ಮೈಸೂರು ದಸರಾ ಹಿನ್ನೆಲೆ: ಜಿಲ್ಲೆಗೆ ಸೆ.20 ರಿಂದ ಮುಖ್ಯಮಂತ್ರಿ ಪ್ರವಾಸ
ಮೈಸೂರು, ಸೆ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 20 ರಿಂದ 22 ರವರೆಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆಪ್ಟೆಂಬರ್ 20 ರಂದು ಸಂಜೆ 4-10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸೆಪ್ಟೆಂಬರ್ 21 ರಂದು ಬೆಳಗ್ಗೆ 8.45ಕ್ಕೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜನೆಯೊಡನೆ 2017ರ ದಸರಾ ಮಹೋತ್ಸವ ಉದ್ಘಾಟಿಸುವರು. ಬಳಿಕ 10.30ಕ್ಕೆ ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡುವರು. 10.45ಕ್ಕೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಅಭಿವೃದ್ಧಿ ಪಡಿಸಿರುವ ದೂರದರ್ಶಕ (ಬೈನಾಕ್ಯುಲರ್) ಸೌಲಭ್ಯದ ಉದ್ಘಾಟನೆ ನೇರವೇರಿಸುವರು.11ಕ್ಕೆ ಚಾಮುಂಡಿ ಬೆಟ್ಟದ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಲಿದ್ದಾರೆ. 11.30ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟಿಸುವರು. ಬೆಳಿಗ್ಗೆ 11.45ಕ್ಕೆ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕಿರು ರಂಗಮಂದಿರ ಉದ್ಘಾಟಿಸುವರು. ಮಧ್ಯಾಹ್ನ 3.30ಕ್ಕೆ ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯವಾಳಿ ಉದ್ಘಾಟಿಸುವರು.
ಸಂಜೆ 6ಕ್ಕೆ ದಸರಾ ಅರಮನೆ ಸಾಂಸ್ಕೃತಿಕ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ ಮೈಸೂರು ವತಿಯಿಂದ ಆಯೋಜಿಸಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ ಪ್ರಶಸ್ತಿ-2017 ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸೆಪ್ಟೆಂಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.