varthabharthi


ಅಂಬೇಡ್ಕರ್ ಚಿಂತನೆ

ಬಹಿಷ್ಕೃತ ಭಾರತದ ಋಣ ಲೌಕಿಕವಾದ ಋಣ ಅಲ್ಲವೇನು?

ವಾರ್ತಾ ಭಾರತಿ : 29 Sep, 2017

ಭಾಗ-3

ಆ ಮುದ್ರಣಯಂತ್ರದಿಂದ ಬರುವ ಆದಾಯವನ್ನು ‘ಬಹಿಷ್ಕೃತ ಭಾರತ’ಕ್ಕಾಗಿರುವ ನಷ್ಟವನ್ನು ಭರಿಸಲು ಉಪಯೋಗಿಸಿ ಉಳಿದ ಲಾಭವನ್ನು ಸಾರ್ವಜನಿಕ ಕಾರ್ಯಕ್ಕೆ ಖರ್ಚು ಮಾಡುವ ಸಂಕಲ್ಪ ನನ್ನದಾಗಿದೆ. ಹಾಗಾಗಿ ಇದು ಕೇವಲ ಸ್ವಾರ್ಥದ ಆಡಂಬರ ಎಂದು ಯಾರೂ ತಿಳಿಯಬಾರದು. ನನ್ನ ಬಗ್ಗೆಯಾದರೂ ಈ ಅನುಮಾನ ಯಾರೂ ಪಡಲಾರರು ಅನ್ನುವ ಭರವಸೆ ನನಗಿದೆ. ಫಂಡನ್ನು ಸಂಗ್ರಹಿಸುವ ಮನುಷ್ಯ ಪ್ರಾಮಾಣಿಕನೆ ಅಪ್ರಾಮಾಣಿಕನೇ? ಆತ ಆರಂಭಿಸಿರುವ ಕೆಲಸ ಹಿತಕಾರಿಯಾಗಿದೆಯೇ ಇಲ್ಲ, ಅಹಿತಕರವಾಗಿದೆಯೇ? ಅನ್ನುವುದರ ಬಗ್ಗೆ ತಿಳಿದುಕೊಳ್ಳದೆ ಫಂಡಿಗೆ ಸಹಾಯ ಮಾಡಬಾರದು ಅನ್ನುವ ಒಂದೇ ಕಾರಣಕ್ಕಾಗಿ ಒಳ್ಳೆಯ ಕಾರ್ಯಕ್ಕೆ ಪ್ರಾಮಾಣಿಕ ಜನರಿಗೆ ಸಹಾಯ ಮಾಡದ ಕೃಪಣರಿಗೆ ಒಂದೇ ಮಾತನ್ನು ಹೇಳಬಯಸುತ್ತೇನೆ. ಯಾರಿಗೂ ಗೊತ್ತಾಗದಂತೆ ಫಂಡನ್ನು ಸಂಗ್ರಹಿಸಿ ಸಮಾಜ ಕಾರ್ಯದ ತೋರಿಕೆ ಮಾಡುವ ಜನ ಒಂದೋ ಬುದ್ಧಿಯಿಲ್ಲದವರಾಗಿರಬೇಕು ಇಲ್ಲವೆ ಸಂಭಾವಿತ ಕಳ್ಳರಿರಬೇಕು. ಯಾವುದೇ ಸಾರ್ವಜನಿಕ ಕಾರ್ಯಕ್ಕೆ ಫಂಡಿನ ಅಗತ್ಯವಿರುತ್ತದೆ.

ಸರ್ವಾರಂಭಸ್ತಂಡುಲಾ: ಪ್ರಸ್ಥಮೂಲಃ
ಯಾವುದೇ ಯಜ್ಞ ಮಾಡಲು ಮೊದಲು ಅಕ್ಕಿಯ ಅಗತ್ಯವಿರುವಂತೆ ಸಾರ್ವಜನಿಕ ಕಾರ್ಯಕ್ಕೆ ಹಣದ ಅಗತ್ಯವಿರುತ್ತದೆ. ನೀರಿಲ್ಲದೆ ಗಿಡಮರಗಳಿಲ್ಲ, ಹಣವಿಲ್ಲದೆ ಕಾರ್ಯಕಲಾಪಗಳಿಲ್ಲ. ಹಾಗಾಗಿ ನಾನು ಕಾರ್ಯ ಮಾಡಲು ನಿರ್ಧರಿಸುವುದರಿಂದ ಫಂಡಿನ ಯೋಜನೆಯನ್ನು ಜನತೆಯೆದುರಿಡಲು ನನಗೆ ಸಂಕೋಚವೆನಿಸುತ್ತಿಲ್ಲ.
ನಾನು ಯಾರಿಗಾಗಿ ಕಷ್ಟಪಡುತ್ತಿದ್ದೆನೋ ಆ ಜನ ಈ ಕಾರ್ಯಕ್ಕೆ ಅಗತ್ಯವಿರುವ ಸ್ವಾರ್ಥ ತ್ಯಾಗ ಮಾಡಲು ಸಿದ್ಧರಿದ್ದಾರೆಯೇ? ಅನ್ನುವ ಒಂದೇ ಒಂದು ಪ್ರಶ್ನೆ ಈಗ ಉಳಿದುಕೊಳ್ಳುತ್ತದೆ.
ಮನುಷ್ಯ ಹುಟ್ಟುತ್ತಲೇ ನಾಲ್ಕು ಋಣಗಳನ್ನು ಹೊತ್ತುಕೊಂಡೇ ಹುಟ್ಟು ತ್ತಾನೆ ಎಂದು ಹಿಂದೂ ಧರ್ಮ ಮೊದಲಿನಿಂದಲು ನಂಬುತ್ತ ಬಂದಿದೆ.
ಋಣೈಶ್ಚತುರ್ಭಿಃ ಸಂಯುಕ್ತಾ ಜಾಯಂತೇ ಮಾನವಾ ಭೂಮಿ
ಪಿತೃದೇವರ್ಷಿ ಮನೃಜೈರ್ದೇಯಂ ತೇಭ್ಯಶ್ಚ ಧರ್ಮತಃ॥
ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಅದರಂತೆ ಪ್ರತಿಯೊಬ್ಬ ಮನುಷ್ಯನು ಪಿತೃ ಋಣ, ದೇವ ಋಣ, ಋಷಿ ಋಣ ಹಾಗೂ ಮಾನವ ಅಂದರೆ ಲೌಕಿಕ ಋಣಗಳಂತಹ ನಾಲ್ಕು ಋಣಗಳನ್ನು ಹೊತ್ತುಕೊಂಡೇ ಹುಟ್ಟುತ್ತಾನೆ ಹಾಗೂ ಮನುಷ್ಯನಾದವನು ಈ ಋಣಗಳನ್ನು ತೀರಿಸಬೇಕು ಅನ್ನುವುದು ಮೇಲಿನ ಶ್ಲೋಕದ ಉತ್ತರಾರ್ಧದಲ್ಲಿ ಹೇಳಿದೆ.
