ದಿಲ್ಲಿ ದರ್ಬಾರ್
ಶರ್ಮಾ ಮರ್ಮ ಅರಿತವರಾರು?
ಅಸ್ಸಾಂನ ಪ್ರಭಾವಿ ರಾಜಕಾರಣಿ ಹಿಮಾಂತ ವಿಶ್ವಶರ್ಮಾ ರಾಜ್ಯ ರಾಜಕೀಯದಿಂದ ಕೇಂದ್ರ ರಾಜಕೀಯಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನಾರಚನೆಗೆ ಮುನ್ನ ಅವರು ಬಹುತೇಕ ಸ್ಥಳೀಯ ಪತ್ರಕರ್ತರ ಬಳಿ, ಅಸ್ಸಾಂನಿಂದ ಹೊರಹೋಗುತ್ತಿರುವುದಾಗಿ ಹೇಳಿಕೊಂಡಿದ್ದರು. ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್‌ಗೆ ನೀಡುತ್ತಿರುವ ಪರೋಕ್ಷ ಎಚ್ಚರಿಕೆ ಎಂದು ಇದನ್ನು ಬಹುತೇಕ ಪತ್ರಕರ್ತರು ವಿಶ್ಲೇಷಿಸಿದ್ದರು. ಹಣಕಾಸು, ಆರೋಗ್ಯದಂಥ ಪ್ರಮುಖ ಖಾತೆಗಳನ್ನು ಹೊಂದಿ, ವಿವಿಧ ಪಕ್ಷಗಳಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಶರ್ಮಾ ಛಾಯಾ ಸಿಎಂ ಎಂದೇ ಹೊಗಳಿಸಿಕೊಂಡವರು. ಆದರೆ ಅಧಿಕೃತವಾಗಿ ತಮ್ಮ ಕೆಲಸ ಇದಲ್ಲ ಎನ್ನುವುದು ಶರ್ಮಾ ಅವರ ಅನಿಸಿಕೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗಣನೀಯ ಹೆಜ್ಜೆಗುರುತು ಮೂಡಿಸುವಲ್ಲಿ ಇವರ ಶ್ರಮ ಅಧಿಕ. ಇದರಿಂದಾಗಿ ಸಹಜ ಉಡುಗೊರೆ ಎಂದರೆ ಸಿಎಂ ಗಾದಿ ಎನ್ನುವುದು ಅವರ ನಂಬಿಕೆ. ಆದರೆ ಶರ್ಮಾ ತಮ್ಮ ಮಹತ್ವಾಕಾಂಕ್ಷೆ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಅಥವಾ ಸೋನೋವಾಲ್ ಅವರನ್ನು ತಳ್ಳಬೇಕು ಎಂಬ ಯೋಚನೆಯನ್ನೂ ಹೇಳಿಕೊಂಡಿಲ್ಲ. ಸೋನೋವಾಲ್‌ಗೆ ಸ್ಥಾನ ಇಲ್ಲ ಎನ್ನುವುದು ಅವರ ಸಚಿವಾಲಯ ಕಚೇರಿಯಲ್ಲೇ ಸ್ಪಷ್ಟವಾಗುತ್ತದೆ. ಏಕೆಂದರೆ ಇಲ್ಲಿ ಮಹಾತ್ಮಾಗಾಂಧಿ ಹಾಗೂ ನರೇಂದ್ರ ಮೋದಿಯವರ ಭಾವಚಿತ್ರವಷ್ಟೇ ವಿಜೃಂಭಿಸುತ್ತದೆ. ಮೋದಿ ವಾಸ್ತವವಾಗಿ ಶರ್ಮಾರನ್ನು ದಿಲ್ಲಿಗೆ ಕರೆತರುವ ಆಸಕ್ತಿ ಹೊಂದಿದ್ದಾರೆಯೇ ಎನ್ನುವುದು ಪ್ರಶ್ನೆ.
ತಂತ್ರಕ್ಕೆ ಪ್ರತಿತಂತ್ರ
ಚಕ್ರದ ಒಳಗೆ ಚಕ್ರವಿದೆ; ಕಾರಣಗಳ ಹಿಂದೆ ಕಾರಣಗಳಿವೆ. ಅಹ್ಮದ್ ಪಟೇಲ್ ಹೇಗೆ ರಾಜ್ಯಸಭಾ ಸ್ಥಾನವನ್ನು ಗುಜರಾತ್‌ನಲ್ಲಿ ತಮ್ಮ ಪಕ್ಷಕ್ಕೆ ಗೆದ್ದುಕೊಟ್ಟರು ಎನ್ನುವ ಬಗ್ಗೆ ತನಿಖೆ ಕೈಗೊಳ್ಳುವ ಬಹಳಷ್ಟು ಮಂದಿಗೆ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಎನ್‌ಸಿಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವಂತೆ ಆದೇಶ ನೀಡಿದ್ದಾಗಿ ಪಕ್ಷದ ಮುಖಂಡ ಶರದ್ ಪವಾರ್ ಬಹಿರಂಗಪಡಿಸಿದಾಗ, ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿತ್ತು. ಇದರ ಬದಲಾಗಿ ಎನ್‌ಸಿಪಿ ಇತ್ತೀಚಿನ ಸಂಪುಟ ಪುನಾರಚನೆ ವೇಳೆ ಬಿಜೆಪಿ ಸರಕಾರವನ್ನು ಸೇರುತ್ತದೆ ಎಂಬ ವದಂತಿಯಲ್ಲಿ ನಿಜಾಂಶವಿದೆ ಎಂದೇ ಆ ಪಕ್ಷ ನಂಬಿತ್ತು. ಎನ್‌ಸಿಪಿ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಅಪನಂಬಿಕೆಗೆ ಮುಖ್ಯ ಕಾರಣ, ಮುಖಂಡರೊಬ್ಬರು ಹೇಳುವಂತೆ, ಎರಡು ವರ್ಷಗಳಿಂದ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರ ಏಕೈಕ ಕಾರ್ಯಸೂಚಿಯೆಂದರೆ, ಮರಾಠಾ ಪ್ರದೇಶದ ಪ್ರಮುಖ ನಾಯಕನನ್ನು ಮೋದಿ ಜತೆಗೂಡಿಸುವುದಾಗಿತ್ತು. ಆದರೆ ಪವಾರ್ ಇನ್ನೂ ದ್ವಂದ್ವದಲ್ಲಿದ್ದಾರೆ. ಪಟೇಲ್, ಬಿಜೆಪಿಯ ಕಿಂಗ್‌ಮೇಕರ್ ಅಮಿತ್ ಶಾ ಅವರ ಸಂಪರ್ಕದಲ್ಲಿದ್ದರು ಎನ್ನುವುದು ಇದೀಗ ಕಾಂಗ್ರೆಸ್‌ಗೆ ತಿಳಿದುಬಂದಿದೆ. ಗುಜರಾತ್ ಚುನಾವಣೆ ನಡೆಯುವ ಮುನ್ನವೇ ಕನಿಷ್ಠ ಮೂರು ಬಾರಿ ಇವರು ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಯಾರಿಗೂ ಈ ಸಭೆಯ ದಿನಾಂಕದ ಬಗ್ಗೆ ತಿಳಿದಿಲ್ಲ. ಅಂದರೆ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳುವ ಜತೆಗೆ ಎನ್‌ಸಿಪಿ ಶಾಸಕರನ್ನು ನೆಚ್ಚಿಕೊಳ್ಳದೆ, ಇತರ ಕಡೆಯಿಂದ ಬೇಟೆಯಾಡಿದೆ. ಈ ಮೂಲಕ ಕಾಂಗ್ರೆಸ್ ಎನ್‌ಸಿಪಿ ಹಾಗೂ ಬಿಜೆಪಿಗಿಂತ ಜಾಣ್ಮೆಯ ಆಟವಾಡಿದೆ.
ನಿರ್ಮಲಾಗೆ ಛಾನ್ಸ್ ಸಿಕ್ಕಿದ್ದು ಹೇಗೆ?
