ಪವಾಡ ರಹಸ್ಯ ಬಯಲಿನ ಆಂದೋಲನ
ನರೇಂದ್ರ ನಾಯಕ್ ಜೀವನ ಕಥನ
ಭಾಗ 13
ನಮ್ಮ ತಂಡದ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಗಳು ಕರ್ನಾಟಕದ ಸುತ್ತಮುತ್ತ ಬಿರುಸುಗೊಳ್ಳಲಾರಂಭಿಸಿತ್ತು. ಪ್ರೇಕ್ಷಕರ ಕಣ್ಣೆದುರೇ ಪ್ರಯೋಗಗಳ ಮೂಲಕ ನಕಲಿ ಸ್ವಾಮೀಜಿ, ಬಾಬಾಗಳು ಮುಗ್ಧರನ್ನು ಮೋಸಕ್ಕೆ ಗುರಿ ಮಾಡುವ ಮಾಯಾಜಾಲಗಳ ಬಗ್ಗೆ ಪ್ರದರ್ಶನ ನೀಡಲಾರಂಭಿಸಿದೆವು. ಅಂಗೈಯಲ್ಲಿ ವಿಭೂತಿ ಸೃಷ್ಟಿಯ ಹಿಂದಿರುವ ರಹಸ್ಯ ಬಯಲಿನ ಬಳಿಕ ನಮ್ಮ ಹೆಜ್ಜೆ ಉರಿಯುವ ಜ್ವಾಲೆಯನ್ನು ಅಂಗೆಯಲ್ಲಿ ಅಥವಾ ನಾಲಗೆ ಮೇಲಿರಿಸುವ ರಹಸ್ಯ ಬಯಲು ಮಾಡುವುದಾಗಿತ್ತು.
ನೂರಾರು ವೀಕ್ಷಕರು ನೆರೆದಿದ್ದ ಸಭಾಂಗಣದಲ್ಲಿ ಅಂಗೈಯಲ್ಲಿ ಕರ್ಪೂರವನ್ನು ಇಟ್ಟು ಉರಿಸಲಾಯಿತು. ನೆರೆದ ಪ್ರೇಕ್ಷಕರಿಗೆ ಆ ಉರಿಯುತ್ತಿರುವ ಜ್ವಾಲೆಯಿಂದ ಆರತಿ ಯನ್ನೂ ಮಾಡಲಾಯಿತು. ಬಳಿಕ ಕರ್ಪೂರದ ಉರಿಯುತ್ತಿರುವ ಜ್ವಾಲೆಯನ್ನು ನಾಲಗೆಯ ಮೇಲಿರಿಸಿಯೂ ಪವಾಡವನ್ನು ಪ್ರದರ್ಶಿ ಸಲಾಯಿತು. ಬಳಿಕ ಸೀಮೆಎಣ್ಣೆಯಿಂದ ಉರಿಯುತ್ತಿರುವ ಬೆಂಕಿಯ ದೊಂದಿ ದೀಪವನ್ನು ಮೈಮೇಲೆ ಸ್ಪರ್ಶಿಸಲಾಯಿತು. ನೋಡುಗರಿಗೆ ಆಶ್ಚರ್ಯ, ಕೆಲವರಿಗಂತೂ ಪರಮಾರ್ಶ್ಚಯ. ಆ ಅಚ್ಚರಿಗೊಳಗಾದ ವೀಕ್ಷಕರಿಗೇನೇ ಈ ಪವಾಡವನ್ನು ಮಾಡಿ ತೋರಿಸಲು ಪ್ರೋತ್ಸಾಹಿಸಲಾಯಿತು. ಮಾತ್ರವಲ್ಲದೆ ಇದರ ಹಿಂದಿರುವ ವಿಜ್ಞಾನದ ಸತ್ಯವನ್ನೂ ನೆರೆದಿದ್ದವರಿಗೆ ವಿವರಿಸಲಾಯಿತು.
ಈ ರೀತಿ ಅಂಗೈಯಲ್ಲಿ ಉರಿಯುವ ಜ್ವಾಲೆಯನ್ನು ಉರಿಸಿದಾಗಲೂ, ನಾಲಗೆಯ ಮೇಲೆ ಉರಿಯುವ ಕರ್ಪೂರವಿಟ್ಟಾಗಲೂ ಯಾವುದೇ ರೀತಿಯಲ್ಲಿ ದೇಹದ ಭಾಗ ಸುಟ್ಟು ಹೋಗದಿರುವ ಹಿಂದಿರುವುದನ್ನು ‘ಲಿಡನ್‌ಪ್ರಾಸ್ಟ್ ಪರಿಣಾಮ’ ಎಂದೇ ವಿಜ್ಞಾನದಲ್ಲಿ ಕರೆಯಲಾಗುತ್ತದೆ.
‘‘ಒಂದು ದ್ರವದ ಕುದಿಯುವ ಬಿಂದುವಿಗಿಂತ ಗಣನೀಯವಾಗಿ ಬಿಸಿಯಾಗಿರುವ ದ್ರವ್ಯವನ್ನು ಸಂಪರ್ಕಿಸುವ ಒಂದು ಭೌತಿಕ ವಿದ್ಯಮಾನ’’ ಇದಾಗಿದೆ. ಅಡುಗೆ ಮಾಡುವ ಸಂದರ್ಭ ಒಲೆಯ ಮೇಲಿರಿಸಿದ ಕಾವಲಿ ಅಥವಾ ಪಾತ್ರೆಗೆ ಒಂದು ನೀರ ಹನಿ ಬಿದ್ದಾಗಲು ಅದು ಚಟಪಟನೆ ಸದ್ದು ಮಾಡುತ್ತಾ, ಆ ನೀರಿನ ಹನಿ ಮಣಿ ರೂಪದಲ್ಲಿ ಸಣ್ಣದಾಗುತ್ತಾ ಆವಿಯಾಗುವುದನ್ನು ಗಮನಿಸಿ ರಬಹುದು. ಆ ವಿಜ್ಞಾನವೇ ಇಲ್ಲಿ ಪ್ರಯೋಗವಾಗುವುದು. ಬಹುತೇಕವಾಗಿ ತೇವಾಂಶದಿಂದ ಕೂಡಿದ ಕೈ, ಅಂಗೈ, ಮೈಯಲ್ಲಿ ಉಷ್ಣತೆಯು ಆವರಿಸಿಕೊಳ್ಳಲು ಕೊಂಚ ಸಮಯ ಹಿಡಿಯುತ್ತದೆ. ಆ ಸಮಯದಲ್ಲೇ ಈ ನಕಲಿ ಬಾಬಾಗಳು ಇಂತಹ ಮಾಯಾಜಾಲವನ್ನು ಮುಗ್ಧ ಭಕ್ತರೆದುರು ಪ್ರದರ್ಶಿಸಿ ದೇವಮಾನವರಾಗುತ್ತಾರೆ. ನಮ್ಮ ಅಜ್ಜ ಅಜ್ಜಿಯಂದಿಯರು ಹಿಂದೆಲ್ಲಾ ಉರಿಯುವ ಒಲೆಯಲ್ಲಿ ಬಾಣಲೆಯ ಬಿಸಿ ಬಿಸಿ ಎಣ್ಣೆ ಗೆ ಕೈಹಾಕಿ ತಿಂಡಿ ಕಾಯಿಸುವ ಸಂದರ್ಭಗಳನ್ನೂ ನಾವು ನೋಡಿ ರಬಹುದು. ಇದುವೇ ತಂತ್ರಗಳನ್ನು ಉಪಯೋಗಿಸಿ ದೇವಮಾನವರೆನಿಸಿ ಕೊಂಡವರು ಮಹಾತ್ಮರೆಂದು ಬಿಂಬಿಸಿಕೊಳ್ಳುತ್ತಾರೆ. ಅಥವಾ, ವಾಸ್ತವದಲ್ಲಿ ವಿಜ್ಞಾನದ ಅರಿವಿಲ್ಲದೆ ನಾವೇ ಅವರನ್ನು ದೇವಮಾನವರನ್ನಾಗಿಸಿ ಮೋಸ ಹೋಗುತ್ತೇವೆ ಎಂದೂ ಹೇಳಬಹುದು.
ನಮ್ಮ ಮುಂದಿನ ಪ್ರಯೋಗ ಯಜ್ಞಕುಂಡದಲ್ಲಿ ಬೆಂಕಿ ಸೃಷ್ಟಿ!
ದೇವಮಾನವರೆಂದು ಹೇಳುವವರು ಮುಗ್ಧ ಭಕ್ತರನ್ನು ನಂಬಿಸಲು ಯಜ್ಞ ಕುಂಡದಲ್ಲಿ ಬೆಂಕಿ ಸೃಷ್ಟಿಸುವ ಪವಾಡವನ್ನು ಮಾಡುವುದನ್ನು ನೋಡಿರಬಹುದು. ಯಜ್ಞ ಕುಂಡದ ಎದುರು ಕಣ್ಣು ಮುಚ್ಚಿ ಜಪಿಸುತ್ತಾ, ಅದೇನೋ ಮಂತ್ರೋಚ್ಛಾ ರಣೆ ಮಾಡುತ್ತಾ ಬರಿದಾದ ಯಜ್ಞಕುಂಡದಲ್ಲಿ ಬೆಂಕಿ ಜ್ವಾಲೆಯನ್ನು ಸೃಷ್ಟಿಸಿಬಿಡುತ್ತಾರೆ. ನಾವೂ ಪ್ರೇಕ್ಷಕರಿಗೆ ಈ ಪವಾಡದ ಹಿಂದಿರುವ ಸತ್ಯವನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಕಾಗದದ ರಟ್ಟಿನ ಯಜ್ಞಕುಂಡವನ್ನು ಸಿದ್ಧಗೊಳಿಸಿದ್ದೆವು. ಈ ಯಜ್ಞಕುಂಡಕ್ಕೆ ಕೆಲ ಹನಿ ತುಪ್ಪವನ್ನು ಸೇರಿಸಿದ್ದೆವು. ಎಲ್ಲರೂ ಯಜ್ಞಕುಂಡದತ್ತ ತಮ್ಮ ದೃಷ್ಟಿಯನ್ನು ನೆಟ್ಟಿದ್ದಾಗ ಕಾಗದದ ಯಜ್ಞಕುಂಡ ಹೊತ್ತಿ ಉರಿಯತೊಡಗಿತು. ಅಲ್ಲಿದ್ದ ಅನುಮಾನಾಸ್ಪದ ವ್ಯಕ್ತಿಯೊಬ್ಬ ಅದಕ್ಕೆ ಆ್ಯಸಿಡ್ ಹಾಕಲಾಗಿದೆ ಎಂದು ಹೇಳಿಯೇ ಬಿಟ್ಟ. ಆತನನ್ನು ವೇದಿಕೆಗೆ ಕರೆದು ಅದು ಆ್ಯಸಿಡ್ ಹೌದೇ ಎಂದು ಪರಿಶೀಲಿಸಲು ಅದರ ರುಚಿ ನೋಡುವಂತೆ ತಿಳಿಸಲಾಯಿತು. ಆತ ನೋಡಿದಾಗ ಅದರ ರುಚಿ ಸಿಹಿಯಾಗಿತ್ತು. ಮಾತ್ರವಲ್ಲದೆ, ಆತನ ನಾಲಗೆಯಲ್ಲಿ ಯಾವುದೇ ರೀತಿಯ ಕೆರೆತ ಉಂಟಾಗಲಿಲ್ಲ. ಕಾರಣ, ಅದರಲ್ಲಿ ಆ್ಯಸಿಡ್ ಅಂಶ ಇರಲಿಲ್ಲ. ಆತ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದ. ಎರಡು ರಾಸಾಯನಿಕಗಳು ಒಂದಾದಾಗ ಉಂಟಾಗುವ ಪ್ರಕ್ರಿಯೆ ಇದು. ಆದರೆ ಅದು ವಿಜ್ಞಾನದ ಕೌತುಕಗಳ ಅರಿವಿಲ್ಲದೆ ತಿಳಿಯುವುದು ಅಸಾಧ್ಯ. ಈ ಯಜ್ಞಕುಂಡ ಉರಿಯುವುದರ ಹಿಂದೆ ಇದ್ದಿದ್ದು ಗ್ಲಿಸರಾಲ್ ಹಾಗೂ ಪೊಟಾಶಿಯಂ ಪರ್ಮಾಂಗನೇಟ್‌ನ ಕೂಡುವಿಕೆ.
ನಾವು ಯಜ್ಞಕುಂಡಕ್ಕೆ ಹಾಕಿದ ತುಪ್ಪದ ಹನಿಗಳಲ್ಲಿ ಇದನ್ನು ಮಿಶ್ರಣ ಮಾಡಲಾಗಿತ್ತು. ಸುತ್ತಲಿನ ವಾತಾವರಣ ದ ಉಷ್ಣತೆಯನ್ನು ಆಧರಿಸಿ ಈ ಎರಡು ರಾಸಾಯನಿಕ ಗಳು ಒಂದಾದಾಗ ತಮ್ಮ ಕ್ರಿಯೆಯನ್ನು ಆರಂಭಿಸುತ್ತವೆ. ಅಂದರೆ ಅವು ಬೆಂಕಿಯ ರೂಪದಲ್ಲಿ ಪ್ರಜ್ವಲಿಸುತ್ತವೆ. ಇದನ್ನೇ ದೇವ ಮಾನವರು ಮಾಡುವುದು. ಜಾದೂಗಾರರು ಕೂಡಾ ತಮ್ಮ ಕಾರ್ಯಕ್ರಮಗಳ ವೇಳೆ ಬೆಂಕಿ ಸೃಷ್ಟಿಸುವ ಪ್ರಕ್ರಿಯೆಗೆ ಈ ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ. ನಿರ್ದಿಷ್ಟ ವಾತಾವರಣದಲ್ಲಿ ಈ ಎರಡು ರಾಸಾಯನಿಕಗಳು ಜತೆ ಸೇರಿದಾಗ ಬೆಂಕಿಯ ರೂಪ ಪಡೆಯುವುದನ್ನೇ ಬಂಡವಾಳವಾಗಿಸಿಕೊಂಡು ನಕಲಿ ದೇವಮಾನವರೆಂದು ಕರೆಸಿಕೊಳ್ಳುವವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ತುಂಡಾದ ಹಗ್ಗ ಯಾವುದೇ ಗುರುತಿಲ್ಲದೆ ಜೋಡಿಸಲ್ಪಡುವುದು!
ನಮ್ಮ ಮುಂದಿನ ಪವಾಡ ರಹಸ್ಯ ಬಯಲು ಕಾರ್ಯಕ್ರಮ ತುಂಡಾದ ಹಗ್ಗವನ್ನು ಯಾವುದೇ ಜೋಡಣೆಯ ಗುರುತಿಲ್ಲದೆ ಯಥಾಸ್ಥಿತಿಗೆ ಜೋಡಿಸುವುದು. ಈ ತಂತ್ರವನ್ನು ಮದ್ರಾಸಿನಲ್ಲಿ ಓರ್ವ ಸ್ವಾಮೀಜಿ ಮಾಡುತ್ತಿದ್ದ ಬಗ್ಗೆ ನಮಗೆ ತಿಳಿದು ಬಂದಿತ್ತು. ಭಕ್ತರ ಎದುರು ಹಗ್ಗವೊಂದನ್ನು ತುಂಡು ಮಾಡಿ, ಅದಕ್ಕೆ ಗಂಟು ಹಾಕಿ ಮರು ಜೋಡಿಸುವುದು. ಸ್ವಾಮೀಜಿಯ ಪವಿತ್ರ ಕೈಗಳು ಈ ಹಗ್ಗದ ಮೇಲಾಡಿದಾಗ ಆ ಹಗ್ಗ ಯಾವುದೇ ಗಂಟಿಲ್ಲದೆ ಜೋಡಣೆಯ ಗುರುತಿಲ್ಲದೆ ಯಥಾಸ್ಥಿತಿಗೆ ಮರಳುವುದು. ಭಕ್ತರ ಹರ್ಷೋದ್ಗಾರ. ಸ್ವಾಮೀಜಿ ಪವಾಡ ಪುರುಷರೆಂಬ ಘೋಷಣೆ. ಯಾವುದೇ ಚಿಕಿತ್ಸೆ ಇಲ್ಲದೆಯೂ ರೋಗವನ್ನು ಗುಣ ಪಡಿಸುತ್ತಾರೆಂಬ ಹೆಮ್ಮೆ ಬೇರೆ.
