ಸಂಘರ್ಷವಿಲ್ಲದೇ ಶತಮಾನದ ಯುದ್ಧವನ್ನು ನಿಲ್ಲಿಸುವ ಕಾವ್ಯಗಳು ರಚನೆಯಾಗಬೇಕು: ಹಂಸಲೇಖ
ನಾಲ್ಕು ದಿಮಗಳ ದಸರಾ ಕವಿಗೋಷ್ಠಿಗೆ ಚಾಲನೆ
ಮೈಸೂರು, ಸೆ.24: ಶಸ್ತ್ರಾಸ್ತ್ರಗಳ ಸಂಘರ್ಷವಿಲ್ಲದೇ ಈ ಶತಮಾನದ ಯುದ್ಧವನ್ನು ನಿಲ್ಲಿಸುವಂತಹ ಕಾವ್ಯಗಳ ರಚನೆಯಾಗಬೇಕು ಎಂದು ಚಲನಚಿತ್ರ ಗೀತ ರಚನೆಕಾರ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದ್ದಾರೆ.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕವಿಗೋಷ್ಠಿಗೆ ರವಿವಾರ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ದಯೆ ಇಲ್ಲದ ಧರ್ಮ ಯಾವುದಯ್ಯ? ಎಂಬ ಪ್ರಶ್ನೆ ಇತ್ತು. ಪ್ರಸ್ತುತ ಭಯ ಇಲ್ಲದ ಧರ್ಮ ಯಾವುದಯ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕೊರಿಯಾ, ಅಮೆರಿಕ ನಡುವಿನ ಸಂಭಾವ್ಯ ಯುದ್ಧವನ್ನು ಮಾತಿನಲ್ಲೇ ತಡೆಯುವ ಅಗತ್ಯವಿದೆ ಎಂದರು.
ಕಾರ್ಮಿಕ ಕುಟುಂಬದಿಂದ ಬಂದ ನಾನು ಮುದ್ರಣಾಲಯದಲ್ಲಿ ಮೊಳೆಗಳನ್ನು ಜೋಡಿಸುತ್ತಲೇ ಪಂಚ ಭಾಷೆಗಳನ್ನು ಕಲಿತೆ, ಲಕ್ಷಾಂತರ ಪುಸ್ತಕಗಳನ್ನು ಓದಿದ್ದೇನೆ. ಅದರಿಂದಲೇ ಎಸೆಸೆಲ್ಸಿಯ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದರೂ ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರನಾಗಿ, ಸಂಗೀತ ನಿರ್ದೇಶಕನಾಗಿ ಬೆಳೆಯುವುದು ಸಾಧ್ಯವಾಗಿದೆ. ಪಂಡಿತರ ಪಾರಮ್ಯವಿರುವ ಕವಿಗೋಷ್ಠಿಯನ್ನು ಉದ್ಘಾಟಿಸುವ ಅವಕಾಶವೂ ದೊರೆತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕವಿತೆಗಳಿಂದ ಜಡಗೊಂಡಿರುವ ಸಮಾಜವನ್ನು ಕ್ರಿಯಾಶೀಲಗೊಳಿಸಬೇಕಿದೆ. ದೇಶದಲ್ಲಿ ಶಾಂತಿ, ಸಹನೆಯನ್ನು ಗಟ್ಟಿಗೊಳಿಸಲು ಸಮುದಾಯದಲ್ಲಿ ಬದಲಾವಣೆ ತರಬೇಕಿದೆ. ಶೋಷಿತರು, ದಮನಿತ ವರ್ಗಗಳಲ್ಲೂ ಸಾಹಿತ್ಯ ಪ್ರಚೋದನೆ ಮೂಲಕ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿದರು. ಕವಯತ್ರಿ ಡಾ.ಧರಣೀದೇವಿ ಮಾಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಮಹಾಪೌರ ಎಂ.ಜೆ.ರವಿಕುಮಾರ್, ಹಂಸಲೇಖ ಅವರ ಪತ್ನಿ, ಗಾಯಕಿ ಲತಾ ಹಂಸಲೇಖ, ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷೆ ಡಾ.ರತ್ನ ಅರಸ್, ಉಪಾಧ್ಯಕ್ಷ ಪಿ.ಪ್ರಸನ್ನ, ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.