varthabharthi


ನನ್ನೂರು ನನ್ನ ಜನ

ನನ್ನೂರಿನ ಬಸ್ ಪ್ರಯಾಣದ ನೆನಪುಗಳು

ವಾರ್ತಾ ಭಾರತಿ : 11 Oct, 2017

ವರ್ಷ ಕಳೆದಂತೆ ಬೆಳಗ್ಗೆ ಮಂಗಳೂರಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು. ಸುರತ್ಕಲ್ ವಿದ್ಯಾದಾಯಿನಿ ಸಂಸ್ಥೆಗಳಿಗೆ, ಗೋವಿಂದದಾಸ ಕಾಲೇಜಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚುತ್ತಿತ್ತು. ಕೃಷ್ಣಾಪುರದ ಸುರತ್ಕಲ್‌ವರೆಗೆ ನಿಂತುಕೊಂಡೇ ಹೋಗುವುದು ಸಾಮಾನ್ಯವಾಯಿತು. ಕುಳಿತಂತಹ ವಿದ್ಯಾರ್ಥಿಗಳು ಯಾರಾದರೂ ನನ್ನ ಬ್ಯಾಗುಗಳನ್ನು ತಾವು ತೆಗೆದುಕೊಂಡು ಇಳಿಯುವಾಗ ತಮ್ಮ ಸೀಟಿನಲ್ಲಿ ಬ್ಯಾಗನ್ನು ಇಟ್ಟು ಸೀಟು ಕಾಯ್ದಿರಿಸಿಕೊಡುತ್ತಿದ್ದರು. ಹೀಗೆ ತುಂಬಿದ ಬಸ್ಸಿನಲ್ಲಿ ಹುಡುಗಿಯರ ಹತ್ತಿರವೇ ನಿಲ್ಲಲು ಕಾಯುವ ಮಹನೀಯರು ಕೆಲವರು ಇದ್ದುದನ್ನು ಗುರುತಿಸಿಕೊಳ್ಳಬೇಕಾದ ಜಾಣತನ ಹುಡುಗಿಯರಿಗೆ ಇರಬೇಕು ಎಂದು ತಿಳಿಸಿ ಹೇಳುತ್ತಿದ್ದೆ. ಹಾಗೆಯೇ ಮಹಿಳೆಯರಿಗೆಂದು ಮೀಸಲಾಗಿದ್ದ ಎರಡೇ ಎರಡು ಸೀಟುಗಳಲ್ಲಿ ಪುರುಷರು ಕುಳಿತುಕೊಳ್ಳುವುದೂ ಪ್ರಾರಂಭವಾಯ್ತು.

ಬೆಳಗ್ಗೆ, ಸಂಜೆ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಒಟ್ಟು ಸಂಖ್ಯೆಯ ಅರ್ಧದಷ್ಟು ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚು ಇರುತ್ತಿತ್ತು. ಮಹಿಳೆಯರಿಗೆ ಅವರ ಸೀಟು ಬಿಟ್ಟು ಕೊಡಿ ಎಂದಾಗ ಏಳದೆ ಉದ್ಧಟತನ ತೋರುವ ಯುವಕರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿತ್ತು. ಕಂಡಕ್ಟರ್‌ರಲ್ಲಿ ಹೇಳಿದರೆ ಕೇಳಿದರೂ ಕೇಳದ ಜಾಣರು ಕೆಲವರಾದರೆ ಇನ್ನು ಕೆಲವರು ನೀವೆ ಎಬ್ಬಿಸಿ ಕುಳಿತುಕೊಳ್ಳಿ ಎನ್ನುವ ಮೂಲಕ ಕುಳಿತವರಿಗೆ ಪ್ರೋತ್ಸಾಹ ನೀಡುವವರು. ಹುಡುಗಿಯರು ಕುಳಿತ ಸೀಟಿನಲ್ಲಿ ಹುಡುಗರು ಜೊತೆಗೆ ಕುಳಿತುಕೊಂಡು ಉಪದ್ರವ ಕೊಡುವ ಸಂದರ್ಭಗಳೂ ಶುರುವಾದುವು. ಇಂತಹ ಸಂದರ್ಭಗಳಲ್ಲಿ ಹುಡುಗಿಯರ ಪರವಾಗಿ ನಿಂತು ನನ್ನ ಶಿಕ್ಷಕಿಯ ಬುದ್ಧಿಯನ್ನು ತೋರಿಸುವ ಧೈರ್ಯ ತೋರಿದ್ದರಿಂದ ಹುಡುಗಿಯರಿಗೆ ನಾನು ಇಷ್ಟವಾದರೆ ಹುಡುಗರು ನನ್ನನ್ನು ಕಂಡರೆ ಹೊರಗೆ ಹೆದರಿದಂತೆ ತೋರಿಸಿಕೊಳ್ಳದಿದ್ದರೂ ಪೇಟೆಯ ಹುಡುಗರಂತೆ ಅಸಭ್ಯ ಮಾತುಗಳನ್ನು ಆಡುತ್ತಿರಲಿಲ್ಲ. ಜೊತೆಗೆ ನಾನು ಹೇಳುತ್ತಿರುವುದು ಸರಿಯಾದುದೆಂದು ಅವರಿಗೆ ತಿಳಿದದ್ದೇ ಆಗಿತ್ತಲ್ಲವೇ? ಆದ್ದರಿಂದ ಕೆಲವರು ತಮ್ಮನ್ನು ತಿದ್ದಿಕೊಂಡವರೂ ಇದ್ದಾರೆ.

