ಬ್ಯಾನರ್ ನೇತು ಹಾಕಿ ಹುಟ್ಟುಹಬ್ಬ ಆಚರಣೆ!
ನರೇಂದ್ರ ನಾಯಕ್ ಜೀವನ ಕಥನ
ಇದನ್ನು ಕೇಳಿದಾಗ ನಿಮಗೆಲ್ಲಾ ಆಚ್ಚರಿಯಾಗಬಹುದು. ವಿಚಾರವಾದಿಗಳು ಕೂಡಾ ಹುಟ್ಟುಹಬ್ಬ ಆಚರಿಸುತ್ತಾರಾ, ಅದೂ ಬ್ಯಾನರ್ ನೇತು ಹಾಕಿ. ಇದೆಂತಹ ವಿಚಿತ್ರ ಎಂದು ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಹುಟ್ಟು ಹಬ್ಬ ವಿಚಿತ್ರವೆನಿಸಿದರೂ ವಿಚಾರವಾದಕ್ಕೆ ಸಾಮ್ಯತೆಯನ್ನು ಹೊಂದಿರುವಂತದ್ದು.
ಹೌದು, ವಿಚಾರವಾದಿಗಳ ಬಳಿ ಪ್ರತಿಯೊಬ್ಬರೂ ಪ್ರಶ್ನಿಸುವ ಪ್ರಮುಖ ಪ್ರಶ್ನೆಯೆಂದರೆ, ‘‘ನಿನ್ನ ಜೀವನದಲ್ಲಿ ಯಾವುದೇ ಆಚರಣೆ ಮಾಡಿಲ್ಲವೇ?’’ ಅಥವಾ ‘‘ನೀನು ಯಾವ ಆಚರಣೆ ಮಾಡಿದ್ದೀ?’’ ಎಂದು. ಆದರೆ ನಾನು ಯಾವುದೇ ಆಚರಣೆ ಮಾಡಿಲ್ಲ ಎಂದು ಹೇಳಲು ನನಗೆ ಯಾವುದೇ ರೀತಿಯ ಭಯವಿಲ್ಲ. ನನ್ನ ತಂದೆ - ತಾಯಿ ಸತ್ತಾಗಲೂ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲಿಲ್ಲ. ಆದರೆ ನನ್ನ 60ನೆ ಹುಟ್ಟುಹಬ್ಬವನ್ನು ಮಾತ್ರ ನಾನು ಬ್ಯಾನರ್ ನೇತಾಡಿಸಿ ಆಚರಿಸಿದೆ. ಬಹುತೇಕವಾಗಿ ಹುಟ್ಟು ಹಬ್ಬ ಅದರಲ್ಲೂ, 60ನೆ ವಯಸ್ಸಿನಲ್ಲಿ, ತನ್ನ ಜನ್ಮ ದಿನವನ್ನು ನೆನೆಪಿಸುತ್ತಾ, ದೇವರ ಮೊರೆ ಹೋಗುವುದೇ ಹೆಚ್ಚು. ಕೆಲವರು ದೇವಸ್ಥಾನಗಳಿಗೆ ಹೋದರೆ, ಮತ್ತೆ ಕೆಲವರು ಮನೆಯಲ್ಲೇ ದೇವರನ್ನು ಪ್ರಾರ್ಥಿಸಿ ಆಚರಣೆ ಮಾಡಬಹುದು. ಆದರೆ ಅವೆಲ್ಲಕ್ಕೂ ವಿಭಿನ್ನವಾಗಿ ನಾನು ಬ್ಯಾನರ್ ಹಾಕಿದೆ. ಅದರಲ್ಲಿ ಹೀಗೆ ಬರೆದಿತ್ತು...
‘‘ನಾನು ಯಾವುದೇ ಸೂಪರ್ ನ್ಯಾಚುರಲ್ ಶಕ್ತಿಗಳ ಬಲ ಇಲ್ಲದೆ 60 ವರ್ಷಗಳ ಕಾಲ ಬದುಕಿದೆ’’. ಆ ಬ್ಯಾನರ್ ಇನ್ನೊಂದು ವಿಶೇಷತೆ, ನನ್ನ ತಂದೆ- ತಾಅ ಹಾಗೂ ಪ್ರೇಮಾನಂದ ಗುರುಗಳ ಫೋಟೊ. ಇವೆಲ್ಲಾ ಯಾಕೆಂದು ನಿಮಗೀಗ ಕುತೂಹಲ ಕಾಡಿರಬಹುದು. ಖಂಡಿತಾ ಇದರಲ್ಲಿ ಜೀವನದ ಸತ್ಯ ಇದೆ. ಜತೆಗೆ ವಿಜ್ಞಾನದ ಸತ್ಯವೂ ಕೂಡಾ. ನನ್ನ ತಂದೆ ತಾಯಿ ನನ್ನ ಬಯಲಾಜಿಕಲ್ ಪೋಷಕರು. ಪ್ರೇಮಾನಂದರು ಜೀವನದ ಸತ್ಯವನ್ನು ನಾನು ಪರಿಪಾಲಿಸುವಲ್ಲಿ ನನಗೆ ಮಾರ್ಗದರ್ಶಿಯಾದವರು. ವಿಚಿತ್ರವೆನಿಸಿದರೂ, ನಾನು ಅರಿತುಕೊಂಡ, ಜೀವನದ ಸತ್ಯವನ್ನು ನಾನು ಪಾಲಿಸಿದ್ದೇನೆ.
ಅಂದ ಹಾಗೆ, ನಮ್ಮ ವಿಚಾರವಾದಿಗಳ ತಂಡದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ದೇಶದ ವಿವಿಧ ಕಡೆಗಳಲ್ಲಿ ಜನರಿಗೆ ಪ್ರೇರಣೆ ನೀಡಿತು. ಈ ಪ್ರೇರಣೆ ನಮಗೆ ಅಂತಾರಾಷ್ಟ್ರೀಯವಾಗಿಯೂ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟಿತು. ಆಸ್ಟ್ರೇಲಿಯಾದ ಸ್ಯಾಪ್ಟಿಕ್ಸ್ ವಾರ್ಷಿಕ ಸಮ್ಮೇಳನಕ್ಕೆ ನನಗೆ ಕರೆ ಬಂದಿತ್ತು. ಬಳಿಕ ಮೆಲ್ಬೋರ್ನ್, ಸಿಡ್ನಿಯಲ್ಲಿ ಕಾರ್ಯಕ್ರಮ ನಡೆಯಿತು. ಇಂಗ್ಲೆಂಡ್ನವರೂ ಆಮಂತ್ರಿಸಿದರು. ನಾರ್ವೆಯಿಂದಲೂ ಕರೆ ಬಂತು. ಡೆನ್ಮಾರ್ಕ್, ಶ್ರೀಲಂಕಾ, ಹೀಗೆ ಪ್ರಪಂಚದ ಉದ್ದಗಲ ಪವಾಡ ರಹಸ್ಯ ಬಯಲಿನ ಮೂಲಕ ವಿಜ್ಞಾನದ ಬೆಳಕು ಚೆಲ್ಲುವ ಅವಕಾಶ ನನಗೆ ಪ್ರಾಪ್ತವಾಯಿತು.
