ನಾನು, ನಮ್ಮ ಕುಟುಂಬ ಎಂಬ ಸಂಸ್ಕೃತಿ ಮರೆಯಾಗುತ್ತಿದೆ: ನಾಗಲಕ್ಷ್ಮೀ ಬಾಯಿ
ಮೈಸೂರು, ಸೆ.23: ಇತ್ತೀಚಿನ ದಿನಗಳಲ್ಲಿ ಅತ್ತೆ ಸೊಸೆ ಒಂದಾಗಿರೋದು ಅಪರೂಪ. ನಾನು ನನ್ನ ಗಂಡ ಎಂಬ ಮನಸ್ಥಿತಿ ಇದೆ. ನಾನು, ನಮ್ಮ ಕುಟುಂಬ ಎಂಬ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ.ಮೈದಾನದಲ್ಲಿ ಏರ್ಪಡಿಸಿದ್ದ ಆದರ್ಶ ಅತ್ತೆ-ಸೊಸೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸ್ವರ್ಥಕ್ಕಾಗಿ ಬದುಕುವ ಪರಿಸ್ಥಿತಿ ಎದುರಾಗಿದೆ. ಸಂಸಾರ ಚೆನ್ನಾಗಿದ್ದರೆ ಸಮಾಜವು ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿದ್ದರೆ ದೇಶ ಸುಭದ್ರವಾಗಿರುತ್ತದೆ. ಕುಟುಂಬ ವ್ಯವಸ್ಥೆಯನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸುಮಾರು 20ಕ್ಕೂ ಹೆಚ್ಚು ಅತ್ತೆ-ಸೊಸೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸುಶೀಲ ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಉಪ ಮೇಯರ್ ರತ್ನ ಲಕ್ಷ್ಮಣ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಉಪ ಸಮಿತಿ ಉಪಾಧ್ಯಕ್ಷೆ ಲತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.