ಈ ಹಗ್ಗದ ಹಿಂದಿರುವ ರಹಸ್ಯ ಮ್ಯಾಜಿಕ್ ಗಮ್. ಈ ಮ್ಯಾಜಿಕ್ ಗಮ್‌ನ ರಹಸ್ಯವನ್ನು ತಿಳಿಸಲು ನಮ್ಮ ತಂಡ ಪ್ರದರ್ಶನವನ್ನು ಆಯೋಜಿಸಿತ್ತು. ಅದಕ್ಕಾಗಿ ಪ್ರೇಕ್ಷಕರಲ್ಲಿದ್ದ ಒಬ್ಬಾತ ತಾನೇ ಆ ಪ್ರಯೋಗದ ಭಾಗವಾಗಲು ಮುಂದೆ ಬಂದ. ಆತ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದ. ಆತನ ಬರಿದಾದ ಹೊಟ್ಟೆಯಿಂದ ರಕ್ತಸಿಕ್ತವಾದ ಕೈಗಳ ಮೂಲಕ ಆತ ನುಂಗಿದ್ದ ಚೈನನ್ನು ಹೊರತೆಗೆಯಲಾಯಿತು. ಇಂತಹ ಸರ್ಜರಿ ಅಂದರೆ ಯಾವುದೇ ಗಾಯದ ಕಲೆಗಳಿಲ್ಲದೆ ಶಸ್ತ್ರ ಚಿಕಿತ್ಸೆ ನಡೆಸುವ ತಂತ್ರಜ್ಞಾನದ ಕುಶಲತೆ ಪ್ರಸ್ತುತ ಚಾಲ್ತಿಯಲ್ಲಿದೆ. ಆದರೆ ಅನೆಸ್ತೇಶಿಯಾವೇ ಇಲ್ಲದೆ, ಒಂದು ವ್ಯಕ್ತಿಯ ಟ್ಯೂಮರ್‌ಗಳನ್ನು ಗುಣಪಡಿಸುವುದರ ಹಿಂದಿನ ರಹಸ್ಯವನ್ನು ನಾವು ಬಯಲು ಪಡಿಸಿದ್ದೆವು. ಒಂದು ದಶಕದ ಹಿಂದೆಯೇ ಫಿಲಿಪಿನೋ ನಂಬಿಕೆ ವೈದ್ಯರು ಇಂತಹ ಶಸ್ತ್ರಚಿಕಿತ್ಸೆಗಳಿಗೆ ಕುಖ್ಯಾತರಾಗಿದ್ದರು. ಅಂತಹ ನಂಬಿಕೆಯ ಕೆಲ ವೈದ್ಯರು ದಶಕದ ಹಿಂದೆ ಮುಂಬೈಗೆ ಬಂದು ಸಚಿವರೊಬ್ಬರ ಮೇಲೆ ಆ ಪ್ರಯೋಗ ಮಾಡಿದ್ದರು. ಅವರ ದೇಹದಲ್ಲಿದ್ದ ಗೆಡ್ಡೆಯನ್ನು ತೆಗೆದಿದ್ದಾಗಿ ಅವರು ಆ ವೈದ್ಯರು ನಂಬಿಸಿದ್ದರು. ಆದರೆ ವಾಸ್ತವದಲ್ಲಿ ಆ ಗೆಡ್ಡೆಯ ವೈಜ್ಞಾನಿಕ ತಪಾಸಣೆಯ ಬಳಿಕ ಅದು ಕೋಳಿಯ ಅಂಗಾಂಗವೆಂದು ಸಾಬೀತುಗೊಂಡಿತ್ತು!
ಮುಂದುವರಿಯುವುದು