ಜಂಬೂ ಸವಾರಿಯಲ್ಲಿ 40 ಸ್ತಬ್ಧ ಚಿತ್ರಗಳ ಮೆರವಣಿಗೆ: ಹಿನಕಲ್ ಉದಯ್
ಮೈಸೂರು,ಸೆ.28: ವಿಜಯ ದಶಮಿಯ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾಗಿದ್ದು, ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಒಟ್ಟು 40 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳಲಿವೆ ಎಂದು ಸ್ತಬ್ಧ ಚಿತ್ರದ ಉಪಸಮಿತಿಯ ಅಧ್ಯಕ್ಷ ಹಿನಕಲ್ ಉದಯ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಜಯ ದಶಮಿಯ ದಿನ ನಡೆಯಲಿರುವ ಜಂಬೂ ಸವಾರಿಯ ಮೆರವಣಿಗೆಯಲ್ಲಿ ರಾಜ್ಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತು ಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವಂತಹ ಅಂತರ್ಜಲ, ಪರಿಸರ ಸ್ನೇಹಿ ಸ್ತಬ್ಧ ಚಿತ್ರಗಳು ಪ್ರವಾಸೋದ್ಯಮ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರಗಳು ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು 40 ಸ್ತಬ್ಧ ಚಿತ್ರಗಳನ್ನು ತಯಾರಿಸಲಾಗಿದೆ. ಇದರ ಜೊತೆಗೆ ಕಲಾ ತಂಡಗಳು ಮೆರಗನ್ನು ನೀಡಲಿದೆ ಎಂದು ಹೇಳಿದರು.
ಈ ಬಾರಿ 30 ಜಿಲ್ಲೆಗಳ ಅಯಾ ಪ್ರದೇಶದ ಸಂಸ್ಕೃತಿ, ಕಲೆ, ಪರಂಪರೆ ಇತಿಹಾಸ ಒಳಗೊಂಡ ಸ್ತಬ್ಧ ಚಿತ್ರಗಳ ಜೊತೆಗೆ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ, ಕಾವೇರಿ ನೀರಾವರಿ ನಿಗಮ, ಎಸ್‍ಬಿಐ ವತಿಯಿಂದ ವಿವಿಧ ಸ್ತಬ್ಧ ಚಿತ್ರಗಳು ಆಕರ್ಷಣಿಯಾಗಿ ಮೂಡಿ ಬರಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಬ್ದ ಚಿತ್ರ ಉಪಸಮಿತಿ ಉಪಾಧ್ಯಕ್ಷ ಈಶ್ವರ್ ಚಿಕ್ಕಡಿ, ದಸರಾ ವಿಶೇಷಾಧಿಕಾರಿ ಪಿ.ಶಿವಶಂಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಬಾರಿ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳ ವಿವರ ಈ ಕೆಳಗಿನಂತಿದೆ:
ಉಡುಪಿ ಜಿಲ್ಲೆಯ ಸ್ತಬ್ಧಚಿತ್ರವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚತುರ್ಮುಖ ಬಸದಿ, ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ ಕೋಟೆ, ದಾಂಡೇಲಿ ಹುಲಿ ಸಂರಕ್ಷಣಾ ಯೋಜನೆ ಹಾಗೂ ಅಣಶಿ ಹಾರ್ನ್ ಬಿಲ್ ಪಕ್ಷಿ ಸಂರಕ್ಷಣಾ ಯೋಜನೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಗತಿಕ ಜೈನ ಕ್ಷೇತ್ರ ಶ್ರವಣಬೆಳಗೊಳ, ಕಲಬುರಗಿ ಜಿಲ್ಲೆಯ ಸಿರಿ, ಕೊಡಗು ಜಿಲ್ಲೆಯ ಅಭಿವೃದ್ಧಿ ಪಥದಲ್ಲಿ ಕೊಡಗು, ಕೊಪ್ಪಳ ಜಿಲ್ಲೆಯ ಆನೆಗೊಂದಿ ಅರಮನೆ ಮತ್ತು ಗಗನ್ ಮಹಲ್, ಕೋಲಾರ ಜಿಲ್ಲೆ- ಬರಡಾದ ಭೂಮಿಗೆ ಬಂಗಾರದಂತೆ ವರುಣನ ಸಿಂಚನ.
