ವಿಚಾರವಾದಿ ಬಿ.ವಿ.ವೀರಭದ್ರಪ್ಪ ನಿಧನ
ದಾವಣಗೆರೆ, ಸೆ.21: ಹಿರಿಯ ವಿಚಾರವಾದಿ, ಪ್ರಖರ ಚಿಂತಕ, ಪತ್ರಕರ್ತ ಬಿ.ವಿ.ವೀರಭದ್ರಪ್ಪ(83) ಇಂದು ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3:30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಎರಡು ದಶಕಗಳ ಕಾಲ ಲಂಕೇಶ್ ಪತ್ರಿಕೆ ಪ್ರತಿನಿಧಿ ಹಾಗೂ ೧೦೦ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿದ್ದ ವೀರಭದ್ರಪ್ಪ ಪತ್ರಿಕೋದ್ಯಮದಲ್ಲಿ ಗಮನ ಸೆಳೆದಿದ್ದರು. ಪ್ರೊ.ಬಿ.ವಿ.ವೀರಭದ್ರಪ್ಪ ಅವರ 'ವೇದಾಂತ ರೆಜಿಮೆಂಟ್' ಕೃತಿಯನ್ನು ಪಿ.ಲಂಕೇಶ್ ತಮ್ಮ ಪತ್ರಿಕೆ ಪ್ರಕಾಶನದಿಂದ ಪ್ರಕಟಿಸಿ ಬೆನ್ನುಡಿಯಲ್ಲಿ "ಕರ್ನಾಟಕದ ಅತ್ಯಂತ ಅಪರೂಪದ ವಿಚಾರವಂತರಲ್ಲಿ ವೀರಭದ್ರಪ್ಪ ಒಬ್ಬರು. ಈ ನಾಡಿನ ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವೈಚಾರಿಕ ನಿಲುವಿನಿಂದ ವಿಶ್ಲೇಷಿಸಿದ್ದಾರೆ. ಪುರೋಹಿತಶಾಹಿ ದಬ್ಬಾಳಿಕೆ ಇಲ್ಲಿ 'ವೇದಾಂತ ರೆಜಿಮೆಂಟ್' ಆಗಿದೆ" ಎಂದು ಮೆಚ್ಚುಗೆ ಸೂಚಿಸಿದ್ದರು.
ಸಂಜೆ ವೇಳೆಗೆ ಪ್ರೊ.ಬಿ.ವಿ.ವೀರಭದ್ರಪ್ಪ ಅವರ ಆಶಯದಂತೆ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ, ಬಂಧುಬಳಗವನ್ನು ಅಗಲಿದ್ದಾರೆ.