ಮೈಸೂರಿಗೆ ಆಗಮಿಸಿದ ಪ್ರೊ.ನಿಸಾರ್ ಅಹ್ಮದ್: ಸ್ವಾಗತ ಕೋರಿದ ಜಿಲ್ಲಾಡಳಿತ
ಮೈಸೂರು, ಸೆ.20: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕ ನಾಡಿನ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಮೈಸೂರಿಗೆ ಆಗಮಿಸಿದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹಕ್ಕೆ ಪತ್ನಿ ಸಮೇತ ಆಗಮಿಸಿದ ಪ್ರೊ.ನಿಸಾರ್ ಅಹ್ಮದ್ ರನ್ನು ಜಿಲ್ಲಾಡಳಿತ ಆತ್ಮೀಯವಾಗಿ ಸ್ವಾಗತಿಸಿತು. ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ನಿಸಾರ್ ಅಹ್ಮದ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮೇಯರ್ ಎಂ.ಜೆ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್, ದಸರಾಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಿನ್ನೆಲೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿವೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗಾಗಿ ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಪಿಟೀಲು ವಾದಕ ಎಂದು ತಪ್ಪಾಗಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತವಾಗಿದೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಮುಂದಿನ ದಿನಗಳಲ್ಲಿ ಆಮಂತ್ರಣ ಪತ್ರಿಕೆ ದೋಷ ಸರಿಪಡಿಸಲು ಸೂಚಿಸಿದ್ದೇನೆ ಎಂದರು.
ಕವಿಗೋಷ್ಠಿ ಉಪ ಸಮಿತಿಗೆ ಮಾನಸ ರಾಜೀನಾಮೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕವಿಗೋಷ್ಠಿ ಉಪಾಧ್ಯಕ್ಷರೇ ಮುಂದೆ ಕವಿಗೋಷ್ಠಿ ಕಾರ್ಯನಿರ್ವಹಿಸಲಿದ್ದಾರೆ. ಉಪ ಸಮಿತಿಗಳಲ್ಲಿ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಗತ್ಯವಿದ್ದ ಕೆಲವನ್ನು ಮಾತ್ರ ಬದಲಾವಣೆ ಮಾಡಬಹುದು ಎಂದು ಹೇಳಿದರು.