ಎಚ್ಚರಿಕೆ,ಹದಿಹರೆಯದವರಲ್ಲಿ ಅಧಿಕ ರಕ್ತದೊತ್ತಡ ಪ್ರಮುಖ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ
ಸಹಜ ರಕ್ತದೊತ್ತಡವು ನಮ್ಮ ಶರೀರದ ಸುಗಮ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ರಕ್ತದೊತ್ತಡದಲ್ಲಿ ಏರಿಳಿತಗಳು ನಮ್ಮ ಪ್ರಮುಖ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಈ ಸಮಸ್ಯೆ ವಯಸ್ಕರಲ್ಲಿ ಮತ್ತು ಹಿರಿಯರಲ್ಲಿ ಸಾಮಾನ್ಯ. ಆದರೆ ಈಗ ಈ ಸಮಸ್ಯೆ ಹದಿಹರೆಯದವರನ್ನೂ ಕಾಡಲಾರಂಭಿಸಿರುವುದು ಇತ್ತೀಚಿನ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡದಿಂದ ಹಾನಿಗೀಡಾಗುವ ಪ್ರಮುಖ ಅಂಗಗಳೆಂದರೆ ಹೃದಯ ಮತ್ತು ರಕ್ತನಾಳಗಳು.
ವಯಸ್ಕರಲ್ಲಿ ಅಧಿಕ ರಕ್ತದೊತ್ತಡವು ರಕ್ತದೊತ್ತಡದ ಮಟ್ಟವನ್ನು ಆಧರಿಸಿದ್ದರೆ, ಹದಿಹರೆಯದವರಲ್ಲಿ ಇದಕ್ಕೆ ಶೇಕಡಾವಾರು ಪ್ರಮಾಣವನ್ನು ಪರಿಗಣಿಸಲಾಗುತ್ತದೆ. 14ರಿಂದ 17ವರ್ಷ ವಯೋಮಾನದ 180 ಹದಿಹರೆಯದವರನ್ನು ಅಧ್ಯಯನಕ್ಕೊಳ ಪಡಿಸಲಾಗಿದ್ದು, ಶೇ.80ಕ್ಕೂ ಕಡಿಮೆ ರಕ್ತದೊತ್ತಡದೊಂದಿಗೆ ‘ಸಾಮಾನ್ಯ’ವರ್ಗದಲ್ಲಿ ಪರಿಗಣಿಸಲ್ಪಟ್ಟವರಲ್ಲಿಯೂ ಅಂಗಾಂಗ ಹಾನಿಯು ಬೆಳಕಿಗೆ ಬಂದಿದೆ.
80ರಿಂದ 90 ಶೇಕಡಾ ರಕ್ತದೊತ್ತಡ ಹೊಂದಿರುವ ಮಧ್ಯಮ-ಅಪಾಯ ಮತ್ತು ಶೇ.90ಕ್ಕೂ ಹೆಚ್ಚಿನ ರಕ್ತದೊತ್ತಡದೊಂದಿಗೆ ಅಧಿಕ-ಅಪಾಯ ಗುಂಪಿನವರಲ್ಲಿ ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗಿದ್ದುದು ಸಹ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ಅತ್ಯುತ್ತಮ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ಆರೋಗ್ಯಕರ ಆಹಾರ
ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಆರೋಗ್ಯಕರ ಆಹಾರ ಸೇವನೆ ಅತಿ ಅಗತ್ಯವಾಗಿದೆ. ನಾರಿನಂಶ ಮತ್ತು ಇತರ ಖನಿಜಗಳು ಸಮೃದ್ಧವಾಗಿರುವ,ಕಡಿಮೆ ಕೊಬ್ಬು ಹೊಂದಿರುವ, ಹೇರಳ ಹಣ್ಣುಹಂಪಲಗಳು ಮತ್ತು ತರಕಾರಿಗಳನ್ನೊಳಗೊಂಡ ಆಹಾರವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.
ನಿಯಮಿತ ವ್ಯಾಯಾಮ
ನಿಯಮಿತವಾದ, ಅತಿಯಲ್ಲದ ವ್ಯಾಯಾಮ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಯಾಗಿದೆ. ಅರ್ಧ ಗಂಟೆ ಬಿರುಸಿನ ವಾಕಿಂಗ್ ಮಾಡಿದರೂ ಸಾಕು.
ಕಡಿಮೆ ಉಪ್ಪು ಸೇವನೆ
ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚುತ್ತದೆ ಮತ್ತು ಇದು ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವ ಮೂತ್ರಪಿಂಡಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ. ದೇಹದಲ್ಲಿ ಹೆಚ್ಚಿನ ದ್ರವಗಳು ಉಳಿದುಕೊಂಡರೆ ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಕಡಿಮೆ ಉಪ್ಪನ್ನು ಸೇವಿಸುವುದು ಅಗತ್ಯವಾಗಿದೆ.
ಕಡಿಮೆ ಮದ್ಯಪಾನ
ಮದ್ಯಪಾನಿಗಳಾಗಿದ್ದಲ್ಲಿ ಮತ್ತು ರಕ್ತದೊತ್ತಡವು ಅಧಿಕವಾಗಿದ್ದರೆ ಮದ್ಯ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವುದು ಅತ್ಯಂತ ಮುಖ್ಯವಾಗಿದೆ.
ಧೂಮಪಾನ ಬೇಡ
ಧೂಮಪಾನವು ನಮ್ಮ ಶರೀರದಲ್ಲಿ ಸಹಜ ರಕ್ತಸಂಚಾರದ ಮೇಲೆ ದುಷ್ಪರಿಣಾಮ ವನ್ನುಂಟು ಮಾಡುತ್ತದೆ. ಇದರಿಂದಾಗಿ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ ಮತ್ತು ರಕ್ತದೊತ್ತಡ ಹೆಚ್ಚಲು ಇದು ಪ್ರಮುಖ ಕಾರಣವಾಗಿದೆ. ಧೂಮಪಾನವನ್ನು ವರ್ಜಿಸುವುದು ಅಧಿಕ ರಕ್ತದೊತ್ತಡವನ್ನು ತಡೆಯಲು ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ.