ಮೈಸೂರಿನಲ್ಲಿ ಕಳೆಗಟ್ಟುತ್ತಿದೆ ನಾಡ ವೈಭವ, ದಸರಾ ಉದ್ಘಾಟನೆಗೆ ಇನ್ನು ಒಂದು ದಿನ ಬಾಕಿ
ಮೈಸೂರು, ಸೆ.19: ಮೈಸೂರು ದಸರಾ ಎಷ್ಟೊಂದು ಸುಂದರ ಈ ನಾಮಾಂಕಿತ ದಸರಾ ವೈಭವದ ಎಲ್ಲಾ ಕಾರ್ಯಕ್ರಮಗಳನ್ನು ಒಂದುಗೂಡಿಸುತ್ತದೆ. ಇಲ್ಲಿನ ದಸರಾದ ಮಹತ್ವವೇ ಅಂತಹುದು ನಾಡಿನ ವೈಭವ ದಿನೇ ದಿನೇ ಕಳೆಗಟ್ಟುತಿದ್ದು, ಇಲ್ಲಿನ ವೈಭವವನ್ನು ಒಮ್ಮೆ ಕಣ್ತುಂಬಿಕೊಂಡರೇ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಅಂತಹ ಅದ್ಭುತವೇ ವಿಶ್ವವಿಖ್ಯಾ ಮೈಸೂರು ದಸರಾ.
ನಾಡ ಹಬ್ಬ ದಸರಾ ಮಹೋತ್ಸವದ ಸಿದ್ಧತೆ ಬರದಿಂದ ಸಾಗುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ. ದಸರಾ ಉದ್ಘಾಟನೆಗೆ ಇನ್ನು ಒಂದು ದಿನ ಬಾಕಿ ಇದ್ದು, ಖ್ಯಾತ ಸಾಹಿತಿ ನಿಸಾರ್ ಅಹ್ಮದ್ ಸೆ.21 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ. 8.45ಕ್ಕೆ ಸಲ್ಲುವ ಶುಭ ತಲಾ ಲಗ್ನದಲ್ಲಿ ದಸರಾ ಉದ್ಘಾಟನೆಗೆ ಚಾಲನೆ ನೀಡುವರು.
ದಸರಾ ಸಮೀಪುಸುತ್ತಿದ್ದಂತೆ ಗರಿದೆರಿದ ಜಿಲ್ಲಾಡಳಿತ ನಗರದ ಸೌಂಧರ್ಯ ಹೆಚ್ಚಲು ಹಲವಾರು ರೀತಿಯ ಅಭಿವೃದ್ಧಿಯನ್ನು ಕೈಗೊಂಡಿದ್ದು, ರಸ್ತೆಗಳ ಡಾಂಬರೀಕರಣ, ಪಾರಂಪರಿಕ ಕಟ್ಟಡಗಳಿಗೆ ಸುಣ್ಣ ಬಣ್ಣ ಸೇರಿದಂತೆ ಸಣ್ಣ ಪುಟ್ಟ ರಿಪೇರಿ ಮಾಡಿ ಮುಗಿಸಿದೆ. ದಸರಾ ಆಚರಣೆಗಾಗಿ ಸರ್ಕಾರ ಮೊದಲ ಹಂತದಲ್ಲಿ 10ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನು ಹೆಚ್ಚುವರಿಯಾಗಿ 5ಕೋಟಿ.ರೂ ನೀಡಲಿದೆ.
ಸಾಮಾನ್ಯ ದಿನಗಳಲ್ಲಿ ಮೈಸೂರಿನ ಸೌಂಧರ್ಯವನ್ನು ನೋಡಲು ದೇಶ ಸೇರಿದಂತೆ ವಿದೇಶಗಳಿಂದ ಸಾವಿರಾರು ಜನರು ಬರುತ್ತಾರೆ. ಅಂತಹದರಲ್ಲಿ ದಸರಾ ಎಂದರೆ ಪ್ರವಾಸಿಗರು ಸೇರಿದಂತೆ ನಾಡಿನ ಜನರಿಗೆ ಸಂಭ್ರಮದ ಹಬ್ಬ.