ಇನ್ನು ಕೆಲವು ಹುಡುಗರಿಗೆ ವಿದ್ಯಾರ್ಥಿನಿಯರ ಮುಂದೆ ತಮ್ಮ ಸಾಹಸ ಮೆರೆಯುವ ಹುಚ್ಚು. ಹದಿಹರೆಯದ ಸಹಜ ಸ್ವಭಾವವೇ ಆದರೂ ಅದು ಅವರ ಬದುಕಿಗೆ ದುರಂತವನ್ನು ತರುವಂತಹುದೇ ಅಲ್ಲವೇ? ಪೇಟೆಯಲ್ಲಾದರೆ ಆ ದಿನಗಳಲ್ಲಿ ಅಲ್ಲಲ್ಲಿ ಪೊಲೀಸರು ಮೆಟ್ಟಲಲ್ಲಿ ನಿಂತು ತೂಗಾಡುವ ಹುಡುಗರಿಗೆ ಲಾಠಿ ಬೀಸುತ್ತಿದ್ದರು. ಇಲ್ಲಿ ಪೊಲೀಸರು ಇಲ್ಲ. ಕಂಡಕ್ಟರ್ ಹೇಳುವಂತಿಲ್ಲ. ನಾನು ಆ ಹುಡುಗರನ್ನು ಬಿಡದೆ ತಿಳಿ ಹೇಳುತ್ತಿದ್ದೆ. ಕೆಲವು ಹಿರಿಯರು ತುಳುವಿನಲ್ಲಿ ಅಂತಹವರನ್ನು ಕುರಿತು ಹೀಗೆ ಹೇಳುತ್ತಿದ್ದರು, ‘‘ದಾನೆ ಮಗ, ಅಪ್ಪೆಡ ಅರಿ ಕಡೆಯರೆ ಪಂಡ್‌ದ್ ಬೈದನಾ’’ ಎಂದು. ನನಗೆ ಅರ್ಥ ಹೊಳೆಯದಿದ್ದರೂ ಅದು ಅಪಶಕುನದ ಮಾತು ಎಂದು ಗ್ರಹಿಸಿಕೊಂಡಿದ್ದೇನೆ. ಕೆಲವರಿಗೆ ಇಂತಹ ಮಾತುಗಳು ನಾಟುತ್ತಿದ್ದುವು. ಆದರೂ ಈ ಊರಿನ ಮಕ್ಕಳು ನನ್ನ ಮಂಗಳೂರು ಕಾಲೇಜಿನ ಮಕ್ಕಳಷ್ಟು ತುಂಟರು ಆಗಿರಲಿಲ್ಲ ಎನ್ನುವುದೂ ನಿಜ. ಜೊತೆಗೆ ನಾನು ಯಾರು ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದರು. ಜೊತೆಗೆ ಕೆಲವರಿಗೆ ನಾವು ಅವರ ಕಾಲೇಜಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ತಿಳಿದು ಗೌರವವನ್ನು ತೋರಿಸುತ್ತಿದ್ದರು.

ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಗೌರವವಿರುವುದು ಅವರ ನಡೆ ನುಡಿಯಿಂದಲೇ ಎನ್ನುವುದು ಸಮಾಜ ಒಪ್ಪಿಕೊಂಡಿರುವ ಸತ್ಯ. ಈ ಹಿನ್ನೆಲೆಯಲ್ಲಿ ಸಮಾಜವನ್ನು ರೂಪಿಸುವ ಕೆಲಸ ಕೇವಲ ತರಗತಿಯೊಳಗೆ ಮಾತ್ರವಲ್ಲ, ಅನ್ಯಾಯ, ಅಸತ್ಯಗಳನ್ನು ಕಂಡಾಗ ಅದನ್ನು ತಿಳಿಹೇಳುವ ಗುಣ ಸಹಜವಾಗಿಯೇ ಬರುತ್ತದೆಯೇ ಅಥವಾ ಅದು ಅವರವರ ಸಾಮಾಜಿಕ ಬದ್ಧತೆಯೇ ಎನ್ನುವುದು ಚರ್ಚಾಸ್ಪದ ವಿಷಯವೇ. ಯಾಕೆಂದರೆ ಆ ದಿನಗಳಲ್ಲೇ ಕಂಡಕ್ಟರ್‌ಗಳು ಶೀಕ್ಷಕರನ್ನು ಗೇಲಿ ಮಾಡುವಂತೆ ಬಸ್ಸಿನ ಪ್ರಯಾಣಿಕರನ್ನು ‘‘ಮಾಸ್ಟ್ರೇ ಒಂತೆ ದುಂಬು ಪೋಲೆ, ಪಿರಪೋಲೆ’’ ಎಂಬ ಹೊಸ ಶಬ್ದ ಪ್ರಯೋಗಗಳು ಪ್ರಾರಂಭವಾಗಿದ್ದುವು. ಇಂತಹ ವರ್ತನೆಗಳು ಕೃಷ್ಣಾಪುರ, ಕಾಟಿಪಳ್ಳದ ಬಸ್ಸುಗಳಲ್ಲಿ ಮಾತ್ರವಲ್ಲ ಮಂಗಳೂರಿನ ಪೇಟೆಯ ಬಸ್ಸುಗಳಲ್ಲಿಯೂ ಹೀಗೆಯೇ ಇದ್ದು ಶಿಕ್ಷಣ ಪಡೆಯುತ್ತಿರುವ ಬಹುತೇಕ ಯುವಕರ ಗುಣ ಸ್ವಭಾವಗಳು ಬದಲಾಗುತ್ತಿರುವುದು ಸಮಾಜದ ಬದಲಾವಣೆಯ ಲಕ್ಷಣಗಳೂ ಹೌದು.

ಆಗಿನ್ನೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ಸು ಪಾಸುಗಳ ವ್ಯವಸ್ಥೆ ಇದ್ದಿರಲಿಲ್ಲ. ವಿದ್ಯಾರ್ಥಿಗಳೆಲ್ಲ ಟಿಕೆಟಿನ ಪೂರ್ಣ ಹಣ ಕೊಡದೆ ಸ್ವಲ್ಪ ಹಣ ಕೊಟ್ಟು ಟಿಕೆಟ್ ಪಡೆಯದೆ ಪ್ರಯಾಣ ಮಾಡುವುದು ಕೂಡಾ ಶುರುವಾಗಿತ್ತು. ಪ್ರಾರಂಭದಲ್ಲಿ ಪೂರ್ತಿ ಹಣ ವಸೂಲಿ ಮಾಡುತ್ತಿದ್ದ ಕಂಡಕ್ಟರ್‌ಗಳು ಬರಬರುತ್ತಾ ಇವರಿಗೆ ಹೊಂದಿಕೊಂಡು ಟಿಕೆಟ್ ನೀಡದೆ ಪಡೆದ ಹಣವೆಲ್ಲಾ ಅವರ ಕಿಸೆಗೆ ಸೇರುವುದು ರೂಢಿಯಾಯ್ತು. ಆ ರೂಢಿ ವಿದ್ಯಾರ್ಥಿಗಳಿಗೆ, ಕೆಲ ಯುವಕರಿಗೆ ಇದ್ದುದನ್ನು ಕೆಲವು ಕಂಡಕ್ಷರ್‌ಗಳು ಮಹಿಳೆಯರಿಗೂ ಟಿಕೆಟ್ ಕೊಡದೆ ಪೂರ್ಣ ಹಣ ಪಡೆದು ಕಿಸೆ ತುಂಬಿಸಿಕೊಳ್ಳುವುದನ್ನು ಪ್ರಾರಂಭಿಸಿದರು. ಹೆಂಗಸರು ಮರ್ಯಾದೆಯ ಹೆಸರಿನಲ್ಲಿ ಬಾಯಿ ಮುಚ್ಚಿಕೊಂಡಿರುತ್ತಾರೆ ಎನ್ನುವುದು ಹೆಚ್ಚು ಸರಿಯಾದ ಭಾವನೆ ಅವರದಾಗಿತ್ತು. ಆದರೆ ನಾನು ಅದಕ್ಕೂ ಅಪವಾದವಾಗಿದ್ದೆ. ಬಸ್ಸು ಹತ್ತುವಾಗಲೇ ಟಿಕೆಟಿನ ಹಣ ಕೈಯಲ್ಲಿಟ್ಟುಕೊಂಡೇ ಹತ್ತಿದರೆ ಹಣ ಕೊಟ್ಟ ಹಾಗೆಯೇ ನಮಗೆ ಆತ ಟಿಕೆಟು ಕೊಡಬೇಕಲ್ಲ. ಕೊಡದೆ ಇದ್ದರೆ ಕೇಳುತ್ತಿದ್ದೆ. ಆಗ ಕೆಲವು ಕಂಡಕ್ಟರ್‌ಗಳು ಮರ್ಯಾದೆಯಿಂದ ಟಿಕೆಟು ಕೊಡುತ್ತಿದ್ದರೆ ಹಲವರು ಕೊಡ್ತೇನೆ ಕೊಡ್ತೇನೆ ಎಂದು ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದರು.

ಆದರೆ ನಾನು ಪಟ್ಟು ಬಿಡದೆ ಕೇಳಿದಾಗ ಸಿಟ್ಟುಗೊಂಡು ಎಷ್ಟು ಟಿಕೆಟು ಬೇಕು ನಿಮಗೆ ಎಂದು ಒಂದಷ್ಟು ಟಿಕೆಟು ಹರಿದು ಬಿಸಾಡುತ್ತಿದ್ದವರೂ ಇದ್ದರು. ಇದು ನಮ್ಮನ್ನು ಅಂದರೆ ಮಹಿಳೆಯರನ್ನು ಅಪಮಾನಿಸುವ ಒಂದು ರೀತಿಯೇ ಆಗಿತ್ತು. ಜೊತೆಗೆ ಆ ಬಸ್ಸಿನ ಆರ್ಥಿಕ ನಿರ್ವಹಣೆ ಜವಾಬ್ದಾರಿಯುತವಾಗಿ ನಡೆಯುತ್ತಿಲ್ಲ ಎನ್ನುವುದೂ ತರ್ಕಕ್ಕೆ ಸಿಗುವ ಸತ್ಯವೇ ಅಲ್ಲವೇ? ನಮಗೆ ಮೋಸ ಮಾಡುವುದರೊಂದಿಗೆ ಬಸ್ಸಿನ ಮಾಲಕರಿಗೂ ಮೋಸವೇ ತಾನೇ? ಇಂತಹ ಕಂಡಕ್ಟರ್‌ಗಳಿಗೇ ಕೆಲವೊಮ್ಮೆ ಹೈಸ್ಕೂಲಿನ ಜಾಣ ಮಕ್ಕಳು ಮೋಸ ಮಾಡುತ್ತಿದ್ದುದುಂಟು. ಕೂಳೂರಿನಲ್ಲಿ ಬಸ್ ಹತ್ತಿದ ಹುಡುಗರು ಪಣಂಬೂರಿನ ಬಳಿ ಬರುವಾಗ ಕಂಡಕ್ಟರ್ ಟಿಕೆಟ್ ಹಣ ಕೇಳಿದರೆ ಕಿಸೆಗೆ ಕೈ ಹಾಕುವ ನಾಟಕ ಮಾಡಿ ಪಣಂಬೂರಿನಲ್ಲಿ ಇಳಿದು ಹೊರಟೇ ಹೋಗುತ್ತಿದ್ದರು. ಪಣಂಬೂರಲ್ಲಿ ಹತ್ತಿದ ಹುಡುಗರು ಹೀಗೆಯೇ ಬೈಕಂಪಾಡಿಯಲ್ಲಿ ಇಳಿದು ಹೋಗುತ್ತಿದ್ದರು. ಬೈಕಂಪಾಡಿಯಲ್ಲಿ ಹತ್ತಿದ ಹುಡುಗರು ಹೊನ್ನೆಕಟ್ಟೆ, ಹೊಸಬೆಟ್ಟುಗಳಲ್ಲಿ ಇಳಿದು ಹೋಗುತ್ತಿದ್ದರು. ಇಂತಹ ಹುಡುಗರಿಗೆ ಕಂಡಕ್ಟರ್‌ಗಳು ಬೈಯುವಾಗ ನಾನು ತಮಾಶೆಯಾಗಿ ಕಂಡಕ್ಟರರಲ್ಲಿ ಹೀಗೆ ಹೇಳುತ್ತಿದ್ದೆ, ‘‘ನಾಳೆ ಅವರು ಕಂಡಕ್ಟರ್‌ಗಳಾಗುತ್ತಾರೆ. ಅದಕ್ಕೆ ಈಗ ಮೋಸ ಮಾಡುವುದನ್ನು ಅಭ್ಯಾಸ ಮಾಡುತ್ತಾರೆ’’ ಎಂದು. ಆಗ ಕಂಡಕ್ಟರ್‌ಗಳು ತೆಪ್ಪಗಾಗುತ್ತಿದ್ದುದೂ ವಾಸ್ತವವೇ.

ಸಮಾಜ ಬದಲಾಗುತ್ತಿರುವುದು ನಮ್ಮ ಗಮನಕ್ಕೆ ಬರುವುದೇ ಎಳೆಯ ಪೀಳಿಗೆಯಿಂದ. ಅಂದರೆ ವಿದ್ಯಾರ್ಥಿಗಳಿಂದ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಹೇಳಿಕೆಯೂ ಇದನ್ನೇ ಅರ್ಥೈಸುತ್ತದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅವರ ವರ್ತನೆಗಳಿಂದ ಅವರ ಶಿಕ್ಷಣ ಸಂಸ್ಥೆಗಳನ್ನು ಕೂಡಾ ಪ್ರತಿನಿಧಿಸುತ್ತಾರೆ. ಆದರೆ ಆ ಅರಿವು ವಿದ್ಯಾರ್ಥಿಗಳಿಗೆ ನೀಡಬೇಕಾದವರು ಶಿಕ್ಷಕರು, ಶಿಕ್ಷಣ ಸಂಸ್ಥೆಯವರು. ಅಲ್ಲಿನ ಒಬ್ಬ ಸಾಮಾನ್ಯ ಸೇವಕ ಅಂದರೆ ಜವಾನ ವೃತ್ತಿಯವನೂ ಈ ತಿಳುವಳಿಕೆಯನ್ನು ಕೊಡುವುದಕ್ಕೆ ಸಮರ್ಥನೆ ಇರಬೇಕಾಗುತ್ತದೆ. ಇಂದು ಅಂತಹ ವಾತಾವರಣವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎನ್ನುವಂತಾಗಿದೆ. ನನ್ನ ಬಾಲ್ಯದಲ್ಲಿ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗೌರವ ಕೊಟ್ಟಂತೆ ಜವಾನೆಯಾಗಿದ್ದ ಕರ್ಗಿಯಕ್ಕನಿಗೂ ಅದೇ ಗೌರವ ಇತ್ತು. ಹಾಗೆಯೇ ಭಯವೂ ಇತ್ತು. ಆ ಕಾಲ ಹಾಗಿತ್ತು. ಇರಲಿ ಹೀಗೆ ಸಮಾಜ ಬದಲಾಗುತ್ತಿರುವುದನ್ನು ಅಳೆಯಲು ಯಾವುದೇ ವೈಜ್ಞಾನಿಕ ಅಳತೆ ಗೋಲುಗಳಿಲ್ಲವಾದರೂ ಅದು ನಮ್ಮ ಗ್ರಹಿಕೆಗೆ ಅರಿವಾಗುವ ಸತ್ಯ.

ಇಂತಹ ಗೌರವ ಎನ್ನುವುದು ತನಗೆ ತಾನೇ ಒಡಲಲ್ಲಿ ಸಹಜವಾಗಿ ಮೂಡುವ ಆಸೆ. ಆ ಆಸೆಯೇ ಆತ್ಮಾಭಿಮಾನ. ತಮ್ಮ ಬಗ್ಗೆ ತಾವೇ ಅಭಿಮಾನಪಡುವಂತೆ ಇರುವ ಅವಕಾಶಗಳು ಉಪಯೋಗಿಸುವ ಮಂದಿ ಸಮಾಜವನ್ನೂ ಗೌರವಿಸುತ್ತಾರೆ. ಅವಕಾಶಗಳು ಸಿಕ್ಕಿಯೂ ಅದನ್ನು ಉಪಯೋಗಪಪಡಿಸಿಕೊಳ್ಳಲು ಸಾಧ್ಯವಾಗದವರಲ್ಲಿ ಕೆಲವರು ಕೀಳರಿಮೆಯಿಂದ ನರಳುತ್ತಾರೆ. ಇಂತಹವರಿಂದ ಸಾಮೂಹಿಕ ಖಿನ್ನತೆ ಆವರಿಸುತ್ತದೆ. ಇನ್ನು ಕೆಲವರು ದ್ವೇಷದ ಹಾದಿಯನ್ನು ತಮ್ಮದಾಗಿಸಿಕೊಂಡು ತಮ್ಮ ಬದುಕನ್ನು ದುರಂತಕ್ಕೀಡು ಮಾಡುವುದರೊಂದಿಗೆ ಸಮಾಜದಲ್ಲಿಯೂ ಹಿಂಸೆಯನ್ನು ಹರಡುವ ವೈರಾಣುಗಳಾಗುತ್ತಾರೆ. ಇಂತಹವರಿಗೆ ಬಹುಸಂಖ್ಯೆಯಲ್ಲಿ ಸಂಗಡಿಗರು ದೊರೆತರೆ ಅವರು ಸಮಾಜದಲ್ಲಿ ಖಳನಾಯಕರೂ ಆಗುವುದರಲ್ಲಿ ಸಂಶಯವಿಲ್ಲ. ಇಂತಹ ಕಾರಣಗಳಿಂದಲೇ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣ ಪುಟ್ಟ ವಿಚಾರಗಳಿಗೆ ಗುಂಪು ಘರ್ಷಣೆ ನಡೆದು ಅದು ಕ್ಯಾಂಪಸ್‌ನಿಂದ ಹೊರಗೆ ಬೀದಿಗೂ ಇಳಿಯುತ್ತಿತ್ತು. ಹೀಗೆ ಬೀದಿಗೆ ಇಳಿದಾಗ ಆ ದಿನಗಳಲ್ಲಿ ಅವರ ಆಕ್ರೋಶಕ್ಕೆ ಬಲಿಯಾಗುತ್ತಿದ್ದುದು ಸಾರಿಗೆ ವಾಹನಗಳು ಅಂದರೆ ಸಿಟಿ ಬಸ್ಸುಗಳು.

ಇಂತಹ ಸಂದರ್ಭಗಳಲ್ಲಿ ಮಂಗಳೂರಿಗೆ ಹೋದ ಬಸ್ಸುಗಳು ಹಿಂದೆ ಬರುವುದಿಲ್ಲ. ಕಾಟಿಪಳ್ಳ, ಕೃಷ್ಣಾಪುರದಿಂದ ಹೊರಟ ಬಸ್ಸುಗಳು ಸುರತ್ಕಲ್‌ನಲ್ಲೇ ನಿಂತು ಬಿಡುವುದು ಸಾಮಾನ್ಯವಾಗಿತ್ತು. ಆಗ ಅನೇಕ ಬಾರಿ ದೂರದ ಕಿನ್ನಿಗೋಳಿ, ಕಾರ್ಕಳ, ಉಡುಪಿಯಿಂದ ಬರುವ ಸರ್ವಿಸ್ ಬಸ್ಸುಗಳು ಸಾಧ್ಯವಾದಷ್ಟು ಜನರನ್ನು ತುಂಬಿ, ಹೋಗುವಷ್ಟು ದೂರ ಹೋಗಿ ನಿಲ್ಲುವುದೂ ಇತ್ತು. ಒಟ್ಟು ಜನ ಜೀವನ ಅಸ್ತವ್ಯಸ್ತ. ಉದ್ಯೋಗಿಗಳು ನಾವು ಹೋಗಿ ಸಹಿ ಹಾಕಲೇಬೇಕಾದ ಅನಿವಾರ್ಯತೆ ಅಂದಿನ ದಿನಗಳಲ್ಲಿ ಇತ್ತು. ಕಾಲೇಜಲ್ಲಿ ತರಗತಿಗಳು ನಡೆಯದಿದ್ದರೂ ನಾವು ಇಡೀ ದಿನ ಉಳಿದು ಸಂಜೆಯೇ ಎಂದಿನಂತೆ ಹೊರಡುವ ವೇಳೆಗೆ ಗಲಭೆ ತಣ್ಣಗಾಗಿಲ್ಲದಿದ್ದರೆ ನಮಗೆ ನಟರಾಜ ಸರ್ವಿಸೇ ಗತಿ. ಅಂದರೆ ಕಾಲ್ನಡಿಗೆ.

80ರ ದಶಕದಿಂದ 90ರ ದಶಕದ ಪ್ರಾರಂಭದ ವರ್ಷಗಳವರೆಗೆ ಇದು ಪ್ರತೀ ವರ್ಷದಲ್ಲಿ ಒಂದೆರಡು ಬಾರಿಯಾದರೂ ನಡೆಯದಿದ್ದರೆ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ಸಂಘಗಳಿಗೆ ಗೌರವವೇ ಇಲ್ಲ ಎಂಬಂತಾಗಿತ್ತು. ಇಂತಹ ಸಂದರ್ಭಗಳಿಗೆ ಈ ನಡುವೆ ಜಿಲ್ಲಾ ಆಡಳಿತಾಧಿಕಾರಿಗಳು ಬಸ್ಸು ಮಾಲಕರು ಸೇರಿ ಒಂದು ಪರಿಹಾರ ಯೋಜನೆ ಪ್ರಾರಂಭಿಸಿದರು. ಖಾಸಗಿ ಬಸ್ಸುಗಳ ಮಾಲಕರು ಸೇರಿ ಕೆನರಾ ಬಸ್ಸು ಮಾಲಕರ ಸಂಘದ ಆಶ್ರಯದಲ್ಲಿ ಪ್ರೌಢ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸು ನೀಡುವ ಯೋಜನೆ ಬಂದುದು ಶ್ಲಾಘನೀಯವೇ. ಪ್ರತೀ ತಿಂಗಳು ಮುಂಗಡ ಹಣ ನೀಡಿ ಬಸ್‌ಪಾಸ್ ಮಾಡಿಕೊಂಡರೆ ಹೆತ್ತವರು ದಿನಾ ಹಣ ಕೊಡುವ ಕಿರಿಕಿರಿಯೂ ಇಲ್ಲ.

ಖರ್ಚು ಅರ್ಧ ಕಡಿಮೆಯಾಯ್ತು ತಾನೇ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ದೊಂಬಿ ಗಲಭೆಯಾದಾಗ ಬಸ್ಸುಗಳಿಗೆ ಹಾನಿ ಮಾಡಬಾರದೆಂಬ ಷರತ್ತು ಇತ್ತು. ಬಹುತೇಕ ವಿದ್ಯಾರ್ಥಿಗಳು ಈ ಉಪಕಾರಕ್ಕೆ ಕೃತಜ್ಞರಾದುದೂ ನಿಜವೇ. ಆದರೆ ಇದರಿಂದ ಕಂಡಕ್ಟರ್‌ಗಳ ಕಿಸೆಗೆ ಚಿಲ್ಲರೆ ತುಂಬುವುದು ತಪ್ಪಿತು. ಇದಕ್ಕೆ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಸೇರಿ ಹೊಸ ಉಪಾಯ ಕಂಡುಕೊಂಡರು. ಶಾಲೆ ಬಿಡುವ ಹೊತ್ತಿನಲ್ಲಿ ಬಸ್ ನಿಲ್ದಾಣದಿಂದ ಬಹಳ ಹಿಂದಕ್ಕೆ ಅಥವಾ ಬಹಳ ಮುಂದಕ್ಕೆ ನಿಲ್ಲಿಸಿ ಇಳಿಯುವ ಜನರನ್ನು ಇಳಿಸಿ ಓಡುತ್ತಿತ್ತು. ಮಕ್ಕಳು ತಮ್ಮ ಬ್ಯಾಗುಗಳೊಂದಿಗೆ ಓಡುತ್ತಾ ಬಂದರೆ ಬಸ್ಸೆಲ್ಲಿ ಸಿಗಬೇಕು. ಮುಂಗಡ ಹಣ ಕಟ್ಟಿದ್ದರೂ ಅನ್ಯಾಯ ಮಾಡುವ ಇಂತಹ ಡ್ರೈವರ್ ಕಂಡಕ್ಟರ್ ಇದೇ ಉಪಾಯವನ್ನು ಕಾಲೇಜು ವಿದ್ಯಾರ್ಥಿಗಳಿಗೂ ಪ್ರಯೋಗ ಮಾಡಿದರು.

ಪ್ರಾರಂಭದಲ್ಲಿ ಇದನ್ನು ಹೇಗೆ ಸರಿಪಡಿಸುವುದು ಎಂದು ತಿಳಿಯದೆ ಹೋದರೂ ಕೆಲವೇ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಒಟ್ಟು ಸೇರಿ ಡ್ರೈವರ್ ಕಂಡಕ್ಟರನ್ನು ಥಳಿಸುವುದಕ್ಕೆ ಸಿದ್ಧರಾದರು. ಕೆಲವು ಕಡೆ ಇದು ನಡೆದು ಹೋಯಿತು. ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳೂ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ಆದರೆ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳು ಏನು ಮಾಡಬೇಕು? ಪ್ರೌಢ ಶಾಲೆಯ ಹುಡುಗರು ಬಸ್ಸಿಗೆ ಕಲ್ಲು ಹೊಡೆಯುವ ಧೈರ್ಯ ತೋರಿದರೂ ಅವರ ಸಮಸ್ಯೆ ಬಗೆಹರಿಯಲಿಲ್ಲ. ಇನ್ನು ಬಸ್ಸಿನೊಳಗೆ ಇರುವ ಪ್ರಯಾಣಿಕರಿಗೆ ಇದು ತಪ್ಪು ಎಂದು ಗೊತ್ತಿದ್ದರೂ ಎಲ್ಲರೂ ವೌನಿಗಳು. ಆಗಲೂ ನಾನು ಸುಮ್ಮನಿರುತ್ತಿರಲಿಲ್ಲ. ಆರ್‌ಟಿಒಗೆ ದೂರು ನೀಡುತ್ತೇನೆ ಎಂದು ಬೆದರಿಸುತ್ತಿದ್ದೆ. ಇದಕ್ಕೆ ಬಗ್ಗುವ ಅಸಾಮಿಗಳಲ್ಲ ಅವರು. ಕೊನೆಗೆ ವಿದ್ಯಾದಾಯಿನಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳ, ಶಿಕ್ಷಕಿಯರ ಸಹಿಸಂಗ್ರಹ ಮಾಡಿ ನಾನೇ ಆರ್‌ಟಿಒಗೆ ಮನವಿ ಪತ್ರ ಬರೆದು ನೀಡಿದೆ. ಪತ್ರಿಕೆಗೂ ಬರೆದೆ. ಇದರ ಪರಿಣಾಮವಾಗಿ ಸಂಜೆ ಶಾಲೆಯ ಬಳಿಯಲ್ಲಿ ಪೊಲೀಸರು ನಿಂತು ವಿದ್ಯಾರ್ಥಿಗಳಿಗೆ ನೆರವು ನೀಡಿದರು. ಹೀಗೆ ಅನ್ಯಾಯವಾಗುವಲ್ಲಿ ಸಕಾಲದಲ್ಲಿ ಪ್ರಜ್ಞಾವಂತ ಪ್ರಜೆಗಳು ತಮ್ಮ ಸಾಮಾಜಿಕ ಕರ್ತವ್ಯವನ್ನು ಮಾಡುತ್ತಿದ್ದರೆ ಇಂದು ಕಾಣುವ ಅರಾಜಕತೆಗೆ ಅವಕಾಶವಿರುತ್ತಿರಲಿಲ್ಲ ಎಂದು ನನ್ನ ಭಾವನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)