varthabharthi


ತಾರಸಿ ನೋಟ

ಹತಾಶೆಗಿಲ್ಲಿ ತಾವಿಲ್ಲ...

ವಾರ್ತಾ ಭಾರತಿ : 16 Sep, 2017
ವೆಂಕಟಲಕ್ಷ್ಮೀ ವಿ.ಎನ್.

ನಮ್ಮ ಬೀದಿಯಲ್ಲಿ ದೇವರು ಮೈಮೇಲೆ ಬರುವವರ ಮನೆ ಇದ್ದುದು ಚಿಕ್ಕಂದಿನ ನೆನಪು. ಪ್ರತೀ ಶುಕ್ರವಾರ ರಾತ್ರಿ ಎಂಟೊಂಬತ್ತು ಗಂಟೆ ವೇಳೆಗೆ ಅಲ್ಲಿಗೆ ಹೋದರೆ, ಸಣ್ಣ ಪುಟ್ಟ ಚರಪು ಗ್ಯಾರಂಟಿಯಾಗಿ ದೊರೆಯುತ್ತಿದ್ದುದ್ದರಿಂದ, ಓಣಿಯ ಹತ್ತು ಹನ್ನೆರಡು ಮಕ್ಕಳಲ್ಲಿ ಕೆಲವರಾದರೂ ಹಾಜರಿ ಹಾಕುತ್ತಿದ್ದೆವು. ಹಾಡು-ನೃತ್ಯಗಳಿಂದ ಕಾವೇರಿದ ವಾತಾವರಣ ಎಳೆ ಮನಸ್ಸುಗಳಲ್ಲಿ ಅಚ್ಚೊತ್ತುವಷ್ಟು ಪ್ರಭಾವಶಾಲಿಯಾಗಿತ್ತು; ಧೂಪ-ದೀಪ-ಆರತಿ-ಅಗರಬತ್ತಿ ಹೊಗೆ, ಪರಿಮಳ ಸೇರಿ ಭ್ರಮಾತ್ಮಕ ಹಾಗೂ ನಾಟಕೀಯವೂ.

ಆಧ್ಯಾತ್ಮಿಕ ಸಾಧಕರು, ಗುರುಗಳು ಸಹ ಹೀಗೆ ದೈವತ್ವಕ್ಕೆ ಎಳಸುತ್ತಾರೆ. ಆದರೆ ಅದು ಬೇರೆ ಬಗೆಯದು. ನಮ್ಮ ನಿಮ್ಮಂತೆಯೇ ಇರುವ ಸಾಮಾನ್ಯರು ಹಾಗೆ ಮಾಡುವುದನ್ನು ಮನೋವಿಜ್ಞಾನ, ಗ್ರ್ಯಾಂಡಿಯೋಸ್ ಡೆಲ್ಯೂಷನ್- ವೈಭವೋಪೇತ ವಿಭ್ರಮೆ ಎಂದು ಹೆಸರಿಸಿ ವಿವರಿಸಲು ಯತ್ನಿಸುತ್ತದೆ. ಸುತ್ತಲಿನ ವಾಸ್ತವಕ್ಕೆ ಹೊಂದಿಕೊಳ್ಳಲಾಗದೆ, ಕುಸಿಯುತ್ತಿರುವ ಆತ್ಮಸಮ್ಮಾನ ಎತ್ತಿಹಿಡಿಯಲು ಮತ್ತು ಅನೇಕ ಮನೋಬೇನೆಗಳ ಅಂಗವಾಗಿ ಸಹ ಮನುಷ್ಯ ಮನಸ್ಸು ಅಂಥ ಗಾಡ್‌ಕಾಂಪ್ಲೆಕ್ಸ್‌ಗೆ ಒಳಗಾಗುತ್ತದೆ ಎಂಬುದು ಮನೋವೈದ್ಯರ ಅಂಬೋಣ. ಆದರೆ, ವಿಷಯ ಅದಲ್ಲ.

