ಸ್ವಾಮಿಯಿಂದ ಸತ್ಯ ಸೋರಿಕೆ?
ಭಾರತೀಯ ಜನತಾ ಪಕ್ಷ ಇತ್ತೀಚೆಗೆ ಸ್ವಪಕ್ಷೀಯರಿಂದಲೇ ವಾಗ್ದಾಳಿ ಎದುರಿಸ ಬೇಕಾಯಿತು. ಯಶವಂತ ಸಿನ್ಹಾ ಅವರ ದಾಳಿ ನಿರಂತರವಾಗಿ ಮುಂದುವರಿದಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಹಿರಿಯ ಸಚಿವರು ಸಿನ್ಹಾ ಹೇಳಿಕೆಗೆ ತಿರುಗೇಟು ನೀಡುವಲ್ಲಿ ಸಿಕ್ಕ ಎಲ್ಲ ಅವಕಾಶವನ್ನೂ ಬಳಸಿಕೊಂಡರು. ಪಕ್ಷದ ಹಿರಿಯ ಮುಖಂಡರೊಬ್ಬರು ಮಂಡಿಸುವ ಸಿದ್ಧಾಂತದಂತೆ ಸಿನ್ಹಾ ಶಾಂಘೈ ಬ್ರಿಕ್ಸ್ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಆದರೆ ಮೋದಿ ಸರಕಾರ ಇವರಿಗೆ ಉದ್ಯೋಗ ನಿರಾಕರಿಸಿದೆ. ಸಿನ್ಹಾ ಈ ಹೇಳಿಕೆಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ. ಸದಾ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮತ್ತೊಬ್ಬ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಎಲ್ಲ ಗಮನವನ್ನು ಸಿನ್ಹಾ ಅವರತ್ತ ಹರಿಸುವ ಬಗ್ಗೆ ಅತೃಪ್ತಿ ಸೂಚಿಸಿದ್ದಾರೆ. ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನು ನನಗೆ ನೀಡುವ ಪ್ರಸ್ತಾವ ಬಂದಿತ್ತು. ಆದರೆ ನಾನು ನಿರಾಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸರಕಾರ ಹೇಳುವುದನ್ನು ಯಾರೂ ಪ್ರಶ್ನಿಸದಂಥ ಸ್ಥಿತಿಯಲ್ಲಿ, ಸ್ವಾಮಿ ಹೇಳುವುದು ನಿಜ ಇರಬೇಕು ಎಂದು ಹಲವರು ನಂಬುತ್ತಾರೆ. ಆದರೆ ಸಿನ್ಹಾ ಮೇಲೆ ಕಣ್ಣಿಡಬೇಕು. ಭವಿಷ್ಯದಲ್ಲಿ ಅವರು ಹೇಳುವಂಥದ್ದು ಇನ್ನೂ ಬಹಳಷ್ಟು ಇರಬಹುದು.
ಕ್ಷಿಪ್ರ ಬೆಳವಣಿಗೆ!
ಸ್ವಜನ ಪಕ್ಷಪಾತದ ಬಗೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿವಾದವೊಂದನ್ನು ಹುಟ್ಟುಹಾಕಿದೆ. ಗಾಂಧಿ ಕುಟುಂಬದ ಕುಡಿಯ ಈ ಹೇಳಿಕೆ ಎಲ್ಲಿಂದ ಅಪಸ್ವರ ಬರಬಾರದೋ ಅಂಥ ಕಡೆಯಿಂದ ಗುಸುಗುಸು ವದಂತಿಯನ್ನು ಸೃಷ್ಟಿಸಿದೆ. ಇತ್ತೀಚಿನ ಬೆಳವಣಿಗೆಯೊಂದರ ಬಳಿಕ ಭಾರತದ ರಾಜತಾಂತ್ರಿಕ ಸಂಸ್ಥೆಯ ಕಾರಿಡಾರ್‌ನಲ್ಲಿ ಈ ಗುಸುಗುಸು ಜೋರಾಗಿದೆ. ವಿದೇಶಾಂಗ ಕಾರ್ಯದರ್ಶಿಯ ಮಗ ಧ್ರುವ ಜೈಶಂಕರ್ ರಾಜ್ಯಸಭಾ ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ. ಇಡೀ ವಿಶ್ವ ಹೇಗೆ ಭಾರತದತ್ತ ನೋಡುತ್ತಿದೆ ಮತ್ತು ಭಾರತ ಹೇಗೆ ವಿಶ್ವದತ್ತ ನೋಡುತ್ತಿದೆ ಎನ್ನುವುದನ್ನು ಬಿಂಬಿಸುವ ಕಾರ್ಯಕ್ರಮ ಅದು. ಜೈಶಂಕರ್ ಕುಶಾಗ್ರಮತಿ, ಮೆದುಮಾತಿನ, ರಾಜತಾಂತ್ರಿಕ ವಿಶ್ಲೇಷಕ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ನಿಯತವಾಗಿ ಲೇಖನಗಳನ್ನು ಬರೆಯುತ್ತಿರುತ್ತಾರೆ. ಈ ಖ್ಯಾತಿಯ ನಡುವೆಯೂ ರಾಜತಾಂತ್ರಿಕ ಸಮುದಾಯದಲ್ಲಿ ಕೂಡಾ ಅವರು ಇಷ್ಟು ಕ್ಷಿಪ್ರವಾಗಿ ಈ ಮಟ್ಟಕ್ಕೆ ಬೆಳೆದದ್ದು ಹೇಗೆ ಎಂಬ ರಹಸ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಿದೇಶಾಂಗ ಕಾರ್ಯದರ್ಶಿ ತಮ್ಮ ಮಗನ ಬೆಳವಣಿಗೆಯ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ರಾಜ್ಯಸಭಾ ಟಿವಿಯ ನಿರೂಪಕರಾಗಿ ಅವರು ಬೆಳೆದದ್ದು ಹೇಗೆ ಎನ್ನುವುದನ್ನು ಬಹುಶಃ ವಿವರಿಸಬೇಕಾಗಬಹುದು.