ಯಜ್ಞೈಸ್ತು ದೇವಾನ್ ಪ್ರೀಣಾತಿ ಸ್ವಾಧಾಯ ತಪಸಾ ಮುನೀನ್‌
ಪುತ್ರೈಃಶ್ರಾದ್ಧದ್ವೈಃ ಪಿತೃಶ್ಚಾಪಿ ಆನೃಶಂಸ್ಯೇನ ಮಾನವಾನ್‌॥

ದೇವರ ಋಣವನ್ನು ತೀರಿಸಲು ಯಜ್ಞಮಾಡಬೇಕು, ಋಷಿ ಋಣ ತೀರಿಸಲು ವೇದ್ಯಾಭ್ಯಾಸ ಮಾಡಬೇಕು, ಶ್ರಾದ್ಧಕರ್ಮಾದಿಗಳನ್ನು ಮಾಡಿ ತಂದೆಯ ಋಣವನ್ನು ತೀರಿಸಬೇಕು ಹಾಗೂ ಲೌಕಿಕ ಋಣವನ್ನು ತೀರಿಸಲು ಮನುಷ್ಯ ಭೂತದಯೆಯನ್ನು ಅವಲಂಬಿಸಬೇಕು. ಈ ಎಲ್ಲ ಋಣಗಳಲ್ಲಿ ಲೌಕಿಕ ಋಣ ಅತ್ಯಂತ ಶ್ರೇಷ್ಠವಾದದ್ದು, ಎಷ್ಟು ಶ್ರೇಷ್ಠವಾದದ್ದೆಂದರೆ ದೇವರ ಋಣ ತೀರಿಸದಿದ್ದರೂ ಏನೂ ತೊಂದರೆಯಿಲ್ಲ, ಏಕೆಂದರೆ ಅದರಿಂದ ದೇವರು ಕೋಪಿಸಿಕೊಂಡು ನಮ್ಮ ನಾಶ ಮಾಡಲಾರರು. ಋಷಿ ಋಣಗಳನ್ನು ತೀರಿಸದಿದ್ದರೂ ಚಿಂತೆಯಿಲ್ಲ, ಏಕೆಂದರೆ ಇಂದು ವೇದ್ಯಾಭ್ಯಾಸವಿಲ್ಲದಿದ್ದರೆ ಯಾರಿಗೂ ನಷ್ಟವಾಗುವುದಿಲ್ಲ. ಏಕೆಂದರೆ ಪೀಳಿಗೆಗಟ್ಟಲೆ ವೇದಾಭ್ಯಾಸದಲ್ಲೇ ಜೀವನ ಕಳೆದ ಬ್ರಾಹ್ಮಣರು ಕೂಡ ತಮ್ಮ ಮಕ್ಕಳಿಗೆ ಆರ್ಯ ಕಲಿಸುವುದನ್ನು ಬಿಟ್ಟು ಇಂಗ್ಲಿಷ್ ವೇದಗಳನ್ನು ಕಲಿಸಿದರು. ಪಿತೃ ಋಣ ತೀರಿಸಲು ಶ್ರಾದ್ಧ ಮಾಡದಿದ್ದರೂ ಏನೂ ಕೆಟ್ಟದ್ದಾಗುವುದಿಲ್ಲ. ಸಾವಿನ ನಂತರ ಆತ್ಮಕ್ಕೆ ಯಾವ ಗತಿ ಸಿಗುತ್ತದೆ ಅನ್ನುವುದು ಯಾರಿಗೂ ಗೊತ್ತಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಶ್ರಾದ್ಧದಿಂದ ಪಿತೃತರ್ಪಣ ಆಗಿಯೇ ಆಗುತ್ತದೆ ಅನ್ನುವ ಭರವಸೆಯಿಲ್ಲ ಆದರೆ ಲೌಕಿಕ ಋಣವನ್ನು ಪ್ರತಿಯೊಬ್ಬರೂ ತೀರಿಸಲೇಬೇಕು. ಅನ್ನುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಲೌಕಿಕ ಋಣ ತೀರಿಸುವುದೆಂದರೆ ಎಷ್ಟು ಪುಣ್ಯದ ವಿಷಯವೋ ಅಷ್ಟೇ ಸ್ವಹಿತ ದೃಷ್ಟಿಯಿಂದಲೂ ಅದು ಅವಶ್ಯವಾಗಿದೆ. ಬುದ್ಧಿ, ಹಣ ಹಾಗೂ ಸಾಮರ್ಥ್ಯವಿರುವ ಪ್ರತಿಯೊಬ್ಬ ಮನುಷ್ಯನು ಲೌಕಿಕ ಋಣವನ್ನು ಹೇಗೆ ತೀರಿಸಬೇಕು ಅನ್ನುವುದಕ್ಕೆ ಧರ್ಮ ಕೆಲವು ನಿಯಮಗಳನ್ನು ಹಾಕಿಕೊಟ್ಟಿದೆ. ಅ ನಿಯಮಗಳ ಪ್ರಕಾರ ಅವರು ತಮ್ಮ ಬುದ್ಧಿ, ಹಣ ಹಾಗೂ ಸಾಮರ್ಥ್ಯವನ್ನು ಬುದ್ಧಿಹೀನನಿಗೆ ಬೋಧ ಮಾಡಲು, ಬಡವನಿಗೆ ಹಣದ ಸಹಾಯ ಮಾಡಲು ಹಾಗೂ ದುರ್ಬಲರಿಗೆ ಸಂರಕ್ಷಣೆ ನೀಡಲು ಖರ್ಚು ಮಾಡುವುದೇ ನಿಜವಾದ ಪುಣ್ಯ ಎಂದು ಧರ್ಮದಲ್ಲಿ ಹೇಳಿದೆ ಹಾಗೂ ಇಂದಿನ ಜಗತ್ತಿನಲ್ಲಿ ಇದೇ ಭಾವನೆಯಿಂದ ಸಾಕಷ್ಟು ಪರೋಪಕಾರದ ಕೆಲಸಗಳು ನಡೆಯುತ್ತಿವೆ. ಆದರೆ ಪರೋಪಕಾರದಿಂದ ಪುಣ್ಯ ಸಿಗುತ್ತದೆ ಅನ್ನುವ ಒಂದೇ ಕಾರಣದಿಂದ ಲೌಕಿಕ ಋಣವನ್ನು ತೀರಿಸುವ ಕೆಲಸ ಮಾಡಬಾರದು.

ಅದರಿಂದ ಸ್ವಹಿತ ಕೂಡ ಸಾಧಿಸಿದಂತಾಗುವುದರಿಂದಲೇ ಈ ಋಣವನ್ನು ತೀರಿಸುವ ಅಗತ್ಯವಿದೆ. ಸಮಾಜ ಸುಧಾರಣೆಯಾಗದೆ ವ್ಯಕ್ತಿಯೋರ್ವನ ಸುಧಾರಣೆಯಾಗಲಾರದು. ವ್ಯಕ್ತಿಯೊಬ್ಬನ ಅಕ್ಕಪಕ್ಕದ ವಾತಾವರಣ ಕಲುಷಿತವಾಗಿದ್ದರೆ ಆ ವ್ಯಕ್ತಿ ತನ್ನ ಪವಿತ್ರತೆ ಹಾಗೂ ಉನ್ನತಿಯನ್ನು ಹೇಗೆ ಸಾಧಿಸಿಕೊಳ್ಳಬಲ್ಲ? ಮನುಷ್ಯ ಸಮಾಜದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಾರ, ತನ್ನ ಜೀವನವನ್ನಾತ ತನ್ನ ಬಂಧುಬಾಂಧವರೊಡನೆಯೇ ಬದುಕುತ್ತಾನೆ. ಅವರಿಂದ ಆತ ತನ್ನ ಜೀವನ ಸಾಗಿಸುತ್ತಾನೆ ಹಾಗೂ ಅವರ ನಡುವೆಯೆ ತನ್ನ ಜೀವನವನ್ನು ವ್ಯಯಿಸುತ್ತಾನೆ. ಹೀಗಾಗಿ ಆತ ತನ್ನ ಅಕ್ಕಪಕ್ಕದ ಪರಿಸ್ಥಿತಿಯ ಪರಿಣಾಮಗಳನ್ನು ಅನುಭಾವಿಸುತ್ತಾನೆ. ಎಲ್ಲಿಯವರೆಗೆ ಆತನ ಬಂಧುಬಾಂಧವರ ಪ್ರಗತಿಯಾಗುವುದಿಲ್ಲವೋ ಅಲ್ಲಿಯವರೆಗೆ ಆತ ಅವರನ್ನು ದೂರವಿಡಲಾರ ಇಲ್ಲವೆ ಅವರಿಂದ ದೂರವಿರಲಾರ. ಐಹಿಕ ಪರಿಸ್ಥಿತಿಯ ಬಗ್ಗೆ ಯೋಚಿಸಿದಾಗಲೂ ಎಲ್ಲರ ಅಭ್ಯುದಯವಾಗದೆ ಯಾವುದೇ ಒಬ್ಬನ ಐಹಿಕ ಸ್ಥಿತಿಯ ಸುಧಾರಣೆ ಸಾಧ್ಯವಿಲ್ಲ. ಎಲ್ಲರೂ ಬಡತನದಲ್ಲಿ ಬೇಯುತ್ತಿರುವಾಗ ಅಲ್ಲಿ ಯಾರಿಗೆ ಶ್ರೀಮಂತಿಕೆ ಸಿಗುತ್ತದೆ?

ಆದ್ದರಿಂದ ಇದೊಂದು ಕೇವಲ ಪುಣ್ಯದ ಮಾರ್ಗ ಅಂದುಕೊಂಡು ಪರೋಪಕಾರ ಮಾಡದೆ ಅದೊಂದು ಆತ್ಮೋನ್ನತಿಯ ಮಾರ್ಗ ಎಂದುಕೊಂಡು ಕೂಡ ಮಾಡಬೇಕಿದೆ ಅನ್ನುವ ವಿಷಯ ಸ್ಪಷ್ಟವಾಗುತ್ತದೆ. ಈ ಲೌಕಿಕ ಋಣವನ್ನು ತೀರಿಸುವ ಅಗತ್ಯದ ಬಗ್ಗೆ ಒಮ್ಮೆ ತಿಳಿದುಕೊಂಡರೆ ಸಮಾಜದ ಪರಿಸ್ಥಿತಿ ಹಾಗೂ ಇತರ ಲೌಕಿಕ ಋಣದ ಭಾರದ ಪ್ರಮಾಣ ವಿಷಮವೇಕಿರಬೇಕು ಅನ್ನುವುದು ಅರ್ಥವಾದೀತು. ಸಮಾಜದ ಅವನತಿ ಎಷ್ಟರಮಟ್ಟಿಗಾಗಿದೆಯೋ ಅದಕ್ಕಿಂತ ಹೆಚ್ಚು ಲೌಕಿಕ ಭಾರ ಆ ಸಮಾಜದಲ್ಲಿ ಬಾಳುವ ವ್ಯಕ್ತಿಯ ಮೇಲಿರಬೇಕು. ಇಲ್ಲದಿದ್ದರೆ ಸಮಾಜ ಬೆಳೆಯುವುದು ಸಾಧ್ಯವಿಲ್ಲ. ಸಮಾಜದ ಪರಿಸ್ಥಿತಿ ಒಳ್ಳೆಯದಿರುವಾಗ ಅದರಲ್ಲಿ ಬಾಳುವ ವ್ಯಕ್ತಿಯ ಮೇಲೆ ಲೌಕಿಕ ಋಣದ ಭಾರ ಕಡಿಮೆಯಾಗಿರಬೇಕು.