ವಿಚಾರವಾದವನ್ನು ಮಂಡಿಸುತ್ತಲೇ, ಪವಾಡಗಳನ್ನು ಬಯಲು ಮಾಡುತ್ತಿದ್ದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಪ್ರಶ್ನಿಸುವ ಮನೋಭಾವ ಹೆಚ್ಚಿತೆಂದು ನಾನು ಹೇಳಲೇಬೇಕು. ಕೆಲವೊಂದು ಅನುಮಾನ, ವಿಭಿನ್ನ ಕುತೂಹಲದ ಜತೆಗೆ ವಿಚಿತ್ರ ಪ್ರಶ್ನೆಗಳನ್ನೂ ಈ ಸಂದರ್ಭಗಳಲ್ಲಿ ನಾನು ದಿಟ್ಟವಾಗಿ ಎದುರಿಸಿ ಉತ್ತರಿಸಿದ್ದೇನೆ. ಕೆಲವರು ಜಗತ್ತು ಹೇಗೆ ಸೃಷ್ಟಿಯಾಯಿತು ಎಂದರೆ, ಬಿಗ್ ಬ್ಯಾಂಗ್ ಥಿಯರಿಯನ್ನು ವಿವರಿಸುವ ಸರದಿ ನನ್ನದಾಗಿತ್ತು. ಜೀವಿಗಳು ಹೇಗೆ ಸೃಷ್ಟಿಯಾದವು ಎಂದಾಗ, ಜೀವ ವಿಕಾಸದ ಹಾದಿಯನ್ನು ವಿವರಿಸಿದೆ. ಪ್ರಶ್ನಿಸುವ ಮನೋ ಭಾವವು ವೈಜ್ಞಾನಿಕ ರಹಸ್ಯ ಗಳನ್ನು ಬಯಲು ಮಾಡಲು ಅನುವು ಮಾಡುತ್ತದೆ. ಹಾಗಾಗಿ ಈ ಪವಾಡ ಗಳನ್ನು ಬಯಲುಗೊಳಿಸುವ ಕಾರ್ಯಕ್ರಮಗಳು ಜನರಲ್ಲಿ ಯೋಚನಾ ಪ್ರವೃತ್ತಿಯನ್ನು ಬೆಳೆಸಿದವು. ದೇವ ಮಾನವರೆಂದು ಕರೆಸಿಕೊಳ್ಳು ವವರು ‘‘ನನ್ನಲ್ಲಿ ಅತಿಮಾನುಷ ಶಕ್ತಿ ಇದೆ’’ ಎನ್ನುತ್ತಲೇ ಮುಗ್ಧರು ಅವರ ಮೋಸದ ಜಾಲಕ್ಕೆ ಸಿಲುಕಿ ಮಾನಸಿಕ, ದೈಹಿಕ ಶೋಷಣೆಗೆ ತುತ್ತಾಗುತ್ತಾರೆ. ಒಮ್ಮೆ ಈ ಜಾಲಕ್ಕೆ ಸಿಲುಕಿದವರು ತಮಗೆ ಮೋಸವಾಗುತ್ತಿದೆ ಎಂಬ ಅರಿವಾದರೂ ಅದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ತಮ್ಮಲ್ಲೇ ಕೊರಗುವ ಪ್ರಸಂಗಗಳೇ ಹೆಚ್ಚು. ಇಂತಹ ವ್ಯವಸ್ಥೆಯಿಂದ, ಭ್ರಮಾಲೋಕದಿಂದ ಜನರನ್ನು ಹೊರ ತರಬೇಕಾದರೆ ಪವಾಡ ರಹಸ್ಯ ಬಯಲು ಕಾರ್ಯ ಕ್ರಮಗಳು ಮುಂದುವ ರಿಯಬೇಕು. ಮುಂದುವರಿಯುತ್ತಲೇ ಸಾಗಿದೆ. ಒಬ್ಬ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸಬಹುದು. ಮತ್ತೊಬ್ಬ ನಾಲಗೆಯಲ್ಲಿ ಕರ್ಪೂರ ಉರಿಸಬಹುದು. ನಾವೂ ಇದನ್ನು ಮಾಡಬಲ್ಲೆವು. ಇವೆಲ್ಲವನ್ನೂ ನಾವು ಜನರ ಎದುರು ತೋರಿಸಿದಾಗ ಅವರ ಮನದಲ್ಲಿ ತಾರ್ಕಿಕ ಸಂಘರ್ಷ, ತುಮುಲ ಆರಂಭವಾಗುತ್ತದೆ. ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ.
ಪವಾಡ ಮಾಡುವುದು ಸುಳ್ಳಿರಬಹುದು. ಆದರೆ ಜ್ಯೋತಿಷ್ಯವೆಂಬುದು ಸತ್ಯ ಎಂದು ನನ್ನಲ್ಲಿ ವಾದಿಸಿದವರಿದ್ದಾರೆ. ಆ ವಾದಗಳಿಗೆ ನಾನು ವಿಚಾರವಾದದಿಂದಲೇ ಉತ್ತರ ನೀಡಿದ್ದೇನೆ.
