರ ಪರವಾಗಿಲ್ಲ ಅಥವಾ ವಂಶಾಡಳಿತವನ್ನು ಪಕ್ಷದೊಳಗೆ ತರಲು ಉತ್ಸುಕರಾಗಿಲ್ಲ ಎನ್ನಲಾಗುತ್ತಿದೆ. ವಂಶಪಾರಂಪರ್ಯ ಆಡಳಿತವನ್ನು ಮೋದಿ ಬೆಂಬಲಿಸುತ್ತಿದ್ದಾರೆ ಎಂಬ ಆರೋಪ ಜನರಿಂದ ಬರುವುದು ಮೋದಿಗೆ ಬೇಕಿಲ್ಲ. ಉದಾಹರಣೆಗೆ, ಗೃಹಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಭಾರೀ ಅಂತರದಿಂದ ಜಯ ಸಾಧಿಸಿದರೂ, ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಜಯ ಸಾಧಿಸಿದರೆ, ಮುಖ್ಯಮಂತ್ರಿ ಗಾದಿಗೆ ತನ್ನನ್ನು ಕಡೆಗಣಿಸಲಾರರು ಎಂಬ ವಿಶ್ವಾಸ ಠಾಕೂರ್ ಅವರಲ್ಲಿದೆ. ಅವರ ಅತಿವಿಶ್ವಾಸಕ್ಕೆ ಕಾರಣವೆಂದರೆ ತಾನು ಸಮೂಹ ನಾಯಕ ಎಂಬ ಕಲ್ಪನೆ ಅವರಲ್ಲಿದೆ. ರಾಜ್ಯದಲ್ಲಿದ್ದುಕೊಂಡು, ಪ್ರತೀ ಜಿಲ್ಲೆಗೂ ತೆರಳಿ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ನಿರೀಕ್ಷೆಯಲ್ಲೇ ಇರಬಹುದು; ಕೇವಲ ಮೋದಿಯಷ್ಟೇ ನಿರ್ಧರಿಸಬಲ್ಲರು.