ದಸರಾ ಪ್ರಾರಂಭವಾಗುವ ದಿನದಿಂದ ಮುಗಿಯುವವರೆಗೆ ಅಂದರೆ ನವರಾತ್ರಿಯ 9 ದಿನಗಳು ನಾಡಿನ ಇತಿಹಾಸವನ್ನು ಮರುಕಳಿಸುತ್ತವೆ. ಇಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದು. ಪ್ರತಿ ದಿನ ಪ್ರತಿಯೊಂದು ಸ್ಥಳಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮ. ರಾತ್ರಿ ಆದರೆ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಈ ಸಂದರ್ಭವನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ.
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆದ ನಂತರ ನಗರದಲ್ಲಿ ವಿವಿಧ ಕಾರ್ಯಕ್ರಮಗಳು ಅನಾವರಣಗೊಳ್ಳುತ್ತವೆ. ಕುಪ್ಪಣ್ಣ ಪಾರ್ಕ್‍ನಲ್ಲಿ ಫಲಪುಷ್ಪ ಪ್ರದರ್ಶನವಾದರೆ, ಜಗನ್ಮೋಹನ ಅರಮನೆಯಲ್ಲಿ ನಾಟಕ, ಕಲಾಮಂದಿರದಲ್ಲಿ ಚಲನಚಿತ್ರೋವ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡುತ್ತವೆ.
ಇನ್ನು ಆಹಾರ ಮೇಳ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವರುಣ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ. ಕಲಾಮಂದಿರದ ಮನೆಯಂಗಳದಲ್ಲಿ ಕವಿಗೋಷ್ಠಿ, ಜೆ.ಕೆ.ಮೈದಾನದಲ್ಲಿ ರೈತ ದಸರಾ, ಮಹಿಳಾ ದಸರಾ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಒಂದೇ ಊರಿನಲ್ಲಿ ನಡೆಯುವುದು ಅಪರೂಪ. ಯುವಕರನ್ನು ಹುಚ್ಚೆದ್ದು ಕುಣಿಸುವ ಯುವ ದಸರಾ ಮಹರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಖ್ಯಾತ ನಟ, ನಟಿಯರು, ಸಂಗೀತ ಹಿನ್ನಲೆ ಗಾಯಕರು ಭಾಗವಹಿಸಲಿದ್ದಾರೆ.
ಇಲ್ಲಿನ ಜನರು ತಮ್ಮ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಸಾಂಸ್ಕೃತಿಕ ವೈಭವನ್ನು ಹೆಚ್ಚಿಸಲಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳು ಒಂದೆಡೆ ನಡೆದರೆ ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿಯನ್ನು ನೋಡುವುದೇ ಒಂದು ಅದ್ಭುತ. ಜಂಬೂ ಸವಾರಿ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾಪ್ರಾಕಾರಗಳು ಅನಾವರಣಗೊಳ್ಳಲಿವೆ.
ಈ ಬಾರಿಯ ವಿಶೇಷ ಎಂದರೆ ಗಣರಾಜ್ಯೋತ್ಸವ ಮಾದರಿಯಲ್ಲಿ ಪೆರೇಡ್ ನಡೆಯಲಿದೆ. ಇವೆಲ್ಲ ಕಾರ್ಯಕ್ರಮಗಳು ಅರಮನೆಯಿಂದ ಪ್ರಾರಂಭವಾಗಿ ಸಯ್ಯಾಜಿ ರಾವ್ ರಸ್ತೆಯ ಮೂಲಕ ಬನ್ನಿಮಂಟಪ ತಲುಪುತ್ತವೆ.
ಆನೆ ಅರ್ಜುನನ ಮೇಲೆ ಚಿನ್ನದ ಅಂಭಾರಿಯಲ್ಲಿ ವಿರಾಜಮಾನವಳಾಗಿ ಕುಳಿತು ಬರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಕಂಡ ತಕ್ಷಣ ಕೆಲ ಕ್ಷಣ ಜನರು ನಿಶಬ್ದಗೊಳ್ಳುತ್ತಾರೆ. ನಂತರ ಅಧಿದೇವತೆಗೆ ಜೈಕಾರ ಹಾಕಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಈ ಒಂದು ಗಳಿಗೆಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳೇ ಸಾಲದು.