ಕಾಂಗ್ರೆಸ್-ಡಿಗ್ಗಿ ಮುಸುಕಿನ ಗುದ್ದಾಟ
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮಧ್ಯಪ್ರದೇಶದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಅವರು ಮೌನವಾಗಿದ್ದು, ಈ ಮೌನಕ್ಕೆ ದೊಡ್ಡ ತಲೆನೋವು ಕಾರಣ. ಬಿಜೆಪಿ ಸಂಸದ ವರುಣ್‌ಗಾಂಧಿ, ರೊಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ನಿರಾಶ್ರಿತರ ಸ್ಥಾನಮಾನ ನೀಡುವ ಸಂಬಂಧ ನೀಡಿದ ಹೇಳಿಕೆಯನ್ನು ಡಿಗ್ಗಿ ಶ್ಲಾಘಿಸಿದ್ದಾರೆ. ಸುಲ್ತಾನಪುರದ ಯುವ ಸಂಸದ, ತಮ್ಮ ವಂಶದ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಇರುವುದು ಸಮಂಜಸವಲ್ಲ ಎಂದು ವ್ಯಾಖ್ಯಾನಿಸಿದ್ದರು. ಆದರೆ ಮತ್ತೊಬ್ಬ ಗಾಂಧಿಯನ್ನು ಹೊಗಳಿರುವುದು ಕಾಂಗ್ರೆಸ್ ವಲಯಕ್ಕೆ ಪಥ್ಯವಾಗಿಲ್ಲ. ರಾಹುಲ್‌ಗಾಂಧಿಯವರ ಮಾರ್ಗದರ್ಶಕ ಎಂದು ಬಿಂಬಿತರಾಗಿದ್ದ ದಿಗ್ವಿಜಯ ಸಿಂಗ್ ಇದೀಗ ಹಳೆಯ ಪಕ್ಷದಲ್ಲಿ ಒಬ್ಬಂಟಿಯಾಗುತ್ತಿದ್ದಾರೆ. ಬಹುಶಃ ಈ ಕಾರಣದಿಂದಲೇ ನರ್ಮದಾ ನದಿ ಪ್ರದೇಶದಲ್ಲಿ ಪಾದಯಾತ್ರೆ ಕೈಗೊಳ್ಳುವ ಸಲುವಾಗಿ ಆರು ತಿಂಗಳು ರಜೆ ಪಡೆದಿದ್ದಾರೆ. ಆದರೆ ಇರುವ ಏಕೈಕ ಪ್ರಶ್ನೆಯೆಂದರೆ, ಆರು ತಿಂಗಳ ಕಾಲ ಡಿಗ್ಗಿ ಬಾಯಿಮುಚ್ಚಿಕೊಂಡಿರುತ್ತಾರೆಯೇ? ಖಂಡಿತಾ ಇಲ್ಲ ಎಂದು ಹಲವರು ಬೆಟ್ ಕಟ್ಟುತ್ತಾರೆ.
ಮುಕುಲ್‌ಗೆ ನೋ ಎಂದ ಕಾಂಗ್ರೆಸ್
ಇತ್ತೀಚೆಗೆ ಪಕ್ಷದಿಂದ ಉಚ್ಚಾಟಿತರಾದ ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಮುಖಂಡ ಮುಕುಲ್ ರಾಯ್‌ಗೆ ಇಕ್ಕಟ್ಟಿನ ಸ್ಥಿತಿ. ಅವರು ಕಾಂಗ್ರೆಸ್ ಸೇರಲು ಬಯಸಿದ್ದರು. ಆದರೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ ರಾಹುಲ್‌ಗಾಂಧಿಯವರನ್ನು ಈ ಬಗ್ಗೆ ಕೇಳಿದಾಗ, ಅವರು ಸ್ಪಷ್ಟವಾಗಿ ನಿರಾಕರಿಸಿದರು. ಮಮತಾ ಬ್ಯಾನರ್ಜಿ ಕೋಪಿಸಿಕೊಳ್ಳುವುದು ಅವರಿಗೆ ಬೇಕಾಗಿಲ್ಲ. ಶಾರದಾ ಚಿಟ್‌ಫಂಡ್ ಹಗರಣದ ಆರೋಪ ಎದುರಿಸುತ್ತಿರುವ ಮುಕುಲ್ ಬಗ್ಗೆ ಸ್ವತಃ ರಾಹುಲ್‌ಗೆ ಒಲವು ಇಲ್ಲ. ಇದೀಗ ಬಿಜೆಪಿ ತಮ್ಮನ್ನು ಸೇರಿಸಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿ ಈ ಹಿರಿಯ ಮುಖಂಡ ಇದ್ದಾರೆ. ಆದರೆ ಪಕ್ಷ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ತೃಣಮೂಲವನ್ನು ಚೆನ್ನಾಗಿ ಬಲ್ಲ ಪ್ರಬಲ ತಂತ್ರಗಾರನೊಬ್ಬನ ಅಗತ್ಯ ಬಿಜೆಪಿಗೆ ಇದೆ ಎನ್ನುವುದು ರಾಯ್ ಅವರ ಲೆಕ್ಕಾಚಾರ. ರಾಯ್ ಅವರನ್ನು ಸೇರಿಸಿಕೊಂಡರೆ, ಪಕ್ಷಕ್ಕೆ ದೊಡ್ಡ ಲಾಭ. ಆದರೆ ಶಾರದಾ ಹಗರಣದ ಕತ್ತಿ ಮುಕುಲ್ ನೆತ್ತಿ ಮೇಲೆ ತೂಗುತ್ತಿದೆ. ಬಿಜೆಪಿ ತಮ್ಮನ್ನು ಸೇರಿಸಿಕೊಳ್ಳುತ್ತದೆ ಎಂಬ ವಿಶ್ವಾಸ ರಾಯ್ ಅವರಲ್ಲಿದ್ದರೂ, ಈ ವಿಳಂಬ ಅವರ ನಿದ್ದೆಗೆಡಿಸಿದೆ. ಯಾವುದೂ ಕೈಗೂಡದಿದ್ದರೆ ಏನು ಎಂಬ ದೂರಾಲೋಚನೆಯಿಂದ ಅವರು ಚುನಾವಣಾ ಆಯೋಗದ ಬಳಿ ಹೊಸ ಪಕ್ಷವನ್ನೂ ನೋಂದಾಯಿಸಿದ್ದಾರೆ.
ಮೋದಿ ಮಾದರಿ
ವಿದೇಶ ಪ್ರವಾಸದ ವೇಳೆ ತಮ್ಮ ವಿಮಾನದಲ್ಲಿ ಖಾಸಗಿ ಮಾಧ್ಯಮಗಳ ಪತ್ರಕರ್ತರನ್ನು ಕರೆದೊಯ್ಯುವ ರೂಢಿಯನ್ನು ಮೋದಿ ಕೈಬಿಟ್ಟಿದ್ದಾರೆ. ಪ್ರಧಾನಿಯಾದ ಮೊದಲ ವರ್ಷವೇ ಈ ಪದ್ಧತಿಗೆ ತಿಲಾಂಜಲಿ ಕೊಟ್ಟಿದ್ದಾರೆ. ಆದಾಗ್ಯೂ ಇತ್ತೀಚೆಗೆ ನಿವೃತ್ತರಾದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹಳೆ ಸಂಪ್ರದಾಯ ಮುಂದುವರಿಸಿ, ಪತ್ರಕರ್ತರಿಗೆ ತಮ್ಮ ಜತೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಹೊಸದಾಗಿ ಆಯ್ಕೆಯಾದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ, ತಮ್ಮ ಪೂರ್ವಜರ ಸಂಪ್ರದಾಯವನ್ನು ಕಡಿಯುವ ಸೂಚನೆ ನೀಡಿದ್ದಾರೆ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಬಹುತೇಕ ವಿದೇಶ ಪ್ರವಾಸಗಳಿಗೆ ಒಯ್ಯುವ ಏರ್ ಇಂಡಿಯಾ ವನ್ ವಿಮಾನದಲ್ಲಿ ಪತ್ರಕರ್ತರನ್ನು ಕರೆದೊಯ್ಯುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ರಾಷ್ಟ್ರಪತಿ-ಉಪರಾಷ್ಟ್ರಪತಿಗಳ ಜತೆ ಪ್ರಯಾಣಿಸುವ ಕೃಪೆಯನ್ನು ಮುಂದುವರಿಸಬಹುದು; ಆದರೆ ಈ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಲಾಗಿದೆ. ಮುಂದಿನ ಹಂತದಲ್ಲಿ, ಮೋದಿ ಹಾದಿಯನ್ನು ಸಂಪೂರ್ಣವಾಗಿ ಅನುಕರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.