ಹತ್ಯೆ-ಹಗರಣ, ಆರ್ಥಿಕ ಕುಸಿತ, ಮತೀಯ ಗಲಭೆ, ಪ್ರಭುತ್ವದ ನಿರ್ದೇಶನ, ಆಡಳಿತದ ಸಂಚುಗಾರಿಕೆ ಹೀಗೆ ರಭಸವಾಗಿ ಚಲಿಸುತ್ತಿರುವ, ಕಣ್ಣು, ಕಿವಿ, ಮೂಗು, ಬಾಯಿಗಳಿಂದ ನಾವು ಒಳಗೆ ಇಳಿಸುವ ವಾಸ್ತವವಷ್ಟೇ ಸತ್ಯ ಅದರ ಆಚೆ ಇನ್ನೇನೂ ಇಲ್ಲ ಎಂಬ ಗ್ರಹಿಕೆಗೆ ಇಂಥವುಗಳಿಂದ ಒದಗುವ ಪ್ರಶ್ನಾರ್ಥಕ ಚಿಹ್ನೆ. ಬಹುತೇಕ ಎಲ್ಲರ ಅನುಭವಕ್ಕೆ ಬರುವ ಅಂತರ್ಬೋಧೆ-ಇನ್‌ಟ್ಯೂಷನ್‌ನಿಂದಲೇ ಪ್ರಾರಂಭಿಸಬಹುದು. ಪಂಚೇಂದ್ರಿಯಗಳನ್ನು ಮೀರಿದ ಕರುಳ ಭಾವ-ಗಟ್ ಫೀಲಿಂಗ್ ಎಂದೂ ಅದಕ್ಕೆ ಹೆಸರು.ಒಂದು ಟೆಲಿಫೋನ್ ಕರೆ, ಅಪರಿಚಿತರೊಡನೆ ಅಚಾನಕ್ ಭೇಟಿ, ಗತದ ಖಾನೆಷುಮಾರಿಗಳಲ್ಲಿ ಕೂತಿರುವ ವ್ಯಕ್ತಿಗಳನ್ನು ಅಕಸ್ಮಾತ್‌ ಸಂಧಿಸುವುದು, ಬೆರಳಿಟ್ಟು ತೋರಿಸಿದಂತೆ ಸಂಬಂಧಪಟ್ಟ ಪುಸ್ತಕ, ಮಾಹಿತಿ ದೊರಕುವುದು, ಕನಸು ಕರೆತರುವ ಪರಿಹಾರ...ಅನೇಕ ಸಂಕಷ್ಟದ ಸಂದರ್ಭಗಳು ಹೀಗೆ ಕರಗಿಹೋಗುವುದು ಅಂತರ್ಬೋಧೆಯ ಒಂದು ವಿಧ.

ಕೊಟ್ಟಕೊನೆಯ ಬಿಂದು ಬಿದ್ದಾಗಲೇ ಬಿಳಿ ದ್ರಾವಣ ನೇರಳೆ ಬಣ್ಣ ತಳೆವ ಹಾಗೆ ಒಂದು ಗೊತ್ತಾದ ಕ್ಷಣ ಆಪ್ತರ ಕುರಿತು, ಮುಂದಿರುವ ಕಷ್ಟದ ಕುರಿತು ಹೊಸತೊಂದು ಒಳನೋಟ ಮೂಡುವುದು, ನಮ್ಮ ವಿರುದ್ಧ ಬಿಗಿದು ಕಟ್ಟಿದ್ದ ಪಿತೂರಿಯ ಎಳೆಗಳು ಸಡಿಲಾಗಿ ಒಮ್ಮೆಲೆ ಕಳಚಿ ಜೋಲುವುದರ ಹಿಂದೆಯೂ ಅದರದ್ದೇ ಭಾಷಾತೀತ ಅರಿವು ಕೆಲಸ ಮಾಡುತ್ತದೆ. ಅಂತರ್ಬೋಧೆ ನಿಲುಗಡೆಗೊಳಿಸಿದ ಪ್ರಯಾಣದಿಂದ ಭಯಂಕರ ಅಪಘಾತ, ಬಾಂಬ್ ಸ್ಫೋಟ ತಪ್ಪಿಸಿಕೊಂಡವರಿಗಂತೂ ಅದೊಂದು ಜೀವನಪೂರ್ತಿ ಮರೆಯಲಾಗದ ಅನುಭೂತಿ. ಕಠಿಣವೆನಿಸಿದ ಆಯ್ಕೆಯನ್ನು ಸುರಳೀತಗೊಳಿಸುವ, ಬಂಡೆಯಂತೆ ಬಂದ ಕಷ್ಟವನ್ನು ಹೂ ಸರಎತ್ತಿದಂತೆ ನಿವಾರಿಸಿಕೊಳ್ಳಲು ಬಿಡುವ ಈ ತೋಚುವಿಕೆಗೆ ಸಕಲರೂ ಶರಣಾಗತ.

ವಿಶ್ವಚೇತನ ನಮ್ಮಂದಿಗೆ ಹೀಗೆ ಸಂವಹನ ಮಾಡುತ್ತದೆ; ನಮ್ಮ ಸೂಕ್ಷ್ಮತೆಯನ್ನು ಅದಕ್ಕಾಗಿ ಸದಾಕಾಲ ಚೂಪುಗೊಳಿಸಿಕೊಂಡಿರಬೇಕು. ತನ್ನ ನಿರ್ದೇಶನಗಳಿಗೆ ಮನುಷ್ಯರನ್ನು ವಾಹಕವಾಗಿ ಮಾಡಿಕೊಳ್ಳುವ ಅನಿವಾರ್ಯ ಅದಕ್ಕೂ ಇರುವುದರಿಂದ ಅಂತರ್ಬೋಧೆ ಯಾವಾಗಲೂ ಒಳಿತನ್ನೇ ತರುತ್ತದೆ ಎಂದು ಈ ವಿಷಯ ಪರಿಣತರ ಪ್ರತಿಪಾದನೆ. ಅದನ್ನು ಪಾಲಿಸಿದಾಗ ಬರುವ ಪೂರ್ಣ, ಕ್ಷೇಮಕರ ಮತ್ತು ತೃಪ್ತ ಭಾವನೆ ಸಹ ಒಂದು ರುಜುವಾತು. ಆದರೆ ಶುದ್ಧ ಭಾವಗಳನ್ನು ಭ್ರಷ್ಟಗೊಳಿಸುವ ಕುಟಿಲವೂ ಮನುಷ್ಯಮನಸ್ಸಿಗೆ ಇರುವುದರಿಂದ, ಯಾವಾಗ ಅದು ಇನ್‌ಟ್ಯೂಷನ್ ಆಗಿರುತ್ತದೆ ಹಾಗೂ ಯಾವಾಗ ಅಹಂನ ಠೇಂಕಾರ, ಸುಪ್ತ ಬಯಕೆಯ ಪೂರೈಕೆಗಾಗಿ ಮೂಡಿರುತ್ತದೆ ಎಂದು ವಿಂಗಡಿಸಿಕೊಳ್ಳುವುದೂ ಬೇಕು ಎಂದವರು ಎಚ್ಚರಿಸುತ್ತಾರೆ. ಉದಾಹರಣೆಗೆ, ‘‘ನನ್ನ ಮುಖದಲ್ಲಿ ಏನೋ ದೈವೀಕಳೆ ಇದೆ ಎಂದು ಎಲ್ಲರೂ ಹೇಳುತ್ತಾರೆ; ಬೆಳಗಾಗೆದ್ದು ನನ್ನ ಮುಖ ನೋಡಬಯಸುತ್ತಾರೆ. ನನ್ನ ಬಾಯಲ್ಲಿ ಬಂದದ್ದು ನಿಜವಾಗುತ್ತದೆ’’ ಎಂಬ ಭ್ರಮೆಯಲ್ಲಿರುವುದು.

‘‘ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರೋ/ ಸತ್ಯವ ನುಡಿವುದೇ ದೇವಲೋಕ ಮಿಥ್ಯವ ನುಡಿವುದೋ ಮರ್ತ್ಯಲೋಕ/ ಆಚಾರವೇ ಸ್ವರ್ಗ ಅನಾಚಾರವೇ ನರಕ..’’ ಎಂಬ ಬಸವಣ್ಣನ ಉಕ್ತಿ ಎಲ್ಲರಲ್ಲಿಯೂ ಇರುವ ದೇವತ್ವವನ್ನು ವಿಚಾರಶೀಲವಾಗಿ ಸೂಚಿಸುತ್ತದೆಯಾದರೆ, ಮೆನ್ ಹ್ಯಾವ್ ಫೀಟ್‌ಆಫ್‌ಕ್ಲೇ ಅಂದರೆ, ಮೂಲಭೂತವಾಗಿ ತನ್ನಲ್ಲಿರುವ ದೋಷ, ದೌರ್ಬಲ್ಯಗಳ ಕಾರಣ ಮನುಷ್ಯ, ದೇವರಾಗಲಾರ ಎಂಬುದು ಬೈಬಲ್ ಸೂಕ್ತ. ಇವೆರಡರ ಮಧ್ಯೆ ನಮ್ಮೆಳಗಿರುವ ದೈವತ್ವದ ಪೋಷಣೆ, ಅಭಿವ್ಯಕ್ತಿ ನಡೆಯುತ್ತಿರುತ್ತದೆ. ಅತ್ತ ಸ್ವಲ್ಪಗಮನ ಕೇಂದ್ರೀಕರಿಸಿದರೆ ಸಾಕು, ಹೊರಜಗತ್ತು ಇಂದ್ರಿಯಗಳ ಮೂಲಕ ನಮಗೆ ದಾಟಿಸುವ ಕ್ಷೋಭೆಯುಕ್ತ, ದ್ವೇಷ-ದಳ್ಳುರಿಗಳ ವಾಸ್ತವದ ಬಿಸಿ ತುಸುತಣಿಯಬಹುದು. ಇನ್ನೂ ಮುಂದುವರಿದರೆ ಈ ಆತ್ಮಬಲದಿಂದ ನಮಗೆ ಬೇಕಾದ ಹಾಗೆ ಅದನ್ನು ಬದಲಿಸಲೂ ಬಹುದು ಎಂಬುದು ಆಶೆ ಹುಟ್ಟಿಸುವ ವಿಚಾರ.

ಬರಬರುತ್ತ ಢಾಳಾಗಿ ರಾಚುವ ಭೌತಿಕ ಜಗತ್ತೇ ಗೌಣವಾಗಿ, ಅದನ್ನು ಕುರಿತ ನಮ್ಮ ಆತಂಕ-ನಿರೀಕ್ಷೆಗಳ ಸೊಲ್ಲಡಗಿ, ಆಂತರ್ಯದಿಂದ ಉಕ್ಕುವ ಶಾಂತಿ-ಸಮಾಧಾನಗಳೇ ಮುನ್ನೆಲೆಗೆ ಬರುತ್ತದೆ. ದೇವರೆನ್ನಿ, ಆತ್ಮ ಎನ್ನಿ, ಕಾಣದ ಕೈ-ಕಾಸ್ಮಿಕ್ ಚೈತನ್ಯ-ಬೇಕಾದ ಹೆಸರಿಟ್ಟು ಕರೆಯಿರಿ ಅದರೊಂದಿಗೆ ಬಾಂಧವ್ಯ ವೃದ್ಧಿ ನಿಮ್ಮದೇ ಹೊಣೆ: ಕುರೂಪವನ್ನು ಸುರೂಪವಾಗಿತೋರುವುದು, ಸುಮ್ಮನೇ ಉಕ್ಕುವ ಪ್ರಸನ್ನ ಭಾವ, ಚೇತನ ಅದರದೇ ಬಳುವಳಿ. ಒಮ್ಮೆ ಬರಮಾಡಿಕೊಂಡು ಮುಗಿಸುವಂತಹದ್ದಲ್ಲ ಇದು, ಸಂಘರ್ಷಮಯ ಜೀವನದ ಉದ್ದಕ್ಕೂ ಅದರೊಂದಿಗೆ ಬಗೆಬಗೆಯಾಗಿ, ವೈವಿಧ್ಯಮಯವಾಗಿ ಅನುಸಂಧಾನ ನಡೆದಿರಬೇಕು. ಅದರ ನೂರೆಂಟು ಬಣ್ಣ, ಆಕೃತಿ, ನಾದಗಳಿಗೆ ಮನಸ್ಸು ತೆರೆದಿಟ್ಟುಕೊಂಡಿರಬೇಕು. ಒಮ್ಮೆ ಇದು ಅಭ್ಯಾಸವಾದರೆ ಸರಿ, ಸುತ್ತಮುತ್ತಲಿನ ಇತರರೂ ನಮ್ಮದೇ ತದ್ರೂಪಿಗಳಂತೆ ಕಾಣುತ್ತಾರೆ..ಇಂತಹ ಚಮತ್ಕಾರಿಕ ವಿವರಣೆಯೆಲ್ಲ ಆಧ್ಯಾತ್ಮಿಕ ಚಿಂತಕರ ಭಾಷಣಗಳಲ್ಲಿ ಕೇಳಿಸಿ, ಮಣ್ಣಿನ ಕಣ್ಣನು ಸೆಳೆಯುತ್ತವೆ.

