ಭಾರತದ ರಾಜನೀತಿ ಮತ್ತು ಪ್ರಜಾಧರ್ಮ
ರೊಹಿಂಗ್ಯಾ ನಿರಾಶ್ರಿತರು

ಬಡರಾಷ್ಟ್ರಗಳಲ್ಲಿ ಒಂದಾದ ಬಾಂಗ್ಲಾ ದೇಶಕ್ಕಿರುವ ಮಾನವೀಯತೆಯ ಗುಣ ಭಾರತಕ್ಕೆ ಇಲ್ಲವಾಗಿರುವುದಕ್ಕೆ ಮೋದಿ ನೇತೃತ್ವದ ಬಿಜೆಪಿಯ ಸಿದ್ಧಾಂತಗಳೇ ಮೂಲಕಾರಣ. ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾ ಮುಸ್ಲಿಮರನ್ನು ಜನಾಂಗೀಯ ಹತ್ಯೆ ಮಾಡುತ್ತಿದ್ದರೆ ಮೋದಿ ಸರಕಾರವು ಸುಮಾರು 40,000 ರೊಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಗಡಿಪಾರು ಮಾಡಿದೆ. ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಕಳೆದ ಎರಡು ವಾರಗಳಲ್ಲಿ ಸುಮಾರು 3 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಭಾರತದ ಈ ಜೀವವಿರೋಧಿ ನಿಲುವು ನಮ್ಮ ದೇಶದ ವಿದೇಶಾಂಗ ನೀತಿಗೆ ಒಂದು ಕಪ್ಪುಚುಕ್ಕೆಯಾಗಿದ್ದರೆ ಬಾಂಗ್ಲಾ ದೇಶದೊಳಗಡೆ ಭಾರತದ ವಿರುದ್ಧ ಅಸಹನೆ, ಪ್ರತಿಭಟನೆ ವ್ಯಕ್ತವಾಗುತ್ತಿದೆ.
1991ರಲ್ಲಿ ಆನ್ ಸನ್ ಸೂಕಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆತಾಗ ಅವರು ತಮ್ಮ ದೇಶ ಮನ್ಮಾರ್ನಲ್ಲಿ ಗೃಹಬಂಧನದಲ್ಲಿದ್ದರು. ಸೂಕಿ ಅವರಿಗೆ ಪ್ರಶಸ್ತಿ ನೀಡಿದ ನೊಬೆಲ್ ಕಮಿಟಿಯು ತನ್ನ ಆಯ್ಕೆಯನ್ನು ಕುರಿತು ‘‘ಇತರ ಜಗತ್ತಿ ನೊಂದಿಗೆ ಸಂಪರ್ಕವಿಲ್ಲದ ಬರ್ಮಾದ ಶೋಷಿತರು ವಿಶ್ವದ ಒಂದು ಭಾಗ ಅವರು ಮಾನವೀಯತೆಯಲ್ಲಿ ಒಂದಾಗಿರುತ್ತಾರೆ’’ ಎಂದು ಹೇಳಿತ್ತು. ಪ್ರಶಸ್ತಿ ಸ್ವೀಕರಿಸಿದ ಆನ್ ಸನ್ ಸೂಕಿ ಅವರು ‘‘ಈ ಪ್ರಶಸ್ತಿಯು ನನ್ನನ್ನು ನನ್ನ ಕರ್ತವ್ಯವನ್ನು ನಿಜಗೊಳಿಸಿದೆ. ನೊಬೆಲ್ ಪ್ರಶಸ್ತಿಯು ನನ್ನನ್ನು ಮಾನವತಾವಾದಿಗಳ ವಿಶಾಲ ಸಮುದಾಯದೊಳಗೆ ಕರೆದು ತಂದಿದೆ, ಏಕೆಂದರೆ ಮರೆಯಲ್ಪಡುವುದೆಂದರೆ ಕೊಂಚ ಕೊಂಚವಾಗಿ ತೀರಿಕೊಂಡಂತೆ’’ ಎಂದು ಭಾವುಕವಾಗಿ ನುಡಿದಿದ್ದರು. ಅಂದಿನಿಂದ 25 ವರ್ಷಗಳ ಕಾಲ ಪ್ರಜ್ಞಾವಂತರು, ಮಾನವ ಹಕ್ಕುಗಳ ಹೋರಾಟಗಾರರು, ಪ್ರಜಾಪ್ರಭುತ್ವವಾದಿಗಳು ಸೂಕಿ ಅವರನ್ನು ನಿರಂತರವಾಗಿ ಬೆಂಬಲಿಸಿದ್ದರು, ಪ್ರಜಾಪ್ರಭುತ್ವ ರಾಷ್ಟ್ರಗಳು ಸೂಕಿಯನ್ನು ಸ್ವಾತಂತ್ರ್ಯದ ಸಂಕೇತ ಎಂದೇ ಬಣ್ಣಿಸಿದವು. ಆಕೆ ಚುನಾವಣೆಯಲ್ಲಿ ಜಯಗಳಿಸಿ ಕೊನೆಗೂ ಅಧಿಕಾರಕ್ಕೆ ಬಂದಾಗ ಅಲ್ಲಿನ ಮಿಲಿಟರಿ ಜುಂಟದ ಅಧಿಪತ್ಯ ಮುಗಿಯಿತು ಎಂದೇ ಸಂಭ್ರಮಿಸಿದವು. ಆದರೆ ಮ್ಯಾನ್ಮಾರ್ನ ಅಂತರಿಕ ಸಂಕೀರ್ಣ ಪರಿಸ್ಥಿತಿಯನ್ನು ಅರಿಯಲು ಭಾರತವನ್ನೂ ಒಳಗೊಂಡಂತೆ ಪಶ್ಚಿಮ ರಾಷ್ಟ್ರಗಳು ವಿಫಲಗೊಂಡಿದ್ದು ರಾಜತಾಂತ್ರಿಕ ಸೋಲು ಅಂತಲೇ ಹೇಳಬೇಕಾಗುತ್ತದೆ
ಕಾಲ ಎಷ್ಟು ಕ್ರೂರಿ ! ಪ್ರೊ. ರಮೀನ್ ಅವರು ‘‘ತನ್ನ, ಮ್ಯಾನ್ಮಾರ್ನ ಆತ್ಮಸಾಕ್ಷಿಯ ಕೈದಿಗಳ ಬವಣೆ, ನೋವ ನ್ನು ಮರೆಯಬೇಡಿ ಎಂದು ಜಗತ್ತಿಗೆ ಹೇಳಿದ ಇದೇ ಸೂಕಿ 26 ವರ್ಷಗಳ ನಂತರ ತನ್ನದೇ ದೇಶದಲ್ಲಿ ‘ರೊಹಿಂಗ್ಯಾ ಮುಸ್ಲಿಮ’ರ ನೋವು, ಬವಣೆಗಳಿಗೆ ಕುರುಡುಗಣ್ಣಾಗಿ ವರ್ತಿಸುತ್ತಿರುವುದು ಎಂತಹ ವ್ಯಂಗ್ಯ? ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಅಲ್ಲಿನ ಮುಸ್ಲಿಂ ಸಮುದಾಯದ ಬವಣೆ ಕುರಿತು ಸೂಕಿ ಹೇಳುತ್ತಾರೆ ‘ಒಂದು ಜನಾಂಗೀಯರನ್ನು ಚೊಕ್ಕಟಗೊಳಿಸುವುದು, ಶುದ್ಧೀಕರಿಸುವುದು’ ಎನ್ನುವುದು ಕಟುವಾದ ಶಬ್ದ, ರೊಹಿಂಗ್ಯಾ ಮುಸ್ಲಿಮರ ಕುರಿತಾಗಿ ಇಷ್ಟೊಂದು ಅಮಾನವೀಯವಾಗಿ, ಆದರ್ಶಗಳಿಲ್ಲದೆ ಇಂದು ಅಧಿಕಾರದಲ್ಲಿರುವ ಸೂಕಿ ನಡೆದು ಕೊಂಡಿರುವುದು ಅವರ ಬೆಂಬಲಿಗರಿಗೆ, ಪ್ರಶಂಸಿಸಿದವರಿಗೆ ದಿಗ್ಭ್ರಾಂತಿಯನ್ನು ಮೂಡಿಸಿದೆ’’ ಎಂದು ಬರೆಯುತ್ತಾರೆ.
ಅತ್ಯಂತ ಬಿಕ್ಕಟ್ಟಿನ ಗಳಿಗೆಯಲ್ಲಿ, ತನ್ನ ಎಲ್ಲಾ ಹೋರಾಟಗಳು ಇಂದು ಪರೀಕ್ಷೆಗೆ ಒಳಪಡುತ್ತವೆ ಎನ್ನುವ ಸಂದರ್ಭದಲ್ಲಿ ಮಾನವತಾವಾದಿಯಾಗಿದ್ದ ಆನ್ ಸನ್ ಸೂಕಿ ಯಂತವರ ವ್ಯಕ್ತಿತ್ವ ದಯನೀಯವಾಗಿ ಸೋಲುತ್ತದೆ ಎನ್ನುವುದನ್ನು ಕಂಡಾಗ ನಮಗೆಲ್ಲಾ ದಿಗಿಲಾಗುತ್ತದೆ. ಏಕೆಂದರೆ ಇಂದು ಜಾಗತಿಕ ಮಟ್ಟದಲ್ಲಿ ಟ್ರಂಪ್ನಂತಹ, ಪುಟಿನ್ನಂತಹ, ಮೋದಿಯಂತಹ ನಾಯಕರು ಅಧಿಕಾರದಲ್ಲಿದ್ದಾರೆ. ಯಾವುದೇ ಮಾನವೀಯ ಗುಣಗಳಿಲ್ಲದ, ಸರ್ವಾಧಿಕಾರಿ ವ್ಯಕ್ತಿತ್ವದ ಪಕ್ಕಾ ಮತೀಯವಾದಿಗಳಾದ ಈ ನಾಯಕರು ಮುಂಚೂಣಿಯಲ್ಲಿದ್ದಾಗ ಮಾನವ ಬದುಕಿನ ಘನತೆಯೇ ನಾಶವಾಗುತ್ತದೆ ಎನ್ನುವುದಕ್ಕೆ ಈ ‘‘ರೊಹಿಂಗ್ಯಾ ಮುಸ್ಲಿಮರ’’ ದುರಂತವೇ ಸಾಕ್ಷಿ.
ಸ್ಥಳೀಯ ರಾಖೀನ್ ಪ್ರಾಂತದಲ್ಲಿನ ಅಲ್ಪಸಂಖ್ಯಾತರಾದ ರೊಹಿಂಗ್ಯಾದ ಮುಸ್ಲಿಮರನ್ನು ಮ್ಯಾನ್ಮಾರ್ ಸರಕಾರವು ಒಂದು ಜನಾಂಗವೆಂದು ಸಹ ಪರಿಗಣಿಸಿಲ್ಲ ಮತ್ತು ತನ್ನ ದೇಶದ ಪ್ರಜೆಗಳೆಂದು ಮಾನ್ಯತೆ ನೀಡಿಲ್ಲ. ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು ರೊಹಿಂಗ್ಯಾ ಮುಸ್ಲಿಮರನ್ನು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ಜನಾಂಗ ಎಂದು ಹೇಳಿದೆ. ಜನರ ಜೊತೆಗೂಡಿ ಮ್ಯಾನ್ಮಾರ್ ಸೈನ್ಯವು ಅಲ್ಲಿ ನಡೆಸುತ್ತಿರುವ ಸಾಮೂಹಿಕ ಹತ್ಯೆಗಳ ಪರಿಣಾಮವಾಗಿ ಸುಮಾರು 2,70,000 ರೊಹಿಂಗ್ಯಾ ಮುಸ್ಲಿಮರು ನಿರಾಶ್ರಿತರಾಗಿ ಪಕ್ಕದ ದೇಶಗಳಾದ ಭಾರತ ಮತ್ತು ಬಾಂಗ್ಲಾದ ಗಡಿಯೊಳಗೆ ವಲಸೆ ಬರುತ್ತಿದ್ದಾರೆ. ಇದಕ್ಕೊಂದು ಸಣ್ಣ ಹಿನ್ನೆಲೆಯಿದೆ. ‘ಅರ್ಕಾನ್ ರೊಹಿಂಗ್ಯಾ ವಿಮೋಚನ ಪಡೆ’ ಎನ್ನುವ ಸ್ವಘೋಷಿತ ಬಂಡಾಯಕೋರರ ಗುಂಪು ಆಗಸ್ಟ್ 25ರಂದು ಮ್ಯಾನ್ಮಾರ್ನ 25 ಪೋಲೀಸ್ ನೆಲೆಗಳ ಮೇಲೆ ದಾಳಿ ನಡೆಸಿ 11 ರಕ್ಷಣಾ ಪಡೆಯ ಸೈನಿಕರನ್ನು ಕೊಂದು ಹಾಕಿತು. ಇದನ್ನು ದುಷ್ಕೃತ್ಯ ಎಂದು ಖಂಡಿಸಬೇಕಾಗುತ್ತದೆ. ಆದರೆ ಮ್ಯಾನ್ಮಾರ್ ಸರಕಾರವು ತನ್ನ ಸೈನ್ಯ ಮತ್ತು ಪೊಲೀಸರ ನೆರವಿನಿಂದ ಈ ಬಂಡಾಯಕೋರರ ಗುಂಪನ್ನು ಶಿಕ್ಷಿಸುವ ಬದಲಿಗೆ ಇಡೀ ರೊಹಿಂಗ್ಯಾ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಸಾಮೂಹಿಕ ಹತ್ಯೆಗಳನ್ನು ನಡೆಸುತ್ತಿದೆ, ರೊಹಿಂಗ್ಯಾ ಮುಸ್ಲಿಮರು ವಾಸಿಸುತ್ತಿರುವ ಹಳ್ಳಿಗಳಿಗೆ ಬೆಂಕಿ ಹಚ್ಚುತ್ತಿದೆ, ನಿರ್ದಾಕ್ಷಿಣ್ಯವಾಗಿ ಮಕ್ಕಳ ತಲೆ ಕತ್ತರಿಸುತ್ತಿದೆ, ನಿರಾಯುಧರಾದ ಮುಗ್ಧ ರೊಹಿಂಗ್ಯಾ ಮುಸ್ಲಿಮರನ್ನು ಗುಂಡಿಟ್ಟು ಕೊಲ್ಲುತ್ತಿದೆ. ಬಾಂಗ್ಲಾ ಮತ್ತು ಮ್ಯಾನ್ಮಾರ್ ದೇಶಗಳ ಗಡಿಯಲ್ಲಿ ಹರಿಯುತ್ತಿರುವ ನಫಿ ನದಿಯಲ್ಲಿ ಶವಗಳು ತೇಲುತ್ತಿವೆ. ಮೂಲಭೂತವಾಗಿ ತನ್ನ ದೇಶದ ಪ್ರಜೆಗಳನ್ನು ದೇಶ ಬಿಟ್ಟು ಓಡಿಸುತ್ತಿರುವ ಮ್ಯಾನ್ಮಾರ್ ಸರಕಾರದ ಈ ಹತ್ಯಾಕಾಂಡವನ್ನು ಯಾವುದೇ ಪ್ರಜಾಪ್ರಭುತ್ವ ದೇಶಗಳು, ನಾಗರಿಕ ರಾಷ್ಟ್ರಗಳು ಮಾನ್ಯ ಮಾಡಲು ಸಾಧ್ಯವಿಲ್ಲ. ಮೊದಲಿಗೆ ಸಾಮಾನ್ಯವಾಗಿ ಮಾನವ ಹಕ್ಕುಗಳ ನೆಲೆಯಲ್ಲಿ ಮ್ಯಾನ್ಮಾರ್ ಸರಕಾರದ ಈ ಅಧಿಕೃತ ಹತ್ಯಾಕಾಂಡವನ್ನು ಪ್ರತಿಯೊಂದು ದೇಶವೂ ಖಂಡಿಸಬೇಕಾಗುತ್ತದೆ.
ಆದರೆ ಪಕ್ಕದ ಗಡಿ ದೇಶವಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡುತ್ತಿದ್ದಾರೆ? ಇವರು ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡವನ್ನು ಮಾನವ ಹಕ್ಕುಗಳ ನೆಲೆಯಲ್ಲಿ ಖಂಡಿಸಲಿಲ್ಲ. ಬದಲಿಗೆ ಭಾರತದ ಪ್ರಧಾನಿ ಮೋದಿಯವರು ಪೂರ್ವ ನಿಯೋಜಿತ ಮ್ಯಾನ್ಮಾರ್ ದೇಶದ ಪ್ರವಾಸಕ್ಕೆ ಹೋದರು. ಹೋಗಿದ್ದಷ್ಟೇ ಅಲ್ಲ, ಬಂಡುಕೋರರ ವಿರುದ್ಧ ನಿಯೋಜಿತ ದಾಳಿ ನಡೆಸುತ್ತಿದೆ ಎಂದು ಮ್ಯಾನ್ಮಾರ್ ಸರಕಾರಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಆದರೆ ಅಲ್ಲಿನ ಸರಕಾರ ತನ್ನ ಪ್ರಜೆಗಳಾದ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ಈ ಹತ್ಯಾಕಾಂಡದ ವಿರುದ್ಧ ಮೋದಿ ತುಟಿ ಬಿಚ್ಚಲಿಲ್ಲ. ಆದರೆ 2002ರಲ್ಲಿ ಗುಜರಾತ್ನಲ್ಲಿ ನಡೆದ ಸಾವಿರಾರು ಮುಸ್ಲಿಮರ ಹತ್ಯಾಕಾಂಡದ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಯಾಗಿದ್ದ, ಇಂದಿಗೂ ಅದರ ಆರೋಪ ಎದುರಿಸುತ್ತಿರುವ ಮೋದಿಯವರಿಂದ ಪಕ್ಕದ ದೇಶದಲ್ಲಿನ ನಾಗರಿಕರ ಕೊಲೆಗಳಿಗೆ ಖಂಡನೆಯನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನ. ಅದು ಸರಿ. ಆದರೆ ಇಂದು ಮೋದಿ ಭಾರತದ ಪ್ರಧಾನಿ. ಇವರ ಪ್ರತಿಯೊಂದು ನಡೆ, ನಿರ್ಣಯವು ಭಾರತದ ನಿರ್ಣಯವಾಗಿರುತ್ತದೆ. ಭಾರತವನ್ನು ಪ್ರತಿನಿಧಿಸುತ್ತದೆ. ನರೇಂದ್ರ ಮೋದಿ ಇಂದು ಪ್ರಧಾನಿಯಾಗಿ ಮ್ಯಾನ್ಮಾರ್ನಲ್ಲಿನ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಮೌನ ಸಮ್ಮತಿಯನ್ನು ಸೂಚಿಸುವುದರ ಮೂಲಕ ದೇಶದ ಘನತೆಯನ್ನು ಕುಗ್ಗಿಸಿದ್ದಾರೆ. ಭಾರತದ ವಿದೇಶಾಂಗ ನೀತಿಯನ್ನು ನಗೆಪಾಟಲಿಗೆ ಗುರಿ ಮಾಡಿದ್ದಾರೆ. ಇಷ್ಟಲ್ಲದೆ ಇನ್ನೂ ಮುಂದುವರಿದು ‘ಐಕ್ಯತೆ ಮತ್ತು ಪ್ರಾದೇಶಿಕ ಸಮಗ್ರತೆ’ಯನ್ನು ಬಲಪಡಿಸಬೇಕೆಂದು ಮ್ಯಾನ್ಮಾರ್ ಸರಕಾರಕ್ಕೆ ಒತ್ತಾಯಿಸುವುದರ ಮೂಲಕ ತಮ್ಮ ಆದ್ಯತೆ ಯಾವುದೆಂದು ಸ್ಪಷ್ಟಪಡಿಸಿದ್ದಾರೆ. ಮ್ಯಾನ್ಮಾರ್ದೊಂದಿಗೆ ದ್ವಿಪಕ್ಷೀಯ ಹೇಳಿಕೆಗೆ ಸಹಿ ಹಾಕಿರುವ ಭಾರತವು ‘‘ರಾಕಿನ್ ಪ್ರದೇಶದಲ್ಲಿನ ರೊಹಿಂಗ್ಯಾ ಮುಸ್ಲಿಮರ ಭಯೋತ್ಪಾದನೆಯನ್ನು ಮತ್ತು ಮ್ಯಾನ್ಮಾರ್ ದೇಶದ ರಕ್ಷಣಾ ಪಡೆಯ ಹತ್ಯೆಯನ್ನು ಜಂಟಿಯಾಗಿ ಖಂಡಿಸುತ್ತದೆ’’ ಎಂದು ಘೋಷಿಸಿದೆ. ಎಲ್ಲಿಗೆ ಬಂತು ತಲುಪಿದೆ ನೋಡಿ ಭಾರತದ ರಾಜನೀತಿ? ಇಲ್ಲ್ಲಿ ಭಾರತದ ವಿದೇಶಾಂಗ ನೀತಿಗಳು ಮತ್ತು ನೆರೆಹೊರೆ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಕುರಿತು ಗಮನ ಹರಿಸಬೇಕು. ಒಂದೆಡೆ ಮೊದಲೇ ಹಳಸಿದ್ದ ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಲ್ಲಿ ಮತ್ತಷ್ಟು ಬಿಗಡಾಯಿಸಿದೆ. ಮತ್ತೊಂದೆಡೆ ಮತ್ತೊಂದು ಗಡಿ ರಾಷ್ಟ್ರವಾದ ಚೀನಾದೊಂದಿಗೆ ಕಾಲ್ಕೆರೆದು ಜಗಳ ಮಾಡಿಕೊಂಡ ಭಾರತ ಇಂದು ಜಾರುಬಂಡೆಯ ಮೇಲಿದೆ. ಮ್ಯಾನ್ಮಾರ್ ದೇಶದೊಂದಿಗೆ ಬಾಂಧವ್ಯ ಬೆಸೆಯುತ್ತೇನೆ ಎಂದು ಹೊರಟ ಮೋದಿ ಅಲ್ಲಿನ ಸಂಕೀರ್ಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿ ಬಂಡಾಯಕೋರರನ್ನು ಎದುರಿಸಲು ಅಲ್ಲಿನ ಮುಸ್ಲಿಂ ನಾಗರಿಕರನ್ನು ಕೊಲ್ಲುವುದನ್ನು ಪರೋಕ್ಷವಾಗಿ ಸಮರ್ಥಿಸಿದ್ದಾರೆ. ಭಾರತದ ಇಂದಿನ ಈ ವಿದೇಶಾಂಗ ನೀತಿಯನ್ನು 1971ರಲ್ಲಿ ನಿಕ್ಸನ್ ನೇತೃತ್ವದ ಅಮೆರಿಕ ದೇಶದ ವಿದೇಶಾಂಗ ನೀತಿಗೆ ಹೋಲಿಸುತ್ತ ಆಗ ಅಮೆರಿಕವು ಚೀನಾದ ವಿರುದ್ಧ ಮೇಲುಗೈ ಸಾಧಿಸಲು ಪಾಕಿಸ್ತಾನ ರಾಷ್ಟ್ರಕ್ಕೆ ಪೂರ್ವ ಪಾಕಿಸ್ತಾನದಲ್ಲಿ ಹಲ್ಲೆ, ಕೊಲೆಗಳನ್ನು ನಡೆಸಲು ಪ್ರೇರೇಪಿಸಿತ್ತು ಮತ್ತು ಬೆಂಬಲಿಸಿತ್ತು. ಆಗ ಬಾಂಗ್ಲಾ ದೇಶವನ್ನು ಭಾರತವು ಬಚಾವ್ ಮಾಡಿತ್ತು ಎಂದು ತಜ್ಞರು ವಿವರಿಸುತ್ತಾರೆ.
ಆದರೆ ಮೋದಿ ನೇತೃತ್ವದ ಈ ಆತ್ಮಹತ್ಯಾತ್ಮಕ ಮಾದರಿಯ ವಿದೇಶಾಂಗ ನೀತಿ ಒಂದೆಡೆ ಇದ್ದರೆ ನಿರಾಶ್ರಿತರಾಗಿ ಭಾರತದೆಡೆಗೆ ವಲಸೆ ಬರುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗೆ ತನ್ನ ನೆಲದಲ್ಲಿ ಮಾನವೀಯತೆಯ ನೆಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲು ಮೋದಿ ಸರಕಾರ ನಿರಾಕರಿಸುತ್ತಿದೆ. ಅಮಾಯಕ ರೊಹಿಂಗ್ಯಾ ಮುಸ್ಲಿಮರನ್ನು ಬಂಡುಕೋರರೆಂದು ದೂಷಿಸುತ್ತಿದೆ ಮತ್ತು ಈ ಕಾರಣಕ್ಕಾಗಿ ರೊಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದು ಅವರನ್ನು ಗಡಿಪಾರು ಮಾಡುತ್ತಿದೆ. ಗೃಹ ಖಾತೆಯ ರಾಜ್ಯ ಮಂತ್ರಿ ರಿಜಿಜು ಅವರು ಸದನದಲ್ಲಿ ‘‘ರೊಹಿಂಗ್ಯಾ ಮುಸ್ಲಿಮರು ಅಕ್ರಮ ವಲಸೆಗಾರರು, ಅವರಿಗೆ ಭಾರತದಲ್ಲಿ ನೆಲೆಸಲು ಯಾವುದೇ ಆಧಾರವಿಲ್ಲ, ಅವರನ್ನು ಗಡಿಪಾರು ಮಾಡಲಾಗುವುದು’’ ಎಂದು ಹೇಳಿಕೆ ನೀಡಿದರು. ಮೋದಿ ನೇತೃತ್ವದ ಒಕ್ಕೂಟ ಸರಕಾರವು ‘‘ರೊಹಿಂಗ್ಯಾ ಮುಸ್ಲಿಮರಿಗೆ ಇಲ್ಲಿ ಆಶ್ರಯ ನೀಡಿದರೆ ಅವರನ್ನು ಭಯೋತ್ಪಾದಕ ಸಂಘಟನೆಗಳು ಬಳಸಿಕೊಳ್ಳುತ್ತವೆ, ಅವರು ಭಯೋತ್ಪಾದಕರಾಗುತ್ತಾರೆ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಅಪಾಯಕಾರಿಗಳಾಗುತ್ತಾರೆ’’ ಎಂದು ತಿಳಿಸಿದೆ. ಆರೆಸ್ಸೆಸ್ನ ರಾಕೇಶ್ ಶರ್ಮ ಅವರು ‘‘ರೋಹಿಂಗಾ ಮುಸ್ಲಿಮರು ಇಸ್ಲಾಂ ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ್ದಾರೆ’’ ಎಂದು ಹೇಳುತ್ತಾರೆ. ಆದರೆ ಭಾರತ ಪ್ರವೇಶಿಸಿರುವ ಯಾವ ರೊಹಿಂಗ್ಯಾ ನಿರಾಶ್ರಿತರ ವಿರುದ್ಧ ಅವರು ಭಾರತದ ಉಗ್ರವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಬಗ್ಗೆಯಾಗಲಿ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆಂದಾಗಲೀ ಇದುವರೆವಿಗೂ ಒಂದು ಪ್ರಕರಣವೂ ದಾಖಲಾಗಿಲ್ಲ.
ಆದರೆ ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಕಾನೂನು ‘‘ಯಾವುದೇ ಬಗೆಯ ನಿರಾಶ್ರಿತರನ್ನು ಸಂಬಂಧಪಟ್ಟ ನೆರೆಹೊರೆ ದೇಶಗಳು ಗಡಿಪಾರು ಮಾಡಬಾರದು ಮತ್ತು ಅವರಿಗೆ ಆಶ್ರಯ ನೀಡಬೇಕು’’ ಎಂದು ಹೇಳುತ್ತದೆ. ಇಲ್ಲಿ ಆ ರಾಷ್ಟ್ರವು ಈ ಒಪ್ಪಂದಕ್ಕೆ ಸಹಿ ಹಾಕಲೇಬೇಕೆಂಬ ನಿಯಮವಿಲ್ಲ. ಆಶ್ರಯ ನೀಡುವುದು ಕಡ್ಡಾಯ ಎಂದು ಅಂತಾರಾಷ್ಟ್ರೀಯ ಕಾನೂನು ಹೇಳುತ್ತದೆ. ಇಂಡಿಯಾದ ಸಂವಿಧಾನದ ಪರಿಚ್ಛೇದ 14 ಸಮಾನತೆ ಮೂಲಭೂತ ಹಕ್ಕು ಎಂದು ಹೇಳುತ್ತದೆ, ಪರಿಚ್ಛೇದ 21 ಮತ್ತು 51(ಸಿ) ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ವಿವರಿಸುತ್ತದೆ. ಭಾರತ ಸರಕಾರವು ಅಂತಾರಾಷ್ಟ್ರೀಯ ಕಾನೂನನ್ನು ಮತ್ತು ತನ್ನದೇ ಸಂವಿಧಾನದ ನೀತಿಸಂಹಿತೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಮತ್ತು ಒಂದು ಜವಾಬ್ದಾರಿಯುತ ಸರಕಾರವು ಅತ್ಯಂತ ಬೇಜವ್ದಾರಿಯಿಂದ, ಸಂಕುಚಿತ ಮನೋ ಭಾವದಿಂದ ವರ್ತಿಸುತ್ತಿದೆ ಎನ್ನುವುದಕ್ಕೆ ಇದು ಒಂದು ಉದಾ ಹರಣೆ. ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಭಾರತ ಸರಕಾರದ ಈ ನಿರಾಶ್ರಿತರ ವಿರೋಧಿ ನಡೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.
ಆಶ್ರಯ ಕೋರಿ ವಲಸೆ ಬಂದ ಯಾವುದೇ ಬಗೆಯ ನಿರಾಶ್ರಿತರಿಗೆ ತುರ್ತಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಯಾವುದೇ ನಾಗರಿಕ ಸರಕಾರದ ಪ್ರಾಥಮಿಕ ಕರ್ತವ್ಯವಾಗಿರಬೇಕು. ಮೊದಲು ಅವರ ಜೀವವನ್ನು ಕಾಪಾಡಬೇಕು. ಇದು ನಾಗರಿಕ ಸಮಾಜದ ಮೂಲಭೂತ ಪಾಠಗಳಲ್ಲೊಂದು. ಉದಾಹರಣೆಗೆ ಇತ್ತೀಚೆಗೆ ಸಿರಿಯಾದಲ್ಲಿನ ಅಂತಃಕಲಹದಿಂದ ನಿರಾಶ್ರಿತರಾದ ಸಿರಿಯನ್ರಿಗೆ ಯೂರೋಪಿಯನ್ ರಾಷ್ಟ್ರಗಳು ತಾತ್ಕಾಲಿಕ ಆಶ್ರಯ ನೀಡಿದ್ದವು. ಅದೇ ರೀತಿ ಎರಡನೆ ಮಹಾಯುದ್ಧದ ನಂತರ ನಲವತ್ತರ ದಶಕದ ಮಧ್ಯಭಾಗದಲ್ಲಿ ನಿರಾಶ್ರಿತರಾದ ಯಹೂದಿಗಳಿಗೆ ಮಧ್ಯ ಏಷ್ಯಾದ ರಾಷ್ಟ್ರಗಳು ಆಶ್ರಯ ನೀಡಿದ್ದವು. ಎಂಬತ್ತರ ದಶಕದಲ್ಲಿ ಭಾರತ ದೇಶವು ಶ್ರೀಲಂಕಾದಿಂದ ನಿರಾಶ್ರಿತರಾದಗಿ ಭಾರತೀಯ ತಮಿಳರಿಗೆ ಆಶ್ರಯ ನೀಡಿತ್ತು. ಕಳೆದ 50 ವರ್ಷಗಳಿಂದ ಭಾರತದಲ್ಲಿ ಟಿಬೆಟಿಯನ್ ಪ್ರಜೆಗಳಿಗೆ ವಾಸಿಸಲು ಜಾಗ ನೀಡಿ ಆಶ್ರಯ ನೀಡಿದೆ. ಇದು ಅಂದಿನಿಂದಲೂ ನಡೆದುಕೊಂಡು ಬಂದಂತಹ ಮಾನವೀಯ, ಜೀವಪರ ರಾಜನೀತಿ. ಆದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತದ ಶೋಷಿತರೆಲ್ಲರೂ ನಮ್ಮವರು ಎನ್ನುವ ಎಪ್ಪತ್ತು ವರ್ಷಗಳ ವಿದೇಶಾಂಗ ನೀತಿ ಕೊನೆಗೊಂಡು ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲದಂತ ದುರಂತ ಸ್ಥಿತಿ ಏರ್ಪಟ್ಟಿದೆ. ಇಲ್ಲಿ ಧರ್ಮದ ಆಧಾರದ ಮೇಲೆ, ವರ್ಣಭೇದ ನೀತಿಯ ಮೇಲೆ ಮಾನವ ಹಕ್ಕುಗಳನ್ನು ನಿರ್ಧರಿಸಲಾಗುತ್ತದೆ. ಮೋದಿ ಸರಕಾರವು ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ ದೇಶದ ಅಲ್ಪಸಂಖ್ಯಾತರಾದ ಹಿಂದೂಗಳಿಗೆ ಯಾವುದೇ ಕಾಗದಪತ್ರಗಳಿಲ್ಲದೆ ಭಾರತಕ್ಕೆ ಸಹಾಯ ಕೋರಿ ವಲಸೆ ಬಂದರೆ ಆಶ್ರಯ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ನೇಪಾಳದ ಹಿಂದೂಗಳು ನಿರಾಶ್ರಿತರಾಗಿ ಭಾರತದ ಗಡಿಯೊಳಗೆ ನುಸುಳಿದರೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡುವ ಮೋದಿ ಸರಕಾರ ಮ್ಯಾನ್ಮಾರ್ನ ರೊಹಿಂಗ್ಯಾ ಮುಸ್ಲಿಮರು ನಿರಾಶ್ರಿತರಾಗಿ ಒಳ ಬಂದರೆ ಅವರು ಭಯೋತ್ಪಾದಕರೆಂದು ಪರಿಗಣಿಸಿ ಹೊರದಬ್ಬುತ್ತದೆ. ಮೋದಿ ನೇತೃತ್ವದ ಬಿಜೆಪಿ ಸರಕಾರದ ಈ ಕೋಮುವಾದ, ಜೀವವಿರೋಧಿ ಸಿದ್ಧಾಂತದ ಫಲವಾಗಿ ಭಾರತದಿಂದ ಗಡಿಪಾರಾದ ಲಕ್ಷಾಂತರ ಜನಸಂಖ್ಯೆಯ ರೊಹಿಂಗ್ಯಾ ಮುಸ್ಲಿಮರು ಇಂದು ಬಾಂಗ್ಲಾ ದೇಶದೆಡೆಗೆ ವಲಸೆ ಹೋಗುತ್ತಿದ್ದಾರೆ
ಢಾಕಾ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕ ಅನೀಸ್ ಅಹ್ಮದ್ ಅವರು ‘‘ಇತಿಹಾಸದ ವ್ಯಂಗವೆಂದರೆ ಇದೇ ಭಾರತವು ಎಪ್ಪತ್ತರ ದಶಕದಲ್ಲಿ ತಾನು ಕಾಪಾಡಿದ್ದ ಬಾಂಗ್ಲಾ ದೇಶದ ಮೇಲೆ ಮುಗಿಬಿದ್ದಿದೆ. ಏಕೆಂದರೆ ಬಾಂಗ್ಲಾ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಮರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಅಡಚಣೆಗಳಿವೆ. ಒಂದೆಡೆ ಕಿರಿದಾದ ಭೂ ಪ್ರದೇಶ ಮತ್ತೊಂದೆಡೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ. ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾ ಮುಸ್ಲಿಮರನ್ನು ಹೊರದಬ್ಬುತ್ತಿಲ್ಲ ಬದಲಾಗಿ ಎಷ್ಟು ಸಾಧ್ಯವೋ ಅಷ್ಟು ಹತ್ಯೆ, ಕೊಲೆಗಳನ್ನು ಮಾಡುತ್ತಿದೆ. ಇದು ಬಾಂಗ್ಲಾ ದೇಶದ ಜನತೆಯಲ್ಲಿ ರೊಹಿಂಗ್ಯಾ ಮುಸ್ಲಿಮರ ಪರವಾಗಿ ಅನುಕಂಪವನ್ನು ಹುಟ್ಟಿಸಿದೆ. ಅವರು ತಮ್ಮಿಳಗೆ ಅನುಕೂಲ ಮಾಡಿಕೊಂಡು ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಪ್ರಧಾನಿ ಶೇಕ್ ಹಸೀನಾ ಅವರು ಗಡಿ ಪ್ರದೇಶದಲ್ಲಿ ‘ಮಾನವೀಯತೆ’ಯಿಂದ ವರ್ತಿಸಬೇಕು ಮತ್ತು ನಿರಾಶ್ರಿತರನ್ನು ನಮ್ಮವರೆಂದು ಭಾವಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಆದರೆ ಬಡರಾಷ್ಟ್ರಗಳಲ್ಲಿ ಒಂದಾದ ಬಾಂಗ್ಲಾ ದೇಶಕ್ಕಿರುವ ಮಾನವೀಯತೆಯ ಗುಣ ಭಾರತಕ್ಕೆ ಇಲ್ಲವಾಗಿರುವುದಕ್ಕೆ ಮೋದಿ ನೇತೃತ್ವದ ಬಿಜೆಪಿಯ ಸಿದ್ಧಾಂತಗಳೇ ಮೂಲಕಾರಣ. ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾ ಮುಸ್ಲಿಮರನ್ನು ಜನಾಂಗೀಯ ಹತ್ಯೆ ಮಾಡುತ್ತಿದ್ದರೆ ಮೋದಿ ಸರಕಾರವು ಸುಮಾರು 40,000 ರೊಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಗಡಿಪಾರು ಮಾಡಿದೆ. ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಕಳೆದ ಎರಡು ವಾರಗಳಲ್ಲಿ ಸುಮಾರು 3 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಭಾರತದ ಈ ಜೀವವಿರೋಧಿ ನಿಲುವು ನಮ್ಮ ದೇಶದ ವಿದೇಶಾಂಗ ನೀತಿಗೆ ಒಂದು ಕಪ್ಪುಚುಕ್ಕೆಯಾಗಿದ್ದರೆ ಬಾಂಗ್ಲಾ ದೇಶದೊಳಗಡೆ ಭಾರತದ ವಿರುದ್ಧ ಅಸಹನೆ, ಪ್ರತಿಭಟನೆ ವ್ಯಕ್ತವಾಗುತ್ತಿದೆ.’’
ಆರೆಸ್ಸೆಸ್ ಮತ್ತು ಮೋದಿಯವರ ರಾಜನೀತಿಯೆಂದರೆ ಅಧಿಕಾರದಲ್ಲಿರು ವವರ ಪರವಾಗಿ ನಿಲ್ಲುವುದು ಮತ್ತು ಮತ್ತೊಬ್ಬರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಹತ್ತಿಕ್ಕುವುದು. ಪ್ರಜಾಧರ್ಮವನ್ನು ತಿರಸ್ಕರಿಸಿರುವ ಆರೆಸ್ಸೆಸ್-ಮೋದಿ ಪಡೆ ತನ್ನ ರಾಜನೀತಿಯನ್ನು ಅತ್ಯಂತ ಕೆಳಮಟ್ಟಕ್ಕಿಳಿಸಿದೆ. ಇದರಿಂದಾಗಿ ನೆರೆಹೊರೆಯವರೊಂದಿಗೆ ಭಾರತದ ವಿಶ್ವಾಸಾರ್ಹತೆಯನ್ನು ಸಂಪೂರ್ಣ ನಾಶಗೊಳಿಸಿದ್ದಾರೆ.
‘‘ತನ್ನ, ಮ್ಯಾನ್ಮಾರ್ನ ಆತ್ಮಸಾಕ್ಷಿಯ ಕೈದಿಗಳ ಬವಣೆ, ನೋವನ್ನು ಮರೆಯಬೇಡಿ’’ ಎಂದು ಜಗತ್ತಿಗೆ ಹೇಳಿದ ಇದೇ ಸೂಕಿ 26 ವರ್ಷಗಳ ನಂತರ ತನ್ನದೇ ದೇಶದಲ್ಲಿ ‘ರೊಹಿಂಗ್ಯಾ ಮುಸ್ಲಿಮ’ರ ನೋವು, ಬವಣೆಗಳಿಗೆ ಕುರುಡುಗಣ್ಣಾಗಿ ವರ್ತಿಸುತ್ತಿರುವುದು ಎಂತಹ ವ್ಯಂಗ್ಯ?. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಅಲ್ಲಿನ ಮುಸ್ಲಿಂ ಸಮುದಾಯದ ಬವಣೆ ಕುರಿತು ಸೂಕಿ ಹೇಳುತ್ತಾರೆ ‘ಒಂದು ಜನಾಂಗೀಯರನ್ನು ಚೊಕ್ಕಟಗೊಳಿಸುವುದು, ಶುದ್ಧೀಕರಿಸುವುದು’ ಎಂದು. ರೊಹಿಂಗ್ಯಾ ಮುಸ್ಲಿಮರ ಕುರಿತಾಗಿ ಇಷ್ಟೊಂದು ಅಮಾನವೀಯವಾಗಿ, ಆದರ್ಶಗಳಿಲ್ಲದೆ ಇಂದು ಅಧಿಕಾರದಲ್ಲಿರುವ ಸೂಕಿ ನಡೆದುಕೊಂಡಿರುವುದು ಅವರ ಬೆಂಬಲಿಗರಿಗೆ, ಪ್ರಶಂಸಿಸಿದವರಿಗೆ ದಿಗ್ಭ್ರಾಂತಿಯನ್ನು ಮೂಡಿಸಿದೆ.