ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ: ಸಚಿವ ಯು.ಟಿ.ಖಾದರ್
ಮೈಸೂರು,ಸೆ.21: ರಾಜ್ಯದ ವಿವಿಧ ಭಾಗಗಳ ಆಹಾರ ಪದಾರ್ಥಗಳು ಒಂದೇ ಸೂರಿನಡಿ ರುಚಿಯಾದ ಮತ್ತು ಶುಚಿಯಾದ ಆಹಾರವನ್ನು ಜನರಿಗೆ ಉಣಬಡಿಸುವ ಜೊತೆಗೆ ಸಾಮಾಜಿಕ ಸಾಮರಸ್ಯ ಉಂಟುಮಾಡಲು ಪ್ರತೀ ವರ್ಷದಂತೆ ಈ ಬಾರಿಯೂ ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಸ್ಕೌಟ್ಸ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಕಡೆಗಳಿಂದ ಬಂದು ಒಳ್ಳೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕೆಂದು ಸೂಚಿಸಲಾಗಿದೆ. ಸಸ್ಯಹಾರ, ಮಾಂಸಹಾರ ಎರಡನ್ನೂ ಮಾರಾಟ ಮಾಡಲಾಗುವುದು, ಜೊತೆಗೆ ಕಳೆದ ಎರಡು ವರ್ಷಗಳಿಂದ ಜನಪ್ರಿಯಗೊಂಡಿರುವ ಹಾಡಿಗಳಲ್ಲಿ ತಯಾರಿಸುವ ಬೊಂಬೂ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಅದಕ್ಕಾಗಿ ಎರಡೂ ಸ್ಟಾಲ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದರು.
ಆಹಾರ ಮೇಳದಲ್ಲಿ ವಿವಿಧ ರೀತಿಯ ಆಟಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮನರಂಜಾ ಕಾರ್ಯಕ್ರಮ, ಕವಿಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮೇಳದ ಉಪ ಸಮಿತಿ ಅಧ್ಯಕ್ಷ ನಾಗರಾಜು, ವಿಶೇಷಾಧಿಕಾರಿ ಪಿ.ಶಿವಶಂಕರ್, ಕಾರ್ಯಾಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ, ಉಪಮೇಯರ್ ರತ್ನಲಕ್ಷ್ಮಣ್, ತಾ.ಪಂ.ಅಧ್ಯಕ್ಷೆ ಕಾಳೀರಮ್ಮ ಕೆಂಪರಾಮಯ್ಯ, ಸದಸ್ಯರಾದ ರಾಜಶೇಖರ್, ಕಾರ್ಯದರ್ಶಿ ಹಚ್.ಕೆ.ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.