ಪ್ರೊ.ಕೆ.ಎಸ್ ಉಪಾಧ್ಯ
ಉಡುಪಿ, ಸೆ. 22: ನಗರದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಇತಿಹಾಸದ ಕುರಿತಂತೆ ಹಲವು ಕೃತಿಗಳನ್ನು ರಚಿಸಿರುವ ಪ್ರೊ.ಕೆ. ಶ್ರೀಪತಿ ಉಪಾಧ್ಯ ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಕಡಿಯಾಳಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರಿಗೆ 86 ವರ್ಷ ಪ್ರಾಯವಾಗಿತ್ತು. ಪ್ರೊ.ಉಪಾಧ್ಯ ಅವರು ಪತ್ರಿಕಾ ಛಾಯಾಗ್ರಾಹಕ ದುರ್ಗಾಪ್ರಸಾದ್ ಕಡಿಯಾಳಿ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿಯ ಟೀಚರ್ಸ್ ಕೋಆಪರೇಟಿವ್ ಬ್ಯಾಂಕಿನ ಸ್ಥಾಪಕಾಧ್ಯಕ್ಷರಾಗಿದ್ದ ಪ್ರೊ.ಕೆ.ಎಸ್.ಉಪಾಧ್ಯರು, ಮಂಗಳೂರು ವಿವಿ ಸೆನೆಟ್‌ನ ಮಾಜಿ ಸದಸ್ಯರು. ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಸಹಾಯಕ ನಿರ್ದೇಶಕ ರಾಗಿಯೂ ಸೇವೆ ಸಲ್ಲಿಸಿದ್ದರು.
ಮಂಗಳೂರಿನ ಸೈಂಟ್ ಅಲಾಸಿಯಸ್ ಕಾಲೇಜಿನಲ್ಲಿ ಪದವಿ ಹಾಗೂ ಬನಾರಸ್ ಹಿಂದೂ ವಿವಿಯಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದಲ್ಲಿ 25 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವಾ ನಿವೃತ್ತರಾಗಿದ್ದರು. ‘ಹಿಸ್ಟರಿ ಆಪ್ ಸೌತ್‌ಇಂಡಿಯಾ’, ‘ಸಂಕ್ಷಿಪ್ತ ಜಾಗತಿಕ ಇತಿಹಾಸ’, ಭಾರತೀಯ ಸಂಸ್ಕೃತಿಯ ಅಧ್ಯಯನ ಹಾಗೂ ಕರ್ನಾಟಕದ ಇತಿಹಾಸ ಇವರು ರಚಿಸಿದ ಕೆಲವು ಕೃತಿಗಳು.