ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ
ಭಾರತ ಹಲವು ನುಡಿ ಸಮುದಾಯಗಳಿರುವ ನಾಡು. ಬಹುಭಾಷಿಕತೆ ಈ ನಾಡಿನ ಒಂದು ಚಹರೆ. ಪಶ್ಚಿಮದ ವಿದ್ವಾಂಸರು ಬಹುಭಾಷಿಕತೆಯೇ ಭಾರತದ ಏಳ್ಗೆಗೆ ಅಡ್ಡಿಯಾಗಿರುವ ಸಂಗತಿಯೆಂದು ವಾದಿಸುವುದನ್ನು ನೋಡಿದ್ದೇವೆ. ಈ ನಿಲುವನ್ನು ಒಪ್ಪುವ ಚಿಂತಕರು ನಾಡಿನ ಒಳಗೂ ಇದ್ದಾರೆ. ಆಡಳಿತ ನಡೆಸುವವರು ರೂಪಿಸುವ ಭಾಷಾ ನೀತಿಯಲ್ಲಿ ಬಹುಭಾಷಿಕತೆಯನ್ನು ಹೇಗೆ ನಿರ್ವಹಿಸಬೇಕೆಂಬ ಬಗೆಗೆ ಖಚಿತವಾದ ನಿಲುವುಗಳು ಕಾಣುವುದಿಲ್ಲ. ಎಲ್ಲ ಕಡೆಯೂ ವೈವಿಧ್ಯವನ್ನು ಅಳಿಸುವ ಹುಮ್ಮಸ್ಸು ಇರುವಾಗ ಬಹುಭಾಷಿಕತೆಯ ಚಹರೆಯಿಂದ ಹೊರ ಬರುವ ದಾರಿಗಳ ಕಡೆಗೆ ಮೊಗ ಮಾಡಿರುವುದು ಉಂಟು. ಬಹುಭಾಷಿಕ ಪರಿಸರದಲ್ಲಿ ಅನುವಾದವೆಂಬುದು ಔಪಚಾರಿಕ ಮತ್ತು ಅನೌಪಚಾರಿಕ ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಪ್ರಕ್ರಿಯೆಯಾಗಿದೆ.
ಅನುವಾದವೆಂಬುದು ಸದ್ಯದ ಪರಿಸರದಲ್ಲಿ ನಿರ್ವಹಿಸುತ್ತಿರುವ ಹೊಣೆಗಳು ಮತ್ತು ನಿರ್ವಹಿಸಬಹುದಾದ ಹೊಣೆಗಳ ಕುರಿತು ಚರ್ಚಿಸಬೇಕಾಗ ಅಗತ್ಯ ಹಿಂದಿಗಿಂತ ಈಗ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಡಾ. ಎಸ್. ಸಿರಾಜ್ ಅಹಮದ್ ಸಂಪಾದಿಸಿರುವ ‘ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ’ ಮಹತ್ವದ ಕೃತಿಯಾಗಿದೆ. ‘ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳ ಸಂಕಲನ ಇದು.
ಸಿರಾಜ್ ಅಹಮದ್, ಡಾ. ಪಟ್ಟನಾಯಕ್, ಪಿ.ಪಿ. ಗಿರಿಧರ, ರಾಜೇಂದ್ರ ಚೆನ್ನಿ, ಡಾ. ಚಂದ್ರಾಣಿ ಚಟರ್ಜಿ, ಬೋಡೆ ರಿಯಾಝ್ ಅಹಮದ್, ಎಸ್. ಕಾರ್ಲೋಸ್, ಕಮಲಾಕರ ಕಡವೆ, ಓಂಕಾರ್ ಎನ್. ಕೌಲ್, ಡಾ. ರಾಜ್‌ಕುಮಾರ್, ಉಷಾದೇವಿ ಅಯಿನವೊಲು, ವನಮಾನ ವಿಶ್ವನಾಥ, ನೀಲಾದ್ರಿ ಶೇಖರ್ ದಾಶ್, ಡಾ. ಉದಯಕುಮಾರ್, ರೀಟಾ ಕೊಠಾರಿ, ಜೋಸೆಫ್ ಕೊಯಿಪಲ್ಲಿ ಮೊದಲಾದವರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ.
ಶಿಕ್ಷಣದಲ್ಲಿ ಭಾಷಾ ಆದ್ಯತೆಗಳು, ವಿಜ್ಞಾನದ ಯಾಜಮಾನ್ಯ; ಕಳೆದು ಹೋದ ಅವಕಾಶ, ಬಹುಸಂಸ್ಕೃತಿಗೆ ದಖನಿ ಭಾಷೆಯ ಕೊಡುಗೆ, ರಾಷ್ಟ್ರೀಯತೆ ಮತ್ತು ಸಂಸ್ಕೃತಿಗಳ ಮರುನಿರೂಪಣೆ, ಕಾಶ್ಮೀರಿ ಭಾಷೆಯಲ್ಲಿ ಅನುವಾದ, ದಲಿತ ಸಾಹಿತ್ಯದ ಅನುವಾದ, ಹಿಂದಿ-ಬಾಂಗ್ಲಾ ಪರಸ್ಪರ ಭಾಷಾಂತರ ಪ್ರಯೋಗ ಸಂಗ್ರಹ ಹೀಗೆ...ಬೇರೆ ಬೇರೆ ನೆಲೆಗಳಲ್ಲಿ ವಿಚಾರಗಳು ಚರ್ಚೆಗೆ ಒಳಗಾಗಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಕೃತಿಯ ಒಟ್ಟು ಪುಟಗಳು 276. ಬೆಲೆ 150.