ಭಯೋತ್ಪಾದನೆಯಿಂದ ಬಾಯ್ಮುಚ್ಚಿಸುವುದು ತಪ್ಪು: ವಿ ಮನೋಹರ್
ಬೆಂಗಳೂರು, ಸೆ. 17: ವಿಚಾರವಂತರಾಗಿ ಬರೆಯುವವರನ್ನು, ಭಾಷಣಕಾರರನ್ನು ಭಯೋತ್ಪಾದನೆ ಮೂಲಕ ಬಾಯ್ಮುಚ್ಚಿಸುತ್ತಿರುವುದು ನಿಜಕ್ಕೂ ದುರಂತ ಎಂದು ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ವಿ ಮನೋಹರ್ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಹಂತಕರ ಗುಂಡಿಗೆ ಬಲಿಯಾದ ಖ್ಯಾತ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಸ್ಮರಣಾರ್ಥ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಮಾತುಗಳನ್ನು ಹೇಳಿದರು.
'ಅಗಲಿದ ಗೌರಿಗೆ ಆತ್ಮೀಯ ನಮನ' ಎಂಬ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಗೌರಿ ಲಂಕೇಶ್ ರ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಿದ್ದೆ. ಅದಕ್ಕೂ ಮೊದಲು ಲಂಕೇಶ್ ಮೇಷ್ಟ್ರ ಪತ್ರಿಕೆಗೆ 'ಪಾಪು' ಎಂಬ ಹೆಸರಲ್ಲಿ ಕಾರ್ಟೂನ್ ಬರೆಯುತ್ತಿದ್ದೆ. ಲಂಕೇಶ್ ಅವರು ಆರಂಭದಿಂದಲೇ ಆತ್ಮೀಯ ಪ್ರೋತ್ಸಾಹ ನೀಡಿದಂಥ ವ್ಯಕ್ತಿಯಾಗಿದ್ದರು" ಎಂದು ತಮ್ಮ ಮತ್ತು ಲಂಕೇಶ್ ಪತ್ರಿಕೆಯ ಬಾಂಧವ್ಯವನ್ನು ಸ್ಮರಿಸಿಕೊಂಡರು.
ಅದು 'ನೆನಪಿನಂಗಳದಲ್ಲಿ ಮಾಸುತ್ತಿರುವ ಗೀತ ಸಂಯೋಜನೆಗಳು ಮತ್ತು ಭಾವದಂಗಳದಲ್ಲಿ ಮೂಡುತ್ತಿರುವ ನವ್ಯ ಸಂಗೀತಗಳು' ಇವೆರಡನ್ನು ಸಮಾಗಮಗೊಳಿಸಿ ರಂಗ ತರಂಗ ಟ್ರಸ್ಟ್ ನಡೆಸಿ ಕೊಟ್ಟ 'ಹಳೇ ಬೇರು ಹೊಸ ಚಿಗುರು' ಎಂಬ ಕಾರ್ಯಕ್ರಮವಾಗಿತ್ತು. ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೋಗೇಶ್ ಮಾಸ್ಟರ್ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಮ್ಯಾನ್ಯುಯೆಲ್ಸ್ ಸಂಗೀತ ಶಾಲೆಯ ಪ್ರಶಾಂತ್ ಎಂ ಅಗೇರ ಉಪಸ್ಥಿತರಿದ್ದರು. ಚಿನ್ಮಯಿ ಪ್ರಾರ್ಥಿಸಿದರು.