‘‘ಪ್ರಪಂಚ ಕೆಟ್ಟ ಜಾಗ ಎಂದು ನಾನು ಭಾವಿಸುವುದು ಅಲ್ಲಿರುವ ದುಷ್ಟ ಜನರಿಂದಾಗಿ ಅಲ್ಲ; ಬದಲಾಗಿ ಕೆಡುಕಿನ ಬಗ್ಗೆ ಏನೂ ಮಾಡದ ಜನರಿಂದಾಗಿ’’ ಎಂಬುದು ಐನ್‌ಸ್ಟೈನ್ ನುಡಿ. ಕಳೆದ ವಾರದಿಂದ, ಹಲವು ವಾರಗಳಿಂದ ನಡೆಯುತ್ತಿರುವ ಭೀಕರ ವಿದ್ಯಮಾನಗಳನ್ನು ಒಂದು ವ್ಯಾಪಕ ಹಿನ್ನೆಲೆಯಲ್ಲಿ ನೋಡಿದಾಗ ಅವರ ಮಾತುಗಳಲ್ಲಿ ಅನುರಣಿಸುತ್ತಿರುವ ತತ್ತ್ವದ ಪರಿಚಯವಾದೀತು. ನಮ್ಮನ್ನು ದಿಗ್ಭೂಢರಾಗಿಸುವ ಘಟನೆಗಳ ಒಂದು ಸ್ವಾಭಾವಿಕತೆ ಅರಿವಿಗೆ ಬಂದೀತು. ತೀಕ್ಷ್ಣ ಭಾಷೆಯ ಅವರ ಕೆಲವು ಗ್ರಹಿಕೆಗಳನ್ನು ಪೋಣಿಸಿದರೆ ನಮ್ಮ ಸುತ್ತಲಿನ ಅನೇಕ ವ್ಯಾಪಾರಗಳು ಸ್ಫಟಿಕ ಸ್ಪಷ್ಟ:

“Great spirits have always encountered violent opposition from mediocre minds. Not everything that can be counted counts, and not ever thing that counts can be counted. Few people are capable of expressing with equanimity opinions which differ from the prejudices of their social environment. Most people are even incapable of forming such opinions.”

ಮಹಾನ್ ಚೇತನಗಳು, ಸದಾಕಾಲ, ಸಾಧಾರಣ ಮನಸ್ಸುಗಳಿಂದ ಹಿಂಸಾತ್ಮಕ ವಿರೋಧ ಎದುರಿಸಿವೆ. ಎಣಿಕೆಯಲ್ಲಿ ಹೆಚ್ಚಿದ್ದವೆಲ್ಲ ಗಣಿಸಲು ಬರುವಂತಹವು ಹಾಗೂ ಗಣಿಸಲೇ ಬೇಕಾದಂತಹವು ಎಣಿಕೆಗೆ ಸಿಗುತ್ತವೆ ಎಂದೇನಿಲ್ಲ. ಕೆಲವರಿಗೆ ಮಾತ್ರ ತಮ್ಮ ಸುತ್ತ ಇರುವ ಸಾಮಾಜಿಕ ಪೂರ್ವಗ್ರಹ ಮೀರಿ ವಿರೋಧಿ ಅಭಿಪ್ರಾಯಗಳನ್ನು ಸಮಾಧಾನಚಿತ್ತದಿಂದ ವ್ಯಕ್ತಪಡಿಸುವ ಸಾಮರ್ಥ್ಯ ಇರುತ್ತದೆ; ಬಹಳಷ್ಟು ಜನ ಹಾಗೆ ಯೋಚಿಸಲೂ ಬಾರದವರು!

ಆರಂಭದಲ್ಲಿ ಪ್ರಸ್ತಾಪಿಸಿದ ದೈವತ್ವ, ಒಳಗಿನ ಚೇತನ ಮುಂತಾದವು ಗಳ ಕುರಿತು ಸಹ ಈ ವಿಜ್ಞಾನಿಯದು ಎದೆಗೆ ನಾಟುವ ಕರಾರುವಾಕ್ಕು ಮಾತುಗಳು. ಅವರು ಹೇಳುತ್ತಾರೆ, ‘‘ನಾವು ವಿಶ್ವ ಎಂದು ಕರೆಯುವ ಅಖಂಡದ ಒಂದು ಭಾಗ-ಕಾಲದೇಶಗಳಲ್ಲಿ ಮಿತಿಗೊಂಡ ಭಾಗ- ಮನುಷ್ಯ. ಕೋಶಗಳಂತೆ, ಅನ್ಯರಿಂದ ಸಂಪರ್ಕ ರಹಿತವಾಗಿ ಇದ್ದುಕೊಂಡು ನಾವು ಹಾಗೂ ನಮ್ಮ ಬಂಧುಗಳು ಬೇರೆ ಎಂಬ ಭ್ರಮೆಯಲ್ಲಿ ಇರುತ್ತೇವೆ. ನಮ್ಮ ಯೋಚನೆ, ಭಾವನೆಗಳು ಪ್ರತ್ಯೇಕ ಅಂದುಕೊಳ್ಳುತ್ತೇವೆ. ಇದು ಪ್ರಜ್ಞೆಯ ಒಂದು ದೃಷ್ಟಿ ಭ್ರಮೆಯೇ ಸರಿ. ವೈಯಕ್ತಿಕ ಬಯಕೆ, ಹತ್ತಿರದ ಸಂಬಂಧಿಗಳ ವಿಶ್ವಾಸ ಇವಷ್ಟಕ್ಕೇ ನಮ್ಮನ್ನು ಸೀಮಿತಗೊಳಿಸುವ ಈ ಭ್ರಮಾತ್ಮಕತೆ ಒಂದು ಬಂಧನ. ನಮ್ಮ ವೃತ್ತಗಳನ್ನು ವಿಸ್ತರಿಸಿಕೊಳ್ಳುವತ್ತ ಕ್ರಿಯಾಶೀಲರಾಗುವುದೇ ಮುಂದಿರುವ ಗುರಿ. ಒಂದರೊಳಗೊಂದು ಕೂಡಿಕೊಳ್ಳುವ ಕರುಣೆಯ ವರ್ತುಲ ಸಹಮಾನವರನ್ನು, ಇನ್ನಿತರ ಜೀವಿಗಳನ್ನು, ಅಂತಿಮವಾಗಿ ಇಡೀ ಸೃಷ್ಟಿಯನ್ನು, ಅದರೆಲ್ಲ ಚಂದದೊಂದಿಗೆ ತಬ್ಬುವಷ್ಟು ವಿಶಾಲವಾಗಬೇಕು. ಪ್ರಪಂಚದಲ್ಲಿ ಮನುಷ್ಯ ಸಂತತಿ ಉಳಿಯಬೇಕಾದರೆ, ಹೊಸತೊಂದು ಆಲೋಚನಾ ವಿಧಾನವನ್ನೇ ನಾವು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ.’’

''ನಾನು ಗೌರಿ'' ಅಂದರೆ ಅದೇ.

ಮತ್ತೊಂದು ವಿಷಯವೆಂದರೆ, ಹತಾಶೆಗೆ ಇಲ್ಲಿ ತಾವಿಲ್ಲ. ಏಕೆಂದರೆ ಆ ಮಹಾನ್‌ ಚಿಂತಕನೇ ಹೇಳಿರುವಂತೆ, “we cannot despair of humanity since we ourselves are human beings”.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)