ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಮೈಸೂರು, ಸೆ.14: ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಳಿಗೆಗಳ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಒಟ್ಟು 37 ಸರ್ಕಾರಿ ಇಲಾಖೆ ಸ್ಟಾಲ್ ಗಳಲ್ಲಿ 33 ಕೆಲಸ ಆರಂಭಿಸಿದ್ದು, 4 ಇಲಾಖೆ ಇನ್ನೂ ಆರಂಭಿಸಿಲ್ಲ. ಆರಂಭ ಮಾಡದವರಿಗೆ ಇಂದು ನಾಳೆಯೊಳಗೆ ಆರಂಭಿಸಿ ಇಲ್ಲವಾದರೆ ರದ್ದುಗೊಳಿಸಿ ಎಂದರು.
21 ರೊಳಗೆ ಎಲ್ಲಾ ತಯಾರಿ ಮುಗಿಸಿರಬೇಕು. ಎಲ್ಲ ಕೆಲಸ ಮುಗಿದ ನಂತರವಷ್ಟೇ ಉದ್ಘಾಟನೆಗೆ ಆಹ್ವಾನಿಸಿ ಇಲ್ಲದಿದ್ದರೆ ಬರಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದೇವೆ. 21ರೊಳಗೆ ಬಹುತೇಕ ಎಲ್ಲ ಕೆಲಸ ಮುಗಿಯಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಎಲ್ಲವನ್ನೂ ಸೆ.21ಕ್ಕೆ ತೆರೆಯುವಂತೆ ಸಿದ್ಧತೆ ಮಾಡಿಕೊಳ್ಳಲು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದ ಇಲಾಖೆಗಳು 13 ಮಳಿಗೆ ತೆರಯಲಿದ್ದು, 11ಪ್ರಗತಿಯಲ್ಲಿದೆ. ಎರಡು ಆರಂಭವಾಗಿಲ್ಲ. ಕೇಂದ್ರ ಸರ್ಕಾರದ ಇಲಾಖೆಗಳು 3ಮಳಿಗೆ ತೆರೆಯಲಿದ್ದು, 2 ಪ್ರಗತಿಯಲ್ಲಿದೆ, 1ಆರಂಭವಾಗಿಲ್ಲ. ನಿಗಮ ಮಂಡಳಿಯ 5 ಮಳಿಗೆಗಳಲ್ಲಿ 3ಪ್ರಗತಿಯಲ್ಲಿದೆ ಎರಡು ಆರಂಭವಾಗಿಲ್ಲ. ಜಿಲ್ಲಾ ಪಂಚಾಯತ್ ನ 5 ಮಳಿಗೆಗಳಲ್ಲಿ 3ಪ್ರಗತಿಯಲ್ಲಿದ್ದು, 2ಆರಂಭವಾಗಿಲ್ಲ ಎಂದರು.
ತಕ್ಷಣ ಉಳಿದ ಎಲ್ಲಾ ಇಲಾಖೆಗಳ ಮಳಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ನೀಡಿರುವ ಅನುಮತಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ಪ್ರವಾಸಿಗರ ಅನುಕೂಲಕ್ಕಾಗಿ ಸಬ್ ವೇ ಸ್ಥಿತಿಗತಿ ಪರಿವೀಕ್ಷಿಸಿದರು ಮತ್ತು ಮಹಾನಗರ ಪಾಲಿಕೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ದುರಸ್ಥಿ ಕಾಮಗಾರಿ ಕೈಗೊಂಡು, ಬೆಳಕಿನ ವ್ಯವಸ್ಥೆ ಮಾಡಿ ಮತ್ತು ಭದ್ರತೆಗಾಗಿ ಸಿಸಿ.ಕ್ಯಾಮರಾ ಅಳವಡಿಸಲು ಸೂಚನೆ ನೀಡಿದರು.
ಅರಮನೆ ಮತ್ತು ವಸ್ತುಪ್ರದರ್ಶನದ ನಡುವೆ ಸಂಪರ್ಕ ಕಲ್ಪಿಸುವ ಈ ಸಬ್-ವೇ ಪ್ರವಾಸಿಗರಿಗೆ ದಸರಾ ವೇಳೆಗೆ ಸೇವೆನೀಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಸಿಇಒ ಶಶಿಕುಮಾರ್, ಎಇಇ ಸಿಂಧು, ಪ್ರವಾಸೋಧ್ಯಮ ಇಲಾಖೆಯ ಜನಾರ್ಧನ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಮಹೇಶ್ ಸೇರಿದಂತೆ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆಯಲ್ಲಿದ್ದರು.