ಅಂಬೇಡ್ಕರ್ ರಚಿಸಿದ ಪಾಲಿ ಭಾಷೆಯ ವ್ಯಾಕರಣ
ಈ ದೇಶಕ್ಕೆ ಬೆಳಕು ನೀಡಿದ್ದು ಸಂಸ್ಕೃತವಲ್ಲ, ಪಾಲೀ ಭಾಷೆ. ಸಂಸ್ಕೃತ ವಿದ್ವಾಂಸರ ಭಾಷೆಯಾಗಿ ಮೇಲ್‌ಜನರ ಭಾಷೆಯಾಗಿ ಸಾಯುತ್ತಾ ಬರುತ್ತಿದ್ದಾಗ, ಪಾಲಿ ಭಾಷೆ ಜನ ಸಮೂಹದ ಮಧ್ಯೆ ಬೆಳೆಯುತ್ತಾ ಹೋಯಿತು. ಬೌದ್ಧ ಧರ್ಮ ದೇಶಾದ್ಯಂತ ಹರಡಿದ್ದು ಪಾಲಿಯ ಮೂಲಕವೇ ಆಗಿದೆ. ಪಾಲಿ ಭಾಷೆಯ ಅಧ್ಯಯನವೆಂದರೆ, ಈ ದೇಶದ ತಳಮೂಲದ ಸಂಸ್ಕೃತಿಯ ಅಧ್ಯಯನವೂ ಕೂಡ. ಬಹುಶಃ ಈ ಭಾಷೆಯ ಕುರಿತಂತೆ ಅಂಬೇಡ್ಕರ್ ಅತ್ಯಾಸಕ್ತಿ ವಹಿಸದೆ ಇದ್ದರೆ, ದೇಶ ಅದನ್ನು ಸಂಪೂರ್ಣವಾಗಿ ಮರೆತು ಬಿಡುತ್ತಿತ್ತೇನೋ. ಅಂಬೇಡ್ಕರ್ ಅವರು ಪಾಲಿ ಭಾಷೆಯ ವ್ಯಾಕರಣದ ಬಗ್ಗೆ ಈ ಕೃತಿಯನ್ನು ಬರೆದಿದ್ದಾರೆ. ಪಾಲಿ ವ್ಯಾಕರಣ, ಪಾಲಿ ಪದಕೋಶಗಳ ಜೊತೆಗೆ ಬೌದ್ಧ ಧರ್ಮದ ಪ್ರಾರ್ಥನಾ ಗೀತೆಗಳೂ ಇದರಲ್ಲಿವೆ. ಮಹಾರಾಷ್ಟ್ರ ಸರಕಾರವು 1998ರಲ್ಲಿ ಅಂಬೇಡ್ಕರ್ ಸಂಪುಟಗಳನ್ನು ಪ್ರಕಟಿಸುವವರೆಗೂ ಈ ಕೃತಿ ಹಸ್ತರೂಪದಲ್ಲೇ ಇದ್ದಿತು. ಈಗ ಆ ಸಂಪುಟದ ಪಾಲಿ ವ್ಯಾಕರಣದ ಭಾಗ ಮತ್ತು ಪಾಲಿ ಕೋಶದ ಭಾಗವನ್ನು ಕುವೆಂಪು ಭಾಷಾ ಪ್ರಾಧಿಕಾರವು ಕನ್ನಡಕ್ಕೆ ಅನುವಾದಿಸಿದೆ. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳ ಮಾಲಿಕೆಯಲ್ಲೇ ಈ ಕೃತಿಯೂ ಪ್ರಕಟವಾಗಿದೆ.
ಡಾ. ಅಂಬೇಡ್ಕರ್ ಅವರು ಪಾಲಿ ಭಾಷೆಯನ್ನು ಕಲಿಯುವವರ ಅನುಕೂಲಕ್ಕಾಗಿ ಶಾಲಾ ವ್ಯಾಕರಣದ ಮಾದರಿಯಲ್ಲಿ ಒಂದು ವ್ಯಾಕರಣವನ್ನು ರಚಿಸುವ ಗುರಿಯನ್ನು ಹೊಂದಿದ್ದರೆಂದು ಕಾಣುತ್ತದೆ. ಅವರು ರೂಪಿಸಿರುವ ಪಾಲಿ ಕೋಶದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಪಾಲಿ ಭಾಷೆಯ ಪದಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಅರ್ಥವನ್ನು ಕೊಟ್ಟಿದ್ದಾರೆ. ಅಲ್ಲಲ್ಲಿ ಪದಗಳ ವ್ಯಾಕರಣಾಂಶವನ್ನು ಸೂಚಿಸಿದ್ದಾರೆ. ಇನ್ನೊಂದು ಭಾಗದಲ್ಲಿ ಪಾಲಿ ಭಾಷೆಯ ಪದಗಳಿಗೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳ ಸಮಾನಾರ್ಥಕ ಪದಗಳನ್ನು ನೀಡಿದ್ದಾರೆ. ಕನ್ನಡಕ್ಕೆ ಅನುವಾದ ಮಾಡಿರುವ ಈ ಕೃತಿಯಲ್ಲಿ ಕೋಶದ ಮೊದಲ ಭಾಗದಲ್ಲಿರುವ ಪಾಲಿ-ಇಂಗ್ಲಿಷ್ ಪದಪಟ್ಟಿಯನ್ನು ಮಾತ್ರ ಕನ್ನಡಿಸಲಾಗಿದೆ.
150 ಪುಟಗಳ ಈ ಕೃತಿಯ ಮುಖಬೆಲೆ 50 ರೂಪಾಯಿ.