ಸೆ.18 ರಂದು “ಮಹಿಷ ದಸರಾ” ಆಚರಣೆ: ಶಾಂತರಾಜು
ಮೈಸೂರು,ಸೆ.14: ಮೂಲ ನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬವಾದ ಮಹಿಷ ದಸರಾದ ಪ್ರಯುಕ್ತ ಮೂಲ ನಿವಾಸಿ ಶೋಷಿತ ಕೇರಿಗಳಿಂದ ಸೆ.18 ರಂದು ಚಾಮುಂಡಿ ಬೆಟ್ಟಕ್ಕೆ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಅಂದೇ ಮಧ್ಯಾಹ್ನ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದಲಿತ ವೆಲ್ ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಮೈಸೂರು ಹಾಗೂ ಪ್ರಗತಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೂರನೆ ವರ್ಷದ ಮಹಿಷಾ ದಸರಾವನ್ನು ಸೆ.18 ರಂದು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ ಶೋಷಿತ ಕೇರಿಗಳಿಂದ ಆಗಮಿಸುವ ಬೈಕ್ ರ್ಯಾಲಿ ಹಾರ್ಡಿಂಜ್ ವೃತ್ತದಲ್ಲಿ ಸಮಾವೇಶ ಗೊಂಡು ಚಾಮುಂಡಿ ಬೆಟ್ಟ ತಲುಪಲಿದೆ. ನಂತರ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಮಹಿಷಾಸುರ ಮೈಸೂರಿನ ಪ್ರಥಮ ಮಹಾರಾಜ, ಆದರೆ ಕೆಲವು ವೈದಿಕ ಶಾಹಿಗಳು ಆತ ಒಬ್ಬ ರಾಕ್ಷಸ ಎಂದು ಬಿಂಬಿಸಿ ತಪ್ಪು ಕಲ್ಪನೆ ಮೂಡಿಸಿದ್ದಾರೆ. ಈತನ ಇರುವಿಕೆಯನ್ನು ಮರೆ ಮಾಚಲಾಗಿದೆ. ಅವನ ಮಹತ್ವವನ್ನು ಕಡೆಗಣಿಸಲಾಗಿದೆ. ಉದ್ದೇಶಪೂರ್ವಕವಾಗಿ ಉದಾಸೀನ ಮಾಡಲಾಗಿದೆ.ಯಾವ ಮಹಾಕಾವ್ಯವು ಇಂತಹ ಬೌದ್ಧ ಬಿಕ್ಕುವಿನ ಕುರಿತು ರಚನೆಯಾಗಿಲ್ಲ. ನೆಲದ ಅಸಮಾನತೆಯನ್ನು ವಿರೋಧಿಸುತ್ತಿದ್ದನು. ಎರಡು ಸಾವಿರ ವರ್ಷಗಳ ಹಿಂದೆಯೇ ಆತ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿದ ಮಹಾನ್ ವ್ಯಕ್ತಿ, ಇಲ್ಲಿ ದೇವರುಗಳಿಗೆ ಸವಾಲುಗಳನ್ನು ಎಸೆಯುತ್ತಿದ್ದನು, ಪುರೋಹಿತಶಾಹಿಯ ವೈದಿಕ ಪ್ರವೃತ್ತಿಯನ್ನು ಖಂಡಿಸುತ್ತಿದ್ದನ್ನು ಎಂದು ವಿವರಿಸಿದರು.
ಚಾಮುಂಡಿ ತಾಯಿಗೆ ಹೇಗೆ ಗೌರವ ಸಲ್ಲುತ್ತದೋ ಅದೇ ರೀತಿ ಮಹಿಷಾಸುರನಿಗು ಗೌರವ ಸಲ್ಲಬೇಕು. ಆತ ಒಬ್ಬ ದಕ್ಷ ಆಡಳಿತಗಾರ ಈತನಿಗೆ ಮೂಲ ನಿವಾಸಿಗಳಾದ ನಾವು ಹಿಂದಿನಿಂದಲೂ ಗೌರ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ದೊಡ್ಡಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಮೌಲ್ವಿಗಳು, ಕ್ರಿಶ್ಚಿಯನ್ ಧರ್ಮಗುರುಗಳು ಸೇರಿದಂತೆ ನಾಡಿನ ಶೋಷಿತ ಸಮುದಾಯದ ಹಲವಾರು ಪ್ರಮುಖರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಬನ್ನೂರು ಕೆ.ರಾಜು, ಸಿದ್ದಸ್ವಾಮಿ, ಕೆ.ಗೋವಿಂದರಾಜು, ಸುರೇಂದ್ರ ಉಪಸ್ಥಿತರಿದ್ದರು.