ಜಾತಿಭೇದದ ಕಟ್ಟಡವನ್ನು ನೆಲಸಮ ಮಾಡುವುದು ಹೇಗೆ?
ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು
ತಮ್ಮ ಸ್ವಾಸ್ಥ ಸುಧಾರಣೆಗಾಗಿ ಪಂಡಿತ್ ಮದನ್ ಮೋಹನ್ ಮಾಲವೀಯ ಅವರಿಗೆ ತಮ್ಮ ಊರು ಬಿಟ್ಟು ಬೆಂಗಳೂರಿನಲ್ಲಿರಬೇಕಾಗಿದೆ ಹಾಗೂ ಇತ್ತೀಚೆಗೆ ಅವರು ಮ.ಗಾಂಧಿಯವರೊಡನೆ ವಾಸಿಸುತ್ತಿದ್ದಾರೆ. ಬೆಂಗಳೂರಿಗೆ ತಲುಪುವ ಮುನ್ನ ಅವರು ಕೆಲವು ದಿನ ಮೈಸೂರಿನಲ್ಲಿ ತಂಗಿದ್ದರು. ಮೈಸೂರಿನಲ್ಲಿರುವಾಗ ಅವರ ಹಾಗೂ ಹಳೆಯ ಕಾಲದ ಶಾಸ್ತ್ರಪಂಡಿತರ ನಡುವೆ ಅಸ್ಪಶ್ಯತಾ ನಿವಾರಣೆಯ ವಿಷಯಕ್ಕೆ ಆದ ದೊಡ್ಡ ವಾಗ್ಯುದ್ಧದಲ್ಲಿ ಮಾಲವೀಯರು ಗೆದ್ದರು ಅನ್ನುವುದನ್ನು ವೃತ್ತಪತ್ರಿಕೆಗಳು ಪ್ರಕಟಿಸಿವೆ. ಸೋತ ಶಾಸ್ತ್ರಪಂಡಿತರು ಸುಮ್ಮನೆ ಕೂರದೆ ಪಂ.ಮಾಲವೀಯರು ಹೇಳಿದಂತೆ ಅಸ್ಪಶ್ಯತಾ ನಿವಾರಣೆಯ ಕೆಲಸವನ್ನಾರಂಭಿಸಿದ್ದಾರೆ ಅನ್ನುವುದನ್ನೋದಿ ಅನೇಕರು ಪಂ.ಮಾಲವೀಯರು ಅಸ್ಪಶ್ಯತಾ ನಿವಾರಣೆಗಾಗಿ ಪಟ್ಟ ಕಷ್ಟಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತಿರಬಹುದು.
ಆದರೆ ಇದೆಲ್ಲದಕ್ಕೆ ಮಸಿ ಬಳಿಯುವಂತಹ ವಿಷಯವನ್ನು ಹೇಳುತ್ತ ಪಂ.ಮಾಲವೀಯರ ಬೀಗರಾದ ಲಕ್ಷ್ಮೀಕಾಂತ್ ಭಟ್ ಅವರು ಮಾಲವೀಯರ ಬಗ್ಗೆ ಒಂದು ಗುಟ್ಟನ್ನು ರಟ್ಟು ಮಾಡಿದ್ದಾರೆ. ಲಕ್ಷ್ಮೀಕಾಂತ್ ಭಟ್ ಅವರ ಮಗಳು ಪಂ.ಮಾಲವೀಯರ ಸೊಸೆ. ಈಕೆಗೆ ಒಬ್ಬ ತಂಗಿಯೂ ಇದ್ದಾಳೆ. ಬಡತನದಿಂದಾಗಿ ತನ್ನ ಎರಡನೆಯ ಮಗಳಿಗೆ ತಮ್ಮ ಜಾತಿಯ ವರ ಹುಡುಕುವುದು ಕಷ್ಟವಾಗಿ ಭಟ್ಟರು ಪರಜಾತಿಯ ಹುಡುಗನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಿದ್ದಾರೆ. ಈ ಕೆಲಸದಲ್ಲಿ ಸುಧಾರಣೆಯ ಸೆರಗು ಹಿಡಿದಿರುವಂತಹ ತಮ್ಮ ಬೀಗರಾದ ಪಂ.ಮಾಲವೀಯರು ತಮಗೆ ಸಹಾಯ ಮಾಡಬಹುದು ಎಂದು ಭಟ್ಟರಿಗೆ ಅನ್ನಿಸಿತು. ಆದರೆ ಆದದ್ದು ಅವರ ಅನಿಸಿಕೆಯ ವಿಪರೀತ! ಈ ಅಂತರ್ಜಾತಿಯ ವಿವಾಹದೊಡನೆ ಗಂಗಾ ತೀರದಲ್ಲಿ ಪಂ.ಮಾಲವೀಯರ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಕರೆದು ಆ ಸಭೆಯಲ್ಲಿ ಲಕ್ಷ್ಮೀಕಾಂತ್ ಭಟ್ಟರನ್ನು ಜಾತಿಯಿಂದ ಹೊರಗೆ ಹಾಕಲಾಯಿತು ಹಾಗೂ ಅವರೊಂದಿಗೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲಾಯಿತು. ಈ ಎಲ್ಲ ಘಟನೆಗಳಾದ ಸ್ವಲ್ಪ ದಿನಗಳಲ್ಲೇ ಭಟ್ಟರ ತಾಯಿ ತೀರಿಕೊಂಡರು. ಆಗ ಪಂ.ಮಾಲವೀಯರು ತಮ್ಮ ಮನೆಯಲ್ಲಿ ಮತ್ತೊಂದು ಸಭೆ ಕರೆದು ಭಟ್ಟರ ತಾಯಿಗೆ ಹೆಗಲು ಕೊಡುವವರನ್ನು ಜಾತಿಯಿಂದ ಹೊರಹಾಕುತ್ತೇವೆ! ಎಂದು ಸಾರಿದರು.
ಹಾಗಾಗಿ ಭಟ್ಟರ ತಾಯಿಯ ಅಂತಿಮ ಕ್ರಿಯೆಗೆ ಯಾರೂ ಹೋಗಲಿಲ್ಲ. ಇದಾದ ಕೆಲವು ದಿನಗಳ ನಂತರ ಲಕ್ಷ್ಮೀಕಾಂತ್ ಭಟ್ಟರ ಹೆಂಡತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಮಗಳೊಮ್ಮೆ ತಾಯಿಯನ್ನು ಕೊನೆಯದಾಗಿ ನೋಡಲಿ ಎಂದು ಭಟ್ಟರು ತಮ್ಮ ಮಗಳನ್ನು ಅಂದರೆ ಪಂ.ಮಾಲವೀಯರ ಸೊಸೆಯನ್ನು ಒಮ್ಮೆ ತವರಿಗೆ ಕಳಿಸಿಕೊಡಿ ಎಂದು ಪಂಡಿತರನ್ನು ಕೇಳಿಕೊಂಡರು. ಆದರೆ ದಲಿತರಿಗಾಗಿ ಕಣ್ಣೀರು ಹರಿಸುವ ಪಂಡಿತರ ಮನಸ್ಸು ದ್ರವಿಸಲಿಲ್ಲ! ಅಷ್ಟೇ ಅಲ್ಲ ಪಂ.ಕಪಿಲ್ದೇವ್ ಮಾಲವೀಯ ಹಾಗೂ ಪಂ.ಸತ್ಯನಾರಾಯಣ್ ಮಾಲವೀಯ ಅವರು ಭಟ್ಟರೊಂದಿಗೆ ಸಂಬಂಧವಿಟ್ಟುಕೊಂಡಿದ್ದರಿಂದ ಅವರನ್ನೂ ಜಾತಿಯಿಂದ ಹೊರಹಾಕಲಾಯಿತು!
ಈ ಎಲ್ಲ ಪ್ರಕಾರಗಳನ್ನು ನೋಡಿ ಭಟ್ಟರು ಗೊಂದಲಕ್ಕೀಡಾಗಿದ್ದಾರೆ ಹಾಗೂ ತಮ್ಮ ಬೀಗರಾದ ಮಾಲವೀಯರು ಹೇಳುವುದೇನು? ಹಾಗೂ ಮಾಡುವುದೇನು? ಅನ್ನುವುದರ ಬಗ್ಗೆ ಆಶ್ಚರ್ಯಪಟ್ಟುಕೊಂಡು ಹಿಂದೂ ಮಹಾಸಭೆಯಂತಹ (ಮಾರ್ಲೆ ಮಿಂಟೋ ಸುಧಾರಣೆಯಿಂದ ವರ್ಚಸ್ಸು ಪ್ರಾಪ್ತವಾದ ಮುಸಲ್ಮಾನರ ವಿರುದ್ಧ ಪ್ರಪ್ರಥಮವಾಗಿ ಪಂಜಾಬ್ನಲ್ಲಿ ಹಿಂದೂ ಮಹಾಸಭೆ ಸ್ಥಾಪನೆಯಾಯಿತು. 1914ರಲ್ಲಿ ಫಿರೋಝ್ಪುರ್ನಲ್ಲಾದ ಸಭೆಯ ಆರನೆಯ ಅಧಿವೇಶನದಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ ಹಿಂದೂಸಭಾ ಸ್ಥಾಪನೆಯ ಬಗ್ಗೆ ನಿರ್ಧಾರವಾಯಿತು. ಕುಂಭ ಮೇಳಾ ಸಮಯದಲ್ಲಿ ಹರಿದ್ವಾರದಲ್ಲಿ 1915ರಲ್ಲಿ ಕಾಸಿಮ್ಬಝಾರ್ನ ಮಹಾರಾಜರಾದ ಸರ್.ಮಹೇಂದ್ರ ಚಂದ್ರ ನಂದಿಯವರ ಅಧ್ಯಕ್ಷತೆಯಲ್ಲಿ ಮೊದಲ ಹಿಂದೂ ಸಭೆಯ ಅಧಿವೇಶನವಾಯಿತು. ವಿಷಯ ನಿಯಾಮಕ ಸಮಿತಿಯಲ್ಲಿ ಪಂ.ಮದನ್ ಮೋಹನ್ ಮಾಲವೀಯ, ಲಾಲಾ ಮುನ್ಶಿರಾಮ್, ಮೋತಿಲಾಲ್ ಘೋಷ್, ಲಾಲಾ ಹಂಸರಾಜ್, ಸರ್ ತೇಜ್ಬಹದ್ದೂರ್ ಸಪ್ರು, ಮಹಾತ್ಮಾ ಗಾಂಧಿ ಇವರೆಲ್ಲ ನಾಯಕರು ಹಾಗೂ ನಾರಾಯಣ್ ಮೋರೇಶ್ವರ್ ಪಟವರ್ಧನ್ ಅನ್ನುವ ಮರಾಠಿ ಗೃಹಸ್ಥರೂ ಇದ್ದಾರೆ) ಸಂಸ್ಥೆಗೆ ಚಾಲನೆ ನೀಡುವ ಮಾಲವೀಯರು ಹಿಂದೂ ಸಮಾಜ, ಸಂಘಟನೆಯ ಬಗ್ಗೆ ತಮ್ಮ ನಿಜವಾದ ವಿಚಾರಗಳನ್ನು ವ್ಯಕ್ತಪಡಿಸಲಿ ಎಂದು ಆಹ್ವಾನಿಸಿದ್ದಾರೆ.
ಲಾಲಾ ಲಜಪತರಾಯರು ಸಾಮಾಜಿಕ ಹಾಗೂ ರಾಜಕೀಯವಾಗಿ ಒಂದೇ ರೀತಿಯ ಕ್ರಾಂತಿಕಾರಿ ವಿಚಾರಗಳನ್ನು ವ್ಯಕ್ತಪಡಿಸುವ ನಾಯಕರು ಎಂದು ಒಂದು ಕಾಲದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ಇತ್ತೀಚೆಗೆ ಅವರಿಗೆ ಸಾಮಾಜಿಕ ಸುಧಾರಣೆಯ ತೀವ್ರತೆಯ ಅಗತ್ಯವೆನಿಸುತ್ತಿಲ್ಲ ಅನ್ನುವುದನ್ನು ಅವರ ಇತ್ತೀಚಿನ ಕೆಲಸಗಳನ್ನು ಗಮನಿಸಿದವರಿಗೆ ತಿಳಿಯ ಹೇಳುವ ಅಗತ್ಯವಿಲ್ಲ. ಅಸ್ಪಶ್ಯತೆಗೆ ಅಗತ್ಯವಿಲ್ಲದ ಬಣ್ಣಗಳನ್ನು ಬಳಿಯಲಾಗುತ್ತಿದೆ, ಬ್ರಾಹ್ಮಣೇತರರ ಚಳವಳಿಗಳು ರಾಷ್ಟ್ರವಿಘಾತಕವಾಗಿವೆ ಅನ್ನುವಂತಹ ಹರಿದು ಚಿಂದಿಯಾಗಿರುವ ವಿಚಾರಗಳನ್ನು ಲಾಲಾ ಲಾಜಪತರಾಯರ ಬಾಯಿಯಿಂದ ಕೇಳಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅಂತಹುದರಲ್ಲಿ ಲಾಲಾ ಲಾಜಪತರಾಯರಿಗೂ ಪಂ.ಮಾಲವೀಯರ ವರ್ತನೆಯ ಬಗ್ಗೆ ಆಶ್ಚರ್ಯವಾಗುತ್ತಿದೆ. ಲಕ್ಷ್ಮೀಕಾಂತ್ ಭಟ್ಟರು ಹೇಳಿದ್ದು ನಿಜವಾಗಿದ್ದರೆ ಪಂ.ಮಾಲವೀಯರು ಹಿಂದೂ ಮಹಾಸಭೆಯೊಡನೆ ತಮ್ಮ ಸಂಬಂಧ ಕಡಿದುಕೊಳ್ಳಬೇಕು ಎಂದು ಅವರು ತಮ್ಮ ‘ಪೀಪಲ್ಸ್’ ಅನ್ನುವ ಪತ್ರಿಕೆಯಲ್ಲಿ ಬರೆದಿದ್ದಾರೆ.
ಸ್ವಾಮಿ ಶ್ರದ್ಧಾನಂದರು ಹಿಂದೂ ಮಹಾಸಭೆಗೆ ರಾಜೀನಾಮೆ ಕೊಟ್ಟಾಗಲೇ ಅದನ್ನು ಸ್ವೀಕರಿಸದೆ ಪಂ.ಮಾಲವೀಯರನ್ನು ಹಿಂದೂ ಮಹಾಸಭೆಯಿಂದ ಎತ್ತಂಗಡಿ ಮಾಡಬೇಕಿತ್ತು. ಆದರೆ ಆಗಾಗ ಅಸ್ಪಶ್ಯತೆಗಾಗಿ ಕಣ್ಣೀರು ಸುರಿಸುತ್ತ ಜನರಿಗೆ ಮೋಸ ಮಾಡಿದ್ದರಿಂದ ಹಿಂದೂ ಸಂಘಟನೆಯ ಬಗ್ಗೆ ಹಿಂದೂ ಮಹಾಸಭೆಗೆ ಪಂಡಿತರು ಮೋಸ ಮಾಡಿದರು ಎಂದು ಒಪ್ಪಿಕೊಳ್ಳಲು ಅನೇಕರಿಗೆ ಧೈರ್ಯ ಸಾಲದು. ಈಗಲಾದರೂ ಹಿಂದೂ ಸಮಾಜದ ಸಂಘಟನೆಯಾಗಬೇಕು ಎಂದು ಮನಸಾರೆ ಇಚ್ಛಿಸುವವರು ಇಂತಹ ಮೋಸಗಾರರಿಂದ ಹಿಂದೂ ಮಹಾಸಭೆಯನ್ನು ಬಿಡಿಸಬೇಕು ಅನ್ನುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಜಾತಿಭೇದವನ್ನು ಅಳಿಸಲು ಪಂ.ಮಾಲವೀಯರು ಸಿದ್ಧರಿಲ್ಲದಿದ್ದರೂ ಅವರು ಸ್ಪರ್ಶಭೇದವನ್ನು ದೂರ ಮಾಡಲು ಸಿದ್ಧರಿದ್ದಾರೆ. ನಾವು ಅಷ್ಟರಮಟ್ಟಿಗೇ ಅವರನ್ನು ಬಳಸಿಕೊಳ್ಳುವುದಕ್ಕಿಂತ ಹಿಂದೂ ಸಂಘಟನೆಯ ಕೆಲಸದಿಂದ ಅವರನ್ನು ತೆಗೆದುಹಾಕಿ ಅಂದದ್ದು ನಮ್ಮ ತಪ್ಪು ಅನ್ನುವುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಕೆಲವು ಜನ ಅಂದುಕೊಂಡಾರು, ಆದರೆ ನಾವು ತಪ್ಪುತ್ತಿದ್ದೇವೆ ಎಂದು ನಮಗೆಂದೂ ಅನಿಸಿಲ್ಲ.
ಜಾತಿಭೇದ ಹಾಗೂ ಸ್ಪರ್ಶಭೇದ ಒಂದೇ ನಾಣ್ಯದ ಎರಡು ರೂಪಗಳು. ಎರಡರ ಮೂಲ ಮನುಷ್ಯತ್ವದಲ್ಲಿ ಭೇದಭಾವ ಅನ್ನುವುದೇ ಆಗಿದ್ದರೂ ಬ್ರಾಹ್ಮಣೇತರರ ಮನುಷ್ಯತ್ವ ಹೀನದಾಯಕ ಹಾಗೂ ದಲಿತರ ಮನುಷ್ಯತ್ವ ಮಲಿನ ಅನ್ನುವ ಜಾತಿಭೇದ ಮರೆಯುವುದು ಕಷ್ಟವಾದರೂ ಸ್ಪರ್ಶಭೇದ ಮರೆಯುವುದು ಅದಕ್ಕಿಂತ ಸಾವಿರಪಟ್ಟು ಕಷ್ಟ. ವಸ್ತುಸ್ಥಿತಿ ಹೀಗಿರುವಾಗ ಜಾತಿಭೇದ ಮುರಿಯಲು ಧೈರ್ಯವಿರದ ಪಂ.ಮಾಲವೀಯರು ಅಸ್ಪಶ್ಯತಾ ನಿವಾರಣೆಗಾಗಿ ಕಟಿಬದ್ಧರಾಗುತ್ತಾರೆ ಅನ್ನುವ ಮಾತನ್ನು ನಾವು ಸುತಾರಾಂ ಒಪ್ಪುವುದಿಲ್ಲ. ಜಾತಿಭೇದ ಸ್ಪರ್ಶಭೇದಕ್ಕಿಂತ ಬೇಗ ನಿವಾರಿಸಬಹುದಾಗಿದೆ ಆದರೆ ಯಾರಿಗೆ ಸುಲಭದ ಕೆಲಸ ಮಾಡಲಸಾಧ್ಯವೋ ಆತ ಕಷ್ಟದ ಕೆಲಸವನ್ನು ಮಾಡಿತೋರಿಸಿಯಾನು ಅನ್ನುವುದು ಹಾಸ್ಯಾಸ್ಪದವಾಗಿದೆ. ಸ್ಪರ್ಶಭೇದವನ್ನು ದೂರಮಾಡುವವರು ಮೊದಲು ಜಾತಿಭೇದವನ್ನು ದೂರಮಾಡಲಿ.
ಅಂತರ್ಜಾತೀಯ ವಿವಾಹಗಳಾಗದೆ ಜಾತಿಭೇದ ದೂರವಾಗದು ಅನ್ನುವ ವಿಚಾರಗಳು ಜಾತಿಭೇದ ನಿವಾರಣೆಯನ್ನು ಸಮರ್ಥಿಸುವ ಜನ ಒಪ್ಪುತ್ತಾರೆ. ಆದರೆ ಮೊದಲನೆಯ ಹೆಜ್ಜೆಯಾಗಿ ಬೇರೆ ಜಾತಿಗಳ ನಡುವೆ ಸಹಭೋಜನ ಆರಂಭವಾಗಬೇಕು ಅನ್ನುವುದು ಕೆಲವರ ಅಂಬೋಣ. ಖುದ್ದು ಬ್ರಾಹ್ಮಣರಲ್ಲೇ ಇರುವ ಕೆಲವು ಜಾತಿಗಳಲ್ಲಿ ಸಹಭೋಜನಗಳಿರುತ್ತದೆ. ಆದರೆ ಅನೇಕ ವರ್ಷಗಳಿಂದ ನಡೆದುಬಂದಿರುವಂತಹ ಇಂತಹ ಭೋಜನಗಳಿಂದಲೂ ಅವರ ನಡುವೆ ಇರುವ ಭೇದ ಭಾವನೆ ನಷ್ಟವಾಗಿಲ್ಲ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಕೇವಲ ಸಹಭೋಜನದಿಂದ ಜಾತಿಭೇದ ನಿವಾರಣೆಯಾಗಲಾರದು. ಭೋಜನಗಳಾದರೂ ವಿವಾಹಗಳಾಗದೆ ಜಾತಿಭೇದವೆಂಬ ಮರ ಬೆಳೆಯುತ್ತಲೇ ಹೋಗಲಿದೆ. ಬೇಕಾಬಿಟ್ಟಿ ಬೆಳೆದ ಮುಳ್ಳುಗಂಟಿನ ಬೇಲಿ ಬೇಡ ಎಂದಾದರೆ ಕೇವಲ ಅದನ್ನು ಮೇಲಿಂದ ಮೇಲೆ ಕತ್ತರಿಸಿದರಾಗದು ಅದನ್ನು ಬೇರು ಸಹಿತ ಕಿತ್ತೆಸೆಯಬೇಕು. ಜಾತಿಭೇದವೆಂಬ ಕಟ್ಟಡದ ಅಡಿಪಾಯ ಹೆಣ್ಣು ತೆಗೆದುಕೊಳ್ಳುವ ಹಾಗೂ ಕೊಡುವ ಬಂಧನದ ಮೇಲಿದೆ. ಆದ್ದರಿಂದ ಜಾತಿಭೇದವೆಂಬ ಕಟ್ಟಡವನ್ನು ನೆಲಸಮ ಮಾಡಲು ಮೊದಲು ಅಂತರ್ಜಾತೀಯ ವಿವಾಹಗಳಾಗಬೇಕು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)