ಹಣ ಹಂಚಿ ನಿರಾಳರಾದ ನಮ್ಮ ಗಾಂಧಿ-ದೊರೆಸ್ವಾಮಿ
ವಾರದ ವ್ಯಕ್ತಿ
‘‘ನಾನೊಬ್ಬ ಸಾಮಾನ್ಯ ಕೆಲಸಗಾರ. ಎಪ್ಪತ್ತು ವರ್ಷ ಗಳಿಂದಲೂ ಬಡತನ ನಿರ್ಮೂಲನೆಗೆ ಎಲ್ಲ ಸರಕಾರಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಬಡವರು ಇನ್ನು ಎಷ್ಟು ವರ್ಷ ಬಡವರಾಗಿಯೇ ಇರಬೇಕು? ಗಾಂಧೀಜಿ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ’’ ಎಂದು ಸರಕಾರ ಕೊಡಮಾಡುವ ‘ಮಹಾತ್ಮಗಾಂಧಿ ಸೇವಾ ಪ್ರಶಸ್ತಿ’ ಸ್ವೀಕರಿಸಿ, ಪ್ರಶಸ್ತಿ ಪ್ರದಾನಿಸಿದ ಸರಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಸಲಹೆ ನೀಡಿದರು.
‘‘ದೊರೆಸ್ವಾಮಿ ಅವರ ಗುರಿ ಮತ್ತು ಹೋರಾಟ ಸ್ವಲ್ಪವೂ ಬದಲಾಗಿಲ್ಲ. ನಮ್ಮ ಸರಕಾರವನ್ನೂ ಟೀಕಿಸುತ್ತಾರೆ. ಅದನ್ನು ಉದ್ದೇಶಪೂರ್ವಕ ಟೀಕೆ ಎಂದು ಭಾವಿಸಿಲ್ಲ. ಅವರು ನಮಗೆ ನೀಡುವ ಮಾರ್ಗದರ್ಶನವೆಂದೇ ಭಾವಿಸಿದ್ದೇವೆ’’ ಎಂದರು ಸಿದ್ದರಾಮಯ್ಯ.
ಸರಕಾರಿ ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆದು, ಹಲ್ಲುಗಿಂಜಿ ನಡು ಬಗ್ಗಿಸಿ ನಿಲ್ಲುವ ಜನಗಳ ಎದುರು, ಸರಕಾರದ ವಿರುದ್ಧವೇ ಹೋರಾಟ, ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳ ಮೂಲಕ ಜನರನ್ನು ಜಾಗೃತಗೊಳಿಸಿ ಸಂಘಟಿಸುವ ದೊರೆಸ್ವಾಮಿಯವರ ಈ ಮಾತು ಮತ್ತು ವರ್ತನೆ ಭಿನ್ನವಾಗಿ ಕಾಣುತ್ತದೆ. ಅದೇ ದೊರೆಸ್ವಾಮಿ. ಅದರ ಹಿಂದೆ ಬದ್ಧತೆಯ ಬದುಕಿದೆ. ತಾವು ನಂಬಿದ ತತ್ವ-ಸಿದ್ಧಾಂತಗಳಲ್ಲಿಯೇ ಸುಖ ಕಂಡ ಸಂತೃಪ್ತಿ ಇದೆ. ಅಂತಹ ಅರ್ಹರಿಗೆ, ಯೋಗ್ಯರಿಗೆ ನಿಷ್ಪಕ್ಷಪಾತವಾಗಿ ಆಯ್ಕೆ ಮಾಡಿ ಪ್ರಶಸ್ತಿ ನೀಡಿದಾಗ ಮಾತ್ರ ಇಂತಹ ಆರೋಗ್ಯ ಕರ ವಾತಾವರಣ ನಿರ್ಮಾಣ ಸಾಧ್ಯವಾಗುತ್ತದೆ.
