varthabharthi


ನನ್ನೂರು ನನ್ನ ಜನ

ನಮ್ಮನ್ನು ಬೆಳೆಸಿದ ಊರು ಸುರತ್ಕಲ್

ವಾರ್ತಾ ಭಾರತಿ : 4 Oct, 2017
ಚಂದ್ರಕಲಾ ನಂದಾವರ

ನಮ್ಮ ಮಕ್ಕಳಿಬ್ಬರೂ ವಿದ್ಯಾದಾಯಿನಿ ಸಂಸ್ಥೆಗಳ ವಿದ್ಯಾರ್ಥಿಗಳಾದರೂ ನಮಗೆ ಆ ಶಿಕ್ಷಣ ಸಂಸ್ಥೆಗಳಿಗಿಂತ ಗೋವಿಂದ ದಾಸ ಕಾಲೇಜು ಬೇರೆ ಬೇರೆ ಕಾರಣಗಳಿಂದ ಹತ್ತಿರವಾಯಿತು. ಪ್ರಾಂಶುಪಾಲರಿಂದ ಎಚ್. ಗೋಪಾಲಕೃಷ್ಣರಾಯರ ಪರಿಚಯದ ಸಂದರ್ಭವನ್ನು, ಸಂಬಂಧವನ್ನು ಈಗಾಗಲೇ ತಿಳಿಸಿದ್ದೇನೆ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ. ಸೀತಾರಾಮ ಆಚಾರ್ಯ, ಹೊಸಬೆಟ್ಟು, ಇವರು ಸೀ.ಹೊಸಬೆಟ್ಟು ಎಂದೇ ಪ್ರಸಿದ್ದರು. ಅವರು ನಮ್ಮಿಬ್ಬರಿಗೂ ಮಂಗಳೂರಿನ ಸಾಹಿತ್ಯಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪರಿಚಿತರು.

ಡಾ.ಸೀ. ಹೊಸಬೆಟ್ಟು ಸರಸ ವಾಗ್ಮಿಗಳು, ಕನ್ನಡ ಸಾಹಿತ್ಯದ ನವೋದಯ ಕಾಲದ ವರೆಗಿನ ಸಾಹಿತ್ಯವನ್ನು ಅರಗಿಸಿಕೊಂಡವರು. ಕಾವ್ಯವಾಚನ, ಪುರಾಣ ವಾಚನಗಳಲ್ಲಿ ಪ್ರವಚನಕಾರರಾಗಿಯೂ ಪ್ರಸಿದ್ಧರಾಗಿದ್ದರು. ಪದವಿಪೂರ್ವ ತರಗತಿಗಳು ಪದವಿ ಕಾಲೇಜಿನಿಂದ ಬೇರ್ಪಡುವ ಮೊದಲು ಬೆಂಗಳೂರಿನ ವೌಲ್ಯಮಾಪನ ಕೇಂದ್ರಗಳಲ್ಲಿಯೂ ಜತೆಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಪಡೆದ ನನಗೆ ಮೊತ್ತ ಮೊದಲ ವೌಲ್ಯಮಾಪನ ಕಾರ್ಯದ ಸಂದರ್ಭದಲ್ಲಿ ಅವರೇ ನನ್ನ ಗುಂಪಿಗೆ ಮುಖ್ಯಸ್ಥರಾಗಿದ್ದರು. ನನ್ನ ಜತೆಗೆ ಅವರ ಕಾಲೇಜಿನ ಇನ್ನೊಬ್ಬ ಕನ್ನಡ ಉಪನ್ಯಾಸಕಿಯಾದ ಲೀಲಾವತಿ ಎಸ್.ರಾವ್ ಅವರೂ ಇರುತ್ತಿದ್ದರು. ಹೊಸಬೆಟ್ಟು ಅವರ ಜತೆಗಿನ ಕಾರ್ಯನಿರ್ವಹಣೆಯಲ್ಲಿ ಯಾವುದೇ ಒತ್ತಡಗಳಿಲ್ಲದಂತೆ ಸರಸವಾದ ಮಾತುಗಳ ಜತೆಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು. ಮೊತ್ತಮೊದಲ ನನ್ನ ವೌಲ್ಯಮಾಪನದ ಕಾರ್ಯ, ಅನುಭವ ಇಲ್ಲದೆ ಇರುವುದರಿಂದ ನಿಧಾನವಾಗಿ ಸಾಗುತ್ತಿತ್ತು. ನಾನು ಉತ್ತರದ ಪುಟಗಳಲ್ಲಿ ಅಂಕಗಳನ್ನು ಸ್ಪುಟವಾಗಿ ಬರೆಯುತ್ತಿದ್ದುದು, ಮಾರ್ಕ್‌ಶೀಟ್ ಚಿತ್ತಿಲ್ಲದೆ ಬರೆಯುತ್ತಿದ್ದುದನ್ನು ಕಂಡು ಶಹಭಾಸ್‌ಗಿರಿ ಕೊಡುತ್ತಲೇ ಇಷ್ಟು ಚಂದಕ್ಕೆ ಬರೆಯುವುದರಿಂದಲೇ ನೀವು ಎಲ್ಲರಿಗಿಂತ ಹಿಂದೆ ಉಳಿದಿದ್ದೀರಿ. 1/4 ಅಂಕಗಳನ್ನು ಕೊಡದೆ ಪೂರ್ಣಾಂಕಗಳನ್ನು ನೀಡಿ, ಅದನ್ನು ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಹೇಗೆ ಕೊಡಬೇಕು ಎನ್ನುವ ಗುಟ್ಟನ್ನು ಹೇಳಿಕೊಟ್ಟರು. ಡಾ.ಸೀ. ಹೊಸಬೆಟ್ಟು ಅವರು ಸ್ನೇಹಶೀಲರಾಗಿದ್ದುದರಿಂದ ಸಹೋದ್ಯೋಗಿ ಗಳಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮೀಯತೆ, ಸಲುಗೆಯಿಂದ ಇರುತ್ತಿದ್ದವರು ಪ್ರಾಂಶುಪಾಲರಾಗುವ ಅವಕಾಶ ದೊರೆಯಿತು.

ಆ ಹುದ್ದೆಯನ್ನು ಇವರಿಂದ ನಿಭಾಯಿಸಲು ಸಾಧ್ಯವೇ ಎಂಬುದು ಅನೇಕರಿಗೆ ಪ್ರಶ್ನೆಯಾಗಿತ್ತು. ಆದರೆ ಹೃದಯವಂತರಾದ ಸೀ.ಹೊಸಬೆಟ್ಟು ಆ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದುದನ್ನು ನೋಡಿದೆ. ಡಾ.ಸೀ. ಹೊಸಬೆಟ್ಟು ಅವರು ಬಹುಶಃ ಪ್ರಾಂಶುಪಾಲರಾದ ಮೊದಲ ಕನ್ನಡ ಪ್ರಾಧ್ಯಾಪಕರೆಂದು ನನ್ನ ಅನಿಸಿಕೆ. ಆ ಬಳಿಕ ಮಂಗಳೂರಿನಲ್ಲಿ ಕೆನರಾ ಪದವಿಪೂರ್ವ ಕಾಲೇಜಲ್ಲಿ ಜಿ. ಶಂಕರ ಶೆಟ್ಟಿ ಅವರು ಪ್ರಾಂಶುಪಾಲರಾದರು. ಕನ್ನಡದ ಉಪನ್ಯಾಸಕರು ಇಂತಹ ಹುದ್ದೆಗೆ ಅನರ್ಹರು ಎಂಬ ಒಂದು ಆಲೋಚನೆ ಹಲವರಲ್ಲಿತ್ತು. ಆ ಆಲೋಚನೆಯನ್ನು ಮುಂದೆ ನಾವು ಕೆಲವು ಕನ್ನಡದ ಉಪನ್ಯಾಸಕರು ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ಕನ್ನಡದ ‘ಮೇಷ್ಟ್ರುಗಳು’ ಎಲ್ಲಕ್ಕೂ ಸೈ ಎನ್ನುವುದನ್ನು ತೋರಿಸಿಕೊಡುವಲ್ಲಿ ಹಿಂದೆ ಉಳಿದಿಲ್ಲ ಎನ್ನುವುದು ನನಗೆ ವೈಯಕ್ತಿಕವಾಗಿ ಸಂತೋಷದ ವಿಚಾರವೇ ಸರಿ.

ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಲೀಲಾವತಿ ಎಸ್.ರಾವ್ ಇವರು ನನಗೆ ಪರಿಚಯವಾದಂದಿನಿಂದ ಇಂದಿನವರೆಗೂ ನನ್ನ ಆತ್ಮೀಯ ಬಳಗದ ಮೊದಲ ವ್ಯಕ್ತಿ. ಮಂಗಳಗಂಗೋತ್ರಿಯ ಕನ್ನಡ ಸಂಘವು ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಒಪ್ಪಿಸಿದ ಕ್ಷೇತ್ರಕಾರ್ಯದ ಬರಹವನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿತ್ತು. ನನ್ನ ತರಗತಿಯ ಇನ್ನಿಬ್ಬರು ಸಹಪಾಠಿಗಳ ಬರಹಗಳೂ ಪ್ರಕಟಗೊಂಡಿದ್ದುವು. ಇವುಗಳನ್ನು ಬಿಡುಗಡೆ ಮಾಡಲು ಲೀಲಾವತಿ ಎಸ್. ರಾವ್ ಅವರನ್ನು ನಮ್ಮ ಗುರುಗಳಾದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರು ಕರೆಸಿಕೊಂಡಿದ್ದರು. ಹೀಗೆ ನನ್ನ ಬರವಣಿಗೆಗೆ ಮೊತ್ತಮೊದಲಿಗೆ ಶುಭ ಹಾರೈಸಿದವರು ಲೀಲಾವತಿ ಮೇಡಂ. ಈ ಸ್ನೇಹ, ಅವರ ಕಾಲೇಜಿನ ಸಾಹಿತ್ಯ ಸಂಘಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಾಯಿತು.