ನಿರ್ಮಲಾ ಸೀತಾರಾಮನ್ ದೇಶದ ಮೊತ್ತ್ಟಮೊದಲ ಪೂರ್ಣಾವಧಿ ಮಹಿಳಾ ರಕ್ಷಣಾ ಸಚಿವೆಯಾಗುವ ಮೂಲಕ ಗಾಜಿನಮನೆಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದರು. ಈ ಮಟ್ಟಕ್ಕೆ ನಿರ್ಮಲಾ ಬೆಳೆದದ್ದು ಹೇಗೆ ಎಂಬ ಸತ್ಯ ಇದೀಗ ಬಹಿರಂಗವಾಗಿದೆ. ನಿರಂತರವಾಗಿ ಭದ್ರತಾ ಸಲಹೆಗಾರರು ಹಾಗೂ ಪ್ರಧಾನಿ ಕಚೇರಿಯಿಂದ ಮಾರ್ಗರ್ಶನ ಹಾಗೂ ಸಲಹೆ ಸೂಚನೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ಹುದ್ದೆ ಕೇವಲ ಆಲಂಕಾರಿಕವಾಗಿದೆ. ಪ್ರಭಾವಿ ರಾಜಕಾರಣಿಗಳನ್ನು ಈ ಹುದ್ದೆಯಲ್ಲಿ ಕೂರಿಸುವುದು ಆಟಿಕೆಗೆ ಹಗ್ಗ ಕಟ್ಟಿದಂತಾಗುತ್ತದೆ. ಆದರೆ ಈ ಹುದ್ದೆಗೆ ನಿರ್ಮಲಾ ಮೊದಲ ಆಯ್ಕೆಯಾಗಿರಲಿಲ್ಲ. ಹಿರಿಯ ಸಚಿವರಾದ ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರಿಗೆ ರಕ್ಷಣಾ ಖಾತೆಯ ಆಫರ್ ಅನೌಪಚಾರಿಕವಾಗಿ ಬಂದಿತ್ತು. ಆದರೆ ತಮಗೆ ನೀಡಿರುವ ಜವಾಬ್ದಾರಿಗಳಲ್ಲೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿ, ಅವಕಾಶವನ್ನು ನಯವಾಗಿ ನಿರಾಕರಿಸಿದರು. ಇವರು ಈ ಮೊದಲು ರಕ್ಷಣಾ ಖಾತೆ ನಿರ್ವಹಿಸಿದ ಅರುಣ್ ಜೇಟ್ಲಿ ಜತೆಗೆ ಅನಧಿಕೃತವಾಗಿ ಸಭೆ ನಡೆಸಿ, ಸೂಕ್ತ ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಇಲ್ಲಿ ಸೀತಾರಾಮನ್ ಹೆಸರು ಪ್ರಸ್ತಾಪವಾಯಿತು. ಆರಂಭದಲ್ಲಿ ಸೀತಾರಾಮನ್ ಈ ಹುದ್ದೆಗೆ ಸೂಕ್ತ ಆಯ್ಕೆ ಅಲ್ಲದಿದ್ದರೂ, ಇದೀಗ ಎಲ್ಲರ ಕಣ್ಣು, ಅವರು ಯಾವುದಾದರೂ ಬದಲಾವಣೆ ತರುತ್ತಾರೆಯೇ ಎನ್ನುವುದರ ಮೇಲೆ ನೆಟ್ಟಿದೆ.
ರಾಹುಲ್ ತಪ್ಪಿಲ್ಲ
ಬಿಜೆಪಿಯ ಐಟಿ ವಿಭಾಗ, ರಾಹುಲ್ ಗಾಂಧಿಯವರು ಅಮೆರಿಕದ ಬರ್‌ಕ್ಲೆ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದಿಂದ ರೋಮಾಂಚನಗೊಂಡಿತ್ತು. ರಾಹುಲ್ ಭಾಷಣದಲ್ಲಿ ತಪ್ಪುಗಳು ತುಂಬಿರುತ್ತವೆ. ಆದ್ದರಿಂದ ರಾಹುಲ್ ಅವರನ್ನು ಟ್ವಿಟರ್‌ನಲ್ಲಿ ಅಣಕಿಸಲು ಸಾಕಷ್ಟು ಅವಕಾಶ ಸಿಗುತ್ತದೆ ಎಂಬ ಭ್ರಮೆಯಲ್ಲಿತ್ತು. ಅದರೆ ಅವರ ದುರದೃಷ್ಟಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ಎಲ್ಲೂ ಎಡವಲೇ ಇಲ್ಲ. ಅವರ ಉತ್ತರಗಳು, ಅದ ರಲ್ಲೂ ಮುಖ್ಯವಾಗಿ ವಂಶಪಾರಂಪರ್ಯದ ಬಗೆಗಿನ ಪ್ರಶ್ನೆಗೆ ಇನ್ನಷ್ಟು ಉತ್ತಮವಾಗಿರಬಹುದಿತ್ತು. ಅದರೆ ಒಟ್ಟಾರೆಯಾಗಿ ಕೆಟ್ಟ ನಿರ್ವಹಣೆ ತೋರಲಿಲ್ಲ. ರಾಹುಲ್ ಬಗ್ಗೆ ಟ್ವಿಟರ್‌ನಲ್ಲಿ ಧನಾತ್ಮಕ ಟ್ವೀಟ್‌ಗಳು ಹರಿದಾಡುತ್ತಿದ್ದಂತೆ, ಬಿಜೆಪಿ ಐಟಿ ವಿಭಾಗ ರಾಹುಲ್ ಅವರ ವಿರುದ್ಧ ಪ್ರತಿದಾಳಿಗೆ ಸ್ಮತಿ ಇರಾನಿಯನ್ನು ಕಣಕ್ಕೆ ತಂದಿತು. ಅದು ಕೂಡಾ ರಾಹುಲ್ ಭಾಷಣದ ಧನಾತ್ಮಕ ಇಮೇಜ್‌ಗೆ ಧಕ್ಕೆ ತರಲಿಲ್ಲ. ಒಬ್ಬ ಬಿಜೆಪಿ ಮುಖಂಡರು, ಉತ್ತಮವಾಗಿ ಮಾತನಾಡುವ ರಾಹುಲ್‌ಗಾಂಧಿಯವರ ಅವಕಾಶದಲ್ಲಿ ಒಂದಾದರೂ ಪೂರ್ಣಗೊಂಡಿತು ಎಂಬ ನಿರ್ಣಯಕ್ಕೆ ಬಂದರು. ''ಇನ್ನು ಮುಂದೆ ಅವರು ತಪ್ಪುಗಳನ್ನೇ ಮಾಡುತ್ತಾರೆ'' ಎಂದು ಹೇಳಿದರು. ಬಿಜೆಪಿ ನಾಯಕರ ಮಾತನ್ನು ರಾಹುಲ್ ಗಾಂಧಿ ಸತ್ಯ ಮಾಡುತ್ತಾರೆಯೇ?
ಬಿಜೆಪಿಗೆ ಮುಕುಲ್?
ಕಳೆದ ವಾರ ತೃಣಮೂಲ ಕಾಂಗ್ರೆಸ್ ಸಂಸದ ಮುಕುಲ್ ರಾಯ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿರುವುದು ಬಂಗಾಳದ ಬಗ್ಗೆ ಆಸಕ್ತಿ ಇರುವ ಪತ್ರಕರ್ತರಲ್ಲಿ ಸಂಚಲನಕ್ಕೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ಇತ್ತೀಚೆಗೆ ಮುಕುಲ್ ಅವರನ್ನು ಸಂಸದೀಯ ಸಮಿತಿಯ ಹುದ್ದೆಯಿಂದ ಕಿತ್ತುಹಾಕಿತ್ತು. ಇದಕ್ಕೆ ಬಿಜೆಪಿ ಜತೆಗಿನ ಅವರ ಸಖ್ಯ ಕಾರಣ ಎನ್ನಲಾಗುತ್ತಿದೆ. ''ಯಾರಿಗೆ ಬಿಜೆಪಿ ಬಗ್ಗೆ ಒಲವು ಇದೆಯೋ ಅವರು ನೇರವಾಗಿ ಹೋಗಬಹುದು'' ಎಂದು ಮಮತಾ ಬ್ಯಾನರ್ಜಿ, ಕಳೆದ ವಾರ ಕೋಲ್ಕತಾದಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಗುಡುಗಿದ್ದರು. ರಾಯ್ ಹಿಂದೊಮ್ಮೆ ಮಮತಾಗೆ ನಿಕಟವರ್ತಿ ಎನಿಸಿಕೊಂಡಿದ್ದರು. ಎಷ್ಟು ಆಪ್ತರಾಗಿದ್ದರು ಎಂದರೆ, ಅವರು ಹೇಳಿದ ಮಾತೆಂದರೆ ಸ್ವತಃ ದೀದಿ ಹೇಳಿದ ಮಾತು ಎಂಬಂತೆ ಪಕ್ಷದಲ್ಲಿ ಪರಿಗಣಿಸಲಾಗುತ್ತಿತ್ತು. ರಾಜ್ಯದಲ್ಲಿ ಪಕ್ಷದ ಯಶೋಗಾಥೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದೂ ಹೇಳಲಾಗುತ್ತಿತ್ತು. ಆದರೆ ಅವರು ನಿಧಾನವಾಗಿ ಮೂಲೆಗುಂಪಾಗುತ್ತಿದ್ದಾರೆ. ಇವರು ಬಿಜೆಪಿಗೆ ಅಮೂಲ್ಯ ಕೊಡುಗೆಯಾಗುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ.