‘ಮತಾಂತರ’ವೆಂಬ ತಪ್ಪು ಪ್ರಚಾರ
ಹಿಂದುತ್ವ ಗುಂಪುಗಳು ಕ್ರಿಶ್ಚಿಯನ್ ಮಿಶನರಿಗಳ ವಿರುದ್ಧ ಹೊಡೆಯುವ ಬೊಬ್ಬೆ, ಮಾಡುವ ಆಪಾದನೆಗಳು ಕೇವಲ ತಪ್ಪು ಪ್ರಚಾರ ಎಂಬುದನ್ನು ಜನಗಣತಿ ದತ್ತಾಂಶಗಳು ತೋರಿಸುತ್ತವೆ
ಭಾಗ-1
ರೋಮನ್ ಕ್ಯಾಥೊಲಿಕ್ರ ಪರಮೋಚ್ಚ ಸಂಸ್ಥೆಯಾದ ಬಿಶಪ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಹಾಕಾರ್ಯದರ್ಶಿ ಥಿಯೊಡೋರ್ ಮಸ್ಕರೆನ್ಹಾಸ್, ಇತ್ತೀಚೆಗೆ ‘‘(ಜಾರ್ಖಂಡ್) ಮುಖ್ಯಮಂತ್ರಿ ರಘುವರ್ದಾಸ್ರವರು ಹರಡುತ್ತಿರುವ ದ್ವೇಷವನ್ನು ಹತ್ತಿಕ್ಕುವಂತೆ’’ ಪ್ರಧಾನಿ ಮೋದಿಯವರಲ್ಲಿ ವಿಜ್ಞಾಪಿಸಿಕೊಂಡರು. ಕ್ರಿಶ್ಚಿಯನ್ ಮಿಶನರಿಗಳು ದಲಿತರನ್ನು ಮತ್ತು ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆಂದು ಆಪಾದಿಸಿ ಆಗಸ್ಟ್ ತಿಂಗಳಿನಲ್ಲಿ ದಾಸ್ ಸರಕಾರ ನೀಡಿದ ಒಂದು ಜಾಹೀರಾತು ಈ ದ್ವೇಷದ ಪ್ರಕಟನೆ, ಪ್ರದರ್ಶನವೆಂದು ಮಸ್ಕರೆನ್ಹಾಸ್ ಹೇಳಿದರು.
ಜಾರ್ಖಂಡ್ನ ಶಾಸಕಾಂಗವು ‘ರಿಲಿಜಿಯಸ್ ಫ್ರೀಡಂ ಬಿಲ್ (ಧಾರ್ಮಿಕ ಸ್ವತಂತ್ರ ಮಸೂದೆ), 2017’ ಎಂಬ ಮಸೂದೆಯನ್ನು ಅಂಗೀಕರಿಸುವ ಸ್ವಲ್ಪ ಸಮಯದ ಮೊದಲು ಈ ಜಾಹಿರಾತು ಪ್ರಕಟವಾಗಿತ್ತು. ಜನರನ್ನು ಮತಾಂತರಿಸಲು ಬಲತ್ಕಾರ, ಬಲಪ್ರಯೋಗ ಅಥವಾ ಆಮಿಷ ಒಡ್ಡುವವರಿಗೆ ಮಸೂದೆ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ದಾಸ್ರ ಮನಸ್ಸಿನಲ್ಲಿ ದ್ವೇಷ ಕೆಲಸಮಾಡುತ್ತಿದೆಯೋ, ಅವರು ದ್ವೇಷದಿಂದ ಪ್ರೇರೇಪಿತರಾಗಿದ್ದಾರೋ ಇಲ್ಲವೋ ಎಂದು ಹೇಳುವುದು ಕಷ್ಟ, ಆದರೆ 2011ರ ಜನಗಣತಿಯ ಪ್ರಕಾರ ಜಾರ್ಖಂಡ್ನಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಜನಸಂಖ್ಯೆ ಹಿಂದುಗಳ ಜನಸಂಖ್ಯೆಯನ್ನು ಮೀರುವ ಅಪಾಯ ಇಲ್ಲವೇ ಇಲ್ಲವಾದರೂ, ದಾಸ್ ಮಾತ್ರ ಹೀಗಾಗುತ್ತದೆಂಬ ಬಗ್ಗೆ ವಿಪರೀತ ಭೀತರಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಜಾರ್ಖಂಡ್ನ ಒಟ್ಟು ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಕೇವಲ ಶೇ. 4.3, ಮುಸ್ಲಿಮರು ಶೇ. 14.53 ಮತ್ತು ಹಿಂದೂಗಳು ಶೇ. 67.83 ಇದ್ದಾರೆ. ಅನೇಕ ರಾಜ್ಯಗಳಿಗೆ ಹೋಲಿಸಿದಾಗ ಜಾರ್ಖಂಡ್ನಲ್ಲಿ ಹಿಂದೂಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇದ್ದರೆ, ಅದಕ್ಕೆ ರಾಜ್ಯದ ಶೇ. 12.84 ಜನರು ತಾವು ‘ಇತರ ಧರ್ಮಗಳ’ ಅನುಯಾಯಿಗಳು ಎಂದು ಜನಗಣತಿಯಲ್ಲಿ ನಮೂದಿಸಿಕೊಂಡಿರುವುದೇ ಕಾರಣ. ‘ಇತರ ಧರ್ಮಗಳು’ ಎಂಬುದು ಜನಗಣತಿಯಲ್ಲಿ ಒಂದು ಆಮ್ಮಿಬಸ್ ಕೆಟಗರಿಯಾಗಿದೆ.
ಜಾರ್ಖಂಡ್ನಲ್ಲಿ ‘ಇತರ ಧರ್ಮಗಳ’ ಅನುಯಾಯಿಗಳು ಮುಖ್ಯವಾಗಿ ‘ಸರ್ಣ’ ಎಂಬ ನಂಬಿಕೆ ಹೊಂದಿರುವ ಪ್ರಕೃತಿಯನ್ನು ಪೂಜಿಸುವ ‘ಸರ್ಣ’ ಸಮುದಾಯದವರು, ಜನಗಣತಿಯ ವೇಳೆ ಸರ್ಣ ಅನುಯಾಯಿಗಳಿಗೆ ಒಂದು ಪ್ರತ್ಯೇಕ ಕೋಡ್ ನೀಡಬೇಕು, ಪರಿಣಾಮವಾಗಿ ಅದನ್ನು ಒಂದು ಪ್ರತ್ಯೇಕ ಧರ್ಮವಾಗಿ ಗುರುತಿಸಲು ಸಾಧ್ಯವಾಗುತ್ತದೆ, ‘ಅದರ್ ರಿಲಿಜನ್ಸ್’ ಎಂಬ ಕೆಟಗರಿಯಲ್ಲಿ, ವರ್ಗದಲ್ಲಿ ಅದು ಮುಳುಗಿ ಹೋಗುವುದನ್ನು ತಪ್ಪಿಸಬಹುದಾಗುತ್ತದೆ ಎಂದು ಸರ್ಣ ಸಮುದಾಯದವರು ಬಹಳ ಸಮಯದಿಂದ ಅಭಿಯಾನ ನಡೆಸುತ್ತಲೇ ಬಂದಿದ್ದಾರೆ.
ಜಾರ್ಖಂಡ್ನಲ್ಲಿ(ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ‘ಇತರ ಧರ್ಮದವರೂ’ ಸೇರಿದಂತೆ) ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 31.67ದಷ್ಟು ಅಲ್ಪಸಂಖ್ಯಾತರ ಜನಸಂಖ್ಯೆ ಇದೆಯಾದರೂ, ರಾಜ್ಯದ 24 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಹಿಂದೂ ಧರ್ಮವೇ ಬಹುಸಂಖ್ಯಾತ ಧರ್ಮವಾಗಿದೆ.
ಸಿಮ್ಡೆಗಾ ಮಾತ್ರ ಕ್ರಿಶ್ಚಿಯನ್ ಬಹುಸಂಖ್ಯಾತರಾಗಿರುವ ಒಂದು ಜಿಲ್ಲೆ, ಅಲ್ಲಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ. 51.4 ಕ್ರಿಶ್ಚಿಯನ್ರಿದ್ದಾರೆ. ಆದರೆ ಸಿಮ್ಡೆಗಾ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ಕನಿಷ್ಠ ಜನಸಂಖ್ಯೆ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವವು ಲೊಹಾರ್ದಗಾ ಮತ್ತು ಖುಂತಿ ಜಿಲ್ಲೆಗಳು. ಈ ಎರಡು ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು, ಈ ಮೂರು ಜಿಲ್ಲೆಗಳಲ್ಲಿ, ಯಾವ ಜಿಲ್ಲೆಯಲ್ಲೂ ಆರು ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆ ಇಲ್ಲ. ಅಷ್ಟೇ ಅಲ್ಲದೇ, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಗಳಾಗಿರುವ ಗುಮ್ಲಾ ಮತ್ತು ಪಶ್ಚಿಮಿ ಸಿಂಗ್ಭೂಮ್ ಎರಡೂ ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಎಂಬುದನ್ನು ಗಮನಿಸಬೇಕು.
ಸಿಮ್ಡೆಗಾವನ್ನು ಹೊರತುಪಡಿಸಿದರೆ, ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಉಳಿದ ನಾಲ್ಕು ಜಿಲ್ಲೆಗಳಲ್ಲಿ ಸರ್ಣ ಅನುಯಾಯಿಗಳೇ ಪ್ರಬಲರಾಗಿದ್ದಾರೆ. ಲೊಹಾರ್ದಗಾದ ಜನಸಂಖ್ಯೆಯಲ್ಲಿ ಶೇ. 51.1 ಸರ್ಣರು. ಗುಮ್ಲಾದಲ್ಲಿ ಶೇ. 44.62, ಖುಂತಿಯಲ್ಲಿ ಶೇ. 45.37 ಮತ್ತು ಪಶ್ಚಿಮಿ ಸಿಂಗ್ಭೂಮ್ನಲ್ಲಿ ಶೇ. 5.83 ಕ್ರಿಶ್ಚಿಯನ್ನರು.
ದಶಕಗಳ ಕಾಲ ಆರೋಗ್ಯಸೇವೆ ಮತ್ತು ಶಿಕ್ಷಣ ಸವಲತ್ತುಗಳನ್ನು ನೀಡಿದ ಬಳಿಕ, ಕ್ರಿಶ್ಚಿಯನ್ ಮಿಶನರಿಗಳ ಮೇಲೆ ಆಪಾದಿಸಲಾಗಿರುವಂತೆ, ಅವರು ಬೃಹತ್ ಪ್ರಮಾಣದಲ್ಲಿ, ಬೃಹತ್ ಸಂಖ್ಯೆಯಲ್ಲಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಸಾಧ್ಯವಾಗಿಲ್ಲ.
ಜಾರ್ಖಂಡ್ನಲ್ಲಿರುವ ಕ್ರಿಶ್ಚಿಯನ್ನರು ಬಹುಪಾಲು ಆದಿವಾಸಿಗಳಾಗಿರುವುದರಿಂದ, ಸರ್ಣ ನಂಬಿಕೆಯ, ಸರ್ಣ ಪಂಥದ ನಾಯಕರು ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸುತ್ತಿದ್ದಾರೆ. ಮತಾಂತರದಿಂದಾಗಿ ಅವರ ಸಂಖ್ಯೆ ಕಡಿಮೆಯಾಗುತ್ತಿರುವುದು ಅವರಿಗೆ ಆಶ್ಚರ್ಯವುಂಟುಮಾಡಿದೆ. ಆದರೆ ಹೀಗೆ ಅವರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಮಿಶನರಿಗಳ ಮತಾಂತರ ಪ್ರವೃತ್ತಿಯು ಹಲವು ಕಾರಣಗಳಲ್ಲಿ ಒಂದು ಕಾರಣವಿರಬಹುದು, ಅಷ್ಟೆ.
ಈಗ ಅಸ್ತಿತ್ವದಲ್ಲಿಲ್ಲದ ಸರ್ಣ ಸೆಂಟ್ರಲ್ ಕಮಿಟಿಯ ಓರ್ವ ಮಾಜಿ ಕಾರ್ಯದರ್ಶಿ ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಹೇಳಿರುವಂತೆ, ‘‘ಸರಕಾರ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಜನಗಣತಿಯಲ್ಲಿ ಸರ್ಣರಿಗೆ ಒಂದು ಕೋಡ್ ನೀಡುವುದು, ಹೀಗೆ ಮಾಡಿದಲ್ಲಿ ಆ ಕೋಡ್ ಜನಗಣತಿಯಲ್ಲಿ ನಮಗೆ ಸರ್ಣ ಒಂದು ಪ್ರತ್ಯೇಕ ಧರ್ಮವೆಂದು ನಮೂದಿಸಲು ಸಾಧ್ಯವಾಗುತ್ತದೆ, ಇಲ್ಲವಾದಲ್ಲಿ ...ಕೆಲವು ಸರ್ಣರು ಮತಾಂತರವಾಗಿ ಚರ್ಚ್ಗೆ ಹೋಗುತ್ತಾರೆ, ಇತರರು ವಲಸೆ ಹೋಗುತ್ತಾರೆ ಮತ್ತು ಅವರಲ್ಲಿ ಕೆಲವರು ಬೆಳಗ್ಗೆ ಹನುಮಾನ್ ಚಾಲಿಸಾ ಸ್ತೋತ್ರ ಪಠನ ಮಾಡುತ್ತಾರೆ’’
ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಭಾರತದ ಜನಗಣತಿ ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಜಾತಿ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತ ಬಂದಿದೆ. ಸರ್ಣ ಪಂಥವನ್ನು ಒಂದು ಪ್ರತ್ಯೇಕ ಧರ್ಮವಾಗಿ ಪರಿಗಣಿಸಬೇಕೆಂಬ ಬೇಡಿಕೆಗೆ ಬೆಂಬಲ ನೀಡಲು ಹಿಂದುತ್ವ ನಾಯಕರು ಮೀನಾಮೇಷ ಎಣಿಸಲು ಇದೇ ಕಾರಣ. ಜನಗಣತಿಯಲ್ಲಿ ‘‘ಇತರ ಧರ್ಮಗಳು’’ ಎಂದು ನಮೂದಿಸುವವರೆಲ್ಲ ಹಿಂದೂಗಳು ಎಂದು ಈ ನಾಯಕರು ಹೇಳುತ್ತಾರೆ. ಈ ಆಧಾರದಲ್ಲಿ ಅವರು ಸರ್ಣರಿಗೆ ಒಂದು ಹಿಂದೂ ಅಸ್ಮಿತಿ (ಐಡೆಂಟಿಟಿ)ಯನ್ನು ಸೃಷ್ಟಿಸುತ್ತಾರೆ.
ಪಾಶ್ಚಾತ್ಯದೇಶಗಳಿಂದ ಸ್ವಲ್ಪ ನೆರವು ಪಡೆದು ಭಾರತ ಕ್ರಿಶ್ಚಿಯನ್ ದೇಶವಾಗುತ್ತಿದೆ ಎಂದೂ ಅವರು ಬೊಬ್ಬೆಹೊಡೆಯುತ್ತಾರೆ. ಇದೇ ಒಡಿಶಾ, ಛತ್ತೀಸ್ಗಡ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಈಗ ಜಾರ್ಖಂಡ್ನಲ್ಲಿ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವುದರ ಹಿಂದೆ ಇದ್ದ ತರ್ಕ ಮತ್ತು ಮುಖ್ಯವಾದವಾಗಿತ್ತು.
ಕೃಪೆ: scroll.in