ಅವರು ನಿವೃತ್ತರಾಗಿ ಮೈಸೂರಲ್ಲಿ ನೆಲೆಸುವವರೆಗೆ ನಾನು ಅವರು ಜತೆಯಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟುದು ನಮ್ಮ ಆತ್ಮೀಯತೆ ವಿಶ್ವಾಸಗಳ ಹೆಚ್ಚಳಕ್ಕೆ ಕಾರಣವೆಂದರೆ ಸರಿಯೇ. ಗೋವಿಂದದಾಸ ಕಾಲೇಜಿನಲ್ಲಿ ಕಾರ್ಯಕ್ರಮಗಳಿವೆ ಬನ್ನಿ ಎಂದು ಕರೆಯಲು ಮನೆಗೆ ಬರುತ್ತಿದ್ದ ಸಜ್ಜನಶೀಲ ವ್ಯಕ್ತಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶೇಖರ ಇಡ್ಯರು. ಶೇಖರ ಇಡ್ಯರು ಡಾ. ಶಿವರಾಮ ಕಾರಂತರ ದೊಡ್ಡ ಅಭಿಮಾನಿ. ಸಾಹಿತ್ಯದ ಕಾರ್ಯಕ್ರಮಗಳಿದ್ದಲ್ಲೆಲ್ಲಾ ಪುಸ್ತಕ ಮಾರಾಟ ಮಾಡುವ ಹವ್ಯಾಸ ಅವರದ್ದು. ಇವರ ಜತೆಗೆ ಹೆಚ್ಚು ಬೆರೆತು ಕಾರ್ಯ ನಿರ್ವಹಿಸುತ್ತಿದ್ದ ಬಾಕೃ ಎಂದೇ ಪರಿಚಿತರಾದ ಬಾಲಕೃಷ್ಣರಾವ್ ಕಾಲೇಜಿನ ಗ್ರಂಥಾಲಯದ ಮುಖ್ಯಸ್ಥರು. ಇವರೂ ಆತ್ಮೀಯರಾದರು. ಈ ಆತ್ಮೀಯತೆ ಸ್ನೇಹಗಳು ಸಾಂದರ್ಭಿಕವಾಗಿ ನಾವು ಅವರ ಮನೆಗಳಿಗೆ, ಅವರು ನಮ್ಮ ಮನೆಗೆ ಬರುವಂತಹದಾಗಿತ್ತು.

ಗೋವಿಂದದಾಸ ಕಾಲೇಜಿನಲ್ಲಿ ಮತ್ತು ಅಂದಿನ ಕೆ.ಆರ್.ಇ.ಸಿ.ಯಲ್ಲಿ ನಡೆಯುತ್ತಿದ್ದ ನೀನಾಸಂ ನಾಟಕಗಳಿಗೆ, ಕೆ.ಆರ್.ಇ.ಸಿ.ಯಲ್ಲಿ ನಡೆಯುತ್ತಿದ್ದ ಸ್ಪಿಕ್‌ಮೆಕೆಯ ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ನಾವು ಹೋಗುವಂತಾದುದು ಗೋವಿಂದ ದಾಸ ಕಾಲೇಜಿನ ಆತ್ಮೀಯ ಬಳಗದಿಂದ. ಇವರಲ್ಲದೆ ಕಾಲೇಜಿನ ಇತರ ವಿಭಾಗಗಳ ಉಪನ್ಯಾಸಕರ ಪರಿಚಿತ ವಲಯಕ್ಕೆ ನಾವು ಸೇರ್ಪಡೆಗೊಂಡೆವು. ಕಾಲೇಜಿನ ಸಮಾನ ಆಸಕ್ತ ಉಪನ್ಯಾಸಕರು, ಸ್ಥಳೀಯ ಗಣ್ಯರು, ಸುರತ್ಕಲಿನ ಹಿರಿಯ ವಿದ್ಯಾರ್ಥಿಗಳು, ಅಧ್ಯಾಪಕರೆಲ್ಲ ಸೇರಿ ‘ಕಾಳಜಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಲೀಲಾವತಿ ಎಸ್.ರಾವ್ ಅವರು ಈ ಸಂಸ್ಥೆಯಲ್ಲೂ ಕಾರ್ಯದರ್ಶಿಯಾಗಿ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.

ನಾವೂ ಇದರ ಸದಸ್ಯರಾದೆವು. ಈ ಸಂಸ್ಥೆಯ ಮೂಲಕ ಯಕ್ಷಗಾನ ಹಾಗೂ ಬಹುಮುಖೀ ವಿಚಾರಧಾರೆಗಳ ಕಾರ್ಯಕ್ರಮಗಳು ನಡೆಯುತ್ತಿತ್ತು. ಮಂಗಳೂರಿಗೆ ಬರುತ್ತಿದ್ದ ಸಾಹಿತಿ, ವಿಮರ್ಶಕ ಗಣ್ಯರನ್ನು ಸುರತ್ಕಲಿನಲ್ಲೂ ಕಾಣುವ, ಕೇಳುವ ಅವಕಾಶ ದೊರೆಯುತ್ತಿತ್ತು. ಇದಲ್ಲದೆ ಕೆಲವೇ ಕೆಲವು ಮಂದಿ ಕುಳಿತುಕೊಂಡು ಚರ್ಚಿಸತಕ್ಕಂತಹ ‘ಸಂವಹನ’ ಸಂಘಟನೆಯೂ ಹುಟ್ಟಿಕೊಂಡಿತು. ಕಡಲ ತೀರದಲ್ಲೂ ಕಾರ್ಯಕ್ರಮಗಳಿಗೆ ಸೇರಿದೆವು. ಲೀಲಾವತಿಯವರ ಮನೆಯಲ್ಲೂ ಸೇರುತ್ತಿದ್ದೆವು. ಕಾರ್ಯಕ್ರಮಗಳನ್ನು ಸಂಯೋಜಿಸುವ ಕೆಲಸದೊಂದಿಗೆ ಕಾರ್ಯಕ್ರಮದ ದಿನ ಅತಿಥಿಗಳಿಗೆ ತನ್ನ ಮನೆಯಲ್ಲಿ ಸುಗ್ರಾಸ ಭೋಜನ, ಕಾಫಿ, ತಿಂಡಿಗಳ ಉಸ್ತುವಾರಿಯನ್ನೂ ಮಾಡುತ್ತಿದ್ದ ಲೀಲಾವತಿಯವರ ಒಳ ಹೊರಗಿನ ಅಚ್ಚುಕಟ್ಟುತನದೊಂದಿಗೆ ಅವರ ಆತ್ಮೀಯತೆಯ ಜತೆಗೆ ಅವರ ಜೀವನ ಸಂಗಾತಿ ಕೆ.ಆರ್.ಇ.ಸಿ.ಯಲ್ಲಿ ಪ್ರಾಧ್ಯಾಪಕರಾಗಿದ್ದ ಶ್ರೀನಿವಾಸ ರಾಯರ ಸ್ನೇಹಶೀಲತೆಯೂ ಸೇರಿ ಕಾರ್ಯಕ್ರಮಗಳು ಯಶಸ್ವಿಯಾಗಿರುತ್ತಿತ್ತು.

ಭಿನ್ನ ವಿಚಾರಧಾರೆಗಳಿಗೆ ಸುರತ್ಕಲಿನ ಮಂದಿ ಹೀಗೆ ಮನತೆರೆದುಕೊಂಡಿದ್ದರಿಂದಲೇ ನಾವು ಬನ್ನಂಜೆ ಗೋವಿಂದಾಚಾರ್ಯ, ಶೇಣಿ ಗೋಪಾಲಕೃಷ್ಣ ಭಟ್ಟ, ಡಾ. ಶಿವರಾಮ ಕಾರಂತರೊಂದಿಗೆ ಪೋಲಂಕಿ ರಾಮಮೂರ್ತಿ, ಕೆ.ವಿ. ಸುಬ್ಬಣ್ಣ, ಮಟ್ಟಿ ರಾಧಾಕೃಷ್ಣರಾವ್, ಜಿ.ಪಿ. ಬಸವರಾಜು ಹೀಗೆ ಹತ್ತು ಹಲವು ಮಂದಿಗಳನ್ನು ಕೇಳುವ ಸಹನೆಯನ್ನು ರೂಢಿಸಿಕೊಂಡಿದ್ದೆವು. ಅಂದು ವಿದ್ಯಾರ್ಥಿಗಳಾಗಿದ್ದ ಅನೇಕರು ಇಂದು ಆ ಪರಂಪರೆಯನ್ನು ತಮ್ಮದೇ ನೆಲೆಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ವಿಚಾರ. ನಾನು ನೆನಪಿಸಿಕೊಳ್ಳಬಹುದಾದ ಅಂದಿನ ವಿದ್ಯಾರ್ಥಿಗಳಾಗಿದ್ದವರು ಗೀತಾ ಸುರತ್ಕಲ್, ಡಾ. ಗಣೇಶ ಅಮೀನ್ ಸಂಕಮಾರ್, ಡಾ. ಸಬಿಹಾ, ಜ್ಯೋತಿ ಚೇಳಾರು, ಡಾ. ಸಾಯಿಗೀತಾ ಹೆಗಡೆ, ಕೃಷ್ಣಮೂರ್ತಿ ಚಿತ್ರಾಪುರ ಸುಧಾರಾಣಿ, ಬಿ.ಎಂ. ಹನೀಫ್, ಸುಮಂಗಲಾ ಕೃಷ್ಣಾಪುರ ಮೊದಲಾದವರು.

ಅಂದಿನ ನೆನಪುಗಳೊಂದಿಗೆ ಇಂದಿಗೂ ಜತೆಯಲ್ಲಿರುವವರು. ಸುರತ್ಕಲಿನ ರೋಟರಿ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಇನ್ನಿತರ ಸಾಂದರ್ಭಿಕ ಸಂದರ್ಭಗಳಲ್ಲಿ ಸುರತ್ಕಲ್ಲಿನ ಮಂದಿ ನಮ್ಮಿಬ್ಬರನ್ನೂ ವೇದಿಕೆಯೇರಿಸಿ ಮೆರೆಯಿಸಿದ್ದಾರೆ. ಇಂತಹುದೇ ಸಂದರ್ಭದಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘವೂ ಹುಟ್ಟಿಕೊಂಡಿತು. ಅದರ ತಾತ್ಕಾಲಿಕ ಸಮಿತಿಯ ಅಧ್ಯಕ್ಷರಾಗಿ ಲೀಲಾವತಿ ಎಸ್.ರಾವ್ ಅವರನ್ನು ಆಯ್ಕೆ ಮಾಡಿದಾಗ ಅವರ ಜತೆಗೆ ಕಾರ್ಯನಿರ್ವಹಿಸುವ ಅವಕಾಶ ಗೀತಾ ಸುರತ್ಕಲ್ ಹಾಗೂ ನನ್ನದಾಯಿತು. ಮುಂದೆ ಅದು ಸಂಪೂರ್ಣವಾಗಿ ಖಾಯಂ ಸಂಘಟನೆಯಾಗಿ ಸ್ಥಾಪನೆಗೊಂಡಾಗ ಅದರ ಮೊದಲ ಅಧ್ಯಕ್ಷೆಯಾದವರು ಜಿಲ್ಲೆಯ ಹಿರಿಯ ಲೇಖಕಿ ಪದ್ಮಾ ಶೆಣೈ. ಸಾರಾ ಅಬೂಬಕರ್ ಉಪಾಧ್ಯಕ್ಷೆಯಾದರು. ಲೀಲಾವತಿ ಮೇಡಂ ಮತ್ತು ಗೀತಾ ಸುರತ್ಕಲ್ ಕಾರ್ಯದರ್ಶಿಯಾದರು. ನಾನು ಕೋಶವಿಲ್ಲದ ಸಂಘದ ಕೋಶಾಧಿಕಾರಿಯಾದೆ.

ಈ ನಮ್ಮ ಸಂಘದ ಹೆಚ್ಚಿನ ಕಾರ್ಯಕ್ರಮಗಳಿಗೆ ಗೋವಿಂದ ದಾಸ ಕಾಲೇಜು ಆಶ್ರಯ ನೀಡಿತ್ತು. ಈ ಹಿನ್ನೆಲೆಯಲ್ಲಿ ಪದ್ಮಾ ಶೆಣೈ, ಲೀಲಾವತಿ ಎಸ್. ರಾವ್, ಸಾರಾ ಅಬೂಬಕರ್ ಮತ್ತು ಗೀತಾ ಸುರತ್ಕಲ್ ನಮ್ಮ ಮನೆಗೆ ಬಂದು ಹೋದುದೂ ಇದೆ. ಈಗ ಆಸುಪಾಸಿನ ಜನರಿಗೆ ನಮ್ಮ ಮನೆಗೆ ಬಂದು ಹೋಗುವವರ ಬಗ್ಗೆ ವಿಚಾರಿಸುವ ಅಥವಾ ಆಡಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆಯಾದುವು ಎನ್ನುವುದು ಅವರ ಅಳತೆಗೆ ಸಿಗಲಾರದ್ದು ಎನ್ನುವುದೇ ಸತ್ಯವಾಗಿ ನಾವು ಅವರ ಗ್ರಹಿಕೆಗೆ ಮೀರಿದವರು ಎಂದಾದ ಮೇಲೆ ಅವರೂ ಕ್ಷೇಮ ನಾವೂ ಕ್ಷೇಮ ತಾನೇ? ಆದರೆ ಇವು ಯಾವುದನ್ನೂ ಅರಿಯಲಾಗದ ಸಾಮಾನ್ಯ ಜನರೊಂದಿಗೆ ನಾವು ಎಂದಿನಂತೆಯೇ ಇದ್ದುದು ನಮ್ಮ ಅನುಭವದ ಸತ್ಯ.

ಕೃಷ್ಣಾಪುರದ ಯುವಕ ಮಂಡಲವು ಏರ್ಪಡಿಸಿದ ನೃತ್ಯ ಕಾರ್ಯಕ್ರಮ ವೊಂದಕ್ಕೆ ಉಳ್ಳಾಲ ಮೋಹನ್‌ಕುಮಾರ್ ಹಾಗೂ ಅವರ ಶಿಷ್ಯವರ್ಗವು ಬಂದಿತ್ತು. ಉಳ್ಳಾಲ ಮೋಹನ್ ಕುಮಾರ್‌ರವರು ನಮ್ಮ ಅಪ್ಪನ ಚಡ್ಡಿದೋಸ್ತಿ ಎಂದರೂ ಸರಿಯೇ. ಅವರ ಜತೆಯಲ್ಲಿ ಓದಿದವರು ಎಂದು ನನಗೆ ತಿಳಿದಿಲ್ಲವಾದರೂ ನಾನು ಚಿಕ್ಕವಳಿರುವಾಗ ಅವರು ನಮ್ಮ ಕಾಪಿಕಾಡು ಬಿಜೈ ಮನೆಗೆ ಬಂದುದು ನೆನಪಿದೆ. ಅವರೆಲ್ಲ ಆಗ ರಾಜನ್ ಅಯ್ಯರ್ ಎಂಬ ಭರತನಾಟ್ಯ ಗುರುಗಳಲ್ಲಿ ನಾಟ್ಯ ಕಲಿಯುವುದಕ್ಕೆ ಬರುತ್ತಿದ್ದರೆಂದು ನೆನಪು. ಅವರ ಜತೆಗೆ ಸಂಜೀವ ಮಾಸ್ತರ್, ಪ್ರೇಮನಾಥ ಮಾಸ್ತರ್ ಇವರೆಲ್ಲಾ ಕಲಿಯುತ್ತಿದ್ದರು. ಇವರಲ್ಲಿ ಸಂಜೀವ ಮಾಸ್ತರ್ ಅದನ್ನು ಮುಂದುವರಿಸಲಿಲ್ಲ. ಅವರು ಕೊನೆಯವರೆಗೂ ನಮ್ಮ ಮನೆಗೆ ಬರುತ್ತಿದ್ದು ನಮ್ಮ ಕುಟುಂಬದ ಸದಸ್ಯರಂತೆ ಇದ್ದುದನ್ನು ಹೇಳಿದ್ದೇನೆಂಬ ನೆನಪು.

ಇವರೆಲ್ಲ ನಮ್ಮ ದೊಡ್ಡಪ್ಪನ ಶಾಲೆ ಬೆಳ್ಮ ದೇರಳಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರೂ ಆಗಿದ್ದುದರಿಂದ ನಮಗೆ ಆತ್ಮೀಯರೇ ಆಗಿದ್ದರು. ಉಳ್ಳಾಲ ಮೋಹನ್ ಮಾಸ್ಟ್ರು ನನಗೆ ನೃತ್ಯ ಕಲಿಸುವುದಕ್ಕೆ ಅಪ್ಪನನ್ನು ಎಷ್ಟು ಒತ್ತಾಯಿಸಿದರೂ ಅದ್ಯಾಕೋ ಅಪ್ಪ ಅನುಮತಿಸಲೇ ಇಲ್ಲ. ಹೀಗೆ ನನ್ನ ನೃತ್ಯಾಭ್ಯಾಸದ ಆಸೆಯೂ ಅಡಗಿತ್ತು. ಇದೀಗ ನನ್ನ ಮಗಳನ್ನು ನೋಡಿದ ಮೋಹನ್‌ಕುಮಾರ್‌ರವರು ಅವಳಿಗೆ ನೃತ್ಯ ಕಲಿಸು ಎಂದು ಹೇಳಿದರು. ಅವರು ಕೋಟೆಕಾರಿನ ತನ್ನ ಮನೆಯಲ್ಲೇ ತರಗತಿಗಳನ್ನು ಮಾಡುತ್ತಿದ್ದುದರಿಂದ ಕೃಷ್ಣಾಪುರದಿಂದ ಅಲ್ಲಿಗೆ ಹೋಗುವುದು ಕಷ್ಟ ಎನ್ನುವುದರ ಜತೆಗೆ ಅವರ ಶಿಷ್ಯೆ ಶಾರದಾಮಣಿ ಮಂಗಳೂರಲ್ಲಿ ತರಗತಿ ನಡೆಸುತ್ತಿದ್ದಾಳೆ ಎಂದು ತಿಳಿಸಿದರು. ಶಾರದಾಮಣಿಯೂ ನನಗೆ ಆಪ್ತಳೇ.

ಶಾರದಾಮಣಿಯ ತಂದೆ ಸಂಗೀತ ವಿದ್ವಾನ್ ಸುಂದರ ಆಚಾರ್ಯರು ನನ್ನ ಅಪ್ಪನ ಸಹೋದ್ಯೋಗಿ, ನನ್ನ ಸಂಗೀತ ಗುರುಗಳೂ ಹೌದು. ಇದೇ ಕಾರಣದಿಂದ ನಮ್ಮ ಮದುವೆ ಸಮಾರಂಭದಲ್ಲಿ ಶಾರದಾಮಣಿ ಮತ್ತು ಅವಳ ಗೆಳತಿ ವಿದ್ಯಾ ಇವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಅಪ್ಪ ಏರ್ಪಡಿಸಿದ್ದರು. ಇದೀಗ ಅವಳು ಎಲ್ಲಿ ತರಗತಿ ನಡೆಸುತ್ತಾಳೆ ಎಂಬ ಬಗ್ಗೆ ವಿಚಾರಿಸಿದಾಗ ನಮ್ಮ ಗಣಪತಿ ಶಾಲೆಯ ಶಾರದಾ ಸದನದಲ್ಲೇ ಬೆಳಗ್ಗೆ 8.00ರಿಂದ 8.45ರವರೆಗೆ ತರಗತಿ ಮಾಡುತ್ತಿದ್ದಾಳೆ ಎನ್ನುವುದು ತಿಳಿಯಿತು. ಹಾಗೆಯೇ ಪಾಲ್ಕೆಹಾಲ್(ಈಗ ಅದು ಇದ್ದ ಜಾಗದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್‌ ಇದೆ) ನಲ್ಲಿ ಸುಂದರ ಆಚಾರ್ಯರು ಪ್ರಾರಂಭಿಸಿದ ಸನಾತನ ವಿದ್ಯಾಲಯದಲ್ಲೂ ತರಗತಿಗಳು ಇದ್ದುವು. ನನ್ನ ಮಗಳನ್ನು ಒಂದು ನವರಾತ್ರಿಯ ವಿದ್ಯಾದಶಮಿಯಂದು ನೃತ್ಯ ತರಗತಿಗೆ ಸೇರಿಸಿದೆ.

  ಅವಳನ್ನು ಬೆಳಗ್ಗೆ ಈ ತರಗತಿಗೆ ಕರೆದೊಯ್ಯುವ ಜವಾಬ್ದಾರಿ ನಮ್ಮವರದಾಯಿತು. ಸಂಜೆಯ ತರಗತಿ ಗಳಿದ್ದಾಗ ಕರೆದೊಯ್ಯುವ ಜವಾಬ್ದಾರಿ ನನ್ನದಾಯಿತು. ಮುಂದೆ ಉಳ್ಳಾಲ ಮೋಹನ್ ಮಾಸ್ಟ್ರಲ್ಲಿಯೇ ಸೇರಿದಾಗ ಪ್ರತೀ ರವಿವಾರ ಮಧ್ಯಾಹ್ನ 3ರಿಂದ 6ರ ವರೆಗಿನ ತರಗತಿಗೆ ಕೋಟೆಕಾರಿಗೆ ನಾನೇ ಕರೆದೊಯ್ಯುತ್ತಿದ್ದೆ. ಹೀಗೆ ಅವರ ಶಿಷ್ಯೆಯಾದ ನನ್ನ ಮಗಳು ಕರ್ನಾಟಕ ಸರಕಾರದ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳನ್ನು ಮುಗಿಸಿದ್ದಲ್ಲದೆ, ಗುರುಗಳ ತಂಡದೊಂದಿಗೆ ಕಾಟಿಪಳ್ಳದ ಗಣೇಶ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ನೀಡಿದಳೆನ್ನುವುದು ಈ ಊರಿಗೆ ಸಂಬಂಧಿಸಿದ ವಿಷಯ. ಗುರುಗಳ ತಂಡದೊಂದಿಗೆ ಸಾಕಷ್ಟು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಲ್ಲದೆ ಶಾಲಾ, ಕಾಲೇಜುಗಳಲ್ಲಿ ತಾನೇ ಇತರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಎಲ್ಲರ ಹೊಗಳಿಕೆಗೆ ಪಾತ್ರಳಾಗಿದ್ದಳು. ಅನೇಕ ಬಹುಮಾನಗಳನ್ನೂ ಗಳಿಸಿದ್ದಳು.
ಸಂಗೀತವೂ ನಮ್ಮ ಅಸಕ್ತಿಯ ವಿಷಯವೇ ಆಗಿತ್ತಲ್ಲವೇ? ಈ ಕಾರಣದಿಂದ ಮಕ್ಕಳಿಬ್ಬರನ್ನೂ ವಿದ್ಯಾದಾಯಿನಿ ಶಾಲೆಯ ಕಟ್ಟಡದಲ್ಲೇ ನಡೆಯುತ್ತಿದ್ದ ಸಂಗೀತ ತರಗತಿಗೆ ಸೇರಿಸಿದೆ. ಇಲ್ಲಿ ವಿದ್ವಾನ್ ಎಂ. ನಾರಾಯಣ ಅವರು ಸಂಗೀತ ತರಗತಿ ನಡೆಸುತ್ತಿದ್ದರು. ನಾನು ಕೂಡ ಮಕ್ಕಳನ್ನು ಕರೆದೊಯ್ಯಲು ಕಾಲೇಜು ಮುಗಿಸಿ ಸಂಗೀತ ತರಗತಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ.ಆಗ ಅವರ ಹಿರಿಯ ವಿದ್ಯಾರ್ಥಿಗಳಾಗಿ ಇಂದು ಪ್ರಸಿದ್ಧರಾಗಿರುವ ಶೀಲಾ, ಶೈಲಾ ಅವಳಿ ಸಹೋದರಿಯರು, ಪ್ರಾರ್ಥನಾ ಮೊದಲಾದವರು ಬರುತ್ತಿದ್ದವರು. ಸಂಗೀತ ಗುರುಗಳಾದ ನಾರಾಯಣರು ಅಂಚೆ ಇಲಾಖೆಯಲ್ಲಿದ್ದು ಸುರತ್ಕಲ್ ಅಂಚೆ ಕಚೇರಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನನ್ನ ಮಗಳು ಅವರ ತರಬೇತಿಯಿಂದ ಕರ್ನಾಟಕ ಸರಕಾರದ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಅದೇ ವೇಳೆ ನನ್ನ ಮಗ ಪರೀಕ್ಷೆಗೆ ಹಾಜರಾಗಲು ಇನ್ನೂ ಪ್ರಾಥಮಿಕ ಶಾಲೆಯಲ್ಲಿದ್ದುದು, ಚೆನ್ನಾಗಿ ಹಾಡುತ್ತಿದ್ದರೂ ಸಣಕಲು ಶರೀರದವನಾಗಿ ತುಂಬಾ ಚಿಕ್ಕವನಂತೆ ಕಾಣುತ್ತಿದ್ದುದರಿಂದ ಸಾಧ್ಯವಾಗ ಲಿಲ್ಲ. ಅವನು ಚೆನ್ನಾಗಿ ಹಾಡುತ್ತಿದ್ದುದರಿಂದ ಅವನನ್ನು ಹಲವು ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದೆ. ಕೆಲವು ಬಹುಮಾನಗಳನ್ನು ಪಡೆಯುವಷ್ಟಕ್ಕೆ ಅವನ ಸಂಗೀತಾಭ್ಯಾಸ ಪ್ರಾಥಮಿಕ ಶಾಲಾ ಹಂತದಲ್ಲಿ ನಿಂತು ಹೋಯಿತು. ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ಚಿತ್ರಕಲೆಯ ಶಿಕ್ಷಕಿಯಾಗಿದ್ದ ಮನೋರಂಜಿನಿಯವರು ಕರ್ನಾಟಕ ಸರಕಾರದ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಗಳು ಚಿತ್ರಕಲೆಯ ಜೂನಿಯರ್ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣಳಾದಳು. ಮಗನಾದರೋ ಶಾಲೆಗೆ ಸೇರುವ ಮೊದಲೇ ಚಿತ್ರಕಲೆಯಲ್ಲಿ ಯಾರ ತರಬೇತಿ ಇಲ್ಲದೆ ಚಿತ್ರಬಿಡಿಸುವುದರಲ್ಲಿ ಆಸಕ್ತನಾಗಿದ್ದ. ಮಂಗಳೂರಿನಲ್ಲಿರುವಾಗ ಗಣೇಶ ಸೋಮಯಾಜಿಯವರಿಂದ ತರಬೇತಿಯನ್ನೂ ಪಡೆದಿದ್ದ. ಇಲ್ಲಿಯೂ ಆತನ ಚಿತ್ರಕಲೆಯ ಆಸಕ್ತಿಗೆ ಅವಕಾಶಗಳು ದೊರೆತು ಮಂಗಳೂರಿನಂತೆ ಇಲ್ಲಿಯೂ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದ. ಹೀಗೆ ಸುರತ್ಕಲ್‌ನ ವಿದ್ಯಾದಾಯಿನಿ ಸಂಸ್ಥೆಗಳು ನಮ್ಮ ಹಾಗೂ ನಮ್ಮ ಮಕ್ಕಳ ಬದುಕಿನ ಆಸಕ್ತಿಗಳಿಗೆ, ಪೂರಕ ವಾತಾವರಣವನ್ನು ಒದಗಿಸುವ ಮೂಲಕ ಸುರತ್ಕಲ್ ಎನ್ನುವುದು ನಮ್ಮೂರಿನ ಭಾಗವೇ ಆಗಿದೆ. ಸುರತ್ಕಲ್‌ನ ಮಂದಿ ನನ್ನೂರಿನ ಜನರೇ ಆದರಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)