ವಿಚಾರವಾದದ ಜಗತ್ತು ವಿಸ್ತಾರಗೊಳ್ಳುತ್ತಿದೆ...
ನಾವು ಇಷ್ಟೆಲ್ಲಾ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಆಸ್ತಿಕರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಮೇಲ್ನೋಟಕ್ಕಷ್ಟೆ ಅನ್ನಿಸಬಹುದು. ಆದರೆ ವಿಚಾರವಾದದ ಜಗತ್ತು ವಿಸ್ತಾರಗೊಳ್ಳುತ್ತಿದೆ. ವೈಜ್ಞಾನಿಕ ಆಸಕ್ತಿ ಬೆಳೆಯುತ್ತಿದೆ ಎಂಬುದು ನಿಜಕ್ಕೂ ಸಂತಸದ ವಿಚಾರ. ನಾನಾ ರೀತಿಯಲ್ಲಿ ಮೋಸ ಗೊಳಿಸುವವರ ನಡುವೆಯೂ ಪ್ರಶ್ನಿಸುವವರ ಸಂಖ್ಯೆಯೂ ಬೆಳೆಯುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಜಗತ್ತಿನಲ್ಲಿ 160 ಕೋಟಿಗೂ ಅಧಿಕ ಮಂದಿ ನಾಸ್ತಿಕರಿದ್ದಾರೆ. ನಾರ್ವೆ, ಸ್ವೀಡನ್, ಫಿನ್ಲೆಂಡ್, ರಷ್ಯಾ, ಚೀನಾ ಇಲ್ಲೆಲ್ಲಾ ನಾಸ್ತಿಕರು ಬಹುಸಂಖ್ಯಾತರಾಗಿರುವುದು ವಾಸ್ತವ. ವಿಚಾರವಾದಿ ಎಲ್ಲವನ್ನೂ ಪ್ರಶ್ನಿಸಬೇಕಾಗುತ್ತದೆ.
ಧರ್ಮದ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಪಾಲಿಸುತ್ತೇವೆ ಎಂದು ಹೇಳುವ ವ್ಯವಸ್ಥೆ ಇರುವಲ್ಲಿ ನ್ಯಾಯದಾನ ವ್ಯವಸ್ಥೆ ತೀವ್ರ ಹದಗೆಟ್ಟಿದೆ ಎಂದರ್ಥ. ಧಾರ್ಮಿಕತೆಯ ಪ್ರಭಾವ ಗಾಢವಾಗಿರುವ ದೇಶಗಳಲ್ಲಿ ಇದನ್ನು ನಾವು ಕಾಣಬಹುದು. ಇಂತಹ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ದಮನವೂ ಹೆಚ್ಚಿರುತ್ತದೆ. ಧಾರ್ಮಿಕ ವ್ಯವಸ್ಥೆಗಳು ಕಾನೂನು ಹಾಗೂ ಸುವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತವೆ, ಪಾಲಿಸುತ್ತವೆ ಎಂದಾದಲ್ಲಿ ದೇಶದಲ್ಲಿ ಕಾನೂನಿನ ಅಗತ್ಯವೇ ಇರುವುದಿಲ್ಲ. ಏನೇ ತಪ್ಪು ಮಾಡಿದರೂ ತಪ್ಪು ಕಾಣಿಕೆಯಿಂದ ಸರಿಯಾಗುತ್ತದೆ ಎಂಬ ಮನೋಭಾವ ಮತ್ತಷ್ಟು ತಪ್ಪುಗಳಿಗೆ ಪ್ರೋತ್ಸಾಹಿಸುತ್ತದೆೆ. ಹಾಗಾಗಿ ನನ್ನ ಪ್ರಕಾರ ಧರ್ಮಕ್ಕೂ, ವಿಚಾರವಾದಕ್ಕೂ ಯಾವುದೇ ಸಂಬಂಧವಿಲ್ಲ.