ಒಡೆದ ಬಣ್ಣದ ಚಿತ್ರಗಳು....
ಈ ಹೊತ್ತಿನ ಹೊತ್ತಿಗೆ
‘‘ನೆಲವನ್ನೆಲ್ಲ ಹರಡಿದ ಕರುಳಬಳ್ಳಿ
ಊರ ತುಂಬಾ ಗಾರೆ ಗಂಡಂದಿರು
ಕೇರಿಯಲೆಲ್ಲ ಕುಂತಿ ಮಕ್ಕಳು
ಭೇದ ಮಾಡದ ಬೀಗತಿಯಿವಳು
ಊರೆ ಅವಳೊಳಗೆ
ಅವಳು ಮಾತ್ರ ಊರ ಹೊರಗೆ!’’
ಈ ಸಶಕ್ತ ಸಮೃದ್ಧ ಸಾಲುಗಳು ಡಾ. ಮಹಾಂತೇಶ ಪಾಟೀಲ ಅವರ ‘ಒಡೆದ ಬಣ್ಣದ ಚಿತ್ರಗಳು’ ಕವನ ಸಂಕಲನಗಳಲ್ಲಿ ಯಥೇಚ್ಛವಾಗಿವೆ. ಮೇಲಿನ ಸಾಲುಗಳು ಅವ್ವನ ಖಾನಾವಳಿ ಕವಿತೆಯಿಂದ ಆರಿಸಿರುವುದು. ಈ ಸಂಕಲನದಲ್ಲಿರುವ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು. ಮರದ ಹಕ್ಕಿ ಕವಿತೆಯಲ್ಲಿ ಕವಿ ‘ಒಂದೇ ಒಂದು ಸಲ ಮರವಾಗಿದ್ದರೆ/ನಾವು ಮನುಷ್ಯರಾಗಬಹುದಿತ್ತು’ ಎನ್ನುವ ಸಾಲುಗಳ ಮೂಲಕ, ಮನುಷ್ಯ ಪ್ರಕೃತಿಯ ಮೂಲಕ ಕಲಿಯಬೇಕಾದ ಹೃದಯವಂತಿಕೆಯನ್ನು ನೆನಪಿಸುತ್ತಾರೆ.
‘‘....ಬೆವರಿನಲಿ ಬೆಳೆದೆಲ್ಲ ಬೆಳೆ
ಷೇರು ಪಾಲುದಾರರಿಗೆ ಕೊಟ್ಟು
ಬೀದಿ ಪಾಲಾಗಿ....
ಮಾರುಕಟ್ಟೆಯ ಬಾಗಿಲಲಿ
ಆಸೆಕಂಗಳಲಿ ಹುಡುಕಿ ಅಗೆಯುವನು ಅಪ್ಪ
ಕೋಳಿಯಂತೆ ಕಾಳು!’’ ಕವಿ ತನ್ನ ಕವಿತೆಗಳ ಪ್ರತೀ ಸಾಲಿನಲ್ಲೂ ಬದುಕಿನ ದುರ್ಬರತೆಯನ್ನು, ಹೃದಯವಂತಿಕೆಯನ್ನು ಜೀವಂತವಾಗಿ ಕಡೆದಿಡುತ್ತಾರೆ. ಕವಿಯ ಆಕ್ರೋಶ ಕಲೆಯ ರೂಪಪಡೆದು, ಅದು ನಮ್ಮೋಳಗೆ ನಾನಾ ಅರ್ಥಗಳ ಮೂಲಕ ವಿಸ್ತಾರವಾಗುತ್ತದೆ. ಕೈಯಿಂದ ಚಿಟ್ಟೆ ಹಾರಿಹೋದರೂ, ಅದರ ಬಣ್ಣ ಅಂಗೈಯಲ್ಲಿ ಉಳಿಯುವಂತೆ ಇಲ್ಲಿರುವ ಕವಿತೆಯ ಭಾವಗಳು ನಮ್ಮನ್ನು ಕಾಡುತ್ತವೆ. ಸುಮಾರು 50 ಕವಿತೆಗಳನ್ನೊಳಗೊಂಡ ಈ ಸಂಕಲನದ ಮೂಲಕ, ಪಾಟೀಲ್ ಕಾವ್ಯ ಲೋಕದಲ್ಲಿ ಗಟ್ಟಿಯಾಗಿ ಬೇರನ್ನು ಇಳಿಸಿದ್ದಾರೆ. ಇಲ್ಲಿರುವ ಬೆರಗು, ವ್ಯಗ್ರತೆ, ದಟ್ಟ ವಿವರಗಳನ್ನು ಹಿಡಿದು ಕವನ ಬಹುಕಾಲ ನಮ್ಮನ್ನು ಕಾಡುವಂತಹದು. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ.