ಲಿಂಗಾಯತರ ಧ್ವನಿಯಿಂದ ಬೆಚ್ಚಿದ ಹಿಂದೂತ್ವ
ವೇದ ನಡನಡುಗಿತ್ತು
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯೆ
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಿ
ಆಗಮ ಹೆರತೊಲಗಿ ಅಗಲಿದ್ದಿತಯ್ಯ
ನಮ್ಮ ಕೂಡಲಸಂಗಯ್ಯನು
ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ
ಈ ವಚನದಲ್ಲಿ ಬಸವಣ್ಣನವರು ವೈದಿಕ ವ್ಯವಸ್ಥೆ ಯಾವುದಕ್ಕೆ ತಬ್ಬಿಬ್ಬಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. 12ನೆ ಶತಮಾನದ ನಂತರ ಕರ್ನಾಟಕ ಮತ್ತೆ ಅಂಥ ತಲ್ಲಣಕ್ಕೆ ಈಗ ಸಾಕ್ಷಿಯಾಗಿದೆ.
ಲಿಂಗಾಯತರು ಪ್ರತ್ಯೇಕ ಧರ್ಮದ ಮಾನ್ಯತೆ ಬೇಕೆಂದು ಕೇಳಿದ ತಕ್ಷಣ ಮನುಷ್ಯರು ಹೊತ್ತುಕೊಳ್ಳುವ ಪಲ್ಲಕ್ಕಿ ಮೇಲೆ ಕೂರುವ ಪಂಚಾಚಾರ್ಯರು ಗಾಬರಿಯಾಗುವುದು ಸಹಜ. ಭಕ್ತರಿಗೆ ಪಾದೋದಕ ಎಂದು ಮಲಿನ ನೀರನ್ನು ಕುಡಿಸುವ ಮಠಾಧೀಶರಿಗೂ ಇದರಿಂದ ಗಾಬರಿಯಾಗಿದೆ. ಇಂಥವರೆಲ್ಲ ವೀರಶೈವ ಎಂಬ ರಕ್ಷಾ ಕವಚದಲ್ಲಿ ಆಸರೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯಿಂದ ಲಿಂಗಿ ಬ್ರಾಹ್ಮಣರಿಗೆ ದಿಗ್ಭ್ರಮೆ ಉಂಟಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಮನುವಾದಿ ಹಿಂದೂ ರಾಷ್ಟ್ರ ಕಟ್ಟಲು ಹೊರಟ ಸನಾತನ ಧರ್ಮ ಸಂರಕ್ಷಕರಿಗೂ ಈಗ ಗರ ಬಡಿದಂತಾಗಿದೆ.
ತಮ್ಮದು ಪ್ರತ್ಯೇಕ ಧರ್ಮವೆಂದು ಲಿಂಗಾಯತರನ್ನು ಒಳಗೊಂಡ ವೀರಶೈವ ಮಹಾಸಭಾ ಈ ಹಿಂದೆಯೇ ಘೋಷಣೆ ಮಾಡಿತ್ತು. ಪ್ರತೀ ಬಾರಿ ಜನಗಣತಿ ನಡೆದಾಗಲೂ ಜನಗಣತಿಯಲ್ಲಿ ಲಿಂಗಾಯತಯೆಂದೇ ಬರೆಯಿಸಬೇಕು. ಹಿಂದೂ ಎಂದು ಬರೆಸಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿಕೊಳ್ಳುತ್ತಲೇ ಬಂದಿದೆ. ಇದೇನು ಈಗ ಹುಟ್ಟಿಕೊಂಡ ಬೇಡಿಕೆಯಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ.
ಆದರೆ ಹಿಂದೆಲ್ಲ ವೀರಶೈವ ಮಹಾಸಭಾ ಇಂಥ ಬೇಡಿಕೆ ಮುಂದಿಟ್ಟಾಗ ವೌನವಾಗಿದ್ದ ಸಂಘ ಪರಿವಾರ ಈ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಾಗಲಕೋಟೆಯಲ್ಲಿ ನಡೆದ ಸಂಘದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಟ್ಟ ಆ ಸಮುದಾಯದ ನಾಯಕರ ಮೇಲೆ, ಮಠಾಧೀಶರ ಮೇಲೆ ವಿಷಕಾರಿದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಒತ್ತಾಯಿಸುವ ಲಿಂಗಾಯತ ಮಠಾಧೀಶರು ಬುದ್ಧಿ ಭ್ರಷ್ಟರು. ಇವರು ಶನಿ ಸಂತಾನ ಎಂದು ಹೀಯಾಳಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ವಿಫಲಗೊಳಿಸಲು ಸಂಘ ಪರಿವಾರ ಸಮರ್ಥವಾಗಿದೆಯೆಂದು ಎಚ್ಚರಿಕೆ ನೀಡಿದರು. ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಸಾಮರಸ್ಯ ಕೆಡಿಸುವ ಮಠಾಧೀಶರು ನಿರ್ಲಜ್ಜರು ಎಂದು ಟೀಕಿಸಿದರು.
ಈ ಹಿಂದಿನಂತೆಯೇ ಬೆದರಿಕೆ ಹಾಕಿ ದಕ್ಕಿಸಿಕೊಳ್ಳಬಹುದು ಎಂದು ಭಾವಿಸಿದ್ದ ಸು.ರಾಮಣ್ಣ ಅವರಿಗೆ ಈಗ ನೊಣ ನುಂಗಿ ವಾಂತಿ ಮಾಡಿಕೊಳ್ಳುವಂತಾಗಿದೆ. ಯಾಕೆಂದರೆ, ರಾಮಣ್ಣ ಅವರು ಹೇಳಿಕೆ ನೀಡಿದ ಮರುದಿನವೇ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಟ್ಟಿರುವ ಸಚಿವರಾದ ಎಂ.ಬಿ.ಪಾಟೀಲ ಮತ್ತು ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಅವರು ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಧರ್ಮದ ಆಂತರಿಕ ವ್ಯವಹಾರದಲ್ಲಿ ಕೈ ಹಾಕಿದರೆ ಎಚ್ಚರಿಕೆ ಎಂದು ಆರ್ಭಟಿಸಿದರು. ಆರೆಸ್ಸೆಸ್‌ನಲ್ಲಿರುವ ಲಿಂಗಾಯತರು ಅದರಿಂದ ಹೊರಬರಬೇಕು ಎಂದು ಬಹಿರಂಗವಾಗಿ ಕರೆ ನೀಡಿದರು. ಬರೀ ಸಚಿವರು, ಶಾಸಕರು ಮಾತ್ರವಲ್ಲ ಬೆಳಗಾವಿ ಜಿಲ್ಲೆ ನಾಗನೂರುಮಠದ ಶ್ರೀಗಳು, ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಶ್ರೀಗಳು, ಆರೆಸ್ಸೆಸ್‌ನಲ್ಲಿರುವ ಲಿಂಗಾಯತರು ತಕ್ಷಣವೇ ಹೊರಬರಬೇಕು ಎಂದು ಕರೆ ನೀಡಿದರು. ಇದರಿಂದ 12ನೆ ಶತಮಾನದಲ್ಲಿ ಮಾದಾರ ಚನ್ನಯ್ಯನ ಮನೆಯಲ್ಲಿ ಉಂಡ ಕಾರಣ ವೇದ ನಡು ನಡುಗಿದಂತೆ ಈ ಶತಮಾನದಲ್ಲೂ ಶ್ರೇಣೀಕೃತ ಜಾತಿ ಪದ್ಧತಿಯನ್ನು ಹೇರಲು ಹೊರಟ ಸಂಘ ಪರಿವಾರಕ್ಕೆ ನಡುಕ ಉಂಟಾಯಿತು.
ಸು.ರಾಮಣ್ಣನವರ ಹೇಳಿಕೆಗೆ ರಾಜ್ಯದಾದ್ಯಂತ ಲಿಂಗಾಯತರು ತಿರುಗಿ ಬೀಳು ತ್ತಿದ್ದಂತೆ ಯಡಿಯೂರಪ್ಪ, ಜಗದೀಶ ಶೆಟ್ಟರ್ ಮುಂತಾದವರು ಬೆಂಗಳೂರಿನ ಕೇಶವ ಕೃಪಾಗೆ ಹೋಗಿ ಈ ಹೇಳಿಕೆಯಿಂದ ಬಿಜೆಪಿಗೆ ಬರುವ ಲಿಂಗಾಯತರ ಓಟುಗಳಿಗೆ ಪೆಟ್ಟು ಬೀಳುತ್ತದೆ ಎಂದು ದುಂಬಾಲು ಬಿದ್ದ ನಂತರ ಆರೆಸ್ಸೆಸ್ ನಾಯಕರು ಸಭೆ ಸೇರಿ ರಾಮಣ್ಣನವರ ಮೂಲಕ ಲಿಂಗಾಯತ ಸಮುದಾಯದ ಕ್ಷಮೆಯಾಚನೆ ಮಾಡಿಸಿದರು.ಗಾಂಧಿ ಹತ್ಯೆ, ಬಾಬರಿ ಮಸೀದಿ ನಾಶ, ಗುಜರಾತ್ ಹತ್ಯಾಕಾಂಡ ಈ ಯಾವುದಕ್ಕೂ ಕ್ಷಮೆಯಾಚನೆ ಮಾಡದ ಸಂಘ ಪರಿವಾರ ಓಟಿಗಾಗಿ ಈ ಬಾರಿ ಕ್ಷಮೆಯಾಚಿಸಿತು.
ಅಂಬಾನಿ, ಅದಾನಿಗಳ ದುಡ್ಡನ್ನು ಬಳಸಿಕೊಂಡು ದಿಲ್ಲಿಯ ಸಿಂಹಾಸನವನ್ನು ಸ್ವಾಧೀನಪಡಿಸಿಕೊಂಡ ಹುರುಪಿನಲ್ಲಿರುವ ಆರೆಸ್ಸೆಸ್, ಮನುವಾದಿ ಹಿಂದೂ ರಾಷ್ಟ್ರ ಕಟ್ಟಲು ಸ್ಕೆಚ್ ಹಾಕುತ್ತಿರುವಾಗಲೇ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ ಮುಂತಾದ ಐದಾರು ರಾಜ್ಯಗಳಲ್ಲಿ ನೆಲೆಯೂರಿರುವ ಐದು ಕೋಟಿ ಲಿಂಗಾಯತರು ತಾವು ಹಿಂದೂಗಳಲ್ಲ. ಬಸವಣ್ಣನವರು 12ನೆ ಶತಮಾನದಲ್ಲಿ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸೇರಿದವರೆಂದು ಬೇಡಿಕೆ ಮುಂದಿಟ್ಟಿರುವುದರಿಂದ ನಾಗಪುರದ ಜಗದ್ಗುರುಗಳು ದಿಗ್ಭ್ರಮೆಗೊಂಡಿದ್ದಾರೆ. ಲಿಂಗಾಯತರು ತಾವು ಹಿಂದೂಗಳಲ್ಲ ಎಂದು ಹೇಳಿದರೆ ಯಾರೂ ಅಚ್ಚರಿ ಪಡಬೇಕಿಲ್ಲ.
500 ವರ್ಷಗಳ ಹಿಂದೆ ಚಲಾವಣೆಗೆ ಬಂದ ಹಿಂದೂ ಎಂಬ ಶಬ್ದದಲ್ಲಿ ರಕ್ಷಣೆ ಪಡೆಯುತ್ತಿರುವ ವೈದಿಕಶಾಹಿಯ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಕೊಸರಾಡುತ್ತಿರುವ ಸಮುದಾಯಗಳಲ್ಲಿ ಲಿಂಗಾಯತ ಸಮುದಾಯವೂ ಒಂದು. ಈ ಬಾರಿ ಈ ಸಮುದಾಯ ಮೊಳಗಿಸಿದ ರಣಕಹಳೆಗೆ ಮನುವಾದದ ಬುಡ ಅಲುಗಾಡುತ್ತಿದೆ. ಭಾರತದ ಇತಿಹಾಸದಲ್ಲಿ ಬಹಳ ಹಿಂದಿನ ಕಾಲದಿಂದಲೂ ವೈದಿಕ ಮತ್ತು ಅವೈದಿಕ ಎಂಬ ಎರಡು ಸಮಾನಾಂತರ ಪ್ರವಾಹಗಳು ಹರಿದು ಬರುತ್ತಿರು ವುದು ಸ್ಪಷ್ಟವಾಗಿ ಕಂಡು ಬರುತ್ತದೆ. ವೇದ ಪೂರ್ವದ ಜೈನ ಧರ್ಮ, ಕ್ರಿ.ಪೂ. 6ನೆ ಶತಮಾನದಲ್ಲಿ ಹುಟ್ಟಿದ ಬೌದ್ಧಧರ್ಮ, 12ನೆ ಶತಮಾನದಲ್ಲಿ ಹುಟ್ಟಿದ ಲಿಂಗಾಯತ ಧರ್ಮ ಮತ್ತು 16ನೆ ಶತಮಾನದಲ್ಲಿ ಜನ್ಮತೆಳೆದ ಸಿಖ್ ಧರ್ಮವು ಈ ದೇಶದ ಮುಖ್ಯವಾದ ಅವೈದಿಕ ಧರ್ಮಗಳಾಗಿವೆ.
ಅಂತಲೇ ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಲಿಂಗಾಯತವೂ ಕೂಡ ಪ್ರತ್ಯೇಕ ಧರ್ಮ. ಇದಕ್ಕೆ ಖಚಿತವಾದ ಆಧಾರಗಳನ್ನು ಡಾ. ಎಂ.ಎಂ.ಕಲಬುರ್ಗಿಯವರಂತಹ ಸಂಶೋಧಕರು ಒದಗಿಸಿದ್ದಾರೆ. ಇತ್ತೀಚೆಗೆ ಜಾಮದಾರ ಮತ್ತು ಸಂಜೀವ ಕುಲಕರ್ಣಿ ಅವರು ಬರೆದ ಲೇಖನಗಳಲ್ಲಿ ಈ ಬಗ್ಗೆ ಸಾಕಷ್ಟು ವಿವರಗಳಿವೆ. 12ನೆ ಶತಮಾನದ ವಚನ ಸಾಹಿತ್ಯವೇ ಲಿಂಗಾಯತ ಸಮುದಾಯದ ಸೈದ್ಧಾಂತಿಕ ನೆಲೆಯಾಗಿದೆ. ಆದರೆ ಈ ಯಾವ ವಿಶ್ಲೇಷಣೆಗೂ ಉತ್ತರ ಕೊಡಲಾಗದ ಮನುವಾದಿಗಳ ಗುಲಾಮರು ಈಗ ವಚನ ಪಿತಾಮಹ ರಾವ್‌ಬಹದ್ದೂರ ಪಕೀರಪ್ಪ ಗುರು ಬಸಪ್ಪ ಹಳಕಟ್ಟಿಯವರು ಸಂಗ್ರಹಿಸಿರುವ ವಚನಗಳನ್ನು ಒರೆಗೆ ಹಚ್ಚಬೇಕು ಎಂಬ ಕುಚೋದ್ಯದ ಮಾತುಗಳನ್ನು ಆಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತರು ಒಂದೇ ಎಂದು ಹೇಳಿ ಬಸವಣ್ಣನವರ ವೈಚಾರಿಕ ನೆಲೆಯನ್ನೇ ನಾಶ ಮಾಡಲು ಹೊರಟ ಇಂಥ ದುಷ್ಟ ಶಕ್ತಿಗಳ ವಿರುದ್ಧ ಲಿಂಗಾಯತರು ಈಗ ತಿರುಗಿ ಬಿದ್ದಿದ್ದಾರೆ.
ವಾಸ್ತವವಾಗಿ ಹಿಂದೂ ಸಮಾಜ ವ್ಯವಸ್ಥೆ ಪ್ರಕಾರ, ಭಾರತೀಯ ಸಮಾಜ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಾಗಿ ವಿಂಗಡಿಸಲ್ಪಟ್ಟಿವೆ. ಈ ನಾಲ್ಕು ವರ್ಣಗಳಲ್ಲಿ ವೇದಾಧ್ಯಯನ ಮಾಡುವ ಬ್ರಾಹ್ಮಣ ಶ್ರೇಷ್ಠನಾಗಿದ್ದಾನೆ. ಶತ್ರುಗಳೊಡನೆ ಕಾದಾಡುವ ರಾಜ್ಯಭಾರ ಮಾಡುವ ಕ್ಷತ್ರಿಯ ಎರಡನೆ ಸ್ಥಾನದಲ್ಲಿ ದ್ದಾನೆ. ವ್ಯಾಪಾರ ಮತ್ತು ದಂಧೆ ಮಾಡುವ ವೈಶ್ಯ ಮೂರನೆ ಸ್ಥಾನದಲ್ಲಿದ್ದಾನೆ. ಈ ಮೂರು ವರ್ಗಗಳ ಸೇವೆ ಮಾಡುವ ಶೂದ್ರ ನಾಲ್ಕನೆ ಸ್ಥಾನದಲ್ಲಿದ್ದಾನೆ. ಈ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪಂಚಮರಿಗೆ ಅಂದ್ರೆ ದಲಿತರಿಗೆ ಜಾಗವಿಲ್ಲ. ಏಕೆಂದರೆ ಅವರು ಹಿಂದೂಗಳಲ್ಲ. ಲಿಂಗಾಯತರು ಹಿಂದೂಗಳು ಎಂದಾದರೆ ಈ ನಾಲ್ಕು ವರ್ಣಗಳಲ್ಲಿ ಯಾವ ವರ್ಣಕ್ಕೆ ಸೇರಬೇಕು. ಅವರು ಬ್ರಾಹ್ಮಣರೇ? ಕ್ಷತ್ರಿಯರೇ? ವೈಶ್ಯರೇ? ಶೂದ್ರರೇ? ಲಿಂಗಾಯತರು ಜನಿವಾರ ಧರಿಸುವುದಿಲ್ಲ. ವೇದಕ್ಕೆ ಮಾನ್ಯತೆ ಕೊಡುವುದಿಲ್ಲ. ವೇದ ಪ್ರಾಮಾಣ್ಯವನ್ನು ನಿರಾಕರಿಸುತ್ತಾರೆ. ವರ್ಣಾಶ್ರಮ ಪದ್ಧತಿ ತಿರಸ್ಕರಿಸುತ್ತಾರೆ. ಹಿಂದೂಗಳಂತೆ ಅವರು ಯಜ್ಞ, ಹೋಮ, ಹವನ ಮಾಡುವುದಿಲ್ಲ. ಪ್ರಾಣ ಬಲಿ ವಿರೋಧಿಸುತ್ತಾರೆ. ಹಾಗಾದರೆ, ಇಂತಹ ಲಿಂಗಾಯತರು ಹಿಂದೂಗಳು ಆಗಲು ಹೇಗೆ ಸಾಧ್ಯ?
ಆದರೆ ಲಿಂಗಿ ಬ್ರಾಹ್ಮಣರು ಎಂದು ಕರೆದುಕೊಳ್ಳುವ ಕೆಲವರು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ತಾವು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಇವರು ಬಸವಣ್ಣನವರನ್ನು ಮಾನ್ಯ ಮಾಡುವುದಿಲ್ಲ. ವೀರಶೈವ ಎಂಬ ಪದ ಬಸವಣ್ಣ ಬರುವ ಮುಂಚೆ ಅಸ್ತಿತ್ವ ದಲ್ಲಿತ್ತು ಎಂದು ವಾದಿಸುತ್ತಾರೆ. ಈ ಲಿಂಗಿ ಬ್ರಾಹ್ಮಣರನ್ನು ಮುಂದೆ ಮಾಡಿ, ಲಿಂಗಾ ಯತ ಪರಂಪರೆಯನ್ನು ಆಪೋಶನ ಮಾಡಿಕೊಳ್ಳಲು ಸಂಘ ಪರಿವಾರ ಹುನ್ನಾರ ನಡೆಸಿದೆ.
ಕರ್ನಾಟಕದಲ್ಲಿ ಈವರೆಗೆ ಲಿಂಗಾಯತರು ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿಯ ಓಟು ಬ್ಯಾಂಕ್ ಆಗಿದ್ದು ಇದೇ ಕುತಂತ್ರದಿಂದ. ಕೋಮು ಘರ್ಷಣೆಗಳಲ್ಲಿ ಲಿಂಗಾಯತ ಯುವಕರನ್ನು ಬಳಸಿಕೊಳ್ಳುತ್ತಿರುವ ಪುರೋಹಿತಶಾಹಿಗಳು ಅವರ ಮೆದುಳುಗಳಲ್ಲಿ ಜನಾಂಗ ದ್ವೇಷದ ವಿಷವನ್ನು ತುಂಬಿದ್ದಾರೆ. ಸಕಲ ಜೀವಾತ್ಮರಲ್ಲಿ ಲೇಸನ್ನು ಬಯಸಿದ ಬಸವ ಪರಂಪರೆ ನಾಶಪಡಿಸಲು ಹುನ್ನಾರ ನಡೆಸಿದ್ದಾರೆ. ಆದರೆ ಗದುಗಿನ ತೋಂಟದಾರ್ಯರು, ನಿಡುಮಾಮಿಡಿ ಶ್ರೀಗಳು, ಚಿತ್ರದುರ್ಗದ ಮುರುಘಾಶರಣರು, ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ತರಳುಬಾಳು ಮಠದ ಶ್ರೀಗಳು, ಸಾಣೇಹಳ್ಳಿಯ ಪಂಡಿತಾರಾಧ್ಯರು ಹೀಗೆ ಬಸವ ಪರಂಪರೆಗೆ ಸೇರಿದ ಮಠಾಧೀಶರು ಮತ್ತು ಎಂ.ಎಂ.ಕಲಬುರ್ಗಿ, ವೀರಣ್ಣ ರಾಜೂರ ಮತ್ತು ಅವರಂಥ ಸಂಶೋಧಕರು ಪುರೋಹಿತ ಶಾಹಿಗಳ ಈ ಕುತಂತ್ರವನ್ನು ಬಯಲಿಗೆಳೆದು ಲಿಂಗಾಯತ ಪ್ರತ್ಯೇಕ ಧರ್ಮದ ಚಾರಿತ್ರಿಕ ಅನಿವಾರ್ಯತೆಯನ್ನು ಪ್ರತಿಪಾದಿಸಿದ ನಂತರ ಎಂ.ಬಿ.ಪಾಟೀಲ, ವಿನಯ್ ಕುಲಕರ್ಣಿ, ಬಿ.ಆರ್.ಪಾಟೀಲ, ಬಸವರಾಜ ಹೊರಟ್ಟಿಯವರಂತಹ ರಾಜಕಾರಣಿ ಗಳು ಕೂಡ ಈಗ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಗೆ ಬಂದು ನಿಂತಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಹಿಂದೂತ್ವವಾದಿ ಶಕ್ತಿಗಳಿಗೆ ಆಘಾತ ಉಂಟಾಗಿದೆ.
ದೇಶದ ಮೇಲೆ ಮತ್ತೆ ಶ್ರೇಣೀಕೃತ ಜಾತಿ ಪದ್ಧತಿ ಹೇರಲು ಹೊರಟ ಶಕ್ತಿಗಳು ಎಷ್ಟು ಹತಾಶೆಗೊಂಡವೆಯೆಂದರೆ ಸತ್ಯದ ಮೇಲೆ ಬೆಳಕು ಚೆಲ್ಲಲು, ಸಮಾನತೆಯ ಕನಸನ್ನು ಸಾಕಾರಗೊಳಿಸಲು ಹೊರಟ ನರೇಂದ್ರ ದಾಭೋಲ್ಕ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಬಲಿ ತೆಗೆದುಕೊಂಡವು. ಇದೀಗ ಆಂಧ್ರಪ್ರದೇಶದ ಹೆಸರಾಂತ ವಿದ್ವಾಂಸ ಪ್ರೊ. ಕಾಂಚ ಐಲಯ್ಯ ಅವರಿಗೂ ಪ್ರಾಣ ಬೆದರಿಕೆ ಬಂದಿದೆ. ಅವರು ಅಕ್ಷರಶಃ ಹೈದರಾಬಾದ್‌ನ ತಮ್ಮ ಮನೆಯಲ್ಲಿ ಗೃಹಬಂಧನದಲ್ಲಿದ್ದಾರೆ. ಈ ದುಷ್ಟ ಹುನ್ನಾರದ ವಿರುದ್ಧ ಧ್ವನಿಯೆತ್ತುವ ಬ್ರಾಹ್ಮಣ ಚಿಂತಕರ ಮೇಲೂ ಅವರು ದಾಳಿ ಆರಂಭಿಸಿದ್ದಾರೆ. ಯು.ಆರ್.ಅನಂತಮೂರ್ತಿ ಅಂಥವರು ಸಾವಿನ ಸಮೀಪವಿದ್ದಾಗಲೂ ಇವರಿಂದ ಚಿತ್ರಹಿಂಸೆ ಅನುಭವಿಸಿದರು.
ಹಿಂದೂತ್ವವಾದಿಗಳು ಯಾಕೆ ಈ ಪರಿ ದಿಗಿಲುಗೊಂಡಿದ್ದಾರೆಂದರೆ, ಲಿಂಗಾಯತರಿಗೆಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ, ನಾಳೆ ಮಹಾರಾಷ್ಟ್ರದ ಮರಾಠರು, ರಾಜಸ್ಥಾನದ ರಜಪೂತರು, ಹರಿಯಾಣದ ಜಾಟರು, ಆಂಧ್ರಪ್ರದೇಶದ ರೆಡ್ಡಿ ಮತ್ತು ಕಮ್ಮಾಗಳು, ತಮಿಳುನಾಡಿನ ನಾಡಾರರು ತಮಗೂ ಪ್ರತ್ಯೇಕ ಧರ್ಮ ಬೇಕೆಂದು ದನಿಯೆತ್ತುತ್ತಾರೆ. ಆಗ ಹಿಂದೂ ಎಂಬ ಇವರ ಕಾಲ್ಪನಿಕ ಸಾಮ್ರಾಜ್ಯದಲ್ಲಿ ಶೇ.3ರಷ್ಟು ಇರುವ ಪುರೋಹಿತಶಾಹಿಗಳು ಮಾತ್ರ ಉಳಿಯುತ್ತಾರೆ. ಹೀಗಾದರೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಿ ಶ್ರೇಣೀಕೃತ ಜಾತಿ ಪದ್ಧತಿಯನ್ನು ದೇಶದ ಮೇಲೆ ಹೇರುವ ತಮ್ಮ ಮಸಲತ್ತು ವಿಫಲಗೊಳ್ಳುವುದು ಎಂದು ಇವರು ಗಾಬರಿಯಾಗಿದ್ದಾರೆ. ಅಂತಲೇ ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಆದರೆ ಬಸವ ಪರಂಪರೆಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿರುವ ಲಿಂಗಾಯತ ಸಮುದಾಯ ಈಗ ಗುರಿ ಸಾಧನೆಗಾಗಿ ರಣರಂಗಕ್ಕೆ ಇಳಿದಿದೆ. ಬರಲಿರುವ ದಿನಗಳು ಅತ್ಯಂತ ನಿರ್ಣಾಯಕವಾಗಿವೆ.