ಸೆ.18 ರಂದು ಮಹಿಷಾ ದಸರಾ: ಹರಿಹರ ಆನಂದಸ್ವಾಮಿ
ಮೈಸೂರು,ಸೆ.15: ದ್ರಾವಿಡ ಸಂಸ್ಕೃತಿ ಪುನರ್ ಪ್ರತಿಷ್ಠಾಪನೆ ನಿಟ್ಟಿನಲ್ಲಿ ಮಹಿಷಾ ದಸರಾವನ್ನು ಸೆ.18ರಂದು ಆಯೋಜಿಸಲಾಗಿದೆ ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮನ್ವಯ ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಲ ನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬ ಮಹಿಷ ದಸರಾ ನಿಮಿತ್ತ ಅಂದು ಮಧ್ಯಾಹ್ನ 12ಕ್ಕೆ ಮೂಲನಿವಾಸಿ ಶೋಷಿತ ಕೇರಿಗಳಿಂದ ಚಾಮುಂಡಿ ಬೆಟ್ಟಕ್ಕೆ ಬೈಕ್ ರ್ಯಾಲಿಯನ್ನು ಆಯೋಜಿಸಿದ್ದು, ಬೆಟ್ಟದಲ್ಲಿ ಶೂದ್ರ ಇತಿಹಾಸಕಾರರ ಬೃಹತ್ ಸಭೆ ನಡೆಯುವುದು ಎಂದು ಹೇಳಿದರು.
ಶೋಷಿತ ಸಮೂಹಗಳಲ್ಲಿ ಸ್ವಾಭಿಮಾನ ತಂಡುಕೊಡುವಲ್ಲಿ ಈ ಹಬ್ಬವನ್ನು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆಸಲಾಗಿದ್ದು, ಅಂದು ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಹಿರಂಗ ಸಭೆಗೆ ಚಾಲನೆ ನೀಡಲಾಗುವುದು. ತಪ್ಪು ಗ್ರಹಿಕೆಯಿಂದ ಶೂದ್ರ ಶೂದ್ರರ ವಿರುದ್ಧವೇ ಎತ್ತಿಕಟ್ಟುವ ಕುತಂತ್ರಗಳು ನಡೆಯುತ್ತಿವೆ. ಜತೆಗೆ ಆಹಾರ ಪದ್ಧತಿ ಸಂಸ್ಕೃತಿ ಮೇಲೂ ದಬ್ಬಾಳಿಕೆ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಯ್ಯ ಮಲೆಯೂರು, ಶಂಭುಲಿಂಗಸ್ವಾಮಿ, ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್,ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ ಉಪಸ್ಥಿತರಿದ್ದರು.