ಅರಮನೆಯಲ್ಲಿ ಖಾಸಗಿ ದರ್ಬಾರ್‍ಗೆ ಭರದ ಸಿದ್ಧತೆ: ರತ್ನಖಚಿತ ಸಿಂಹಾಸನ ಜೋಡಣೆ ಪ್ರಕ್ರಿಯೆ ಸೆ.15ರಿಂದ ಆರಂಭ
ಮೈಸೂರು ದಸರಾ
ಮೈಸೂರು, ಸೆ.14: ಅರಸೊತ್ತಿಗೆ ಹೋಗಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಮೇಲೆಯೂ ಅರಸೊತ್ತಿಗೆ ಕಾಲದಲ್ಲಿ ನಡೆಯುತ್ತಿದ್ದ ದಸರಾ (ನವರಾತ್ರಿ) ನಾಡಹಬ್ಬವಾಗಿ ಪರಿವರ್ತನೆಗೊಂಡು 'ಜನರ ದಸರಾ' ಆಗಿದೆ. ಅಂದಿನ ಪರಂಪರೆ ಜೊತೆಗೆ ಆಧುನಿಕತೆಯ ಮೆರುಗು ನೀಡಿ ಸರಕಾರವೇ ದಸರಾ ಮಹೋತ್ಸವವನ್ನು ನಾಡಹಬ್ಬವಾಗಿ ಆಚರಿಸುತ್ತಿದೆ.
ರಾಜವಂಶಸ್ಥರು ಖಾಸಗಿಯಾಗಿ ಅರಮನೆಯಲ್ಲಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಇದರ ಪ್ರಮುಖ ಆಕರ್ಷಣೆಯಾದ ಹಾಗೂ ಐತಿಹಾಸಿಕ ಸಿಂಹಾಸನವನ್ನು ಭದ್ರತಾ ಕೊಠಡಿಯಿಂದ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಹೊರ ತೆಗೆದು ಅದನ್ನು ಜೋಡಿಸುವ ಕಾರ್ಯ ಆರಂಭಿಸಲಾಗುತ್ತದೆ. ಅದರಂತೆ ಈ ಬಾರಿ ಸೆ.15ರಂದು ಬೆಳಗ್ಗೆ ಸಿಂಹಾಸನ ಜೋಡಣೆ ಕಾರ್ಯ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿಗಣನೆ ಆರಂಭವಾಗಿದ್ದು, ಈ ಮಧ್ಯೆ ಅರಮನೆಯಲ್ಲಿ ಯದುವಂಶಸ್ಥರು ಖಾಸಗಿ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಾಡಹಬ್ಬದ ಜತೆಗೆ ಖಾಸಗಿ ದರ್ಬಾರ್ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ. ದಸರಾ ಸಂದರ್ಭದಲ್ಲಿ ಅಂಭಾವಿಲಾಸ ಅರಮನೆಯಲ್ಲಿ ರಾಜಾಡಳಿತದ ವೈಭವ ಮೇಳೈಸುತ್ತದೆ. ಆ ವೈಭವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಯದುವಂಶದ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಖಾಸಗಿ ದರ್ಬಾರ್‍ಗೆ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಂಪರೆಯ ಸಂಪ್ರದಾಯ ಮಂದುವರಿಸಲಿದ್ದು, ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಸೆ.15 ರಂದು ಬೆಳಿಗ್ಗೆ 7.45 ರಿಂದ 8.45 ನವಗ್ರಹ ಹೋಮ, 9.45 ರಿಂದ 10.15 ರವರೆಗೆ ಶಾಂತಿ ಪೂಜೆ ಬಳಿಕ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ರತ್ನ ಖಚಿತ ಸಿಂಹಾಸನವನ್ನು ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಜೋಡಿಸಿ ರಾಜವಂಶಸ್ಥರ ಖಾಸಗಿ ದರ್ಬಾರಿಗೆ ಬಳಸಲಾಗುವುದು. ನಂತರ ಸ್ವಲ್ಪ ದಿನದವರೆಗೆ ಸಾರ್ವಜನಿಕ ದರ್ಶನಕ್ಕೂ ಅವಕಾಶ ನೀಡಲಾಗುವುದು. ಕರಿಮರ, ದಂತ, ಚಿನ್ನ, ಬೆಳ್ಳಿ ಗಳಿಂದ ನಿರ್ಮಿಸಿರುವ ಸಿಂಹಾಸನಕ್ಕೆ ಬೆಲೆಬಾಳುವ ವಜ್ರ, ಮುತ್ತು, ರತ್ನಗಳನ್ನು ಅಳವಡಿಸಲಾಗಿದೆ. ಅನುವಂಶಿಕ ಸಿಂಹಾಸನವನ್ನು ರಾಜವಂಶಸ್ಥರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಮಹೋತ್ಸವದ ಸಂದರ್ಭ ನಡೆಯುವ ರಾಜ ಸಭೆಯ ಸಮಯದಲ್ಲಿ ಪೂಜೆ ಸಲ್ಲಿಸಿ ಆರೋಹಣ ಮಾಡುವರು. ಸಿಂಹಾಸನದ ಜೋಡಣೆ ಕಾರ್ಯವನ್ನು ಗೆಜ್ಜಗಳ್ಳಿ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ.