ಆಕಾಶದಿಂದಲೇ ವೀಕ್ಷಿಸಿ ಮೈಸೂರು ನಗರದ ಸೊಬಗನ್ನು..!
“ಹೆಲಿಕಾಪ್ಟರ್ ಜಾಲಿ ರೈಡ್”ಗೆ ಶಾಸಕ ಸೋಮಶೇಖರ್ ಚಾಲನೆ
ಮೈಸೂರು, ಸೆ.16: ದಸರಾ ಮಹೋತ್ಸವದಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ “ಹೆಲಿಕಾಪ್ಟರ್ ಜಾಲಿ ರೈಡ್” ಗೆ ನಗರದ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು.
ಹೆಲಿಕಾಪ್ಟರ್ ಜಾಲಿ ರೈಡ್ ನವದೆಹಲಿಯ ಪವನ್ ಹನ್ಸ್ ಲಿಮಿಟೆಡ್ ಹಾಗೂ ಚಿಪ್ಸನ್ ಏವಿಯೇಶನ್ ಲಿಮಿಟೆಡ್ ಸಹಯೋಗದಲ್ಲಿ ನಡೆಯುತ್ತಿದ್ದು, ಇಂದಿನಿಂದ ಅಕ್ಟೋಬರ್ 5 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಹೆಲಿಕಾಪ್ಟರ್ ಜಾಲಿರೈಡ್ ಇರಲಿದೆ. 10 ನಿಮಿಷಗಳ ಜಾಲಿ ರೈಡ್ ಗೆ 2300 ರೂ. ನಿಗದಿಪಡಿಸಲಾಗಿದ್ದು, ವಿಶೇಷ ಚೇತನರಿಗೆ ಹಾಗೂ 6 ವರ್ಷ ಒಳಗಿನ ಮಕ್ಕಳಿಗೆ 2200 ರೂ. ನಿಗದಿಗೊಳಿಸಲಾಗಿದೆ. ಟಿಕೆಟ್ ಗಳನ್ನು ಹೆಲಿಪ್ಯಾಡ್ ಕೌಂಟರ್ ಅಥವಾ ಆನ್ ಲೈನ್ ಬುಕ್ಕಿಂಗ್ ಗಾಗಿ www.pawanhans.co.in ಬುಕ್ಕಿಂಗ್ ಮಾಡಬಹುದಾಗಿದೆ.
ಹೆಲಿಕಾಪ್ಟರ್ ಜಾಲಿ ರೈಡ್ ಗೆ ಚಾಲನೆ ನೀಡಿದ ನಂತರ ಜಾಲಿ ರೈಡ್ ಮಾಡಿದ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನ ಹಸಿರಿನ ವಾತಾವರಣ, ವಿಶಾಲವಾದ ರಸ್ತೆಗಳು, ಭವ್ಯವಾದ ಅರಮನೆ ಎಲ್ಲವೂ ಆಗಸದಿಂದ ಮತ್ತಷ್ಟು ಸುಂದರವಾಗಿ ಕಾಣಿಸುತ್ತವೆ. ಇದೊಂದು ವಿಶಿಷ್ಟ ಅನುಭವ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ರವಿ ಡಿ.ಚೆನ್ನಣ್ಣನವರ್, ನಗರಪಾಲಿಕೆ ಆಯುಕ್ತ ಜಿ. ಜಗದೀಶ್, ಚಿಪ್ಸನ್ ಏವಿಯೇಷನ್ ನ ಜ್ಞಾನ್ ಪ್ರಕಾಶ್, ಶಶಿಧರ್ ಉಪಸ್ಥಿತರಿದ್ದರು.