ಅಷ್ಟೇ ಅಲ್ಲ, ದೊರೆಸ್ವಾಮಿಯವರು ತಮಗೆ ಬಂದ ಪ್ರಶಸ್ತಿಯ ಮೊತ್ತವಾದ ಐದು ಲಕ್ಷವನ್ನು, ‘‘ಈ ವಯಸ್ಸಿನಲ್ಲಿ ಇಷ್ಟೊಂದು ದುಡ್ಡು ಇಟ್ಟುಕೊಂಡು ಏನ್ಮಾಡಲಿ’ ಎಂದು ವೇದಿಕೆಯ ಮೇಲೆಯೇ ಹಂಚಿಬಿಟ್ಟರು. ಒಂದು ಲಕ್ಷ ಹೋರಾಟಕ್ಕೆ, ಒಂದು ಲಕ್ಷ ಜಯದೇವ ಹೃದ್ರೋಗ ಸಂಸ್ಥೆಗೆ ಮತ್ತು ಮೂರು ಲಕ್ಷ ತಮ್ಮನ್ನು ಈ ಇಳಿವಯಸ್ಸಿನಲ್ಲಿಯೂ ಜತನದಿಂದ ಕಾಪಾಡುವ ಮಡದಿಗೆ ಕೊಟ್ಟು, ‘ಈಗ ನಿರಾಳ’ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಇಂತಹ ದೊರೆಸ್ವಾಮಿ ಹುಟ್ಟಿದ್ದು ಬೆಂಗಳೂರಿನ ಹತ್ತಿರದ ಹಾರೋಹಳ್ಳಿಯ ಅಯ್ಯರ್‌ಗಳ ಕುಟುಂಬದಲ್ಲಿ, ಎಪ್ರಿಲ್ 10, 1918ರಲ್ಲಿ. ಸುಮಾರು 50 ಜನರಿದ್ದ ಕೂಡು ಕುಟುಂಬದಲ್ಲಿ 16 ಮಕ್ಕಳಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸುವಷ್ಟರಲ್ಲಿ, ತಂದೆ ಯನ್ನು ಕಳೆದುಕೊಂಡ ದೊರೆಸ್ವಾಮಿ ಅಜ್ಜನ ಆರೈಕೆಯಲ್ಲಿ ಬೆಳೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ವಿವಿ ಪುರಂನಲ್ಲಿ ಮಾಧ್ಯಮಿಕ, ಕೋಟೆ ಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಆ ದಿನಗಳಲ್ಲಿಯೇ ಮಹಾತ್ಮ್ಮಾಗಾಂಧಿಯವರ ‘ಮೈ ಅರ್ಲಿ ಲೈಫ್’ ಪುಸ್ತಕ ಓದಿ, ಪ್ರಭಾವಿತರಾಗಿ, ಅವರ ವಿಚಾರಧಾರೆಗೆ ಮನಸೋತು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಎ.ಜಿ.ರಾಮಚಂದ್ರರಾಯರಂತಹ ಹಿರಿಯರ ಮಾರ್ಗದರ್ಶನದಲ್ಲಿ ಸರಕಾರಿ ಕಚೇರಿಗಳಿಗೆ ಟೈಂಬಾಂಬ್ ಇಟ್ಟು, 14 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ‘‘ಜೈಲು ನನಗೆ ಒಳ್ಳೆಯ ಪಾಠ ಕಲಿಸಿತು’’ ಎನ್ನುವ ದೊರೆಸ್ವಾಮಿಯವರು, ‘‘1937ರಲ್ಲಿ ಬನಪ್ಪಪಾರ್ಕಿನಲ್ಲಿ ಬ್ರಿಟಿಷರ ವಿರುದ್ಧ ಕೆ.ಎಫ್.ನಾರಿಮನ್ ಭಾಷಣವಿತ್ತು. ಪೊಲೀಸರು ಅವರನ್ನು ಬಂಧಿಸಿದರು. ನೆರೆದಿದ್ದ ಗುಂಪಿನತ್ತ ಲಾಠಿ ಬೀಸಿದರು. ನಾವೆಲ್ಲ ಏಟು ತಿಂದೆವು. ಗಾಂಧಿಯ ಅಹಿಂಸೆ ಅವರ ಹೋರಾಟಕ್ಕೊಂದು ಅಸ್ತ್ರ, ಆದರೆ ಲಾಠಿ ಏಟು ನಮಗೆ ಅನುಭವ’’ ಎನ್ನುತ್ತಾರೆ. 1942ರಲ್ಲಿ ಬಿ.ಎಸ್ಸಿ ಪದವಿ ಪೂರೈಸಿ, ಗಾಂಧಿನಗರದ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದರು. ನಂತರ ಮೈಸೂರಿಗೆ ತೆರಳಿ 1947 ರಲ್ಲಿ ಸಾಹಿತ್ಯ ಮಂದಿರ ಎಂಬ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಪುಸ್ತಕ ಮಳಿಗೆ ತೆರೆದರು. ಬರವಣಿಗೆ ಮೂಲಕ ಜನರನ್ನು ಜಾಗೃತರನ್ನಾಗಿ ಸಬಹುದೆಂದು ಪತ್ರಿಕೆ ಆರಂಭಿಸಿ, ಮೈಸೂರು ಚಲೋ ಚಳವಳಿ ಕುರಿತು ಲೇಖನಗಳನ್ನು ಬರೆದರು. ನಂತರ ಕ್ವಿಟ್ ಇಂಡಿಯಾ ಮೂವ್‌ಮೆಂಟಿನಲ್ಲಿ ಬ್ರಿಟಿಷರ ವಿರುದ್ಧ ಪತ್ರಿಕೆಯನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಯೋಗಿಸತೊಡಗಿದರು. ಸರಕಾರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿತು. ಸ್ವಾತಂತ್ರ್ಯಾನಂತರ ತಮ್ಮ 31ನೆ ವಯಸ್ಸಿನಲ್ಲಿ ಲಲಿತಮ್ಮ ಎಂಬ 19ರ ಹರೆಯದ ಹುಡುಗಿಯನ್ನು ಮದುವೆಯಾದರು. ಇಬ್ಬರು ಮಕ್ಕಳು. ಸಣ್ಣ ಸುಖಿ ಸಂಸಾರ. ದೊರೆಸ್ವಾಮಿಯವರ ಹೋರಾಟದ ಬದುಕನ್ನು ಅರಿತಿದ್ದ ಲಲಿತಮ್ಮನವರು, ಸಂಸಾರದ ನೊಗವನ್ನು ಹೊತ್ತು, ಸಾಮಾಜಿಕ ಹೋರಾಟಗಳಿಗೆ ಪತಿಯನ್ನು ಸಮರ್ಪಿಸಿದ್ದನ್ನು ದೊರೆಸ್ವಾಮಿಯವರು ‘‘ಅದು ಆಕೆಯ ದೊಡ್ಡ ಗುಣ’’ ಎಂದು ಸದಾ ಸ್ಮರಿಸುವುದುಂಟು. ಆ ಕಾರಣಕ್ಕಾಗಿಯೇ ಅವರಿಗೆ ಬಂದ ಗಾಂಧಿ ಸೇವಾ ಪ್ರಶಸ್ತಿಯ ಮೊತ್ತದಲ್ಲಿ 3 ಲಕ್ಷ ಕೊಟ್ಟು, ‘‘ಇದು ನನ್ನ ಸಣ್ಣ ಸಹಾಯ’’ ಎನ್ನುವ ದೊಡ್ಡ ಮನುಷ್ಯ. ಕೆಂಗಲ್ ಹನುಮಂತಯ್ಯನವರನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದ ದೊರೆಸ್ವಾಮಿಯವರು, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡಿದ್ದಿದೆ. ಬಡತನ ಮತ್ತು ಭ್ರಷ್ಟಾಚಾರ- ಇವರೆಡೇ ಈ ದೇಶದ ಶತ್ರುಗಳು ಎನ್ನುವ ದೊರೆಸ್ವಾಮಿಯವರು, ‘‘ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಭೂತದಂತೆ ದೇಶವನ್ನು ಕಾಡುತ್ತಿದೆ. ಇವೆರಡರಿಂದ ನಮ್ಮ ದೇಶ ಮುಕ್ತವಾದರೆ, ಗಾಂಧಿ ಈ ದೇಶದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ’ ಎನ್ನುತ್ತಾರೆ. ಎಲ್ಲಿ ಅನ್ಯಾಯ, ಅಸಮಾನತೆ, ಅರಾಜಕತೆ ಇರುತ್ತದೆಯೋ ಅಲ್ಲಿ ವಯಸ್ಸಾದ, ದನಿ ಇಲ್ಲದ, ದುಡ್ಡೇ ಇಲ್ಲದ ದೊರೆಸ್ವಾಮಿ ಯವರು ಇರುತ್ತಾರೆ. ಜೊತೆಗೆ ಜನ ಬಂದರೆ, ನಿಮ್ಮಾಂದಿಗೆ ನಾನು ಎನ್ನುತ್ತಾರೆ. ಯಾರೂ ಬರದಿದ್ದರೆ ನಾನೊಬ್ಬನೆ ಎನ್ನುತ್ತಾರೆ. ಅವರದು ಗಾಂಧಿ ಮಾರ್ಗ. ಸದ್ದು ಗದ್ದಲವಿಲ್ಲ, ಹಿಂಸೆಯಿಲ್ಲ. ಮಂಡೂರಿನ ಕಸ ಸುರಿಯುವ ವಿರುದ್ಧ, ಎ.ಟಿ.ರಾಮಸ್ವಾಮಿಯವರ ಭೂ ಒತ್ತುವರಿ ವರದಿಯ ಪರ, ದಿಡ್ಡಳ್ಳಿ ಆದಿವಾಸಿ ವಸತಿಹೀನರ ಪರ, ಭೂ ಸಾಗುವಳಿ ರೈತರ ಪರವಾದ ಹೋರಾಟವಾಗಿರಬಹುದು ಎಲ್ಲಾ ಕಡೆ ದೊರೆಸ್ವಾಮಿಯವರು ಇರುತ್ತಾರೆ. ವಯಸ್ಸು, ಆರೋಗ್ಯವನ್ನು ಲೆಕ್ಕಕ್ಕಿಡದೆ, ಇವತ್ತಿಗೂ ಸಾರ್ವಜನಿಕ ಸಾರಿಗೆಯಲ್ಲಿಯೇ ಪ್ರಯಾಣ ಮಾಡಿ, ಎಲ್ಲರಿಗಿಂತ ಮುಂಚೆ ಅಲ್ಲಿರುತ್ತಾರೆ. ಅವರ ಹೋರಾಟದ ಹುಮ್ಮಸ್ಸು ಹೇಗಿರುತ್ತದೆಂದರೆ, ಈ ವ್ಯವಸ್ಥೆ ಅವರೆಲ್ಲ್ಲಾ ಹೋರಾಟವನ್ನು ಬುಡಮೇಲು ಮಾಡಿದರೂ, ಹೋರಾಟಗಾರರಲ್ಲಿಯೇ ಬಿರುಕುಂಟು ಮಾಡಿ ಹಾದಿ ತಪ್ಪಿಸಿದರೂ, ಕುಂದದ ಉತ್ಸಾಹ ಎಂತಹವರನ್ನು ಚಕಿತಗೊಳಿಸುತ್ತದೆ. ಇಲ್ಲಿ ಏನೂ ಸಾಧ್ಯವಿಲ್ಲವೆನ್ನುವ ಬದಲು; ಇಲ್ಲ, ಇಲ್ಲಿ ಇನ್ನೂ ಒಳ್ಳೆಯವರಿದ್ದಾರೆ ಎಂಬ ಅವರ ಆಶಾವಾದ ಜೊತೆಗಿರುವವರನ್ನೂ ಪ್ರೇರೇಪಿಸುತ್ತದೆ. ಯಾರು ಎಲ್ಲಿಗೆ ಕರೆದರೂ ದೊರೆಸ್ವಾಮಿಯವರು ಇಲ್ಲ ಎನ್ನುವುದಿಲ್ಲ. ಅವರ ಈ ಒಳ್ಳೆಯತನವನ್ನು ಇಂದಿನ ಸ್ವಾರ್ಥಸಮಾಜ ಬಳಸಿಕೊಂಡು ಬಿಸಾಡಿದ್ದಿದೆ. ಇವರನ್ನು ದುರುಪಯೋಗಪಡಿಸಿಕೊಂಡ ಪುಢಾರಿಯೊಬ್ಬ, ‘‘ಅವರಿಗೇನ್ ಒಂದು ಕಾರ್ ಕಳಿಸಿದ್ರೆ ಸಾಕು’’ ಎಂದು ತುಂಬಾ ಹಗುರವಾಗಿ ಮಾತನಾಡುತ್ತಿದ್ದ. ಆಶ್ಚರ್ಯವೆಂದರೆ, ಆತ ಕರೆಯುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿ, ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಂಚಿ, ಉತ್ತಮ ಪ್ರಜೆಗಳಾಗಿ ಎಂದು ಹೇಳಿ ಬರುತ್ತಿದ್ದರು. ಇಲ್ಲಿ ಅವರಿಗೆ ಆ ಮಕ್ಕಳು ಮುಖ್ಯವೇ ಹೊರತು, ಪುಢಾರಿಯಲ್ಲ. ಹಾಗೆಯೇ ಕೆಲವು ಸಂಸ್ಥೆಗಳು, ಎನ್‌ಜಿಒಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ‘ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಇರಲಿ’ ಎಂಬ ಕಾರಣಕ್ಕೆ, ಮಾಧ್ಯಮಗಳು ಗಮನಿಸಿ ಪ್ರಚಾರ ನೀಡುತ್ತವೆ ಎಂಬ ಕಾರಣಕ್ಕೆ ಅವರನ್ನು ಕರೆದುಕೊಂಡು ಹೋಗುವುದೂ ಇದೆ. ಅದು ಬಿಜೆಪಿ ಕಾರ್ಯಕ್ರಮವಾದರೆ, ‘‘ಯುವಜನರು ಒಂದು ರಾಜಕೀಯ ಪಕ್ಷಕ್ಕೆ ದಾಸರಾಗಬಾರದು. ಸ್ವತಂತ್ರವಾಗಿ ಆಲೋಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಜವಾಬ್ದಾರಿಯನ್ನೇ ನಮ್ಮ ಜನರು ಮರೆತಿದ್ದಾರೆ. ಆದ್ದರಿಂದಲೇ ನರೇಂದ್ರ ಮೋದಿ ದೇಶವನ್ನೇ ವಶಪಡಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ’’ ಎಂದು ಅವರೆದುರಿಗೇ ಹೇಳಿ, ಅವರನ್ನೂ ಚಿಂತನೆಗೆ ಹಚ್ಚುತ್ತಾರೆ. ಇನ್ನು ಮುಸ್ಲಿಂ ಅಲ್ಪಸಂಖ್ಯಾತರು ಕರೆದರೆ, ‘‘ಮುಸ್ಲಿಮ್ ಸಮುದಾಯ ಪ್ರತ್ಯೇಕವಾಗಿ ಉಳಿಯುವ ಸಂಪ್ರದಾಯ ಮುರಿಯಬೇಕು. ಆರೋಗ್ಯಕರ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಜನರ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಬೇಕು’’ ಎಂದು ಅವರನ್ನೂ ಒಳಗೆಳೆದುಕೊಳ್ಳಲು ನೋಡುತ್ತಾರೆ. ಆದರೆ ದೊರೆಸ್ವಾಮಿಯವರೆಂದೂ, ಹಣ-ಅಧಿಕಾರ-ಪ್ರಚಾರಕ್ಕಾಗಿ ಹಾತೊರೆದವರಲ್ಲ. ತಮ್ಮದೇ ಮುಂದಾಳತ್ವವಿರಬೇಕೆಂದು ಬಯಸುವುದಿಲ್ಲ. ಭೇದ-ಭಾವ, ಮೇಲು-ಕೀಳು, ಹಿರಿಯರು-ಕಿರಿಯರು ಎಂದು ನೋಡುವು ದಿಲ್ಲ. ಅವರಿಗೆ ಎಲ್ಲರೂ ಒಂದೆ. ಏನೋ ಒಂದು ಘನ ಉದ್ದೇಶಕ್ಕಾಗಿ ಇಲ್ಲಿ ಸೇರಿದ್ದೇವೆ, ಅದು ಬಹುಜನಕ್ಕೆ ಅನುಕೂಲ ವಾಗುತ್ತದೆ, ನನ್ನಿಂದ ಅಳಿಲುಸೇವೆ ಎನ್ನುವಂತಹ ಧೋರಣೆ ದೊರೆಸ್ವಾಮಿಯವರದು. ಅವರೀಗ ನೂರರ ಅಂಚಿನಲ್ಲಿದ್ದಾರೆ. ಬದುಕಿನುದ್ದಕ್ಕೂ ಸರಳತೆ, ಪ್ರಾಮಾಣಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಈ ಸರಳ ಬದುಕು ಎನ್ನುವುದು ಬರೆದಷ್ಟು, ಮಾತನಾಡಿದಷ್ಟು ಸಲೀಸಲ್ಲ. ಕಂಡಿದ್ದನ್ನೆಲ್ಲ ಖರೀದಿಸ ಬೇಕೆಂಬ ಇವತ್ತಿನ ಆಸೆಬುರುಕ ಸಮಾಜದಲ್ಲಿ, ನಿರ್ಲಿಪ್ತ ವಾಗಿ ಬದುಕುವುದು ಋಷಿ-ಮುನಿಗಳ ವೃತದಂತೆ. ಅದಕ್ಕೆ ಎದುರಾಗುವ ಕಷ್ಟ-ನಷ್ಟಗಳಿಗೆ ಲೆಕ್ಕವೇ ಇಲ್ಲ. ಆದರೆ ದೊರೆಸ್ವಾಮಿಯವರು ಚಿಕ್ಕಂದಿನಿಂದಲೇ ಅದನ್ನು ರೂಢಿಸಿ ಕೊಂಡವರು, ಈಗಲೂ ಹಾಗೆಯೇ ಬದುಕುತ್ತಿರುವವರು. ಹೀಗೇ ಬದುಕಬೇಕೆಂಬ ಗುರಿಯ ಬಗ್ಗೆ ಸ್ಪಷ್ಟತೆಯುಳ್ಳವರು. ಅದಕ್ಕೆ ಅವರ ಅಪಾರ ಅನುಭವ, ಅಗಾಧ ಜ್ಞಾಪಕಶಕ್ತಿ ನೆರವಾಗಿದೆ. ಈಗಲೂ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಮುಟ್ಟಾಗಿದ್ದಾರೆ. 1945ರಲ್ಲಿ ಆಗಿದ್ದನ್ನು ನಿನ್ನೆ ಮೊನ್ನೆ ಆಗಿದ್ದಂತೆ ವರ್ಣಿಸಬಲ್ಲಷ್ಟು ಶಕ್ತರಾಗಿದ್ದಾರೆ. ಅಪ್ಪಟ ಸಸ್ಯಾಹಾರಿಗಳು ಆದರೆ ಮಾಂಸಾಹಾರಿಗಳ ವಿರುದ್ಧವಲ್ಲ. ಆಹಾರ ಅವರವರ ಆಯ್ಕೆ ಎನ್ನುತ್ತಾರೆ. ಊಟ-ತಿಂಡಿ ಇಂಥದ್ದೇ ಇರಬೇಕೆಂಬ ಡಿಮ್ಯಾಂಡಿಲ್ಲ. ಮಡಿ, ಮೈಲಿಗೆ, ಪಥ್ಯ, ಕಟ್ಟುಪಾಡುಗಳಿಲ್ಲ. ಏನು ಕೊಟ್ಟರೂ ತೃಪ್ತಿಯಿಂದ ತಿನ್ನುತ್ತಾರೆ. ಇಷ್ಟಪಟ್ಟು ಫಿಲ್ಟರ್ ಕಾಫಿ ಕುಡಿಯುತ್ತಾರೆ- ದಿನಕ್ಕೆ ಮೂರ್ನಾಲ್ಕು. ಸಿಹಿ ತಿಂಡಿ ಕೊಟ್ಟರೆ ಮಕ್ಕಳಂತೆ ತಿನ್ನುತ್ತಾರೆ. ಈಗಲೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ.
ಯಾವುದಾದರೂ ಮುಖ್ಯವಾದ ಸಭೆಗೆ- ಮಂತ್ರಿಗಳು, ಉನ್ನತ ಅಧಿಕಾರಿಗಳ ಜೊತೆ ಹಾಜರಾದರೆ, ಅಲ್ಲಿ ಇವರಿಗಿಂತ ಕಿರಿಯರು ವಿದ್ವತ್ಪೂರ್ಣವಾಗಿ ಮಾತನಾಡಿದರೆ ವಿಧೇಯ ವಿದ್ಯಾರ್ಥಿಯಂತೆ ಕಿವಿಗೊಟ್ಟು ಕೇಳುತ್ತಾರೆ. ಕೆಲವೊಂದು ಸಲ ಅಧಿಕಾರಸ್ಥರು ಏನೇನೋ ಸಬೂಬುಗಳನ್ನು ಮುಂದಿಟ್ಟು, ಸಭೆಯ ದಾರಿ ತಪ್ಪಿಸಿದರೂ, ಹಿಂಜರಿಯದೆ ನಿಷ್ಠುರವಾಗಿ ಸತ್ಯವನ್ನೇ ಹೇಳುತ್ತಾರೆ. ಹಾಗೆ ಹೇಳುವುದರಿಂದ ಆ ಸಭೆಗೆ, ಅಲ್ಲಿ ಸೇರಿದವರಿಗೆ ಇಕ್ಕಟ್ಟಿನ ಸಂದರ್ಭ ಸೃಷ್ಟಿಯಾದರೆ, ಆ ಸಂದರ್ಭವನ್ನೂ ಘನತೆ ಮತ್ತು ಗೌರವದಿಂದಲೇ ನಿಭಾಯಿಸು ತ್ತಾರೆ. ವಾದ, ಜಗಳ ಮತ್ತು ಹಠಕ್ಕೆ ಬಿದ್ದ ಉದಾಹರಣೆಯೇ ಇಲ್ಲ. ಒಟ್ಟಿನಲ್ಲಿ ಅವರೊಡನೆ ನೀವು ಒಡನಾಡಿದರೆ, ಗಾಂಧಿ ಕಾಲ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ. ‘‘ನನಗೆ ನಾನು ಬದುಕಿದ ರೀತಿಯಲ್ಲಿ ಸಂತೃಪ್ತಿಯಿದೆ. ಏನೋ ಒಂದಷ್ಟು ಮಾಡಿದ್ದೇನೆ, ಬದುಕನ್ನು ಯೋಗ್ಯವಾಗಿ ಬಾಳಿದ ಭಾವವಿದೆ’’ ಎನ್ನುವ ಆ ಹಿರಿಯ ಜೀವಕ್ಕೆ ನಡುಬಗ್ಗಿಸಿ ನಮಿಸಬೇಕೆನಿಸುತ್ತದೆ.