ಗದಗ ಜಿಲ್ಲೆಯ ಧರ್ಮ ಸಮನ್ವಯ ಸ್ತಬ್ಧ ಚಿತ್ರ, ಚಾಮರಾಜನಗರ ಜಿಲ್ಲೆಯ ಜಾನಪದ ಸಿರಿ-ಸಂಭ್ರಮ, ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀರಂಗನಾಥಸ್ವಾಮಿ ದೇವಸ್ಥಾನ, ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ಚಾರಿತ್ರಿಕ ಪರಂಪರೆ ಹಾಗೂ ವನ್ಯಲೋಕ, ಚಿಕ್ಕಮಗಳೂರು ಜಿಲ್ಲೆಯ ದೇವೀರಮ್ಮನ ಬೆಟ್ಟ, ಚಿತ್ರದುರ್ಗ ಜಿಲ್ಲೆಯ ರಾಜವೀರ ಮದಕರಿ ನಾಯಕ-ದುರ್ಗದ ಗತವೈಭವ, ತುಮಕೂರು ಜಿಲ್ಲೆಯ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಲಾಖೆಯ ನುಡಿದಂತೆ ನಡೆಯುವ ಜನಪರ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆ ಜೀವಜಲ ಸಂರಕ್ಷಣೆ, ದಾವಣಗೆರೆ ಜಿಲ್ಲೆ ಸ್ವಚ್ಛ ಭಾರತ್ ಮಿಷನ್ ಯಶೋಗಾಥೆ.
ಧಾರವಾಡ ಜಿಲ್ಲೆಯ ವಿರೂಪಾಕ್ಷ ದೇವಾಲಯ-ಹಂಪಿ, ರಾಜಮನೆತನದ ವೈಭವದ ಗೋಪುರ, ಆರೋಗ್ಯ ಇಲಾಖೆಯ ಆರೋಗ್ಯವೇ ಭಾಗ್ಯ, ಬಾಗಲಕೋಟೆ ಜಿಲ್ಲೆಯ ಭೂತನಾಥ ದೇವಾಲಯಗಳ ಸಮುಚ್ಚಯ-ಬಾದಾಮಿ, ಬೀದರ್ ಜಿಲ್ಲೆಯ ಮಡಿವಾಳ ಮಾಚಿದೇವರ ಹೊಂಡ, ಬೆಳಗಾವಿ ಜಿಲ್ಲೆಯ ಕಮಲ ಬಸದಿ, ಕಾವೇರಿ ನೀರಾವರಿ ನಿಗಮದ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಶುದ್ಧೀಕೃತ ನೀರು ಮರುಬಳಕೆ, ಬೆಂಗಳೂರು ಜಿಲ್ಲೆ ಜನಸಾಮಾನ್ಯರ ಆಹಾರ ತಾಣ, ಮೈಸೂರು ಜಿಲ್ಲೆ ಸಾಮಾಜಿಕ ನ್ಯಾಯಕ್ಕೆ ಮೈಸೂರು ಮಹಾರಾಜರ ಕೊಡುಗೆ.
ಮಂಡ್ಯಜಿಲ್ಲೆ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು, ಯಾದಗಿರಿ ಜಿಲ್ಲೆ ರೈಲ್ವೆ ಕೋಚ್ ಕಾರ್ಖಾನೆ-ಫಿಯೆಟ್ ಬೋಗಿ, ರಾಮನಗರ ಜಿಲ್ಲೆ ನಾಡಪ್ರಭು ಕೆಂಪೇಗೌಡ-ವಿಶ್ವಮಾನ್ಯ ಸಾಲುಮರದ ತಿಮ್ಮಕ್ಕ, ರಾಯಚೂರು ಜಿಲ್ಲೆ ನವರಂಗ ದರ್ವಾಜ್-ಮುದುಗಲ್ ಕೋಟೆ, ಸ್ತಬ್ಧಚಿತ್ರ ಉಪಸಮಿತಿ ಸಾಮಾಜಿಕ ನ್ಯಾಯಕ್ಕೆ ಮಹಾಪುರುಷರ ಕೊಡುಗೆ, ವಿಜಯಪುರ ಜಿಲ್ಲೆ ಬಿಜಾಪುರ ಜಿಲ್ಲೆಯ ಕೆರೆ, ಬಾವಿಗಳ ಪುನಶ್ಚೇತನ, ಶಿವಮೊಗ್ಗ ಜಿಲ್ಲೆ ಅಕ್ಕಮಹಾದೇವಿ ಜೀವನ ಚರಿತ್ರೆ, ಹಾವೇರಿ ಜಿಲ್ಲೆ ಕನಕದಾಸರ ಅರಮನೆ-ಬಾಡ, ಹಾಸನ ಜಿಲ್ಲೆ ಹಾಸನ ಜಿಲ್ಲೆಯ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಸೇವೆಗಳು, ಅರಣ್ಯ ಇಲಾಖೆ ನೀರಿಗಾಗಿ ಅರಣ್ಯ, ಲೋಕೋಪಯೋಗಿ ಇಲಾಖೆ ಪ್ರಮುಖ ಯೋಜನೆಗಳ ಸ್ತಬ್ಧ ಚಿತ್ರಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಲಿವೆ.