ವಾಸ್ತವ ತೆರೆದಿಡುವ ನುಣ್ಣನ್ನ ಬೆಟ್ಟ
ನಾನು ಓದಿದ ಪುಸ್ತಕ
ಇಂದಿನ ವಾಸ್ತವವನ್ನು ತಿಳಿಸುವ ಮಹತ್ತರ ಜವಾಬ್ದಾರಿ ನಮ್ಮ ಹಿರಿಯರ ಮೇಲಿರುವುದು ಸತ್ಯ. ಅದೇ ಹಾದಿಯಲ್ಲಿ ರಾಜಾರಾಂ ತಲ್ಲೂರು ಅವರು ‘ಅವಧಿ’ಯಲ್ಲಿ ಪ್ರಕಟಗೊಂಡ ನೂರಕ್ಕೂ ಹೆಚ್ಚು ಅಂಕಣ ಬರಹಗಳ ಸಂಕಲನವನ್ನು ಹೊರ ತಂದಿದ್ದಾರೆ.
‘ನುಣ್ಣನ್ನ ಬೆಟ್ಟ’ದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಪರಿಸರ ಕಾಳಜಿ ಮತ್ತು ಸರಕಾರಗಳ ನೀತಿಗಳು ಹಾಗೂ ಜನರ ಆಶೋ ತ್ತರಗಳನ್ನು ತಮ್ಮ ಬರಹಗಳಲ್ಲಿ ರಾಜಾರಾಂ ತಲ್ಲೂರು ಒತ್ತಿ ಹೇಳಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮರಂಗದ ಜವಾಬ್ದಾರಿಗಳು ಏನು ಮತ್ತು ಅದರ ವಾಸ್ತವ ಸ್ಥಿತಿಗತಿಗಳು ಹೇಗಿದೆ ಎಂಬುದನ್ನು ಚುಟುಕಾಗಿ ಬಹಳ ಅರ್ಥಪೂರ್ಣವಾಗಿ ಯುವಜನತೆಯ ಮುಂದೆ ತೆರೆದಿಟ್ಟಿದ್ದಾರೆ.
ರಾಜ್ಯದ ಕಾಂಗ್ರೆಸ್ ಹಾಗೂ ಕೇಂದ್ರದ ಎನ್‌ಡಿಎ ಸರಕಾರದ ಸಾಧನೆ, ವೈಫಲ್ಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ರಾಜ್ಯ ಸರಕಾರ ಜಾರಿಗೆ ತರಲು ಹೊರಟಿರುವ ಮೌಢ್ಯ ನಿಷೇಧ ಕಾನೂನಿನ ಕುರಿತು ಪರ ಮತ್ತು ವಿರೋಧ, ಅಡೆತಡೆಗಳ ಬಗ್ಗೆ ಹಾಗೂ ಜಾರಿಗೆ ಕಾಲ ಕೂಡಿ ಬಂದಿಲ್ಲ ಎಂಬ ಬಗ್ಗೆ ವಾಖ್ಯಾನಿಸುತ್ತಾರೆ.
ರಾಜಾರಾಂ ತಲ್ಲೂರು
‘ಜಿಎಸ್‌ಟಿ=ಕಿಸೆ ಮೇಲೆ ಕಣ್ಣು’, ಆರ್ಥಿಕ ವ್ಯವಸ್ಥೆ ಯ ಬಗ್ಗೆ ಅದರಲ್ಲೂ ಕೇಂದ್ರ ಸರಕಾರದ ಜಿಎಸ್‌ಟಿ ಕುರಿತಾದ ಕೆಲವು ಅಚ್ಚರಿಯ ಅಂಶಗಳನ್ನು ತೆರೆದಿ ಟ್ಟಿದ್ದಾರೆ. ‘ಉಣ್ಣೋ ಅನ್ನ ಪ್ರೈವೇಟ್ ಲಿಮಿಟೆಡ್!’, ರೈತರ ಬದುಕು, ಬವಣೆಗಳ ಕುರಿತು ಇಲ್ಲಿರುವ ಚಿಂತನೆ ಯು ಗಮನ ಸೆಳೆಯುವಂತಹದ್ದು, ದೇಶದ ಕೃಷಿ ನೀತಿ ಯ ಬಗ್ಗೆ ಅವರು ಚಿಂತಿಸಿದ್ದಾರೆ. ನೀತಿ ಆಯೋಗದ ಖಾಸಗೀಕರಣ, ಕಾರ್ಪೊರೆಟೀಕರಣದ ಬಗ್ಗೆ ಆತಂಕ ವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಬೆನ್ನೆಲುಬಾಗಿರುವ ಕೃಷಿ ಆರ್ಥಿಕ ಬೆನ್ನೆಲುಬಾಗಬಹುದು ಎನ್ನುತ್ತಾ ಅದಕ್ಕಿ ರುವ ಸವಾಲುಗಳನ್ನು ನಮ್ಮ ಮುಂದಿಟ್ಟಿದ್ದಾರೆ.
‘ಇನ್ನೊಬ್ಬರ ತಲೆಯಿಂದ ಯೋಚನೆ ಮಾಡುವ ಸಂಕಟ’, ಪ್ರಧಾನಿ ಮೋದಿಯವರ ಕಪ್ಪು ಹಣ ತರುವ ಆಶ್ವಾಸನೆ ಹಾಗೂ ಆರ್‌ಬಿಐನ ಸ್ವಾಯತ್ತೆಯನ್ನು ಪ್ರಶ್ನಿಸಿದ್ದಾರೆ. ಸರಕಾರದ ಆರ್ಥಿಕ ನೀತಿ ತೆಗೆದುಕೊಂಡ ಕ್ರಮಗಳ ಬಗ್ಗೆ ಟೀಕಿಸಿದ್ದು, ಕಪ್ಪುಹಣ ನಿಯಂತ್ರಣಕ್ಕೆ ಜನರ ಪ್ರಾಮಾಣಿಕತೆ ಮತ್ತು ಸರಕಾರದ ಇಚ್ಛಾಶಕ್ತಿ ಬೇಕು ಎಂಬ ಮಾತನ್ನು ಹೇಳಿದ್ದಾರೆ.
‘ಸನ್ಯಾಸಿಯ ಸಂಬಳ ಸಂಸಾರಿಯ ಖರ್ಚು!’, ಕೇಂದ್ರ ಸರಕಾರದ ನೋಟು ರದ್ದತಿಯ ನಂತರ ಬಡವರಿಗಾದ ಅನನುಕೂಲ, ತೊಂದರೆಗಳು ಆ ದಿನಗಳ ವಾಸ್ತವವನ್ನು ಮನಮುಟ್ಟುವ ಹಾಗೆ ತಿಳಿಸಿದ್ದಾರೆ.
‘ಸಂಸತ್ತನ್ನು ಚಿಲ್ಲರೆ ಮಾಡಿಬಿಟ್ಟರು’, ಸಂಸತ್ತು ಜನರ ಆಶಯ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಆದರೆ ಅದನ್ನು ಬಿಟ್ಟು ಅಧಿವೇಶನ ನಡೆಸಲು ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ನೋಟು ರದ್ದತಿ ಪರಿಣಾಮಗಳ ಕುರಿತು ಚರ್ಚಿಸಲು ದೇಶದ ಸಂಸತ್ತು ಬಹುತೇಕ ವಿಫಲಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸರಕಾರ ಮತ್ತು ವ್ಯಾಪಾರ’, ಆಧಾರ್ ಕಾರ್ಡ್ ವಿರೋಧಿಸಿದ್ದ ಬಿಜೆಪಿ ಇಂದು ಅದನ್ನು ಕಡ್ಡಾಯ ಗೊಳಿಸಿದೆ. ಜಾಹೀರಾತಿಗೆ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದೆ. ಮೇಕ್ ಇನ್ ಇಂಡಿಯಾ ಮತ್ತು ಎನ್ನುತ್ತಾ ಕೇಂದ್ರ ಸರಕಾರ ಬಹುರಾಷ್ಟ್ರೀಯ ಕಂಪೆನಿ ಗಳಿಗೆ ಮಣೆ ಹಾಕುತ್ತಿದೆ ಇದರಿಂದ ದೇಶದ ಆರ್ಥಿಕತೆಯ ಮೇಲಾಗಿರುವ ಪರಿಣಾಮವನ್ನು ಅಂಕಿ ಸಂಖ್ಯೆಯ ಮೂಲಕ ತಿಳಿಸಿರುವುದು ಗಮನಾರ್ಹವಾಗಿದೆ. ಸರಕಾರಗಳು ಜನರ ಸೇವೆ ಮಾಡುವ ಬದಲು ವ್ಯವಹಾರವನ್ನಷ್ಟೇ ಮಾಡುತ್ತವೆ ಎನ್ನುವುದನ್ನು ಕಾಣಬಹುದಾಗಿದೆ.
ಕಾಸು ಸೋತ ಭಾರತದಲ್ಲಿ... ಐಟಿ ಉದ್ಯಮ!, ಭಾರತದ ಐಟಿ ಉದ್ಯಮ ಮತ್ತು ಅಮೆರಿಕದ ಉದ್ಯಮ ಟ್ರಂಪ್ ನಿರ್ಧಾರಗಳ ಬಗ್ಗೆ ಭಾರತದಲ್ಲಿ ಪದವೀಧರರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದ್ದು ಉದ್ಯೋಗ ಸೃಷ್ಟಿ ಇಲ್ಲದಿರುವ ಕುರಿತು ಮುಂದಿನ ದಿನಗಳಲ್ಲಿನ ಆತಂಕವನ್ನು ಇಲ್ಲಿ ತಿಳಿಸಲಾಗಿದೆ.
‘‘ಹಗಲುಯಾಸಕ್ಕೆ’’ ಸೂಕ್ತ ತಾಣ ಇವತ್ತಿನ ಪತ್ರಿಕೋದ್ಯಮ, ಪರಿಸರ ರಕ್ಷಣೆಯಲ್ಲಿ ಮಾಧ್ಯಮಗಳ ಜವಾಬ್ದಾರಿ ಮಹತ್ವದ್ದು. ಆದರೆ ಈ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ, ಪಶ್ಚಿಮ ಘಟ್ಟ ಪ್ರದೇಶ ವಿಷಯ ಗಳಲ್ಲಿ ಮಾಧ್ಯಮಗಳ ಬದ್ಧತೆಯನ್ನು ಪ್ರಶ್ನಿಸಲಾಗಿದೆ ಹಾಗೂ ಫೋರ್ತ್ ಎಸ್ಟೇಟ್ ರಿಯಲ್ ಎಸ್ಟೇಟ್ ಆಗಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿ ಸಿದ್ದಾರೆ.
ನುಣ್ಣನ್ನಬೆಟ್ಟದಲ್ಲಿ ರೈತಪರ, ಕಾರ್ಮಿಕರ ಪರ, ಜನಸಾಮಾನ್ಯರ ಪರವಾದ ಅನೇಕ ವಿಚಾರಗಳಿದ್ದು, ಸರಕಾರಗಳ ಜನವಿರೋಧಿ ನೀತಿಗಳ ಬಗೆಯ ರೀತಿಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಾಯವಾ ಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ರೀಡೆ, ರಾಜಕೀಯ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಡಬ್ಬಿಂಗ್, ಚುನಾವಣೆಗಳ, ಬ್ಯಾಂಕಿಂಗ್ ಹಾಗೂ ಸರಕಾರದ ಕೆಲವು ಯೋಜನೆಗಳ ಕುರಿತು ಅರ್ಥಪೂರ್ಣವಾಗಿ ಚರ್ಚಿಸಲಾಗಿದೆ ಎನ್ನಬಹುದಾಗಿದೆ.
ಪುಸ್ತಕದಲ್ಲಿ ಲೇಖನಗಳ ಜೊತೆಗೆ ಪುಟದ ಕೊನೆಯಲ್ಲಿ ಬರುವ ರಾಜಾ ರಾಂ ತಲ್ಲೂರು ಅವರು ಫೇಸ್‌ಬುಕ್‌ನಲ್ಲಿ ಬರೆದ ಚಿಕ್ಕ ಚಿಕ್ಕ ಸಾಲುಗಳು ಓದುಗರು ಬೇಸರವಾಗದಂತೆ ತಡೆಯುತ್ತವೆ ಎನ್ನಬಹುದಾಗಿದೆ.
ನೋಟುರದ್ದತಿ ಎಂಬ ಯಶಸ್ವೀ ಅರೆಚೌರ, ಡಬ್ಬಿಂಗ್ ನಮ್ಮ ಪರ, ಸರ್ ಜೀ (ಆಜ್ ನಹೀ) ಕಲ್ ಸ್ಟ್ರೈಕ್ ಕರೇಂಗೆ!, ಮಷೀನು ನಂಬದ ಮನು ಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ, ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ ಎಂಬ ಗಮನ ಸೆಳೆಯುವ ಟೈಟಲ್‌ಗಳ ಮೂಲಕ ಅನೇಕ ಅಂಕಣಗಳಿಗೆ ಶಕ್ತಿಯನ್ನು ತುಂಬಿದ್ದಾರೆ.
ಬಾಲಕೃಷ್ಣ ಜಾಡಬಂಡಿ
ನಾನು ಓದಿದ ಪುಸ್ತಕ