ಸೆ. 21 ರಿಂದ ದಸರಾ ಚಲನ ಚಿತ್ರೋತ್ಸವ: ಐನಾಕ್ಸ್, ಡಿಆರ್ ಸಿ ಚಿತ್ರಮಂದಿಗಳಲ್ಲಿ ಪ್ರದರ್ಶನ
ಮೈಸೂರು, ಸೆ.17: ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ದಸರಾ ಚಲನಚಿತ್ರೋತ್ಸವ ಸೆಪ್ಟೆಂಬರ್ 21 ರಿಂದ 28 ರವರೆಗೆ ಮೊದಲ ಬಾರಿಗೆ ಐನಾಕ್ಸ್ ಮತ್ತು ಡಿ.ಆರ್.ಸಿ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದೆ.
ದಸರಾ ಚಲನಚಿತ್ರ ಉಪಸಮಿತಿಯ ಅಧ್ಯಕ್ಷ ರಾಚಪ್ಪ ಯಳಂದೂರು ಅವರ ನೇತೃತ್ವದಲ್ಲಿ ಚಲನಚಿತ್ರೋತ್ಸವದ ಸಭೆ ವಾರ್ತಾಭವನದಲ್ಲಿ ರವಿವಾರ ನಡೆಯಿತು.
ಈ ವೇಳೆ ಉಪಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ಮಾತನಾಡಿ, ವಿನೂತನವಾಗಿ ದಸರಾ ಚಿತ್ರೋತ್ಸವ ನಡೆಸುತ್ತಿದ್ದು, ಎಲ್ಲ ಸಿದ್ಧತೆಗಳು ನಡೆದಿದೆ ಎಂದು ತಿಳಿಸಿದರು.
ಉಪಸಮಿತಿಯ ಕಾರ್ಯಾಧ್ಯಕ್ಷ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೆಶಕ ಆರ್.ರಾಜು ಮಾತನಾಡಿ, ಚಿತ್ರೋತ್ಸವದ ಯಶಸ್ಸಿಗಾಗಿ ಆರ್ಟಿಸ್ಟಿಕ್ ನಿರ್ದೆಶಕರನ್ನಾಗಿ ಮೈಸೂರು ಫಿಲಂ ಸೊಸೈಟಿಯ ಮನು ಅವರ ಸಮ್ಮುಖದಲ್ಲಿ ಪ್ರದರ್ಶನವಾಗಲಿರುವ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಡಿಆರ್ ಸಿ ಚಿತ್ರಮಂದಿರದಲ್ಲಿ ಪ್ರತಿದಿನ ನಾಲ್ಕು ಕನ್ನಡ ಚಿತ್ರಗಳು ಪ್ರದರ್ಶನವಾಗಲಿದ್ದು, ರೂ.30 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಮೈಸೂರಿಗೆ ಅಥಿತಿಗಳಾಗಿ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಉಚಿತ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬಾಲ ಮಂದಿರ ಮಕ್ಕಳಿಗೂ ಉಚಿತ ಪ್ರದರ್ಶನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ರಾಷ್ಟ್ರೀಯ ಮತ್ತು ವಿದೇಶದ, ಪ್ರಖ್ಯಾತ ಚಿತ್ರಗಳು ಇರಲಿದೆ. 300 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 21 ರಂದು ಕಲಾಮಂದಿರದಲ್ಲಿ ನಡೆಯಲಿದ್ದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಹಾಗೂ ಚಿತ್ರಕಲಾವಿದರಾದ ಆದಿತ್ಯ, ಧ್ರುವ ಸರ್ಜಾ, ರಚಿತಾ ರಾಮ್, ನಂದ ಕಿಶೋರ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತು ಶೋಭರಾಜ್, ಒಂದು ಮೊಟ್ಟೆಯ ಕಥೆ, ರಣರಣಕ ಚಿತ್ರ ತಂಡದವರು ವೇದಿಕೆಯಲ್ಲಿ ಇರಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದ ಬಳಿಕ ಒಂದು ಮೊಟ್ಟೆಯ ಕಥೆ ಚಿತ್ರ ಪ್ರದರ್ಶನ ನಡೆಯಲಿದೆ. ಸೆಪ್ಟಂಬರ್ 22 ರಂದು ಮನಮಂಥನ ಚಿತ್ರ ನಿರ್ದೆಶಕ ಸುರೇಶ್ ಹೆಬ್ಳಿಕರ್ ಅವರು ಐನಾಕ್ಸ್ ಚಿತ್ರಮಂದಿರದಲ್ಲಿ ಸಂವಾದ ನಡೆಸಲಿದ್ದಾರೆ. 27 ರಂದು `ಮಾರಿಕೊಂಡವರು' ಚಿತ್ರ ನಿರ್ದೇಶಕ ಶಿವರುದ್ರಯ್ಯ ಅವರು ಸಿನಿರಸಿಕರೊಡನೆ ಐನಾಕ್ಸ್ ಚಿತ್ರಮಂದಿರದಲ್ಲಿ ಸಂವಾದ ನಡೆಸಲಿದ್ದಾರೆ. ವಿಶೇಷವಾಗಿ ಮನಃಪರಿವರ್ತನೆಯ ಸಂದೇಶ ಇರುವ ಚಿತ್ರ ರಾಮಾ ರಾಮಾರೇ ಪ್ರದರ್ಶನವನ್ನು ಕೇಂದ್ರ ಕಾರಾಗ್ರಹದಲ್ಲಿ ಸೆಪ್ಟೆಂಬರ್ 24 ರಂದು ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಬಾರಿಯ ದಸರಾ ಚಲನಚಿತ್ರವನ್ನು ದಸರಾ ಮಹೋತ್ಸವ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಗೋಥೆ ಇನ್ಸ್ಟಿಟ್ಯೂಟ್, ದಿ. ಇರಾನಿಯನ್ ಕಲ್ಚರಲ್ ಹೌಸ್ ಹಾಗೂ ರಷಿಯನ್ ಸೆಂಟರ್ ಫಾರ್ ಸೈನ್ಸ್ ಮತ್ತು ಕಲ್ಚರಲ್ ಸಹಯೋಗದಲ್ಲಿ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷರಾದ ರವಿಚಂದ್ರು, ಉಪಸಮಿತಿಯ ಸದಸ್ಯರಾದ ಕೆ.ಎಸ್. ಶಿವರಾಮು ಹಾಗೂ ಸದಸ್ಯರು ಉಪಸ್ಥಿತರಿದ್ದರು.