ಆದರೆ ಆಶ್ಚರ್ಯದ ಸಂಗತಿಯೆಂದರೆ ಬ್ರಾಹ್ಮಣ ಜಾತಿಯಲ್ಲಿ ಕಾಲೂರಿಸುವಷ್ಟು ಲೌಕಿಕ ಋಣದ ಕಲ್ಪನೆ ದಲಿತರಲ್ಲಿಲ್ಲ. ಬ್ರಾಹ್ಮಣರೇನು ಕೆಳವರ್ಗದ ಜನರಲ್ಲ. ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಿತರಕ್ಷಣೆ ಮಾಡಿಕೊಳ್ಳಲು ವಿದ್ಯೆ ಹಾಗೂ ಹಣ ಎರಡೂ ಇದೆ. ಏನೇ ಆದರೂ ಭಿಕ್ಷೆ ಬೇಡಿ ಹೊಟ್ಟೆ ಹೊರೆಯಲು ಧರ್ಮದ ವತಿಯಿಂದ ಬ್ರಾಹ್ಮಣನಿಗೆ ಅನುಮತಿಯಿರುವುದರಿಂದ ಬ್ರಾಹ್ಮಣ ಜಾತಿ ಅವನತಿ ಹೊಂದಲು ಸಾಧ್ಯವ್ಲಿಲ. ಆದ್ದರಿಂದಲೇ

ಜಾಯಮಾನೋ ವಯ ಬ್ರಾಹ್ಮಣಸ್ಥಭಿ ಋಣ ಜಾಯತೇ
 ಅನ್ನುವ ಶೃತಿ ವಾಕ್ಯದಂತೆ ಬ್ರಾಹ್ಮಣರಿಗೆ ಕೇವಲ ಮೂರೇ ಋಣಗಳನ್ನು ಹೇಳಲಾಗಿದೆ. ಹಾಗೂ ಈ ಮೂರು ಋಣಗಳಲ್ಲಿ ಲೌಕಿಕ ಋಣದ ಸಮಾವೇಶವಿಲ್ಲ. ಆದರೂ ತನ್ನ ಸಮಾಜವನ್ನು ಉನ್ನತ ದೆಸೆಯಲ್ಲಿಡಲು ಬ್ರಾಹ್ಮಣರು ಲೌಕಿಕ ಋಣದ ಭಾರ ಹೊರಲು ಸಿದ್ಧರಾಗಿರುವಷ್ಟು ದಲಿತರು ಶಾಸ್ತ್ರಾಜ್ಞೆಯಿದ್ದರೂ ಸಿದ್ಧರಿರುವುದಿಲ್ಲ ಅನ್ನುವುದು ದುಖಃದ ಸಂಗತಿ. ಸಮಾಜಕ್ಕಾಗಿ ಎಷ್ಟು ಸ್ವಾರ್ಥ ತ್ಯಾಗವನ್ನು ಮಾಡಬೇಕೋ ಅಷ್ಟನ್ನೂ ನಾನು ಮಾಡಿಯಾಗಿದೆ. ನಾನೇನೂ ಸಾಂಸ್ಥಾನಿಕನಲ್ಲ, ಜಾಹಗೀರದಾರನೂ ಅಲ್ಲ, ಕಾನನಗಳಲ್ಲಿ, ನಗರದಲ್ಲಿ, ಹೊಲಗಳಲ್ಲಿ ನನಗೆ ಮನೆಗಳಿಲ್ಲ ಎಂದು ಯಾರೋ ನನ್ನ ಬಗ್ಗೆ ಹೇಳಿದ ಮಾತುಗಳು ನಿಜವೆ. ಏನೇ ಅಂದರೂ ಹೇಳಿಕೊಳ್ಳುವಷ್ಟು ಹಣದ ಅನುಕೂಲತೆ ಇಲ್ಲದಿದ್ದರೂ ಬ್ರಿಟಿಷರು ಕೊಡಮಾಡಿದ್ದ ಮುಂದೊಂದು ದಿನ ಸಂಬಳ ತಿಂಗಳಿಗೆ ಎರಡುವರೆ ಸಾವಿರದಷ್ಟು ಹೆಚ್ಚಾಗಬಹುದಿದ್ದ ಕೆಲಸವನ್ನು ನಾನು ನಿರಾಕರಿಸಿದೆ.

ಮೇಲ್ಜಾತಿಯವರನ್ನವಲಂಬಿಸಿರುವಂತಹ ವಕೀಲಿಯಂತಹ ವ್ಯವಸಾಯದಲ್ಲಿ ಹೆಚ್ಚಿನ ಲಾಭವಿಲ್ಲ ಎಂದು ಗೊತ್ತಿದ್ದರೂ ಕೇವಲ ಸಮಾಜ ಕಾರ್ಯಕ್ಕೆ ಸಮಯ ಸಿಗಲೆಂದು ನಾನದನ್ನು ಸ್ವೀಕರಿಸಿದ್ದೇನೆ. ರೂಢಿಪರಂಪರೆಗಳಲ್ಲಿಯ ಹಾಗೂ ಲೋಕಾಚಾರದಲ್ಲಿರುವ ದೋಷಗಳ ಬಗ್ಗೆ ಧೈರ್ಯವಾಗಿ ಆವಿಷ್ಕಾರ ನಡೆಸುವಂತಹ ಭಯಂಕರ ಕಾರ್ಯವನ್ನು ಕೈಗೆತ್ತಿಕೊಂಡಿರುವುದರಿಂದ ತಮ್ಮನ್ನು ದೇಶಾಭಿಮಾನಿ ಹಾಗೂ ಧರ್ಮಾಭಿಮಾನಿ ಅನಿಸಿಕೊಳ್ಳುವ ಜನರಿಂದ ಬೈಗಳು ಹಾಗೂ ಶಾಪಗಳ ಏಟನ್ನು ನಾನು ಸತತವಾಗಿ ಸಹಿಸುತ್ತಿದ್ದೇನೆ. ನನ್ನ ವಿಚಾರಗಳನ್ನು, ಮತಗಳನ್ನು ಮಂಡಿಸುವುದು ಹಾಗೂ ಆದಷ್ಟು ಅದರಂತೆ ವರ್ತಿಸುವುದು ಎಂದು ನಾನು ನಿರ್ಧರಿಸುವುದರಿಂದ ಮೇಲ್ಜಾತಿಯ ಅನೇಕ ನನ್ನ ಗೆಳೆಯರ ಸಿಟ್ಟಿಗೆ ನಾನು ಕಾರಣನಾಗಿದ್ದೇನೆ ಹಾಗೂ ಅವರಿಂದ ವ್ಯವಸಾಯದಲ್ಲಿ ನನಗೆ ಸಿಗಬಹುದಾಗಿದ್ದ ಸಹಾಯ ನಿಂತುಹೋಗಿದೆ.

ಕವಡೆಯಷ್ಟೂ ಲಾಭವಿಲ್ಲದಿದ್ದರೂ ನಾನು ಒಂದು ವರ್ಷದೊಳಗಾಗಿ ಒಳ್ಳೆಯದಿರಲಿ ಕೆಟ್ಟದಿರಲಿ ‘ಬಹಿಷ್ಕೃತ ಭಾರತ’ದ ಅಂಕಣಗಳನ್ನು ಬರೆದು ಜನಜಾಗೃತಿಯ ಕೆಲಸ ಮಾಡಿದ್ದೇನೆ ಹಾಗೂ ಅದನ್ನು ಮಾಡುವಾಗ ಆರೋಗ್ಯ, ಸುಖ, ಸಂತೋಷ, ಹಾಗೂ ಐಶಾರಾಮದ ಬಗ್ಗೆ ಯೋಚಿಸದೆ ಕಷ್ಟಪಟ್ಟಿದ್ದೇನೆ. ಅಷ್ಟೇ ಅಲ್ಲ ನಾನು ಹೊರದೇಶಕ್ಕೆ ಹೋದಾಗ ದಿನರಾತ್ರಿ ಸಂಸಾರದ ಚಿಂತೆ ಹೊತ್ತ, ಈಗಲೂ ಹೊತ್ತಿರುವ ಹಾಗೂ ನಾನು ಹೊರದೇಶದಲ್ಲಿರುವಾಗ ನನ್ನ ವಿಪರೀತ ಪರಿಸ್ಥಿತಿಯಲ್ಲಿ ಸೆಗಣಿಯ ಭಾರವನ್ನು ತನ್ನ ತಲೆಯ ಮೇಲೆ ಹೊತ್ತು ತರಲು ಸ್ವಲ್ಪವೂ ಸಂಕೋಚ ಪಡದ ಅತ್ಯಂತ ಮಮತೆಯ ಮೂರ್ತಿ, ಸುಶೀಲೆಯಾಗಿರುವ ಹೆಂಡತಿಯ ಸಹವಾಸದಲ್ಲಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅರ್ಧಗಂಟೆಯೂ ಕಳೆಯುವುದಾಗಲಿಲ್ಲ ನನಗೆ. ನಾನು ಮಾಡಿರುವ ಸರ್ವತ್ಯಾಗದಲ್ಲಿ ವಿಶೇಷವಾದದ್ದೇನೂ ಇಲ್ಲ ಹಾಗೂ ನಾನು ಹಾಗೆಂದು ಹೇಳುವುದೂ ಇಲ್ಲ. ದೇವರು ನನ್ನನ್ನು ದಲಿತ ಜಾತಿಯಲ್ಲಿ ಹುಟ್ಟಿಸಿ ಈ ಮಾನವೋದ್ಧಾರದ ಮಂಗಲ ಕಾರ್ಯದಲ್ಲಿ ಕಷ್ಟಪಡುವ ಅವಕಾಶಕೊಟ್ಟು ನನ್ನ ಮೇಲೆ ಮಾಡಿದ ಉಪಕಾರಕ್ಕೆ ಅವನಿಗೆ ಕೋಟಿಕೋಟಿ ಧನ್ಯವಾದಗಳನ್ನು ಹೇಳಬಯಸುತ್ತೇನೆ.

ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟುತ್ತಲೇ ಹೊರಬೇಕಾಗಿರುವಂತಹ ಲೌಕಿಕ ಋಣದ ಅರಿವು ನನಗಿದೆ ಹಾಗೂ ಈ ಲೌಕಿಕ ಋಣವನ್ನು ತೀರಿಸಲೆಂದೇ ನಾನು ಅಲ್ಪಸ್ವಲ್ಪ ಸಮಾಜ ಕಾರ್ಯವನ್ನೂ ಮಾಡಿದ್ದೇನೆ. ನನ್ನ ಇತರ ದಲಿತ ಬಂಧುಗಳಿಗೂ ಕೂಡ ಈ ಲೌಕಿಕ ಋಣದ ಅರಿವಿರಬೇಕು ಅನ್ನುವುದು ನನ್ನ ಅಪೇಕ್ಷೆ. ‘ಬಹಿಷ್ಕೃತ ಭಾರತ’ದ ಕೆಲಸ ಕೇವಲ ಒಬ್ಬನದ್ದಲ್ಲ ಹಾಗೂ ಕೇವಲ ಒಬ್ಬನಿಂದ ಅದು ಸಾಧ್ಯವಿಲ್ಲ ಕೂಡ. ಒಟ್ಟಿಗೆ ಕೂಡಿ ಕೆಲಸ ಮಾಡಿದರೆ ಮಾತ್ರ ಈ ಕೆಲಸ ಯಶಸ್ಸು ಕಂಡೀತು. ಇಲ್ಲದಿದ್ದರೆ ಮಧ್ಯದಲ್ಲೇ ಈ ಕೆಲಸ ನಿಂತುಹೋದೀತು. ನನ್ನ ದಲಿತ ಬಂಧುಗಳು ಈ ಕೆಲಸವನ್ನು ನಿಲ್ಲಿಸಲಾರರು ಅನ್ನುವ ಭರವಸೆ ನನಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)